ಕೆಲಸದ “ಬಾಂಡ್”ಗಳಿಗಿಂತ ಮನಸ್ಸು ಮನಸ್ಸುಗಳ ಭಾಂಧವ್ಯ ಮುಖ್ಯ. ತಂದೆ ತಾಯಿ ಕಷ್ಟದಿಂದ ಮುತ್ತಿಕ್ಕಿ ತುತ್ತಿಕ್ಕಿ ಸಾಕಿ, ಸಲಹಿ ವಿದ್ಯೆ ಕಲಿಸಿದರೂ ಯಾವುದೇ ಕಾನೂನಿನ ಕರಾರು ಮಾಡಿಸುವುದಿಲ್ಲ. ಆದರೆ ಅವರು ಲಕ್ಷಗಟ್ಟಲೆ ಹಣ ಸುರಿದು ಕಲಿಸಿದ ಅವರ ಮಕ್ಕಳ ಶ್ರಮದ ವಿದ್ಯಾ ಸರ್ಟಿಫಿಕೇಟ್ ಗಳನ್ನು ಯಾವುದೇ ಕಂಪನಿ ತೆಗೆದಿರಿಸುವ ಹಕ್ಕು ಯಾರು ಕೊಟ್ಟರು? ಪ್ರಸ್ತುತ ಎಲ್ಲಾ ಮನೆಯ ಮಕ್ಕಳೂ ಇಂಜಿನಿಯರ್, ಡಾಕ್ಟರ್ ಲಾಯರ್, ಪೈಲೆಟ್, ಐ.ಎ.ಎಸ್ ಇತ್ಯಾದಿ ಡಿಗ್ರಿ ಪಡೆದವರೇ. ಆದರೆ ಅವರ ಕಲಿತಾದ ಮೇಲೆ ಸರಿಯಾದ ಕೆಲಸಗಳಿಲ್ಲ. ಬೆಟ್ಟದಷ್ಟು ಆಸೆ ತುಂಬಿದ ಮುಖ ಮನಸ್ಸುಗಳ ಆಸೆಗಳನ್ನು ವರ್ಷಗಟ್ಟಲೆ ಕಸಿಯುವ ಕೆಲ ಸ್ವಾರ್ಥಿ ಖದೀಮರಿದ್ದಾರೆ ಎಚ್ಚರ!. ಸಾಕಷ್ಟು ಸಂಪಾದನೆ ಇದ್ದು ಸ್ಥಿತಿವಂತರಾದವರು ಏನೂ ಸಮಸ್ಯೆ ಇಲ್ಲದೆ ಕಲಿಯುತ್ತಾರೆ. ಕಲಿಸುತ್ತಾರೆ. ಈಗಿನ ಹೆಚ್ಚಿನ ಮಕ್ಕಳು ಹಿಂದಿನಂತೆ ಕಿಮೀ ಗಟ್ಟಲೆ ಕಾಲ್ನಡಿಗೆಯಲ್ಲಿ ಕ್ರಮಿಸಿ ಕಷ್ಟದಿಂದ ಶಾಲೆ ಕಾಲೇಜು ಕಲಿತವರಲ್ಲ. ಅದರಲ್ಲೂ ಮಧ್ಯಮ ವರ್ಗದ ಮತ್ತು ಕೆಳ ಮಧ್ಯಮ ವರ್ಗದ ಮನೆಯ ಹೊಸ ತಲೆಮಾರಿನ ಮಕ್ಕಳದ್ದು ಹೊಸತನದ ಬದುಕು. ಇಲ್ಲಿ ತಂದೆಯಾದವ ಮೇಸ್ತ್ರಿ, ಕೃಷಿ ಕೆಲಸ, ಕಲ್ಲಿನ ಕೋರೆ, ದಿನಗೂಲಿ, ಪೆಟ್ರೋಲ್ ಪಂಪ್, ಸೆಂಟ್ರಿಂಗ್, ಬಾರ್ ಬೆಂಡಿಂಗ್, ಗೂಡಂಗಡಿ, ಸಣ್ಣ ವ್ಯಾಪಾರ, ಪರದೇಶ, ಪರವೂರಿನಲ್ಲಿ ದುಡಿದು, ತಾಯಿಯಾದವಳು ಮನೆಕೆಲಸ, ಮಗು ನೋಡಿಕೊಳ್ಳುವುದು, ಕೃಷಿ ಕೆಲಸ, ಬೀಡಿ ಕಟ್ಟಿ, ಬೇರೆ ಬೇರೆ ಕಾರ್ಖಾನೆಗಳಲ್ಲಿ ದುಡಿದು ಅಂತೂ ಕಷ್ಟ ಪಟ್ಟು ದುಡಿದು ತಮ್ಮ ಮಕ್ಕಳು ತಮ್ಮಂತೆ ಆಗಬಾರದು ಅವರು ಒಳ್ಳೆಯದಾಗಿ ಕಲಿತು ದೊಡ್ಡ ಹುದ್ದೆಯನ್ನು ಅಲಂಕರಿಸಿ ಸಮಾಜದಲ್ಲಿ ಪ್ರತಿಷ್ಟಿತರಾಗಿ ಬಾಳಿ ಬದುಕಬೇಕು ಎಂದು ನಂಬಿದವರು. ಅದಕ್ಕಾಗಿ ರಾತ್ರಿ ಹಗಲು ಹೆಣಗಾಡುವವರು. ಒಂದು ನೆನಪಿಡಿ ಹೀಗೆ ಕಲಿಸಿದ ಎಂಬತ್ತು ಶೇಕಡಾ ಮಕ್ಕಳಿಗೆ ತಮ್ಮ ತಂದೆ ತಾಯಿಯ ಕಷ್ಟದ ಬದುಕು ಅರ್ಥವಾಗುವುದೇ ಇಲ್ಲ. ಇನ್ನೊಂದು ಮುಖ್ಯ ವಿಚಾರ ಇಂದಿನ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗಕ್ಕಾಗಿ ಇಲ್ಲವೇ ವ್ಯವಹಾರಕ್ಕಾಗಿ ಬೇಕಾದ ಶಿಕ್ಷಣ ಕೊಡುತ್ತಾರೆಯೇ ಹೊರತು, ಮನುಷ್ಯ ಮನುಷ್ಯನ ಬಾಂಧವ್ಯವನ್ನು ವೃಧ್ಧಿಸುವ ಅದರಿಂದ ಬದುಕು ಕಟ್ಟಿಕೊಳ್ಳುವುದನ್ನು ಕಲಿಸುವುದೇ ಇಲ್ಲ. ಇದು ಮನುಷ್ಯನ ನಿಜವಾದ ಸಂಬಂಧವನ್ನೇ ಹಾಳು ಮಾಡುತ್ತಿದೆ.

ಇತ್ತೀಚೆಗಂತೂ ನಮ್ಮ ಧೀಮಂತ ಪ್ರಧಾನಿಗಳ ವಿಶಾಲ ಚಿಂತನೆಯ ಸ್ವದೇಶಿ ಉತ್ಪಾದನೆಯಾದ “ಮೇಕ್ ಇನ್ ಇಂಡಿಯಾ”ದ ಪ್ರಭಾವದಿಂದ ಸ್ವಂತ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ವಿವಿಧ ನೈಪುಣ್ಯತೆಯನ್ನು ಮೈಗೂಡಿಸಿಕೊಂಡ ಹೊಸ ತಲೆಮಾರಿನ ಹೊಸ ಅನುಭವಿಗಳ ಸಂಸ್ಥೆಗಳು ಎಲ್ಲಾ ಕಡೆ ತಲೆ ಎತ್ತಿವೆ. ಇದರಿಂದ ಹೊಸ ಯುವ ಪದವೀಧರರಿಗೆ ಕೆಲಸಗಳೂ ದೊರೆಯುತ್ತಿವೆ. ಇದು ಖುಷಿಯ ವಿಚಾರ. ಮುಖ್ಯ ವಿಚಾರವೆಂದರೆ ಈಗಿನ ಎಲ್ಲಾ ತಾಂತ್ರಿಕ ಕಾಲೇಜುಗಳಲ್ಲಿ ನಾಲ್ಕು ವರ್ಷದ ಪದವಿ ಮುಗಿಯುವ ಮುಂಚೆ ಬೇರೆ ಬೇರೆ ಇಂತಹ ಸ್ಟಾಟಪ್ ಕಂಪನಿಗಳು ಅವರ ಸಂಸ್ಥೆಗಳಲ್ಲಿ ದುಡಿಯಲು ಈ ಹೊಸ ಪದವೀಧರರನ್ನು ಆರಿಸಲು ಅವರ ಕಾಲೇಜುಗಳಿಗೆ ಭೇಟಿ ಕೊಡುತ್ತಾರೆ. ಹೊಸದಾಗಿ ಪದವಿ ಪಡೆದು ಕೂಡಲೇ ಕೆಲಸ ಸಿಗುತ್ತದೆ ಎಂಬ ಹುರುಪು ಉತ್ಸಾಹದಿಂದಿರುವ ಈ ಯುವ ಪೀಳಿಗೆ, ಅವರು ಅವರ ಕಂಪನಿಯ ಬಗ್ಗೆ ಹೇಳಿದ್ದೆಲ್ಲವನ್ನೂ ಕೇಳಿದರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸದೆ ಹೇಗಾದರೂ ಕಲಿತಾದ ಕೂಡಲೇ ಕೆಲಸ ಸಿಗುತ್ತದೆ. ಮತ್ತೆ ನಾಲ್ಕು ಕಾಸು ಸಂಬಳವೂ ಸಿಗುತ್ತದೆ ಎಂದು ಎಲ್ಲದಕ್ಕೂ ತಲೆ ಅಲ್ಲಾಡಿಸುತ್ತಾರೆ. ಇದರ ಲಾಭ ಪಡೆಯುವ ಈ ಸಂಸ್ಥೆಗಳು ಮೊದಲಿಗೆ ತರಬೇತಿ ಮತ್ತೆ ನಿಮಗೆ ಸಂಬಳದೊಂದಿಗೆ ಕೆಲಸ ಕೊಡುತ್ತೇವೆ ಎಂದು ಪುಸಲಾಯಿಸಿ ಕೆಲವಷ್ಟು ಷರತ್ತುಗಳಿರುವ ಬಾಂಡ್ ಗಳಗೆ ಸಹಿ ಕೂಡಾ ಹಾಕಿಸುತ್ತಾರೆ. ಅದನ್ನು ಸರಿಯಾಗಿ ಓದಲೂ ಅನುವು ಮಾಡಿಕೊಡದೆ ಅವರಿಂದ ಅಲ್ಲದೆ ಅವರ ಪೋಷಕರಿಂದಲೂ ಸಹಿ ಹಾಕಿಸಿಕೊಳ್ಳುತ್ತಾರೆ. ಅದರ ಪರಿಣಾಮವೆಂದರೆ ಮುಂದೆ ಮಾಡುವ ಕೆಲಸದ ಕುರಿತು ಯಾವುದೇ ಸರಿಯಾದ ಮಾಹಿತಿ ಇಲ್ಲದೆ, ಉದಾಹರಣೆಗೆ ತಾನು ಪದವಿ ಪಡೆದದ್ದು “ಮೆಕ್ಯಾನಿಕಲ್ ಇಂಜಿನಿಯರಿಂಗ್”ನಲ್ಲಿ ಎಂದಾದರೆ ಅವರು ಒಪ್ಪಿಕೊಳ್ಳುವ ಕೆಲಸ ಅದು “ಸಿವಿಲ್ ಇಂಜಿನಿಯರ್ ಡಿಸೈನ್ ದ್ದು ಸಾಪ್ಟ್ ವೇರ್” ಕಂಪನಿಯದ್ದು ಆಗಿರಬಹುದು. ಇಲ್ಲಿ ಸಮಸ್ಯೆ ಎದುರಾಗುವುದು ಎಲ್ಲಿ ಎಂದರೆ ಒಂದು ರೀತಿಯಲ್ಲಿ ಕುರುಡನಿಗೆ ಆನೆ ತೋರಿಸಿದಂತೆ ಒಂದೊಂದೇ ಸಣ್ಣ ಪುಟ್ಟದನ್ನು ತೋರಿಸಿ ಮೂರು ವರ್ಷದ ಕರಾರಿಗೆ ದಸ್ಕತ್ತು ತೆಗೆದುಕೊಳ್ಳುತ್ತಾರೆ. ಆದರೆ ಯಾವುದೇ ಒಬ್ಬ ವ್ಯಕ್ತಿ ಆ ಕೆಲಸದ ಒಳಹೊರಗು ತಿಳಿಯದೆ ಮೂರು ವರ್ಷ ಮಾಡುತ್ತೇನೆ ಎಂದು ಹೇಗೆ ಒಪ್ಪಿಕೊಳ್ಳಲು ಸಾಧ್ಯ?!. ಆದರೂ ಇವರು ಪುಸಲಾಯಿಸಿ ಜೊತೆಗೆ ಆತನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮತ್ತು ಆತ ಮತ್ತೆ ಪಡೆಯಲಿರುವ ಇಂಜಿನಿಯರಿಂಗ್ ಪದವಿಯ ಸರ್ಟಿಫಿಕೇಟ್ ನ್ನು ಕೂಡಾ ಅವರ ಸುಪರ್ದಿಗೆ ತೆಗೆದುಕೊಳ್ಳುತ್ತಾರೆ. ಅಂದ್ರೆ ಆತ ಒಪ್ಪಿಗೆ ಇಲ್ಲದಿದ್ದರೂ, ಆಸಕ್ತಿ ಇಲ್ಲದಿದ್ದರೂ ಅವರ ಸಂಸ್ಥೆಯಲ್ಲಿ ಮೂರು ವರ್ಷ ಜೀತ ಮಾಡಬೇಕು ಎಂಬಂತೆ ಅಲ್ಲವೇ?. ಇದು ಆತನ ಬದುಕನ್ನೇ ಕಸಿಯುವ ಹುನ್ನಾರವಲ್ಲವೇ? ಇದು ಈಗಿನ ಹೊಸ ಕೆಲಸ ಕೊಡುವ ಕ್ಯಾಂಪಸ್ ಸೆಲೆಕ್ಷನ್ ಎನ್ನುವ ಹೊಸ ತಂತ್ರ!. ಕಾಲೇಜುಗಳೂ ತಮ್ಮ ಕೆಲಸ ಮುಗಿಯಿತು ಎಂದು ತಿಳಿದು ಕೈ ತೊಳೆದುಕೊಳ್ಳುತ್ತವೆ.
ಈ ಬಾಂಡ್ ಅಥವಾ ಕರಾರು ಮಾಡಿಸುವ ಕಾರಣವೆಂದರೆ ಅವರ ಸಂಸ್ಥೆಗೆ ಸೇರಿದ ಎಲ್ಲರೂ ಕೆಲವೇ ತಿಂಗಳು ಕೆಲಸ ಮಾಡಿ ಬಿಡುತ್ತಾರೆ ಎಂಬುದು ಮತ್ತು ಅವರಿಗಾಗಿ ದುಡ್ಡು ಕೊಟ್ಟು ಹೊಸ ಲೈಸೆನ್ಸ್ ತೆಗೆದುಕೊಳ್ಳುತ್ತಾರೆ ಎಂಬುದಕ್ಕಾಗಿ. ಇನ್ನೊಂದು ಕಾರಣ ಅವರಿಗಾಗಿ ಟ್ರೈನಿಂಗ್ ಕೊಟ್ಟಿದ್ದೇವೆ ಎಂಬುದಕ್ಕಾಗಿ!. ಇತ್ತೀಚಿಗಂತೂ ಈ “ಕೃತಕ ಬುದ್ಧಿಮತ್ತೆ” (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಎಂಬ ವಿಭಾಗವು ಭಾರೀ ಸುದ್ದಿಯಲ್ಲಿದೆ. ಈ ತಂತ್ರಜ್ಞಾನದಿಂದ ಮನುಷ್ಯ ಮಾಡುವ ಹೆಚ್ಚಿನ ಕೆಲಸವನ್ನು ಕಂಪ್ಯೂಟರ್ ಗಳೇ ಮಾಡಬಹುದಂತೆ. ಅಂದರೆ ನನ್ನ ಅನಿಸಿಕೆ ಇದೂ ಇತ್ತೀಚಿನ ಜನಗಳಂತೆ ಭಾವನಾರಹಿತವಾಗಿ ಕೆಲಸವಂತೂ ಮಾಡುತ್ತದೆ. ಆದರೆ ಅದರ ಪ್ರಭಾವದಿಂದ ಮತ್ತೂ ಮನುಷ್ಯತ್ವಕ್ಕೆ ಖಂಡಿತಾ ಅಭಾವದ ಪರಿಣಾಮವೇ ತಟ್ಟೀತು!. ಈ ಸಂಸ್ಥೆಗಳು ಒಂದು ತಿಳಿಯಬೇಕಾಗಿದೆ. ಒಂದನೆಯದಾಗಿ ಯಾರನ್ನೇ ಆದರೂ ಆಸಕ್ತಿ ಇಲ್ಲದವನ್ನು ಒತ್ತಾಯದಿಂದ ಒಂದು ಕೆಲಸ ಮಾಡಿಸಬಾರದು. ಅದರಿಂದ ಅವರಿಗೂ ಸಮಸ್ಯೆ ಮತ್ತು ಅವನಿಗೂ ಸಮಸ್ಯೆ. ಈಗಿನ ಮಕ್ಕಳನ್ನು ತಂದೆ ತಾಯಿ ಎಷ್ಟೇ ಕಷ್ಟ ಆದರೂ ಮುದ್ದಾಗಿಯೇ ಸಾಕಿರುತ್ತಾರೆ. ಅವರಿಗೆ ಇವರು ಒತ್ತಡ ಕೊಟ್ಟರೆ ಅವರು ಮಾನಸಿಕವಾಗಿ ಕುಬ್ಜರಾಗುತ್ತಾರೆ ಮತ್ತು ಖಿನ್ನತೆಗೆ ಒಳಗಾಗುತ್ತಾರೆ. ರಾತ್ರಿ ಪಾಳಯದ ಕೆಲಸದಿಂದ ಅವರ ಆರೋಗ್ಯ ಮಾತ್ರವಲ್ಲ ಮದುವೆ ಆದ ಮೇಲೆ ಪುರುಷತ್ವ ಕಳೆದುಕೊಂಡ ಸಾಕಷ್ಟು ಉದಾಹರಣೆಗಳೂ ಇವೆ. ಸರಕಾರದ ಕಾಯಿದೆಯ ಪ್ರಕಾರ ಯಾರಿಂದಲೂ ಯಾವುದೇ ಕೆಲಸವನ್ನು ಒತ್ತಾಯದಿಂದ ಅಥವಾ ಕರಾರು ಪಡೆದು ಮಾಡಿಸುವಂತಿಲ್ಲ. ಅದೇ ರೀತಿ ಒಂಬತ್ತು ಗಂಟೆಗಿಂತ ಹೆಚ್ಚು ಹೊತ್ತು ಕೆಲಸ ಮಾಡಿಸುವಂತಿಲ್ಲ. ನಿಮ್ಮ ಕೆಲಸಕ್ಕಾಗಿ ನೀವು ಟ್ರೈನಿಂಗ್ ಕೊಡುವುದು ಅದು ನಿಮ್ಮ ಕರ್ತವ್ಯ. ಹಾಗೆಂದು ಆತನಿಗೆ ಕೆಲಸದಲ್ಲಿ ಹಿತವಿಲ್ಲ ಎಂದರೆ ಆತನಿಂದ (ಪೆನಾಲ್ಟಿ) ದಂಡ ಎಂದು ಹಣ ಕೇಳುವಂತಿಲ್ಲ. ಒಂದು ವೇಳೆ ಈ ಕಂಪನಿಗಳು ಹೀಗೆ ಮಾಡಿದರೆ ಯಾವುದೇ ವಕೀಲರೂ ಇಲ್ಲದ ಭಾರತೀಯ ಕಾರ್ಮಿಕ ಕಾನೂನಿನ (ಲೇಬರ್ ಲಾ) ಪ್ರಕಾರ ಉದ್ಯೋಗವೆನ್ನುವುದು ಯಾವುದೇ ಕರಾರಿನಿಂದ ನಡೆಯದು. ಕಾನೂನು ಬಾಹಿರ ಮತ್ತು ಸೆಕ್ಷನ್ 27 ರ ಪ್ರಕಾರ, ಇಂಡಿಯನ್ ಕಾಂಟ್ರಾಕ್ಟ್ ಆಕ್ಟ್ 1872 ದಂತೆ, ಲೇಬರ್ ಕಮಿಷನರ್ ಪೋರ್ಟಲ್ ನಲ್ಲಿ ವಕೀಲರ ಸಹಾಯವೂ ಇಲ್ಲದೇ ನೇರವಾಗಿ ಸಂಸ್ಥೆಯ ವಿರುದ್ಧ ದೂರು ದಾಖಲಿಸಬಹುದು.
ಇದಕ್ಕೆ ಕಾರಣ ಈಗಿನ ಹೆಚ್ಚಿನ ಹೊಸ ತಲೆಮಾರಿನ ಉದ್ಯೋಗ ಪತಿಗಳಿಗೆ ಕೇವಲ ಯಂತ್ರಗಳೊಂದಿಗಿನ ಮತ್ತು ಅವರು ಕಲಿತ ನೈಪುಣ್ಯತೆಯ ಮೇಲೆ ಭರವಸೆ, ಬಾಂಧವ್ಯವಿದೆಯೇ ಹೊರತು ತಮ್ಮ ಜೊತೆ ಕೆಲಸ ಮಾಡುವ ಕೆಲಸಗಾರರನ್ನು ವಿಶ್ವಾಸಕ್ಕೆ ಹೇಗೆ ತೆಗೆದುಕೊಳ್ಳಬೇಕು ಎಂಬ ನೈಪುಣ್ಯತೆ ಅಥವಾ “ಸಾಪ್ಟ್ ಸ್ಕಿಲ್” ಇಲ್ಲ. ಈ ಕಾರಣದಿಂದ ಸೇರಿದವರು ಎಲ್ಲರೂ ಕೆಲಸ ಬಿಡುತ್ತಿರುವುದು. ಮನುಷ್ಯ ಮನುಷ್ಯನನ್ನು ಪ್ರೀತಿಸಿ, ಆ ಮೂಲಕ ಯಂತ್ರಗಳಿಂದ ಕೆಲಸ ಮಾಡಿಸಬೇಕಾಗಿದೆ. ಆದರೆ ಈಗ ಮನುಷ್ಯರಿಂದ ಕೆಲಸ ಮಾಡಿಸಿ ಯಂತ್ರಗಳನ್ನು ಪ್ರೀತಿಸುತ್ತಿದ್ದಾರೆ!. ನೆನಪಿಡಿ ನೀವು ಶ್ರಮಪಟ್ಟು ಕಟ್ಟಿದ ನಿಮ್ಮ ಸಂಸ್ಥೆಯ ಉಳಿತು ಮತ್ತು ಅಭಿವೃದ್ಧಿ ನಿಮ್ಮಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಹಿತದ ಮೇಲೆ ಅವಲಂಭಿತವಾಗಿದೆ. ಅದಲ್ಲದೆ ನಿಮ್ಮ ಹಮ್ಮು ಬಿಮ್ಮು, ನೈಪುಣ್ಯತೆ ಮತ್ತು ಹಣದ ತಾಕತ್ತು ಇದರಿಂದ ಈಗಿನ ಹೊಸ ಮಕ್ಕಳನ್ನು ಖರೀದಿಸಿ ತಮ್ಮ ಪಾರುಪತ್ಯ ಮೆರೆಯುತ್ತೇವೆ ಎನ್ನುವುದು ಮಾತ್ರ ನಿಮ್ಮ ಭ್ರಮೆ ಅಷ್ಟೇ. “ಭಾಂದವ್ಯದಿಂದ ಭರವಸೆ ಹುಟ್ಟಬೇಕೇ ಹೊರತು ಭಯದಿಂದಲ್ಲ”.!.
ಲೇಖನ : ಶರತ್ ಶೆಟ್ಟಿ ಪಡುಪಳ್ಳಿ







































































































