
ಸುಸಂಸ್ಕೃತ ಸಮಾಜ ನಿರ್ಮಿಸುವಲ್ಲಿ ಮಹಿಳೆಯರ ಪಾತ್ರ ಬಹಳಷ್ಟಿದೆ. ಮಹಿಳೆಯರು ಸ್ವಂತ ಮನೆ ಹಾಗೂ ಸಮಾಜವನ್ನು ಬೆಳಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿಕೊಂಡಿದ್ದಾರೆ. ನಾವು ಸದಾ ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಉತ್ತಮ ಸಮಾಜವನ್ನು ನಿರ್ಮಿಸುವ ಕಡೆಗೆ ಗಮನ ಹರಿಸಬೇಕು ಎಂದು ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿಯವರು ಹೇಳಿದರು. ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಇದರ ಮಹಿಳಾ ವಿಭಾಗದ ಆಶ್ರಯದಲ್ಲಿ ಫೆಬ್ರವರಿ 26 ರಂದು ಘಾಟ್ಕೋಪರ್ ಪೂರ್ವದ ಪಂತ್ ನಗರದ ಕನ್ನಡ ವೆಲ್ಫೇರ್ ಸೊಸೈಟಿಯ ಮಹೇಶ್ ಎಸ್ ಶೆಟ್ಟಿ ಬಾಬಾಸ್ ಗ್ರೂಪ್ ಸಭಾಗೃಹದಲ್ಲಿ ನಡೆದ ಅರಶಿನ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅರಶಿನ ಕುಂಕುಮ ಮಹಿಳೆಯರ ಸೌಭಾಗ್ಯದ ಸಂಕೇತವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಹೇಳಿ ಶುಭ ಹಾರೈಸಿದರು.


ವೆಲ್ಕಮ್ ಪ್ಯಾಕೇಜಿಂಗ್ ಕಂಪನಿಯ ಆಡಳಿತ ನಿರ್ದೇಶಕ ರವೀಂದ್ರನಾಥ ಎಂ. ಭಂಡಾರಿಯವರು ಮಾತನಾಡಿ, ಕನ್ನಡ ವೆಲ್ಫೇರ್ ಸೊಸೈಟಿಯ ಕಾರ್ಯ ಚಟುವಟಿಕೆಗಳು ಎಲ್ಲಾ ಸಂಘ ಸಂಸ್ಥೆಗಳಿಗೂ ಮಾದರಿಯಾಗಿದೆ. ಈ ಸಂಸ್ಥೆಯ ಮಹಿಳಾ ವಿಭಾಗವು ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದರು. ಭಾರತ್ ಕೋ ಆಪರೇಟಿವ್ ಬ್ಯಾಂಕಿನ ಘಾಟ್ಕೋಪೇರ್ ಪೂರ್ವ ಶಾಖೆಯ ಪ್ರಬಂಧಕಿ ಶಿಲ್ಪಾ ಎ ಕೋಟ್ಯಾನ್ ಅವರು ಮಾತನಾಡಿ, ಅರಶಿನ ಕುಂಕುಮ ಕಾರ್ಯಕ್ರಮ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ನೀಡುತ್ತಿರುವ ವಿಶೇಷ ಸ್ಥಾನಮಾನಗಳನ್ನು ಗುರುತಿಸುತ್ತದೆ. ಮಹಿಳೆಯರ ಶಕ್ತಿ ಹಾಗೂ ಪ್ರತಿಭೆಯನ್ನು ತೋರಿಸಲು ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯವಾಗಿದೆ. ಕನ್ನಡ ವೆಲ್ಫೇರ್ ಸೊಸೈಟಿಯ ಕಾರ್ಯಕ್ರಮವು ಸಾಂಸ್ಕೃತಿಕ ಚಟುವಟಿಕೆಗಳಿಂದ ಕೂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಕನ್ನಡ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಾ ಬಾಳಿಕೆಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಬಂಟರ ಸಂಘ ಮುಂಬಯಿ ಇದರ ಸಿಟಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಅನಿತಾ ಎ. ಶೆಟ್ಟಿ ಅವರನ್ನು ಸೊಸೈಟಿ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ಸ್ವರಣಿಕೆಯನ್ನಿಟ್ಟು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕನ್ನಡ ವೆಲ್ಫೇರ್ ಸೊಸೈಟಿ ಸದಾ ಕ್ರಿಯಾಶೀಲವಾಗಿರುವ ಸಂಸ್ಥೆಯಾಗಿದೆ. ಅರಶಿನ ಕುಂಕುಮ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಕನ್ನಡ ವೆಲ್ಫೇರ್ ಸೊಸೈಟಿಯ ಮಹಿಳಾ ವಿಭಾಗವು ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಬೆಳೆಸುವಂತಹ ಕಾರ್ಯವನ್ನು ಮಾಡುತ್ತಿದೆ ಎಂದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಲಾ ಅಜಿತ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ವಿಭಾಗದ ವಸಂತಿ ಪೂಜಾರಿ ನಿರೂಪಿಸಿದರು. ಜಯಲಕ್ಷ್ಮೀ ಎಸ್ ಶಿರಿಯ ಹಾಗೂ ಪ್ರಮೀಳಾ ಆರ್ ಶೆಟ್ಟಿ ಪರಿಚಯಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಮಲ್ಲಿಕಾ ಆರ್. ಶೆಟ್ಟಿ ವಂದಿಸಿದರು.
ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪ ಕಾರ್ಯಧ್ಯಕ್ಷೆ ಪ್ರಮೀಳಾ ಆರ್ ಶೆಟ್ಟಿ, ಕಾರ್ಯದರ್ಶಿ ಮಲ್ಲಿಕಾ ಆರ್ ಶೆಟ್ಟಿ, ಕೋಶಾಧಿಕಾರಿ ಧನ್ಯಶ್ರೀ ಡಿ. ಶೆಟ್ಟಿ, ಜತೆ ಕಾರ್ಯದರ್ಶಿ ಇಂದಿರಾ ವಿ. ಪೂಜಾರಿ, ಜತೆ ಕೋಶಾಧಿಕಾರಿ ಉಷಾ ಎಚ್. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಿಳಾ ವಿಭಾಗದವರಿಂದ ಭಜನಾ ಕಾರ್ಯಕ್ರಮ ಮತ್ತು ಭಾವಗೀತೆಗಳ ಗಾಯನ ನಡೆಯಿತು.

























































































































