ಕರ್ನಾಟಕದ ಅತ್ಯಂತ ಸಮೃದ್ಧ ಪ್ರದೇಶವಾಗಿರುವ ಕರಾವಳಿಯಲ್ಲಿ ಕೋಮುವಾದವೆಂಬ ಪೆಡಂಭೂತ ಅಭಿವೃದ್ಧಿಗೆ ತೊಡಕಾಗಿದೆ ಎಂದು ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಡಾ| ರೊನಾಲ್ಡ್ ಕೊಲಾಸೊ ಆತಂಕ ವ್ಯಕ್ತಪಡಿಸಿದ್ದಾರೆ. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ವತಿಯಿಂದ ದುಬೈಯ ಫಾರ್ಚೂನ್ ಆಟ್ರಿಯಂನಲ್ಲಿ ನಡೆದ ಸಾಮಾಜಿಕ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕರಾವಳಿ ಭಾಗದ ಅಭಿವೃದ್ಧಿಗೆ ಕೋಮುವಾದ ಇಂದು ಮಾರಕವಾಗಿ ಪರಿಣಮಿಸಿದ್ದು, ಇದರಿಂದಾಗಿ ಇಲ್ಲಿ ಹೂಡಿಕೆದಾರರು ಬಂಡವಾಳ ಹೂಡಲು ಹಿಂಜರಿಯುತ್ತಿದ್ದಾರೆ ಎಂದು ಡಾ.ರೊನಾಲ್ಡ್ ಕೊಲಾಸೊ ಕಳವಳ ವ್ಯಕ್ತಪಡಿಸಿದರು. ಕೋಮುವಾದದ ಪರಿಣಾಮ ಕರಾವಳಿ ಭಾಗದಲ್ಲಿ ಕೈಗಾರಿಕೀಕರಣ, ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಹೇಳಿದರು. ಕರಾವಳಿಯಲ್ಲಿ ಪ್ರವಾಸೋದ್ಯಮ ಹಾಗೂ ಇನ್ನಿತರ ಉದ್ಯಮಗಳನ್ನು ಆರಂಭಿಸಲು ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯಗಳು ಹೇರಳವಾಗಿದ್ದರೂ, ಹೂಡಿಕೆದಾರರು ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಇಲ್ಲಿ ಹೆಡೆ ಎತ್ತಿ ನಿಂತಿರುವ ಕೋಮುವಾದ. ಜಾತಿ, ಧರ್ಮದ ಹೆಸರಿನಲ್ಲಿ ಇಲ್ಲಿ ದಿನನಿತ್ಯ ನಡೆಯುತ್ತಿರುವ ಕೋಮವಾದದ ಹಿಂಸೆಗೆ ಹೆದರಿ ಇಲ್ಲಿ ಉದ್ಯಮ ನಡೆಸಲು ಹೂಡಿಕೆದಾರರು ಮುಂದಾಗುತ್ತಿಲ್ಲ ಎಂದು ಡಾ| ರೊನಾಲ್ಡ್ ಕೊಲಾಸೊ ಆತಂಕ ವ್ಯಕ್ತಪಡಿಸಿದರು.




ಕೆಲವು ರಾಜಕೀಯ ಪಕ್ಷಗಳು ಕೋಮುವಾದವನ್ನು ಮುಂದಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದು, ಇದು ಇಡೀ ಕರಾವಳಿಯ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ. ಕರಾವಳಿಯಲ್ಲಿ ಪಬ್ ದಾಳಿ, ಹೋಮ್ ಸ್ಟೇ ದಾಳಿ, ಗೋವುಗಳ ಜೊತೆಗಿದ್ದರೆ ಅವರ ಮೇಲೆಯೂ ದಾಳಿ, ಚರ್ಚ್ ದಾಳಿಯಂತಹ ಕೋಮುವಾದದ ಹಿಂಸಾಚಾರದ ಪ್ರಕರಣಗಳಿಂದ ಇಲ್ಲಿ ಉದ್ಯಮಿಗಳು ಉದ್ಯಮಕ್ಕೆ ಬಂಡವಾಳ ಹೂಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸ್ಥಳೀಯವಾಗಿ ಉದ್ಯೋಗವು ಸೃಷ್ಟಿಯಾಗುತ್ತಿಲ್ಲ. ನಮ್ಮ ಮುಂದಿನ ಮಕ್ಕಳ ಭವಿಷ್ಯವೂ ಇದರಿಂದ ಆತಂಕದಲ್ಲಿದೆ. ಈ ಬಗ್ಗೆ ನಾವು ಯೋಚಿಸುವಂತಹ ದಿನ ಬಂದಿದೆ. ರಾಜಕೀಯ, ಕೋಮುವಾದವನ್ನು ಬದಿಗಿಟ್ಟು, ಜಾತಿ ಧರ್ಮದ ಭೇದ ಭಾವಗಳನ್ನು ಮರೆತು ನಾವೆಲ್ಲರೂ ಒಂದಾಗಬೇಕು. ಪರಸ್ಪರ ಪ್ರೀತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯ ಮೂಲಕ ಕರಾವಳಿಯ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಬೇಕು. ಇದರಿಂದ ಉದ್ಯಮಗಳು ಹಾಗೂ ಹೂಡಿಕೆಗಳು ಕರಾವಳಿಯತ್ತ ಹರಿದುಬರುವಂತೆ ಮಾಡಬೇಕು. ಅಭಿವೃದ್ಧಿಗೆ ಆದ್ಯತೆ ನೀಡುವುದರಿಂದ ನಮ್ಮ ಭವಿಷ್ಯದ ಪೀಳಿಗೆಗೂ ಉತ್ತಮ ಅವಕಾಶಗಳು ದೊರೆಯಲಿವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ಎನ್ಜಿಒ) ಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ ಶೆಟ್ಟಿ ಮಾತನಾಡಿ, ಕರಾವಳಿಯ ನೆಲ ಜಲ ಉಳಿಸಿ, ಉದ್ದಿಮೆ ಬೆಳೆಸಿ, ಪ್ರಗತಿ ಸಾದಿಸಿ, ಬಡತನವನ್ನು ನಿವಾರಿಸುವುದೇ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮೂಲ ಉದ್ದೇಶ ಎಂದರು. ಈ ನಿಟ್ಟಿನಲ್ಲಿ ಕರಾವಳಿಯ ಅಭಿವೃದ್ಧಿಗೆ ಬೇಕಾದ ಪರಿಸರ ಸ್ನೇಹಿ ಉದ್ಯಮಕ್ಕೆ ನಾವು ಸದಾ ಬೆಂಬಲ ನೀಡುತ್ತಾ ಬಂದಿದ್ದೇವೆ ಎಂದ ಅವರು, ಎಲ್ಲರೂ ತಮ್ಮ ತಮ್ಮ ಧರ್ಮವನ್ನು ಪಾಲಿಸುವ ಮೂಲಕ, ಇತರ ಧರ್ಮಗಳನ್ನು ಗೌರವಿಸಿದರೆ ನಮ್ಮಲ್ಲಿ ಸೌಹಾರ್ದದ ವಾತಾವರಣ ನಿರ್ಮಾಣವಾಗುತ್ತದೆ. ಇದು ಕರಾವಳಿಯನ್ನು ರಾಜ್ಯದಲ್ಲಿಯೇ ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಡಾ| ರೊನಾಲ್ಡ್ ಕೊಲಾಸೊ ಹಾಗೂ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಡಾ. ಬಿ.ಆರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಯುಎಇಯ ಹಿಸ್ನಾ ಇಂಟರ್ನ್ಯಾಷನಲ್ ವ್ಯವಸ್ಥಾಪಕ ನಿರ್ದೇಶಕ ರೊನಾಲ್ಡ್ ಪಿಂಟೊ, ವಿಶ್ವ ದೇವಾಡಿಗ ಮಹಾಮಂಡಲ ಅಧ್ಯಕ್ಷ ಧರ್ಮಪಾಲ್ ದೇವಾಡಿಗ, ಉದ್ಯಮಿ ಡಾ| ಡೇವಿಡ್ ಫ್ರಾಂಕ್ ಫೆರ್ನಾಂಡಿಸ್, ಯುಎಇಎಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ(BCCI) ಅಧ್ಯಕ್ಷ ಹಿದಾಯತ್ ಅಡ್ಡೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಯುಎಇ ಸಂಚಾಲಕ ಸರ್ವೋತ್ತಮ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.















































































































