ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ 5ನೇ ಬೃಹತ್ ಉದ್ಯೋಗ ಮೇಳವು ಅಕ್ಟೋಬರ್ 9ರಂದು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕೌನ್ಸೆಲಿಂಗ್, ಪ್ಲೇಸ್ಮೆಂಟ್ ಮತ್ತು ತರಬೇತಿ ವಿಭಾಗದ ಸಹಯೋಗದಲ್ಲಿ ಹಾಗೂ ಎಂಆರ್ಜಿ ಗ್ರೂಪ್ನ ಪ್ರಾಯೋಜಕತ್ವದಲ್ಲಿ ಕುಂತಳ ನಗರದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ. ಇದರ ಪೂರ್ವ ಸಿದ್ಧತೆಗಳ ಅಂಗವಾಗಿ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ತಂಡವು ಭರತ್ ಕುಮಾರ್ ಅವರ ನೇತೃತ್ವದಲ್ಲಿ ಸಂಘದ ಸ್ಕಿಲ್ ಡೆವಲಪ್ಮೆಂಟ್ ಕೇಂದ್ರಕ್ಕೆ ಭೇಟಿ ನೀಡಿ, ಉದ್ಯೋಗ ಮೇಳದ ಆಯೋಜನೆ, ಸಂಸ್ಥೆಗಳ ಭಾಗವಹಿಸುವಿಕೆ ಹಾಗೂ ಅಭ್ಯರ್ಥಿಗಳ ಸೌಲಭ್ಯಗಳ ಕುರಿತು ಪೂರ್ವಭಾವಿ ಸಭೆಯನ್ನು ಯಶಸ್ವಿಯಾಗಿ ನಡೆಸಿತು. ಈ ಉದ್ಯೋಗ ಮೇಳವು ಗ್ರಾಮೀಣ ಯುವ ಜನತೆಗೆ ಉದ್ಯೋಗಾವಕಾಶಗಳನ್ನು ಒದಗಿಸುವ ದೃಷ್ಟಿಯಿಂದ 5 ನೇ ಬಾರಿ ಉದ್ಯೋಗ ಮೇಳ ಮಾಡುವ ಮೂಲಕ ಮಹತ್ವದ ವೇದಿಕೆಯಾಗಲಿದೆ ಎಂದು ಉಡುಪಿ ಗ್ರಾಮೀಣ ಬಂಟರ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿಯವರು ತಿಳಿಸಿದ್ದಾರೆ.



ಕಳೆದ 4 ಬಾರಿ ಉದ್ಯೋಗ ಮೇಳಗಳನ್ನು ಮಾಡುವ ಮೂಲಕ ಸುಮಾರು 3500 ಅಭ್ಯರ್ಥಿಗಳಿಗೆ ಉದ್ಯೋಗವು ವಿವಿಧ ಒಳ್ಳೆಯ ಕಂಪೆನಿಗಳಲ್ಲಿ ಸಿಕ್ಕಿದೆ. ಈ ಬಾರಿಯೂ ಒಳ್ಳೆಯ ಕಂಪನಿಗಳು ಬರುವ ರೀತಿಯಲ್ಲಿ ಪ್ರಯತ್ನ ಮಾಡಲಾಗುವುದೆಂದು ಭರತ್ ಕುಮಾರ್ ತಿಳಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಕೋಶಾಧಿಕಾರಿ ವಿಜಿತ್ ಕುಮಾರ್ ಶೆಟ್ಟಿ, ಟ್ರಸ್ಟಿಗಳಾದ ಪದ್ಮನಾಭ ಹೆಗ್ಡೆ ಮತ್ತು ಶ್ರೀಮತಿ ರಂಜನಿ ಹೆಗ್ಡೆಯವರು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ತಂಡದವರೊಡನೆ ಸಮಾಲೋಚನೆ ಮಾಡಿದರು.





















































































































