‘ವೈದ್ಯೋ ನಾರಾಯಣೊ ಹರಿಃ’ ಎಂಬ ಮಾತೊಂದಿದೆ. ವೈದ್ಯರಾದವನು ದೇವರಿಗೆ ಸಮಾನರಾದವರು. ರೋಗಿಯು ತನ್ನ ಅಂತರಂಗವನ್ನು ಬಿಚ್ಚಿಡುವುದು ವೈದ್ಯನ ಮುಂದೆ ಮಾತ್ರ. ಇಂದು ವೈದ್ಯರಾದ ಡಾ. ಎ.ಎ ಶೆಟ್ಟಿ ಎಂದೇ ಖ್ಯಾತರಾದ ಅಸೋಡು ಅನಂತರಾಮ ಶೆಟ್ಟಿಯವರನ್ನು ಪರಿಚಯಿಸುತ್ತಿದ್ದೇನೆ. ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಅಸೋಡು ಎಂಬ ಗ್ರಾಮ ಪರಿಸರದಲ್ಲಿ ಹುಟ್ಟಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಮುಗಿಸಿ, ಕೇವಲ ಒಂದು ಸಾವಿರ ರೂಪಾಯಿ ಹಿಡಿದುಕೊಂಡು ಲಂಡನ್ ಗೆ ಹೋದ ಇವರು ಇಂದು ಪ್ರಪಂಚದ ಟಾಪ್ 10 ವೈದ್ಯರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಹೆಮ್ಮೆಯ ಬಂಟ. ಅಸೋಡು ಅನಂತರಾಮ ಶೆಟ್ಟಿ ಅವರ ಬಗ್ಗೆ ಅನೇಕ ಕಡೆಗಳಲ್ಲಿ, ಜಾಲತಾಣಗಳಲ್ಲಿ, ಸಮೂಹ ಮಾಧ್ಯಮಗಳಲ್ಲಿ, ಹುಟ್ಟೂರಿನ ಸನ್ಮಾನದಲ್ಲಿ ನೋಡಿ ಒಮ್ಮೆ ಅವರನ್ನು ಭೇಟಿ ಆಗಬೇಕೆಂಬ ಆಸೆ ಆಗಿತ್ತು. ವಿಸ್ಮಯವೇ ಎಂಬಂತೆ ಅಂದು ಹಾಲಾಡಿಯ ಯುವ ಮೆರಿಡಿಯನ್ ಸಭಾಭವನದ ರೆಸಾರ್ಟ್ ನಲ್ಲಿ ಅವರನ್ನು ಭೇಟಿಯಾಗಲು ಹೋದಾಗ ನನ್ನನ್ನು ಕರೆದು ಅತ್ಯಂತ ಆತ್ಮೀಯವಾಗಿ ಮಾತನಾಡಿಸಿದರು. ಅಂದು ಅವರೊಂದಿಗೆ ಮಾತನಾಡಿ ಅವರಿಗೆ ನಮಸ್ಕರಿಸಿದ ಆ ದಿನ ನನ್ನ ಜೀವನದ ಮರೆಯಲಾಗದ ಕ್ಷಣ.

ಕುಂದಾಪುರ ಮೂಲದ ಓರ್ವ ವೈದ್ಯರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಅನೇಕ ವೈದ್ಯಕೀಯ ಶಸ್ತ್ರ ಚಿಕಿತ್ಸೆಯನ್ನು ಅತ್ಯಂತ ಸುಲಭವಾಗಿ ಮಾಡಬಲ್ಲ ಪರಿಣಿತರು ಹಾಗೂ ಬಹಳ ಬೇಡಿಕೆ ಇರುವವರು. ಇವರ ವೈದ್ಯಕೀಯ ಸೇವಾ ಸಾಧನೆಗೆ ಇವರಿಗೆ ವೈದ್ಯಕೀಯ ಕ್ಷೇತ್ರದ ಉತ್ಕೃಷ್ಟ ಮನ್ನಣೆಯಾದ ‘ಸರ್ಜಿಕಲ್ ನೋಬೆಲ್’ ಪ್ರಶಸ್ತಿಯನ್ನು ಪಡೆದು ಜಾಗತಿಕ ಮಟ್ಟದಲ್ಲಿ ಸಾಧನೆಗೈದಿರುತ್ತಾರೆ. ಹುಟ್ಟೂರಿನ ಸನ್ಮಾನದ ಭಾಷಣದಲ್ಲಿ ಇವರು ಬೆಳೆದ ಜೀವನದ ಬಗ್ಗೆ ಹೇಳುತ್ತಾ, ನನ್ನ ಊರಿನಲ್ಲಿ ಶಾಲೆಯೇ ಇರಲಿಲ್ಲ. ನನಗೋಸ್ಕರ ಶಾಲೆ, ನಾನೋರ್ವನೇ ವಿದ್ಯಾರ್ಥಿ ಎಂಬಂತೆ ಅವರ ತಂದೆ ಅವರಿಗೋಸ್ಕರ ಒಂದು ಕನ್ನಡ ಮಾಧ್ಯಮ ಶಾಲೆ ಕಟ್ಟಿದರು. ಆ ಶಾಲೆಗೆ ಇವರೇ ಏಕೈಕ ವಿದ್ಯಾರ್ಥಿಯಾಗಿದ್ದರು. ನಂತರ ಕುಂದಾಪುರದಲ್ಲಿ ಮುಂದಿನ ಶಿಕ್ಷಣ ಪಡೆದು 1973ರಲ್ಲಿ ವೈದ್ಯಕೀಯ ಕೋರ್ಸ್ ಗೆ ಸೇರಿಕೊಂಡರು. ಬಾಲ್ಯದಿಂದಲೇ ತಾನು ಕ್ಯಾನ್ಸರ್ ಚಿಕಿತ್ಸೆಯ ಸರ್ಜನ್ ಆಗಬೇಕೆಂಬ ಆಸೆಯನ್ನು ಹೊಂದಿದ್ದರು. ಪ್ರಸ್ತುತ ಲಂಡನ್ ನಲ್ಲಿ ನೆಲೆಸಿರುವ ಇವರು ಕರಾವಳಿ ಮೂಲದ ಹಿರಿಯ ಸರ್ಜನ್.
ವೈದ್ಯಕೀಯ ರಂಗದಲ್ಲಿ ಹೊಸ ಮುನ್ನುಡಿ ಬೆರೆಯುತ್ತಿರುವ ಇವರು ಪ್ರಧಾನಿಯವರ ಕಳಕಳಿಯಂತೆ ರಕ್ತಸಂಬಂಧಿ ತಲಮೇಸಿಯಾ ಕಾಯಿಲೆಗೆ ಸಂಪೂರ್ಣ ಗುಣಪಡಿಸುವ ಕುರಿತಂತೆ ಸಂಶೋಧನೆ ಮಾಡಿದ್ದಾರೆ. ವೈದ್ಯರಾಗಿ ಹಲವು ವರ್ಷಗಳಿಂದ ಪ್ರಪಂಚದಾದ್ಯಂತ ಸೇವೆ ಮಾಡಿದ ಹಿನ್ನೆಲೆ ತಾಯ್ನೆಲಕ್ಕೆ ಸೇವೆ ನೀಡುವ ಆಶಯದಿಂದ ಕರಾವಳಿ ಭಾಗದಲ್ಲಿ ವಿಶ್ವ ದರ್ಜೆಯ ಕ್ಯಾನ್ಸರ್ ಸಂಬಂಧಿತ ಆಸ್ಪತ್ರೆ ನಿರ್ಮಿಸುವ ಆಲೋಚನೆ ಹೊಂದಿದ್ದಾರೆ. ವೈದ್ಯಕೀಯ ಕ್ಷೇತ್ರವಷ್ಟೇ ಅಲ್ಲ ಇಂದು ಇಂಗ್ಲೆಂಡಿನಲ್ಲಿ ರಾಜಕೀಯ ಕ್ಷೇತ್ರದಲ್ಲಿಯೂ ಇವರ ಸಾಧನೆಯನ್ನು ನಾವು ನೋಡಲೇಬೇಕು. ಇಂಗ್ಲೆಂಡಿನ ಮೂರನೇ ಕಿಂಗ್ ಚಾರ್ಲ್ಸ್ ರವರು ಕಂಟೆಂಟ್ ಲಾರ್ಡ್ ಲೆಫ್ಟಿನೆಂಟ್ (ಗವರ್ನರ್) ಆಗಿ ನೇಮಕ ಮಾಡಿದ್ದಾರೆ. ಈ ಹುದ್ದೆ ಗೌರವಪೂರ್ವಕ ಹಾಗೂ ಸಾಂವಿಧಾನಿಕ ಹುದ್ದೆಯಾಗಿದ್ದು, ಮೂರು ಸ್ಟಾರ್ ಜನರಲ್ ಶ್ರೇಣಿಯನ್ನು ಹೊಂದಿದ್ದು, ಇಂತಹ ಶ್ರೇಷ್ಠ ಹುದ್ದೆಗೆ ಆಯ್ಕೆಯಾದ ಭಾರತದ ಏಕೈಕ ವ್ಯಕ್ತಿ ಎ.ಎ. ಶೆಟ್ಟಿ. ವಿವಿಧ ಸಂಘ ಸಂಸ್ಥೆಯಲ್ಲಿ ಗುರುತಿಸಿಕೊಂಡಿರುವ ಇವರು ಬಂಟ ಸಮಾಜದ ಬಹುದೊಡ್ಡ ದಾನಿಗಳು ಕೂಡ ಆಗಿದ್ದಾರೆ. ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಎಲ್ಲರನ್ನೂ ಆಕರ್ಷಿಸಬಲ್ಲರು ಮತ್ತು ಕುಂದಾಪುರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಡಾ. ಬಿ.ಬಿ ಹೆಗ್ಡೆ ಕಾಲೇಜಿನ ಗವರ್ನರ್ ಕೌನ್ಸಿಲ್ ಸದಸ್ಯರಾಗಿ ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ಸ್ಪಂದಿಸುತ್ತಾ ಹಲವು ವಿದ್ಯಾರ್ಥಿಗಳ ಬದುಕನ್ನು ಬೆಳಗಿದ ಮಹಾನ್ ವ್ಯಕ್ತಿ. ಇಂದು ಇಂಗ್ಲೆಂಡಿನಲ್ಲಿ ಇದ್ದರೂ ಕೂಡ ತನ್ನೂರಿನ ಒಲವು ಮಾತ್ರ ಹಾಗೆ ಇದೆ. ಇಂಗ್ಲೆಂಡಿನಲ್ಲಿ ನಮ್ಮೂರಿನ, ನಮ್ಮ ನಾಡಿನ ಸಾಂಸ್ಕೃತಿಕ ಕಲೆಗಳನ್ನು ಪರಿಚಯಿಸುತ್ತಿದ್ದಾರೆ. ನಿಜವಾಗಿಯೂ ಇದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ.
ಬರಹ : ಸುಜಯ ಶೆಟ್ಟಿ ಹಳ್ನಾಡು