ಮಾನವ ಸಂಘ ಜೀವಿಯಾಗಿದ್ದು, ಒಂದಲ್ಲ ಒಂದು ಬಗೆಯ ಸಂಘಟನೆ ಮೂಲಕ ಸಮಾಜಕ್ಕೆ ಸೇವಾ ಕಾರ್ಯ ಮಾಡುವ ಸಂಕಲ್ಪದೊಂದಿಗೆ ಪ್ರಸಿದ್ದಿಗೆ ಬರುತ್ತಾನೆ. ಸಂಘಟನೆ ಮೂಲಕ ಸಮಾಜಕ್ಕೆ ಮತ್ತು ದೇಶಕ್ಕಾಗಿ ಸೇವಾ ಕಾರ್ಯ ಮಾಡುವ ಅರ್ಪಣಾ ಭಾವನೆ ನಮ್ಮಲ್ಲಿರಬೇಕು. ರಚನಾತ್ಮಕ ಸಂಬಂಧಗಳನ್ನು ಕೂಡಿಕೊಂಡು ಪರಸ್ಪರ ವ್ಯಕ್ತಿಗತ ಪರಿಚಯ ಮತ್ತು ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಸಂಘ ಸಂಸ್ಥೆಗಳ ಮಹತ್ವ ಬಹಳಷ್ಟಿದೆ. ಇದಕ್ಕೆ ಮಾದರಿ ಎಂಬಂತೆ ಪುಣೆ ಬಂಟ್ಸ್ ಅಸೋಸಿಯೇಷನ್ ನ ಸಂಘಟನಾ ಸಾಮರ್ಥ್ಯ ತೋರಿ ಬರುತ್ತದೆ. ಸಮಾಜ ಬಾಂಧವರನ್ನು ಮತ್ತು ಯುವ ಶಕ್ತಿಯನ್ನು ಕೂಡಿಕೊಂಡು ಬಂಟ ಸಮಾಜ ಮಾಡುವ ಯಾವುದೇ ಕಾರ್ಯ ಕ್ಷೇತ್ರದ ಸಾಧನೆ ಮತ್ತು ಉದ್ಯಮ ಕ್ಷೇತ್ರದ ಸಾಧನೆ ಮೆಚ್ಚುವಂತಹದು. ಮಕ್ಕಳಿಗೆ ವಿದ್ಯೆಯ ಜೊತೆಯಲ್ಲಿ ಕ್ರೀಡೆ, ಕಲೆ ಮತ್ತು ಇತರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಕರ್ತವ್ಯ ಪಾಲಕರದ್ದು. ಇದರಿಂದ ವ್ಯಕ್ತಿತ್ವ ವಿಕಸನಗೊಂಡು, ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಮತ್ತು ದೇಶ ಸೇವೆಯಲ್ಲಿ ಭಾಗಿಗಳಾಗುವಂತೆ ಮಾಡಬೇಕಾಗಿದೆ. ಬಂಟ್ಸ್ ಅಸೋಸಿಯೇಷನ್ ತಮ್ಮ ಸಮಾಜದ ಸೇವಾ ಕಾರ್ಯಗಳಿಗೆ ಮತ್ತು ಕ್ರೀಡೆ, ಕಲೆಗೆ ಉತ್ತಮ ಪ್ರೋತ್ಸಾಹ ನೀಡುತ್ತಾ ದೊಡ್ಡ ಮಟ್ಟದಲ್ಲಿ ಸಮಾಜ ಬಾಂಧವರ ಸಂಘಟನೆಯ ಅನಾವರಣ ಮಾಡಿದಂತೆ ಇಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಿದೆ. ಇದು ಸಮಾಜದ ಅಭಿವೃದ್ದಿ ಸದೃಡವಾಗಲು ಪೂರಕವಾದ ಕಾರ್ಯವಾಗಿದೆ ಎಂದು ಪುಣೆ ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್, ಸ್ಥಾಯಿ ಸಮಿತಿಯ ಸದಸ್ಯೆ ಶ್ರೀಮತಿ ನಂದಾ ಲೋನ್ಕರ್ ನುಡಿದರು.
ಬಂಟ್ಸ್ ಅಸೋಸಿಯೇಷನ್ ಪುಣೆ ಇದರ 11ನೇ ವರ್ಷದ ವಾರ್ಷಿಕ ಕ್ರೀಡಾಕೂಟವು ಡಿ 3 ರವಿವಾರದಂದು ವಿವಿಧ ಕ್ರೀಡಾ ಆಟೋಟ ಸ್ಪರ್ಧೆಗಳೊಂದಿಗೆ ಪುಣೆಯ ಸಾಳುಂಕೆ ವಿಹಾರ್ ರೋಡ್ ನ ವಾನ್ವೋರಿಯಲ್ಲಿರುವ ರೇಸ್ ಸ್ಪೋರ್ಟ್ಸ್ ಕ್ರೀಡಾ ಸಂಕುಲದಲ್ಲಿ ಜರಗಿತು. ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ನಂದಾಬಾಯಿ ಲೋನ್ಕರ್ ರವರು ನಮ್ಮ ಪರಿಸರದಲ್ಲಿ ಮಕ್ಕಳ ಕ್ರೀಡಾ ಅಭಿವೃದ್ದಿಗೆ ಸಹಕಾರಿಯಾಗುವಂತೆ ಕ್ರೀಡಾಂಗಣ ನಿರ್ಮಾಣ ಮಾಡುವ ಯೋಜನೆ ನಮ್ಮಲ್ಲಿದ್ದು, ಅದನ್ನು ಮಾಡುತ್ತೇವೆ. ಹಿಂದಿನ ಕಾಲದಲ್ಲಿ ಮಕ್ಕಳು ಮೈದಾನದಲ್ಲೇ ಕಾಲ ಕಳೆಯುತಿದ್ದರೆ ಇಂದಿನ ಯುವ ಜನಾಂಗ ಮೊಬೈಲ್, ಟಿವಿ ಮುಂದೆ ಕುಳಿತು ಕಾಲ ಕಳೆಯುತ್ತಿದ್ದಾರೆ. ಇದು ಬದಲಾಗಬೇಕು. ಮೈದಾನದಲ್ಲಿ ಆಟೋಟ ಸ್ಪರ್ದೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಕಾರ್ಯ ನಮ್ಮಿಂದಾಗಬೇಕು ಎಂದರು.
ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಜರಗಿದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಮತ್ತೋರ್ವ ಗೌರವ ಅತಿಥಿ ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕೋಶಾಧಿಕಾರಿ ಶಮ್ಮಿ ಎ ಹೆಗ್ಡೆ, ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ, ಬಂಟ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಹೆಗ್ಡೆ ಕಟ್ಟಿಂಗೇರಿ, ಕ್ರೀಡಾ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಉಷಾ ಯು ಶೆಟ್ಟಿ, ಕಾರ್ಯದರ್ಶಿ ಆಶಾ ದಿನೇಶ್ ಶೆಟ್ಟಿಯವರು ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಮತ್ತು ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಬಲೂನ್ ಹಾರಿಸುವ ಮೂಲಕ ಕ್ರೀಡಾಕೂಟದ ಉದ್ಘಾಟನೆ ಮಾಡಿದರು.
ಶಾಲಿನಿ ಶೆಟ್ಟಿ ಮತ್ತು ಆಶಾ ಡಿ ಶೆಟ್ಟಿಯವರು ಪ್ರಾರ್ಥನೆಗೈದರು. ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಹೆಗ್ಡೆ ಸ್ವಾಗತಿಸಿದರು. ಕ್ರೀಡಾ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದಾ ಲೋನ್ಕರ್ ಮತ್ತು ಶಮ್ಮಿ ಹೆಗ್ಡೆಯವರನ್ನು ಗಣೇಶ್ ಹೆಗ್ಡೆ ಮತ್ತು ಉಷಾ ಶೆಟ್ಟಿಯವರು ಪುಷ್ಪಗುಚ್ಛ, ಶಾಲು, ಸ್ಮರಣಿಕೆ ನೀಡಿ ಸತ್ಕರಿಸಿದರು. ಶರ್ಮಿಳಾ ಟಿ ರೈ ಮತ್ತು ಆಶಾ ಡಿ ಶೆಟ್ಟಿಯವರು ಮುಖ್ಯ ಅತಿಥಿ ಗಣ್ಯರ ಪರಿಚಯ ಓದಿದರು. ಸತೀಶ್ ಶೆಟ್ಟಿ ಮತ್ತು ಕ್ರೀಡಾಳುಗಳು ಕ್ರೀಡಾ ಜ್ಯೋತಿಯನ್ನು ಮೈದಾನಕ್ಕೆ ಪ್ರದಕ್ಷಿಣೆ ಹಾಕಿ ಕ್ರೀಡಾ ಸಂದೇಶ ನೀಡಿ ಪ್ರತಿಜ್ಞೆಗೈದರು. ಬಂಟ ಸಮಾಜ ಬಾಂಧವರ ಮಕ್ಕಳು, ಮಹಿಳೆಯರು, ಪುರುಷರಿಗಾಗಿ ವಿವಿದ ವಯೋಮಿತಿಗನುಗುಣವಾಗಿ ಕ್ರೀಡಾ ಕೂಟ ಸ್ಪರ್ದೆಗಳು ಮುಖ್ಯವಾಗಿ ರನ್ನಿಂಗ್, ಲೆಮನ್ ರೆಸ್, ಹಗ್ಗ ಜಗ್ಗಾಟ ಜರಗಿದವು. ಅಲ್ಲದೇ ಈ ಸಂದರ್ಭದಲ್ಲಿ ಬಂಟ ಸಮಾಜ ಬಾಂಧವರಿಗಾಗಿ, ಪುರುಷ ಮತ್ತು ಮಹಿಳೆಯರಿಗಾಗಿ ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ ಪಂದ್ಯಾಟಗಳು ನಡೆದವು.
ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಅತಿಥಿಗಳು ಮತ್ತು ಗಣ್ಯರು ಪ್ರಶಸ್ತಿಗಳನ್ನು ನೀಡಿದರು. ಹಗ್ಗ ಜಗ್ಗಾಟದಲ್ಲಿ ವಿಜೇತರಾದ ಮಹಿಳಾ ಮತ್ತು ಪುರುಷ ತಂಡಗಳಿಗೆ ವಿಶೇಷ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪುಣೆಯ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಪುಣೆ ಬಂಟರ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ ಬೆಟ್ಟು, ಸತೀಶ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಪುಣೆ ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ, ಪುಣೆ ಬಂಟರ ಸಂಘದ ಕ್ರೀಡಾ ಕಾರ್ಯಾಧ್ಯಕ್ಷ ವಿವೇಕಾನಂದ ಶೆಟ್ಟಿ, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಶೇಖರ್ ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಕ್ರೀಡಾ ಕೂಟದ ಯಶಸ್ವಿಗೆ ಬಂಟ್ಸ್ ಅಸೋಸಿಯೇಷನ್ ನ ಉಪಾಧ್ಯಕ್ಷರುಗಳಾದ ಸತೀಶ್ ರೈ ಕಲ್ಲಂಗಳ, ರೋಹಿತ್ ಶೆಟ್ಟಿ ನಗ್ರಿ ಗುತ್ತು, ಕೊಶಾಧಿಕಾರಿ ದಿನೇಶ್ ಶೆಟ್ಟಿ, ಸಲಹೆಗಾರರಾದ ಸುಧೀರ್ ಶೆಟ್ಟಿ, ಸಾಂಸ್ಕ್ರತಿಕ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ರೋಹನ್ ಶೆಟ್ಟಿ, ಪ್ರಮುಖರಾದ ತಾರಾನಾಥ್ ರೈ ಸೂರಂಬೈಲು, ರವೀಂದ್ರ ಎನ್ ಶೆಟ್ಟಿ, ದಿನೇಶ್ ಶೆಟ್ಟಿ ಹಡಪ್ಸರ್, ಚಂದ್ರಕಾಂತ್ ಶೆಟ್ಟಿ, ಸುರೇಶ್ ಶೆಟ್ಟಿ ಹಡಪ್ಸರ್, ಪ್ರಿತೇಶ್ ಅರ್ ಶೆಟ್ಟಿ, ಅಭಿಷೇಕ್ ಶೆಟ್ಟಿ, ನಿಖಿಲ್ ಎನ್ ಶೆಟ್ಟಿ, ಮಹಿಳಾ ವಿಭಾಗದ ಪ್ರಮುಖರಾದ ರೂಪಾ ಜಿ ಶೆಟ್ಟಿ, ಪೂರ್ಣಿಮಾ ಎ ಶೆಟ್ಟಿ ಮತ್ತಿತ್ತರರು ಸಹಕರಿಸಿದರು.
ಬಂಟ್ಸ್ ಅಸೋಸಿಯೇಷನ್ ಪ್ರಮುಖರುಗಳಾದ ಸುಭಾಶ್ಚಂದ್ರ ಶೆಟ್ಟಿ, ನಾರಾಯಣ ಶೆಟ್ಟಿ, ಆನಂದ್ ಶೆಟ್ಟಿ ಮಿಯ್ಯಾರ್, ಸತೀಶ್ ರೈ ಕಲ್ಲಂಗಳ ಗುತ್ತು, ರೋಹಿತ್ ಶೆಟ್ಟಿ, ಅರವಿಂದ್ ರೈ, ದಿನೇಶ್ ಶೆಟ್ಟಿ, ಸುಧೀರ್ ಶೆಟ್ಟಿ ಕಣಂಜಾರು, ಅಶೋಕ್ ಶೆಟ್ಟಿ, ಸುರೇಶ ಶೆಟ್ಟಿ ಗಂಧರ್ವ, ಪೂರ್ಣಿಮಾ ಎ ಶೆಟ್ಟಿ, ವಸಂತ್ ಶೆಟ್ಟಿ ಮೊದಲಾದವರು ವಿವಿಧ ಕಾರ್ಯಗಳ ಪ್ರಾಯೋಜಕತ್ವ ವಹಿಸಿಕೊಂಡರು. ಕ್ರೀಡಾಕೂಟದ ವೀಕ್ಷಕ ವಿವರಣೆಯನ್ನು ಸತೀಶ್ ಶೆಟ್ಟಿ, ಶರ್ಮಿಳಾ ಟಿ ರೈ, ಶಾಲಿನಿ ಎಂ ಶೆಟ್ಟಿ ನೀಡಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ವಂದಿಸಿದರು.