ಬಂಟರ ಸಂಘ (ರಿ) ಸುರತ್ಕಲ್ ಮತ್ತು ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇವರ ಸಹಯೋಗದಲ್ಲಿ ಆಗೋಸ್ಟ್ 9 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ಆಟಿದ ಪೊರ್ಲು ಮತ್ತು ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ ಬಾಳ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಮುಂಬಯಿ ವಿ.ಕೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಡಾ. ವೈ ಭರತ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಎಂ ಕರುಣಾಕರ ಶೆಟ್ಟಿ, ಬಂಟವಾಳ ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಚೌಟ ಬದಿಗುಡ್ಡೆ, ತುಳು ವರ್ಲ್ಡ್ ಫೌಂಡೇಶನ್ ನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಭಾಗವಹಿಸಲಿದ್ದಾರೆ. ಪ್ರೊಫೆಸರ್ ಅಕ್ಷಯ ಆರ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜ ಟಿ ಶೆಟ್ಟಿ ಉಪಸ್ಥಿತರಿರುವರು.





ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಗುವುದು. ಕೃಷಿ ಕ್ಷೇತ್ರದಲ್ಲಿ ವಾಮನ ಶೆಟ್ಟಿ ಸೂರಿಂಜೆ, ಸಾಹಿತ್ಯ ರಂಗಭೂಮಿ ಕ್ಷೇತ್ರದಲ್ಲಿ ಗೀತಾ ಸುರತ್ಕಲ್, ಭರತನಾಟ್ಯ ಕ್ಷೇತ್ರದಲ್ಲಿ ಚಂದ್ರಶೇಖರ ನಾವಡ ಚೇಳ್ಯಾರು, ಲಲಿತಕಲೆ ಕ್ಷೇತ್ರದಲ್ಲಿ ಧನಪಾಲ್ ಶೆಟ್ಟಿಗಾರ್ ತಡಂಬೈಲ್, ಗುಡಿ ಕೈಗಾರಿಕೆ ಕ್ಷೇತ್ರದಲ್ಲಿ ವಾರಿಜ ಡಿ ಬಂಗೇರ ಕುಳಾಯಿ ಇವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮ ಬೆಳಿಗ್ಗೆ 9.30 ರಿಂದ ಪ್ರಾರಂಭಗೊಳ್ಳಲಿದೆ. ಸಂಘದ ಮಹಿಳಾ ಸದಸ್ಯರಿಂದ ಮತ್ತು ಮಕ್ಕಳಿಂದ ಗ್ರಾಮವಾರು ಜಾನಪದ ನೃತ್ಯ, ರೂಪಕ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳನ್ನು ಕೂಡಾ ಆಯೋಜಿಸಲಾಗಿದೆ. ಪುರುಷರಿಗೆ ತೆಂಗಿನಕಾಯಿ ಕುಟ್ಟುವುದು, ಮುಂಡಾಸು ಕಟ್ಟುವುದು, ಮಹಿಳೆಯರಿಗೆ ಹಿಡಿಸೂಡಿ ತಯಾರಿಸುವುದು, ಮಡಲು ಹೆಣೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸಭಾ ಕಾರ್ಯಕ್ರಮದ ನಂತರ ಆಟಿಯ ವಿಶೇಷ ಭೋಜನದ ಬಳಿಕ ಸಂಘದ ಸದಸ್ಯರಿಂದ ಸಾಂಸ್ಜೃತಿಕ ಕಾರ್ಯಕ್ರಮ, ರಸಪ್ರಶ್ನೆ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ತಿಳಿಸಿದ್ದಾರೆ.




















































































































