ಹೆಸರು “ಪ್ರಶಾಂತ”ವಾಗಿದ್ದಾಗ ಬದುಕು ಅಶುಭವಾಗಿತ್ತು. “ರಿಷಭ”ನಾದ ಮೇಲೆ ಶುಭವು ತಾನಾಗಿ ಕದ ಬಡಿದು ಕೈ ಹಿಡಿಯಿತು. ಜೀವನದ ದಾರಿಯಲ್ಲೀಗ “ಪ್ರಗತಿ”…! ಆತನ ಜೀವದಡದ ತುಂಬೆಲ್ಲ ಅದೆಷ್ಟು ಅವಮಾನದ ಅಲೆಗಳು, ಅವುಗಳೆಲ್ಲ ಸುಖದ ಕುರುಹುಗಳಾಗಿರಲಿಲ್ಲ. ಜ್ವಾಲಾಮುಖಿಯಿಂದ ನೊರೆಗೆರೆದು ಕುದಿವ ಸೋತ ನೀರಿನ ಹನಿಗಳ ಉಂಡೆಯಾಗಿತ್ತು. ವಿದ್ಯಾರ್ಥಿ ದೆಸೆಯಲ್ಲಿ ರಿಷಬ್ ಬುದ್ಧಿವಂತ ಹುಡುಗನಾಗಿರಲಿಲ್ಲ. ಹುಡುಗಾಟದ ಮನಸ್ಸಿಗೆ ಉತ್ತೀರ್ಣನಾಗುವಷ್ಟು ಅಂಕ ದೊರೆತರೆ ಸಾಕೆನ್ನುವ ನಿರ್ಲಿಪ್ತ ಭಾವ. ಬದುಕು ಆತನನ್ನು ಹೇಗೇಗೋ ನಡೆಸಿಕೊಂಡಿತು. ಕುಟುಂಬದ ನೊಗ ಹೊರಲು ನೀರಿನ ಕ್ಯಾನು ಹೊತ್ತರು. ಜೀವನಕ್ಕಂಟಿದ ಆರ್ಥಿಕ ಕೊಳೆಯನ್ನು ತೊಳೆಯಲು ಹೋಟೆಲಿನ ಮೋರಿಯಲ್ಲಿ ನಿಂತು ಪಾತ್ರೆಯನ್ನು ತೊಳೆದರು. ಟೇಬಲನ್ನೂ ಒರೆಸಿದರು. ಸಿನಿಮಾ ಸೆಟ್ ನಲ್ಲಿ ಕಾರ್ಮಿಕರಾಗಿ ದುಡಿದರು. ಅವತ್ತಿನ ದಿನಗೂಲಿ ಹುಡುಗ ಇವತ್ತಿಗೆ ಜಗಮೆಚ್ಚಿದ ಹೀರೋ.

ಕುಂದಾಪುರ ಸಮೀಪದ “ಕೆರಾಡಿ” ಎನ್ನುವ ಕಾಂತಾರದ ಊರಿನಿಂದ ಹೊರಟ ಬೆಳ್ಳಿಕಿರಣವೊಂದು ಇವತ್ತಿಗೆ ಇಡಿಯ ಜಗತ್ತನ್ನು ವ್ಯಾಪಿಸಿ ನಿಂತಿದೆ. ಆದರೂ ರಿಷಬ್ ಅವರ ತಲೆಯಿನ್ನೂ ಭುಜದ ಮೇಲೆಯೇ ನಿಂತಿದೆ. ತನ್ನೂರಿನ ಒಡನಾಡಿಗಳು ಸಿಕ್ಕಾಗ, ಪರಿಚಿತರು ಎದುರಾದಾಗ ಅವರೊಳಗಿನ ಅದೇ ಮೊದಲಿನ ಪ್ರಶಾಂತ ನಮಗೆ ಕಾಣುತ್ತಾನೆ. ಹೆಸರು ವಾಸಿಯಾಗಿದ್ದಾನೆ ಎಂದು ನಾವು ದೂರ ಉಳಿದರೆ ಆತನೇ ಎದುರು ಬಂದು “ಏಯ್ ಏನೋ ಇಷ್ಟು ಬೇಗ ಮರೆತು ಬಿಟ್ಯಾ ನನ್ನ” ಎಂದು ಅಪ್ಪಿಕೊಂಡು ಮಾತನಾಡುವ ಸರಳತೆಯ ಸ್ನೇಹಜೀವಿ. ಸೋಲು ಗಟ್ಟಿಗೊಳಿಸಿದರೆ, ಗೆಲುವು ಅವರನ್ನು ವಿನೀತಗೊಳಿಸಿತು. ಜಗದಗಲ ವ್ಯಾಪಿಸಿಕೊಂಡ ಚಿತ್ರ ಕಾಂತಾರ. ಅದು ರಿಷಬ್ ಶೆಟ್ಟಿ ಎನ್ನುವ ಕುಂದಗನ್ನಡ ಹುಡುಗನೊಬ್ಬನ ಪರಿಕಲ್ಪನೆಯ ಪ್ರಪಂಚ. ನಟನೆ ನಿರ್ದೇಶನ ಎಲ್ಲವೂ ಅವರದ್ದೇ…!
ದೈವದ ಬಲ ಇಲ್ಲದೆ ಹೋಗಿದ್ದರೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ ಎಂದು ಧೃಡವಾಗಿ ನಂಬುವ ರಿಷಬ್ ಸಿನಿಮಾದ ಚಿತ್ರೀಕರಣವನ್ನು ದೈವ ಅಪ್ಪಣೆ ಮೇರೆಗೆ ಪ್ರಾರಂಭಿಸಿದವರು. ರಿಷಬ್ ನಿಮ್ಮ ಸೋಲು ಗೆಲುವುಗಳನ್ನು ಹತ್ತಿರದಿಂದ ಕಂಡವರು ನಾವು. ಆದರೆ ಎಂದಿಗೂ ಸಾತ್ವಿಕತೆ ಮತ್ತು ನೈತಿಕತೆಯನ್ನು ಕಳೆದುಕೊಂಡವರಲ್ಲ ನೀವು.
ವೇದಿಕೆಗಳಲ್ಲಿ ಬೇಡಿಕೆ ನಿಮಗಿದ್ದರೂ ಅದನ್ನು ಪ್ರತಿಷ್ಠೆ ಎಂಬಂತೆ ಬಳಸಿಕೊಳ್ಳದೆ “ನನ್ನನ್ನು ನನ್ನ ಪಾಡಿಗೆ ಕೆಲಸ ಮಾಡಲು ಬಿಡಿ”ಎನ್ನುವ ನಿಗರ್ವಿ ನೀವು. ನಿಮ್ಮ ಹಿಂದೆ ಕೋಟಿ ಕೋಟಿ ಮನಸುಗಳ ಪೂಜಾಫಲವಿದೆ. ಕಾಂತಾರದ ಗಲ್ಲಾಪೆಟ್ಟಿಗೆ ಕನಕವರ್ಷದ ಕುಂಭದ್ರೋಣವನ್ನು ಸುರಿಸಲಿ. ಪಂಜುರ್ಲಿಯ ಅನುಗ್ರಹ ಅನವರತ ನಿಮ್ಮ ಕಾಯಲಿ.
ಬರಹ : ಉದಯ್ ಕುಂದಾಪುರ (ಮುಂಬೈ)
		




































































































