ಕುಂಬಳೆ ಗಾಂಧಿ ಎಂದೇ ಪ್ರಸಿದ್ಧರಾದ ಬಿ ದೇವಪ್ಪ ಆಳ್ವ ಅವರು ಬoಬ್ರಾಣದವರಾಗಿದ್ದು, ಪುತ್ತಿಗೆಯನ್ನು ತಮ್ಮ ಸಾರ್ವಜನಿಕ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಮಾಜಸೇವಕರು. ಜಾನ್ ಸೈಮನ್ ಅಧ್ಯಕ್ಷತೆಯಲ್ಲಿ ಭಾರತಕ್ಕೆ ಬಂದ ಆಯೋಗದ ವಿರುದ್ದ ದೇಶಾದ್ಯಂತ ನಡೆದ ತೀವ್ರ ಪ್ರತಿಭಟನೆಯಲ್ಲಿ ಭಾಗವಹಿಸಿ, ಬಿಳಿಯರ ಆಯೋಗದ ವಿರೋಧ ಹೋರಾಟಕ್ಕೆ ಪ್ರಬಲ ನಾಯಕತ್ವ ನೀಡಿದರು. ಗಾಂಧೀಜಿಯವರ ಬಂಧನದ ಸಂದರ್ಭದಲ್ಲಿ ರಂಗೂನ್ ನಲ್ಲಿದ್ದ ಅವರು ಅಲ್ಲಿ ಹರತಾಳಕ್ಕೆ ನೇತೃತ್ವ ವಹಿಸಿದರು. ಬಾಂಬೆಯ ಗಿರ್ಗಾಂವ್ ನಲ್ಲಿ ವಿದೇಶಿ ಬಟ್ಟೆಗಳನ್ನು ಸುಡುವ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಬ್ರಿಟಿಷ್ ಸರ್ಕಾರ ಅವರನ್ನು ಆರು ತಿಂಗಳ ಕಾಲ ಕಾರಾಗೃಹದಲ್ಲಿರಿಸಿತು. ಜೈಲಿನಲ್ಲಿ ಬಿಡುಗಡೆಗೊಂಡ ಬಳಿಕ ಕರಾಚಿ ಹಾಗೂ ಬಿಹಾರಕ್ಕೆ ತೆರಳಿ, ಸ್ವದೇಶಕ್ಕೆ ಹಿಂದಿರುಗಿದರು.
ಮದ್ರಾಸ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ ಕೋಟ ರಾಮಕೃಷ್ಣ ಕಾರಂತ್ ಅವರ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಕಾರಂತರು ಚುನಾವಣೆಯಲ್ಲಿ ಗೆದ್ದು ಸಚಿವರಾದಾಗ, ದೇವಪ್ಪ ಆಳ್ವ ಅವರ ಸಾರ್ವಜನಿಕ ಸೇವೆಯನ್ನು ಗುರುತಿಸಿ ಅವರಿಗೆ ‘ಕುಂಬಳೆ ಗಾಂಧಿ’ ಎಂಬ ಗೌರವವನ್ನು ನೀಡಲಾಯಿತು. ಕುಂಬಳೆಯಲ್ಲಿ ನಡೆದ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ವೆಲ್ಲೂರು ಸೆಂಟ್ರಲ್ ಜೈಲಿಗೆ ಕಳುಹಿಸಲಾಹಿತು. ಬ್ರಿಟಿಷ್ ಸರ್ಕಾರದ ಕರಿನಿಯಮಗಳ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ಮತ್ತೊಮ್ಮೆ ಬಂಧನಕ್ಕೊಳಗಾಗಿ ಬೆಳಗಾವಿ ಜೈಲಿನಲ್ಲಿ ಕಾಲ ಕಳೆದರು. ಭಾರತ ಸ್ವಾತಂತ್ರ್ಯಗೊಂಡ ನಂತರವೂ ದೇವಪ್ಪ ಆಳ್ವ ಅವರು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸಮಾಜದ ಹಿಂದುಳಿದ ವರ್ಗಗಳ ಉನ್ನತಿ ಮತ್ತು ಪ್ರಗತಿಗಾಗಿ ನಿರಂತರವಾಗಿ ಶ್ರಮಿಸಿದರು. ಅವರ ದೇಶ ಸೇವೆ ಮತ್ತು ತ್ಯಾಗ ಇಂದಿಗೂ ಸ್ಮರಣೀಯ.


















































































































