ಇತ್ತೀಚಿನ ದಿನಗಳಲ್ಲಿ ಗದ್ದೆ, ಹೈನುಗಾರಿಕೆ, ಕೃಷಿ, ಬೇಸಾಯ ಮಾಡುವವರು ವಿರಳವಾಗಿರುವ ಕಾಲದಲ್ಲಿ ಮಂದಾರ್ತಿಯ ಹಿರಿಯ ಪ್ರಗತಿಪರ ಕೃಷಿಕ ಶೇಡಿಕೊಡ್ಲು ವಿಠಲ ಶೆಟ್ಟಿಯವರು ಇಂದಿಗೂ ಕೃಷಿ ಚಟುವಟಿಕೆ ಮುಂದುವರಿಸಿದ್ದಾರೆ. 86 ವರ್ಷದ ವಿಠಲ ಶೆಟ್ಟಿಯವರು 60 ವರ್ಷದ ಹಿಂದೆ ಮಂದಾರ್ತಿಯ ಶೇಡಿಕೊಡ್ಲುವಿನಲ್ಲಿ ವಾಸವಾಗಿ ಹಿರಿಯರಿಂದ ಬಂದ 10 ಎಕರೆ ಸಾಗುವಳಿ ಭೂಮಿಯಲ್ಲಿ ಭತ್ತದ ಕೃಷಿಯನ್ನು ಕೋಣಗಳ ಮೂಲಕ ಮಾಡುತ್ತಿದ್ದರು. ಕೃಷಿಯಲ್ಲಿ ಉತ್ಸಾಹ ಹೊಂದಿ ಕಿರಾಡಿ, ನಡೂರು, ಮೂಡುಬೆಟ್ಟು, ಹೆಗ್ಗುಂಜೆ ಮುಂತಾದ ಕಡೆಗಳಲ್ಲಿ ಮೂವತ್ತು ಎಕರೆ ಭೂಮಿಯಲ್ಲಿ ಪವರ್ ಟಿಲ್ಲರ್ ಮೂಲಕ ಕೃಷಿ ಮಾಡುತ್ತಿದ್ದರು. ಕೃಷಿಯೊಂದಿಗೆ ಹೈನುಗಾರಿಕೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರು, 1974ರಲ್ಲಿ ಕೆನರಾ ಮಿಲ್ಕ್ ಗೆ ಹಾಲನ್ನು ನೀಡಲು ಪ್ರಾರಂಭಿಸಿದ್ದರು. ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಅಧ್ಯಕ್ಷರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. 45 ವರ್ಷಗಳಿಂದ ಮಂದಾರ್ತಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತೋಟಗಾರಿಕೆಯಲ್ಲಿ ತೆಂಗು, ಅಡಿಕೆ, ಮಿಶ್ರಬೆಳೆಗಳನ್ನು ಬೆಳೆಯುತ್ತಿದ್ದಾರೆ. ಪವರ್ ಟಿಲ್ಲರ್ ನ ಖರ್ಚಿಗಿಂತ ಟ್ರಾಕ್ಟರ್ ಖರ್ಚು ಕಡಿಮೆ ಆಗುವುದರಿಂದ ಟ್ರಾಕ್ಟರ್ ನಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.






















































































































