
ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಅಂತರ್ ಕಾಲೇಜು ಸ್ಪರ್ಧೆ ‘ಟೆಕ್ಕೋತ್ಸವ್’ ಉದ್ಘಾಟನಾ ಕಾರ್ಯಕ್ರಮವು ಶ್ರೀಮತಿ ಮೋಹಿನಿ ಅಪ್ಪಾಜಿ ವೇದಿಕೆ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೋಡ್ಕ್ರಾಫ್ಟ್ ಟೆಕ್ನಾಲಾಜೀಸ್ ಪ್ರೈವೇಟ್ ಲಿಮಿಟೆಡ್ನ ಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದೀಕ್ಷಿತ್ ರೈ ಮಾತನಾಡಿ, ‘ಟೆಕ್ಕೋತ್ಸವ್’ ಕೇವಲ ತಂತ್ರಜ್ಞಾನ ಆಚರಣೆಗಾಗಿ ಮಾತ್ರವಲ್ಲ, ನವೀನತೆ ಮತ್ತು ಆವಿಷ್ಕಾರಗಳನ್ನು ಉತ್ತೇಜಿಸಲು ಆಯೋಜಿಸಲಾದ ವೇದಿಕೆಯಾಗಬೇಕು ಎಂದರು. ವಿದ್ಯಾರ್ಥಿ ಜೀವನದಲ್ಲಿ ಇಂತಹ ತಾಂತ್ರಿಕ ಉತ್ಸವಗಳು ಅತ್ಯಂತ ಮಹತ್ವದ್ದಾಗಿದ್ದು, ಕಾಲೇಜಿನ ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಇದು ಉತ್ತಮ ಅವಕಾಶ ಒದಗಿಸುತ್ತದೆ ಎಂದು ಅಭಿಪ್ರಾಯಪಟ್ಟರು. 20 ಕ್ಕೂ ಅಧಿಕ ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತಸದ ಸಂಗತಿ. ಇಂತಹ ವೇದಿಕೆಗಳು ಹೊಸ ವಿಷಯಗಳನ್ನು ತಿಳಿಯಲು, ಜ್ಞಾನ ವಿಸ್ತರಿಸಿಕೊಳ್ಳಲು ಮತ್ತು ಅನುಭವ ಹಂಚಿಕೊಳ್ಳಲು ನೆರವಾಗುತ್ತವೆ. ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಯಾವುದೇ ತಂತ್ರಜ್ಞಾನವನ್ನು ಬಳಸುವ ಮೊದಲು ಮೂಲಭೂತ ಅಂಶಗಳ ಮೇಲೆ ಗಮನ ಹರಿಸುವುದು ಅಗತ್ಯ. ಪ್ರೋಗ್ರಾಮಿಂಗ್ ಭಾಷೆಗಳ ಮೂಲಜ್ಞಾನ ಅತ್ಯಂತ ಮುಖ್ಯ. ಪ್ರತಿಯೊಂದು ಕಾರ್ಯವನ್ನೂ ಕೇವಲ ಕೃತಕ ಬುದ್ಧಿಮತ್ತೆ ಸಾಧನಗಳ ಮೇಲೆ ಅವಲಂಬಿಸದೆ, ಸ್ವಂತ ತಿಳುವಳಿಕೆ ಮತ್ತು ಕೌಶಲ್ಯಗಳನ್ನು ಬಳಸಬೇಕು. ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮನೋಭಾವ ಬೆಳೆಸಿಕೊಳ್ಳುವುದರ ಮೂಲಕ ಹೆಚ್ಚಿನ ಜ್ಞಾನವನ್ನು ಹೊಂದಬಹುದು ಎಂದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಸೂಕ್ತ ಸಲಹೆ ಪಡೆಯುವುದು ಮತ್ತು ತಮ್ಮ ಮೂಲಭೂತ ಸಾಮರ್ಥ್ಯದ ಮೇಲೆ ದೃಢ ವಿಶ್ವಾಸ ಹೊಂದಿರುವುದು ಅಗತ್ಯ ಎಂದರು. ಇದು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪರ್ಪಲ್ಬೈಟ್ ಲ್ಯಾಬ್ಸ್ ಸಂಸ್ಥೆಯ ಸ್ಥಾಪಕ ಹಾಗೂ ಸಿಇಒ ಹರ್ಷದ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ರಮೇಶ್, ವಿದ್ಯಾರ್ಥಿ ಸಂಯೋಜಕರಾದ ರಶ್ಮಿ ಮತ್ತು ನಿಶಿತ್ ಕುಮಾರ್ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿಖಿತಾ ಮತ್ತು ಸಾಹಿತ್ಯ ಕಾರ್ಯಕ್ರಮ ನಿರೂಪಿಸಿದರು.

























































































































