ಯಾವುದೇ ಸಮಾಜ ಪರ ಸೇವಾ ಕಾರ್ಯಗಳಿಗೆ ನಾನು ನಿರಂತರ ಸಹಾಯ, ಸಹಕಾರವನ್ನು ನೀಡುತ್ತಾ ಬಂದಿದ್ದೇನೆ. ಮುಂದೆಯೂ ನನ್ನ ಸಹಕಾರ ಸದಾ ಇರುತ್ತದೆ. ಘಾಟ್ಕೋಪರ್ ಕನ್ನಡ ವೆಲ್ಫೇರ್ ಸೊಸೈಟಿಯೊಂದಿಗೆ ನನ್ನ ಆತ್ಮೀಯ ಒಡನಾಟವಿದೆ. ಹಾಗೆಯೇ ಈ ಸಂಸ್ಥೆಯ ಎಲ್ಲಾ ಸದಸ್ಯರು ನನ್ನ ಆತ್ಮೀಯರಾಗಿದ್ದಾರೆ. ಇಂದು ವಿಶೇಷವಾಗಿ ಈ ಸಂಸ್ಥೆಯ ಸದಸ್ಯರು ಸೇರಿದಂತೆ ನನ್ನೆಲ್ಲಾ ಹಿತೈಷಿ ಸಮಾಜ ಬಾಂಧವರ ಆಶೀರ್ವಾದದಿಂದಾಗಿ ನಾನು ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷನಾಗಿ ಆಯ್ಕೆಗೊಂಡಿದ್ದೇನೆ ಎನ್ನಲು ಹೆಮ್ಮೆ ಪಡುತ್ತೇನೆ. ಇನ್ನು ಮುಂದೆಯೂ ಬಂಟರ ಸಂಘದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮೆಲ್ಲರ ತುಂಬು ಹೃದಯದ ಸಹಕಾರ ಬೇಕಾಗಿದೆ. ಕನ್ನಡ ವೆಲ್ಫೇರ್ ಸೊಸೈಟಿ ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ಅವರಂತಹ ಸಂಘಟಕರು ನಮ್ಮೊಂದಿಗಿದ್ದರೆ ಯಾವುದೇ ಕಾರ್ಯವನ್ನು ಮಾಡಲು ಅಸಾಧ್ಯವಾಗದು ಎನ್ನುವ ಭರವಸೆಯೂ ನನ್ನಲ್ಲಿದೆ ಎಂದು ಮುಂಬಯಿ ಬಂಟರ ಸಂಘದ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡ ಮಹೇಶ್ ಎಸ್. ಶೆಟ್ಟಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಅವರು ಡಿ.3 ರ ಆದಿತ್ಯವಾರದಂದು ಘಾಟ್ಕೋಪರ್ ಪೂರ್ವದ ಕನ್ನಡ ವೆಲ್ಫೇರ್ ಸೊಸೈಟಿ ಮಹಿಳಾ ವಿಭಾಗದ ವತಿಯಿಂದ ಆಯೋಜಿಸಲಾದ ಸ್ನೇಹ ಸಮ್ಮಿಳನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಕನ್ನಡ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ಅವರು ಬಂಟರ ಸಂಘ ಮುಂಬಯಿಯ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ನೂತನ ಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು ಮತ್ತು ಬಂಟರ ಸಂಘದಲ್ಲಿ ಸದಸ್ಯತ್ವ ನೋಂದಾವಣಿಕೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕವನ್ನು ಗಳಿಸಿದ ಕನ್ನಡ ವೆಲ್ಫೇರ್ ಸೊಸೈಟಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನವೀನ್ ಶೆಟ್ಟಿ ಇನ್ನ ಬಾಳಿಕೆ, ಕನ್ನಡ ವೆಲ್ಫೇರ್ ಸೊಸೈಟಿ ಸದಾ ಶಿಸ್ತು ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದು ಮುಂಬಯಿ ಮಹಾನಗರದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಇದರಿಂದಾಗಿ ನಾನೀಗ ಬಂಟರ ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷನಾಗಿರುವೆನು ಎಂದು ಅಭಿಮಾನದೊಂದಿಗೆ ಹೇಳಬಲ್ಲೆ. ಎಲ್ಲರ ಸಹಕಾರವಿದ್ದರೆ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಈ ಸ್ಥಾನಕ್ಕೆ ಇನ್ನಷ್ಟು ಗೌರವವನ್ನು ತರುತ್ತೇನೆ ಎನ್ನುವ ಭರವಸೆಯ ನುಡಿಗಳನ್ನಾಡಿದರು ಮತ್ತು ಸನ್ಮಾನಕ್ಕೆ ಅವರು ಕೃತಜ್ಞತೆಯನ್ನು ಸಲ್ಲಿಸಿ ಶುಭವನ್ನು ಹಾರೈಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಗೌರವ ಕೋಶಾಧಿಕಾರಿ ಸಿಎ. ಹರೀಶ್ ಡಿ ಶೆಟ್ಟಿ ಮಾತನಾಡಿ, ಕನ್ನಡ ವೆಲ್ಫೇರ್ ಸೊಸೈಟಿ ಸದಸ್ಯರು ಸಕ್ರಿಯರಾಗಿರುವುದರಿಂದ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರವಾಗುತ್ತದೆ. ಇದಕ್ಕಾಗಿ ಸಂಸ್ಥೆಯ ಮಹಿಳಾ ವಿಭಾಗವನ್ನು ನಾನು ಅಭಿನಂದಿಸುತ್ತೇನೆ ಎಂದರು.
ಸಭಾ ಕಾರ್ಯಕ್ರಮದ ಮೊದಲಿಗೆ ವೀಣಾ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಜಿ ಅಧ್ಯಕ್ಷ, ಸಾಹಿತಿ ನಾರಾಯಣ ಶೆಟ್ಟಿ ನಂದಳಿಕೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ತಿಮ್ಮ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಲ ಅಜಿತ್ ಶೆಟ್ಟಿ ಉಪಸ್ಥಿತರಿದ್ದರು.