ಸಮಾಜದ ಜನರ ಆರ್ಥಿಕ ಅವಶ್ಯಕತೆಗಳನ್ನು ಕಾಲಕಾಲಕ್ಕೆ ಹೊಂದಿಸಿಕೊಟ್ಟು ಒಟ್ಟು ಸಮಾಜ ಆರ್ಥಿಕ ಪ್ರಗತಿಗೆ ಶ್ರಮಿಸುವಲ್ಲಿ ಸಹಕಾರಿ ಸಂಘಗಳ ಪಾತ್ರ ಅತ್ಯಂತ ಮಹತ್ವ ಪೂರ್ಣವಾದುದು. ಈ ನಿಟ್ಟಿನಲ್ಲಿ ಚಂದ್ರ ವಿವಿಧೋದ್ದೇಶ ಸಹಕಾರಿ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಮೂಲಕ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದ ಐ.ಎಂ ರಾಜಾರಾಮ ಶೆಟ್ಟಿ ಅವರು ಸಹಕಾರಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ರಾಜ್ಯದ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಶ್ರೀಯುತರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮೂಡಲಕಟ್ಟೆ ದೊಡ್ಡಮನೆ ಮನೆತನದ ನಾಗರತ್ನ ಶೆಟ್ಟಿ ಹಾಗೂ ಇರ್ಮಾಡಿ ಪಟೇಲ್ ಭುಜಂಗ ಶೆಟ್ಟಿ ಅವರ ಸುಪುತ್ರನಾಗಿ 1955 ರಲ್ಲಿ ಜನಿಸಿದರು. ತನ್ನ ಕೈಗಾರಿಕೋದ್ಯಮದ ಜೊತೆ ಜೊತೆಗೇ ಸಮಾಜ ಸೇವೆ ಮತ್ತು ಸಹಕಾರಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡರು. ಇವರ ಹಿರಿಯ ಸಹೋದರ ಐ.ಎಂ ಜಯರಾಮ ಶೆಟ್ಟಿ ಅವರು ಉಡುಪಿ ಜಿಲ್ಲೆಯಿಂದ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಎಂಪಿ ಆಗಿದ್ದರಲ್ಲದೇ ಒಂದು ಬಾರಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭಾ ಸದಸ್ಯರಾಗಿದ್ದನ್ನೂ ನಾವಿಲ್ಲಿ ಸ್ಮರಿಸಿಕೊಳ್ಳಬಹುದು.ರಾಜಾರಾಮ್ ಶೆಟ್ಟಿ ಅವರು ತನ್ನ ಪ್ರಾಥಮಿಕ ಹಾಗೂ ಪದವಿ ಪೂರ್ವ ತರಗತಿಗಳನ್ನು ಕುಂದಾಪುರದಲ್ಲಿ ಮುಗಿಸಿ ಮುಂದಿನ ಶಿಕ್ಷಣವನ್ನು ಬೆಂಗಳೂರಿನ ಕೆ.ಎಲ್.ಇಯಲ್ಲಿ ಮುಂದುವರಿಸಿ ಬಿ.ಎ ಪದವಿಧರರಾದರು. ಇದೇ ಸಂದರ್ಭದಲ್ಲಿ ಅವರು ತನ್ನ ಉದ್ಯಮನ್ನು ಆರಂಭಿಸಿದರು. ಮಲ್ಟಿಪ್ಲೆಕ್ಸ್ ಕಂಪನಿಯ ಪಾಲುದಾರರಾಗಿ ಉದ್ಯಮ ಜೀವನದ ಅನುಭವ ಪಡೆದರು. ಅದರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿತು. 1999ರಲ್ಲಿ ಪೀಣ್ಯದಲ್ಲಿ ಬಿ.ಬಿ ಎಂಟರ್ ಪ್ರೈಸಸ್ ಎಂಬ ಕಂಪನಿಯಡಿಯಲ್ಲಿ ಎಚ್ ಡಿ ಪಿ ಬ್ಯಾಗ್ ಎಂಬ ಹೆಸರಿನಲ್ಲಿ ತನ್ನ ಕೈಗಾರಿಕಾ ವಹಿವಾಟನ್ನು ಆರಂಭಿಸಿದರು.
ರಾಜಾರಾಮ ಶೆಟ್ಟಿ ಅವರ ಸೆಳೆತ ಸಂಘಟನೆ ಸಮಾಜ ಸೇವೆಗಳತ್ತ ಇದ್ದ ಕಾರಣ ತನ್ನ ಉದ್ಯಮ ಜೀವನ ಯಶಸ್ಸು ಕಾಣುತ್ತಿರುವಂತೆ ತಾನು ತನ್ನ ಸುತ್ತಣ ಸಮಾಜದ ಜನರಿಗೆ ಯಾವ ರೀತಿ ಸಹಾಯ ಮಾಡಬಹುದೆಂದು ಯೋಚಿಸತೊಡಗಿದವರೆ ಚಂದ್ರ ವಿವಿಧೋದ್ದೇಶ ಸಹಕಾರಿ ಸಂಘವನ್ನು ಹುಟ್ಟು ಹಾಕಿ ಅನತಿ ಅವಧಿಯಲ್ಲಿ ತಾನೋರ್ವ ಸಹಕಾರಿ ಕ್ಷೇತ್ರದ ಧುರೀಣ ಎಂಬಂತೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡರು. ರಾಜ್ಯ ಮಟ್ಟದ ಕೆಂಪೇಗೌಡ ಪ್ರಶಸ್ತಿಯಂಥ ಪ್ರತಿಷ್ಠಿತ ಪ್ರಶಸ್ತಿ ಗೌರವ ಸ್ವೀಕರಿಸಿ ಪ್ರಸಿದ್ಧರಾದರು. ಅಷ್ಟೇ ಅಲ್ಲದೆ ಓರ್ವ ಪ್ರಗತಿಪರ ಉದ್ದಿಮೆದಾರ ಎಂಬ ಗೌರವ ಪ್ರಶಸ್ತಿಗೆ ಭಾಜನರಾದರು.
ನಿರಂತರ ಇಪ್ಪತ್ತೇಳು ವರ್ಷ ಏಳು ತಿಂಗಳ ಕಾಲ ಚಂದ್ರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಂಸ್ಥೆಯನ್ನು ನಡೆಸಿಕೊಂಡು ಜನಪ್ರಿಯತೆಯನ್ನು ಗಳಿಸಿದರು. ಇವರ ಈ ಸಂಸ್ಥೆ ಜನರ ಅವಶ್ಯಕತೆಗಳನ್ನು ಸಕಾಲದಲ್ಲಿ ಪೂರೈಸುವುದರ ಮೂಲಕ ಸಹಕಾರಿ ಕ್ಷೇತ್ರದಲ್ಲಿ ದಾಖಲೆ ಬರೆದು ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತು. ಓರ್ವ ಮಾದರಿ ಸಮಾಜ ಸೇವಕರಾಗಿ ಜನಪರ ಸೇವಾ ಕಾರ್ಯಗಳಿಂದ ಗುರುತಿಸಿಕೊಂಡ ಓರ್ವ ಪ್ರತಿಷ್ಠಿತ ಕುಟುಂಬದ ಹಿನ್ನೆಲೆ ಹೊಂದಿರುವ ಅಪ್ಪಟ ಮಾನವ ಪ್ರೇಮಿ ಶೆಟ್ಟಿ ಅವರ ಸಮಾಜಸೇವೆ, ಉದ್ಯಮ ಶೀಲತೆ ಇತರರಿಗೆ ಮಾದರಿಯಾಗಲಿ. ಅವರ ಭವಿಷ್ಯ ಜೀವನ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲೆಂದು ಬಂಟ್ಸ್ ನೌ ಹಾರೈಸುತ್ತದೆ.
ಅರುಣ್ ಶೆಟ್ಟಿ ಎರ್ಮಾಳ್ ಮುಂಬಯಿ
ಗೌರವ ಸಂಪಾದಕರು