ಮನದಲ್ಲಿ ಮಹತ್ವಾಕಾಂಕ್ಷೆ ಇದ್ದರೆ ಸಾಲದು. ಆ ದಿಶೆಯಲ್ಲಿ ಮುನ್ನುಗ್ಗಿ ಅದನ್ನು ತನ್ನದಾಗಿಸುವ ಎಂಟೆದೆಯ ಛಲ ಬೇಕಾಗುತ್ತದೆ. ಅಂಥಹ ಸಾಧನೆಯ ಮೂರ್ತಿ ಎಂಟೆದೆಯ ಬಂಟ ನಮ್ಮ ಸರ್ವೋತ್ತಮ ಶೆಟ್ಟಿ ಅವರು. ಮಟ್ಟಾರು ಪರಾರಿ ಸೂರಪ್ಪ ಹೆಗ್ಡೆ ಹಾಗೂ ಪರೀಕ ಸರಸ್ವತಿ ಹೆಗ್ಡೆ ದಂಪತಿಯರ ಸುಪುತ್ರ ಸರ್ವೋತ್ತಮ ಶೆಟ್ಟರು ಬದುಕು ಕಟ್ಟಿಕೊಂಡ ರೀತಿ ಇತರ ಉದ್ಯಮಶೀಲರಿಗೆ ಮಾದರಿಯಾಗಬಲ್ಲುದು. ಉಡುಪಿ ಜಿಲ್ಲೆಯ ಪರೀಕ ಎಂಬಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದು ತನ್ನ ಸಾಧನೆ ಪರಿಶ್ರಮದಿಂದ ಇಂದು ಹುಟ್ಟಿದ ಕುಟುಂಬ ಮಾತ್ರವಲ್ಲ ಬಂಟ ಸಮುದಾಯವನ್ನೇ ಎತ್ತರದ ಬಿತ್ತರಕ್ಕೆ ಮುಟ್ಟಿಸಿದ ಮಹನೀಯರಿವರು.
ಪೆರ್ಡೂರು ಮತ್ತು ಹಿರಿಯಡ್ಕಗಳಲ್ಲಿ ತನ್ನ ಪದವಿಪೂರ್ವ ಶಿಕ್ಷಣ ಮುಗಿಸಿ ಮುಂಬಯಿ ನಗರ ಸೇರಿ ಹೊಟೇಲುಗಳಲ್ಲಿ ದುಡಿದು ನಂತರ ಹೊಟೇಲು ನಡೆಸಿಕೊಂಡು ತನ್ನ ಜೀವನ ಯಾಪನೆ ಮಾಡತೊಡಗಿದರು. ನಂತರ ಓರ್ವ ಸೋಲಿಸಿಟರ್ ಕಛೇರಿಯಲ್ಲಿ ದುಡಿಯತೊಡಗಿದರು. ಆದರೆ ವಿದ್ಯಾಭ್ಯಾಸ ಮುಂದುವರಿಸಬೇಕೆಂಬ ಮನದ ಇಚ್ಛೆಯನ್ನು ಪೂರ್ಣಗೊಳಿಸಲು ದುಡಿಯುತ್ತಿದ್ದಂತೆಯೇ ಕಾಲೇಜು ಸೇರಿ ಪದವಿ ಶಿಕ್ಷಣ ಮುಂದುವರಿಸಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ವಾಣಿಜ್ಯ ಡಿಪ್ಲೋಮಾ ಪಡೆದುಕೊಂಡು ಆರ್ ಎಂ ಪೋದಾರ್ ಕಾಲೇಜು ಮುಖಾಂತರ ಬಿ.ಕಾಂ. ಪದವಿ ಗಳಿಸಿಕೊಂಡರು. ತನ್ನ ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ಸಂಘದ ನಾಯಕನಾಗಿ ಸಕ್ರಿಯರಾಗಿದ್ದವರು ಪೊದ್ದಾರ್ ಕಾಲೇಜನ್ನು ಪ್ರತಿನಿಧಿಸಿ ಸೆನೆಟ್ ಸದಸ್ಯರಾಗಿ ನೇಮಕಗೊಂಡಿದ್ದರು. ಫಾರ್ಮಸೆಟಿಕ್ ಕಂಪನಿಯೊಂದರಲ್ಲಿ ಕೆಲಕಾಲ ದುಡಿದ ಬಳಿಕ ಸಿಂಡಿಕೇಟ್ ಬ್ಯಾಂಕ್ ನಿಂದ ಉದ್ಯೋಗಕ್ಕೆ ಕರೆ ಬಂದಿತು. ಸಿಂಡಿಕೇಟ್ ಬ್ಯಾಂಕ್ ನಲ್ಲಿ ತನ್ನ ಹಣಕಾಸು ವ್ಯವಹಾರ ಸಂಬಂಧಿ ವಿಶೇಷ ಕಾರ್ಯಕ್ಷಮತೆಯಿಂದ ಬ್ಯಾಂಕ್ ಆಡಳಿತದ ಮೆಚ್ಚುಗೆಗೆ ಪಾತ್ರರಾದರು.
ಯುವಕ ಸರ್ವೋತ್ತಮ ಶೆಟ್ಟರಿಗೆ ನಾಟಕ ರಂಗಭೂಮಿ ಕುರಿತಂತೆ ವಿಶೇಷ ಅಭಿರುಚಿ ಇತ್ತು. ತಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಅಂತರ್ಕಾಲೇಜು ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಒಂದು ವರ್ಷ ಪರ್ವತವಾಣಿ ರಚಿಸಿದ ‘ಹಗ್ಗದ ಕೊನೆ’ ನಾಟಕದ ಅಭಿನಯಕ್ಕೆ ಪ್ರಥಮ ಬಹುಮಾನ ಲಭಿಸಿತ್ತು. 1979 ರಲ್ಲಿ ಕಲಾಜಗತ್ತು ನಾಟಕ ತಂಡ ಅಸ್ತಿತ್ವಕ್ಕೆ ಬಂದಾಗ ಅದರ ಆರಂಭಿಕ ಸದಸ್ಯರಾಗಿದ್ದು ನಂತರ ಅದರ ಅಧ್ಯಕ್ಷರಾಗಿ ತನ್ನ ಅವಧಿಯಲ್ಲಿ ಅನೇಕ ತುಳು ಕನ್ನಡ ನಾಟಕಗಳನ್ನು ಮುಂಬಯಿ ನಗರದ ವಿವಿಧ ಕಡೆ ಸಂಯೋಜಿಸಿದ್ದರಲ್ಲದೇ, ಇಂದಿಗೂ ನಾಟಕ ರಂಗದ ಕುರಿತಂತೆ ತೀವ್ರ ಆಸಕ್ತಿ ಹೊಂದಿದ್ದು ಪ್ರೋತ್ಸಾಹ ನೀಡುತ್ತಾ ಬಂದಿರುತ್ತಾರೆ. ಆದರೆ ನಂತರದ ದಿನಗಳಲ್ಲಿ ತನ್ನ ಜೀವನ ಪಯಣದ ಹಾದಿಯಲ್ಲಿ ನಿರ್ಣಾಯಕ ತಿರುವು ಕಾಣಿಸಿಕೊಂಡಿತು. ಯು.ಎ.ಇ.ಯ ಪ್ರತಿಷ್ಠಿತ ಉದ್ಯಮ ಸಂಸ್ಥೆಯೊಂದು ವಿತರಣೆ ವಿಭಾಗದ ಮುಖ್ಯ ಹುದ್ದೆಯ ಸ್ಥಾನಕ್ಕೆ ಕರೆ ನೀಡಿತು. ಆ ಸಂಸ್ಥೆ ನಡೆಸಿದ ಆರಂಭಿಕ ಪರೀಕ್ಷೆಗಳು ಮತ್ತು ಷರತ್ತುಗಳನ್ನು ಸಮಾಧಾನಕರ ರೀತಿಯಲ್ಲಿ ಎದುರಿಸಿ ಯಶ ಪಡೆದು ಕಂಪನಿ ಆಡಳಿತದ ಮೆಚ್ಚುಗೆ ಪಡೆದು ಉದ್ಯೋಗ ಗಿಟ್ಟಿಸಿಕೊಂಡರು. ಜನರಲ್ ಮೆನೇಜರ್ ಹುದ್ದೆಯಲ್ಲಿ ಇಪ್ಪತ್ತೈದು ವರ್ಷಗಳ ಕಾಲ ದುಡಿದ ವಿಪುಲ ಅನುಭವ ಹೊಂದಿದವರಾಗಿ ಓರ್ವ ಪ್ರಬುದ್ಧ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡರು. ಈ ಅವಧಿಯಲ್ಲಿ ತನಗೆ ದೊರಕಿದ ಒಂದಷ್ಟು ವಿರಾಮದ ಸಮಯವನ್ನು ಸಾಮಾಜಿಕ ಸಂಪರ್ಕ, ಸಂಘಟನೆ ಅನೇಕ ವೈವಿಧ್ಯಮಯ ಕಾರ್ಯಕ್ರಮ ಸಂಯೋಜನೆ, ಕನ್ನಡ ತುಳು ಸಾಂಸ್ಕೃತಿಕ ಸಂಘಟನೆಯಲ್ಲಿ ಅವಿರತ ಶ್ರಮಿಸತೊಡಗಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆಗಿರುವ ಅನಿವಾಸಿ ಭಾರತೀಯರೆಂಬ ಗೌರವದ ಜೊತೆಗೆ ಅಬುಧಾಬಿ ತುಳು ಕನ್ನಡ ಸಾಂಸ್ಕೃತಿಕ ರಾಯಭಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತೀಯ ಸಾಮಾಜಿಕ ಸಾಂಸ್ಕೃತಿಕ ಸಮಿತಿಯ ಅಬುದಾಬಿ ಘಟಕದ ಉಪಾಧ್ಯಕ್ಷರಾಗಿ 1995-96 ರಲ್ಲಿ ಕಾರ್ಯ ನಿರ್ವಹಿಸಿದ ಹಿರಿಮೆ ಇವರಿಗಿದೆ. ನಂತರ ಅಧ್ಯಕ್ಷರಾಗಿ 1999 -2000 ಮತ್ತು 2003-2004 ರ ತನಕ ಕಾರ್ಯ ನಿರ್ವಹಿಸಿದರು. ಹೀಗೆ ಎರಡು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಅಪಾರ ಸಮಾಜ ಬಾಂಧವರ ಸಂಪರ್ಕ ಹೊಂದುವಂತಾಯಿತು. ನಮ್ಮವರ ಸುಪ್ತ ಪ್ರತಿಭೆಗಳ ಅನಾವರಣಗೊಳಿಸುವ ಉದ್ದೇಶದಿಂದ ಹಾಗೂ ತುಳು ಕನ್ನಡ ಸಂಸ್ಕೃತಿಯನ್ನು ಕಾಪಿಡುವ ಉದ್ದೇಶದಿಂದ ಅಬುಧಾಬಿ ಕರ್ನಾಟಕ ಸಂಘ, ತುಳು ಕೂಟ ಅಬುದಾಬಿ ಹಾಗೂ ಬಂಟರ ಸಂಘ ಇತ್ಯಾದಿ ಸಂಘಟನೆಗಳ ಸ್ಥಾಪನೆಗೆ ಶಕ್ತಿ ಮೀರಿ ದುಡಿದರು ಹಾಗೂ ನೇತೃತ್ವ ವಹಿಸಿ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದರು.
ಸರ್ವೋತ್ತಮ ಶೆಟ್ಟಿಯವರ ಭಾಷಾಭಿಮಾನವನ್ನು ಗುರುತಿಸಿದ ಕರ್ನಾಟಕ ಸರಕಾರ 1998 ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. 2006 ರಲ್ಲಿ ನೋಬಲ್ ಮ್ಯಾನ್ ಪ್ರಶಸ್ತಿಯೂ ಶೆಟ್ಟರ ಪಾಲಾಯ್ತು. 2006 ರಲ್ಲಿ ಮುಂಬಯಿಯ ವಿಶ್ವೇಶ್ವರ ಹಾಲ್ ನಲ್ಲಿ ಅಖಿಲ ಭಾರತ ಕನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲಿ ಈ ಗೌರವ ಪುರಸ್ಕಾರ ಪ್ರದಾನಿಸಲಾಯಿತು. 2008 ರಲ್ಲಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೂ ಭಾಜನರಾದರು. ಈ ಪ್ರಶಸ್ತಿ ಭಾರತೀಯ ಸಾಂಸ್ಕೃತಿಕ, ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದ ಮಹತ್ಕಾರ್ಯ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ನೀಡಲಾಗಿದೆ. 2009 ರಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ‘ವಿಶ್ವ ಮಾನವ’ ಪುರಸ್ಕಾರದೊಂದಿಗೆ ಗೌರವಿಸಲಾಗಿದೆ. ಮಯೂರ ಅಂತಾರಾಷ್ಟ್ರೀಯ ಪ್ರಶಸ್ತಿ ಜೀವಮಾನ ಸಾಧನೆಯನ್ನು ಗುರುತಿಸಿ ನೀಡಲಾಗಿತ್ತು. ಇವರ ಸರ್ವಾಂಗೀಣ ಸಾಧನೆಯ ಕೋನಗಳನ್ನು ಗುರುತಿಸಿ ರಾಷ್ಟ್ರಮಟ್ಟದ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ದೊರೆತು ಭಾರತೀಯ ಸಾಧಕರ ಸಾಲಿನಲ್ಲಿ ಶಾಶ್ವತ ಕೀರ್ತಿಯನ್ನು ದಾಖಲಿಸಿಕೊಂಡರು.
ಸರ್ವೋತ್ತಮ ಶೆಟ್ಟಿಯವರು ತನ್ನ ಕೌಟುಂಬಿಕ ಜೀವನದಲ್ಲಿಯೂ ಶಾಂತಿ ಸಂತೃಪ್ತಿಯನ್ನುಹೊಂದಿದ್ದು, ಮನವರಿತು ನಡೆಯುವ ಪತ್ನಿ ಕಾಪು ಕೊತ್ವಾಲಗುತ್ತು ಶ್ರೀಮತಿ ಉಷಾ ಎಸ್ ಶೆಟ್ಟಿ ಮತ್ತು ಮಕ್ಕಳಾದ ಸಮರ್ಥ್ ಮತ್ತು ಸಂಯುಕ್ತ ಇವರೊಂದಿಗೆ ಸುಖ ಜೀವನ ನಡೆಸುತ್ತಿದ್ದಾರೆ. ಪುತ್ರ ಸಮರ್ಥ್ ಬೆಂಗಳೂರಿನ BIT ಮೂಲಕ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಗಳಿಸಿ ಪ್ರಸ್ತುತ ಅಬುಧಾಬಿಯ ಪ್ರತಿಷ್ಠಿತ ಕಂಪನಿಯಲ್ಲಿ ಸೀನಿಯರ್ ಪ್ರೊಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಪುತ್ರಿ ಸಂಯುಕ್ತ ಕೂಡಾ ಬೆಂಗಳೂರಿನ BIT ಮುಖಾಂತರ ಇಂಸ್ಟ್ರುಮೆಂಟೇಷನ್ ಆಂಡ್ ಟೆಕ್ನಾಲಜಿ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿ ಅಬುಧಾಬಿಯ ಹೆಸರಾಂತ ಕಂಪನಿಯಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಸಾಮಾಜಿಕವಾಗಿ, ಸಾಂಘಿಕವಾಗಿ ಅನೇಕ ಗೌರವದ ಸ್ಥಾನಮಾನಗಳನ್ನು ಹೊಂದಿದ ಶೆಟ್ಟರ ಸಾಧನೆಯ ಹಾದಿ ಮುಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ನೀಡಬಹುದು.
ಅಬುಧಾಬಿ ಇಂಡಿಯನ್ ಸ್ಕೂಲ್ ಇದರ ಆಡಳಿತ ಸಮಿತಿ ಸದಸ್ಯರಾಗಿ ಉತ್ತಮ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಈ ಸಮಿತಿಯ ಶಿಕ್ಷಣ ಮತ್ತು ಕ್ರೀಡೆ ವಿಭಾಗದಲ್ಲಿ ತನ್ನ ಗಣನೀಯ ಸೇವೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಯುಎಇ ಬಂಟ್ಸ್ ಸಂಘದ ಅಧ್ಯಕ್ಷ ಸ್ಥಾನದಲ್ಲಿ ಅವರು ಸಂಘಟಿಸಿದ ಕಾರ್ಯಕ್ರಮಗಳು ವಿಶ್ವ ಪ್ರಸಿದ್ಧಿ ಗಳಿಸಿದೆ. 1981 ರಿಂದ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಂಯೋಜಿಸಿ ದ್ದಾರೆ. ಟೋಸ್ಟ್ ಮಾಸ್ಟರ್ಸ್ ಕ್ಲಬ್ ಇದರ ಸ್ಥಾಪಕ ಉಪಾಧ್ಯಕ್ಷ ಸ್ಥಾನದಲ್ಲಿ ಸ್ಮರಣೆಯಲ್ಲಿ ಉಳಿಯಬಹುದಾದ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. 2018 ರ ವಿಶ್ವ ತುಳು ಸಮ್ಮೇಳನದ ದುಬಾಯಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಹೆಗ್ಗಳಿಕೆ ಇವರಿಗಿದೆ. 2017 ರ ತುಳು ನಾಡೋಚ್ಛಯ ಇದರ ಅಧ್ಯಕ್ಷ ಸ್ಥಾನಕ್ಕೆ ಕೂಡಾ ಆಯ್ಕೆ ಆಗಿದ್ದರು. ಇವರು ಭಾರತೀಯ ಉದ್ಯೋಗ ವ್ಯವಹಾರ ಸಮಿತಿಯ ಗೌರವ ವಿಶೇಷ ಸದಸ್ಯತ್ವವನ್ನು ಹೊಂದಿದ್ದಾರೆ.
ಅಬುಧಾಬಿ ಐಎಸ್ಸಿ ಪ್ರೊಫೆಷನಲ್ ಛೇರ್ಮನ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ಇನ್ನೂ ಅನೇಕ ಸ್ಥಾನಮಾನಗಳಿಂದ ಭೂಷಿತರಾದ ವರ್ತಮಾನ ಕಾಲದ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ಹೆಸರು ನಮೂದಿಸಿಕೊಂಡ ಶೆಟ್ಟಿಯವರ ಭವಿಷ್ಯದ ಬಾಳು, ಆರೋಗ್ಯ ನೆಮ್ಮದಿ, ಯಶ, ಕೀರ್ತಿ ವೈಭವಗಳಿಂದ ತುಂಬಿರಲೆಂದು ಸಮಾಜ ಬಂಧುಗಳ ಸದಾಶಯ ಹಾಗೂ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಶುಭ ಹಾರೈಕೆಗಳು.
ಶುಭಂಮಸ್ತು…
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು