ಕ್ರೀಯಾಶೀಲತೆ, ಸಮಯ ಪ್ರಜ್ಞೆ ಮತ್ತು ನಿಖರತೆಗೆ ಮತ್ತೊಂದು ನಾಮವೇ ಪುತ್ತಿಗೆ ಗುತ್ತು ಐಕಳ ಹಿರಿಮನೆ ಸುಧಾಕರ್ ಶೆಟ್ಟಿ. ಹಿರಿಮೆ–ಗರಿಮೆಯ ಗುತ್ತು ಮನೆತನದಲ್ಲಿ ಹುಟ್ಟಿ ಬೆಳೆದ ಅವರ ಮುಖದಲ್ಲಿ ಗಂಭೀರತೆಯ ರಾಜಕಳೆಯಿದ್ದರೂ ಅವರ ಮನಸ್ಸು ಹಸಿರಂತಾದದ್ದು, ಮಾತು ಮತ್ತು ನಡತೆ ಎರಡರಲ್ಲಿಯೂ ಏಕತೆ ಮತ್ತು ಸರಳತೆ. ಸಹೃದಯತೆಯ ಸಾಕಾರ ಮೂರ್ತಿಯಾದ ಶ್ರೇಯಸ್ಸಿಗೆ ‘ಅಣ್ಣಾ’, ‘ಮಲ್ಲಶೆಟ್ಟಿ’ ಎಂಬ ಉಪನಾಮಗಳಿಂದ ಚಿರಪರಿಚಿತರಾದವರು. ಬಹು ಅಪರೂಪದ ಧೀಮಂತ ವ್ಯಕ್ತಿತ್ವವನ್ನು ಪಡೆದ ಪೌರ್ಣಿಮೆಯ ಚಂದ್ರನಂತೆ ಸೌಹಾರ್ದತೆಯನ್ನು ಲೋಕದೆಲ್ಲೆಡೆ ಪಸರಿಸಿದ ಊರು ಕಿನ್ನಿಗೊಳಿಯ ಐಕಳ. ಇವರಿಗೆ ಜನ್ಮ ನೀಡಿದ ಪುಣ್ಯಾತ್ಮರು ಮಂಡೂರು ರೆಂಜೆಗುತ್ತು ಶಾಮರಾಯ ಶೆಟ್ಟಿ ಮತ್ತು ಐಕಳ ಹಿರಿಮನೆ ಕಮಲ ಶೆಟ್ಟಿ ದಂಪತಿಗಳು.

ಮೂಲತಃ ಕೃಷಿ ಕುಟುಂಬದಿಂದ ಬಂದ ಶ್ರೀಯುತರು ಮಣ್ಣಿನ ಸೆಳೆತ, ತುಳುವ ಸಂಸ್ಕೃತಿಯ ಅಪಾರ ತಳಹದಿ ಇದ್ದರೂ ಬಾಲ್ಯದಿಂದಲೇ ವಿದ್ಯಾಭ್ಯಾಸ ಹಾಗೂ ಕ್ರೀಡೆ ಈ ಎರಡೂ ಕ್ಷೇತ್ರಗಳಲ್ಲಿ ಅಗ್ರಪಂಕ್ತಿಯಲ್ಲೇ ಮುಂದುವರೆದರು. ಸಾಂಸ್ಕೃತಿಕ, ಸಾಹಿತ್ಯ ಮತ್ತು ವಿಜ್ಞಾನ ಲೋಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಎಲೆಕ್ಟ್ರಿಕಲ್ ಇಂಜಿನಿಯರ್ ಪದವಿಯ ಉನ್ನತ ಶ್ರೇಣಿಯ ಅಂಕಪಟ್ಟಿ ಕೈಗೆ ಬಂದಾಗ ಸ್ವಂತ ಉದ್ಯೋಗಿಯಾಗಬೇಕೆಂಬ ಉತ್ಸಾಹದಿಂದ ಮಾಯಾನಗರಿ ಮುಂಬೈಯಲ್ಲಿ ತನ್ನದೇ ಆದ ವಸತದಾರ ಇಂಜಿನಿಯರಿಂಗ್ ಸಂಸ್ಥೆಯನ್ನು ಯಶಸ್ವಿಯಾಗಿ ಆರಂಭಿಸಿದರು. ಇವರ ವಿದ್ಯಾಭ್ಯಾಸ, ನಿಪುಣತೆ ಮತ್ತು ಕಾರ್ಯಕ್ಷಮತೆಗೆ ಕೈಬೀಸಿ ಕರೆಯಿತು ಕಲ್ಲಿರಾಷ್ಟ್ರದ ಬಂಗಾರದ ಕೋಟೆ ಕುವೈಟ್. ಇಲ್ಲಿನ ಪ್ರಸಿದ್ಧ ಕುವೈಟ್ ಆಯಿಲ್ ಕಂಪೆನಿಯ ಕರೆಯ ಮೇರೆಗೆ ಹಿರಿಯ ಇಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಶುಭಾರಂಭಿಸಿದರು. ಬಂಟಧಾರೆಯ ಮಂಟಪದಲ್ಲಿ ಶ್ರೀಮತಿ ವಸಂತ ಶೆಟ್ಟಿಯವರ ಜೊತೆ ಸಪ್ತಪದಿ ತುಳಿದು ಮಧುರ ದಾಂಪತ್ಯ ಜೀವನಯಾತ್ರೆಗೆ ಹೆಜ್ಜೆಯಿಟ್ಟರು. ದಂಪತಿಗಳಿಬ್ಬರ ಪ್ರೀತಿಯ ತೋಟದಲ್ಲಿ ಅರಳಿದವು ಎರಡು ಸುಮಧುರ ಕುಸುಮಗಳು – ಪುತ್ರ ವಿನೀತ್ ಹಾಗೂ ಪುತ್ರಿ ಶ್ರೇಯಾ. ತಂದೆಯ ನೆರಳನ್ನು ಹಿಂಬಾಲಿಸುತ್ತಾ ಮಕ್ಕಳು ಸಕಲ ಕಲಾ ಪಾರಂಗತರಾದರು. ಪುತ್ರ ಗಣಕಯಂತ್ರ ತಜ್ಞ. ಪುತ್ರಿ ಶ್ರೇಯಾ ವಾಸ್ತುಶಿಲ್ಪದಲ್ಲಿ ಇಂಜಿನಿಯರ್, ಜೊತೆಗೆ ಅತ್ಯುತ್ತಮ ಕ್ರೀಡಾಪಟು ಹಾಗೂ ಭರತನಾಟ್ಯ ಕಲಾವಿದೆ. ತಜ್ಞ ವೈದ್ಯರಾದ ಡಾ| ಅಜಯನ್ ಆಳ್ವರನನ್ನು ಅಳಿಯನಾಗಿ ಪಡೆದಿರುವ ಶ್ರೀಯುತರಿಗೆ ಅಧಾಯನ್ ಎಂಬ ಮೊಮ್ಮಗ ಹಾಗೂ ಸೇಹರ್ ಎಂಬ ಪುಟ್ಟ ಮೊಮ್ಮಗಳಿರುವ ಸುಂದರ ಸಂಸಾರ ನೌಕೆ ಸವಿನಯ ಪಯಣದಲ್ಲಿದೆ.
ಬಾಲ್ಯದಿಂದಲೇ ಮೈಗೂಡಿಸಿಕೊಂಡಿದ್ದ ಕ್ರೀಡಾಸಕ್ತಿ ವೃತ್ತಿರಂಗದ ಜೊತೆಯಲ್ಲಿಯೂ ಮುಂದುವರಿಯಿತು. ಕುವೈಟ್ ಆಯಿಲ್ ಕಂಪೆನಿಯ ಕ್ರಿಕೆಟ್ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಪದಗ್ರಹಣಗೊಳ್ಳುವುದರೊಂದಿಗೆ ಕಲ್ಲಿರಾಷ್ಟ್ರದಲ್ಲಿ ಇವರ ಕ್ರೀಡಾಬಾಳ ಮತ್ತೆ ಮೆರೆಗಿಳಿಯಿತು. ತಮ್ಮ ಮುಂದಾಳತ್ವದಲ್ಲಿ ಎರಡು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣಗಳನ್ನು ಕುವೈಟ್ಗೆ ಅರ್ಪಿಸಿದರು. ಕುವೈಟ್ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ವ್ಯವಸ್ಥಾಪಕ, ಡೆಪ್ಯೂಟಿ ಚೀಫ್ ಎಕ್ಸಿಕ್ಯೂಟಿವ್ ಹಾಗೂ ತಾಂತ್ರಿಕ ನಿರ್ದೇಶಕದಂತಹ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ ಈ ನಾಡಿನ ಕ್ರಿಕೆಟ್ ಬೆಳವಣಿಗೆಗೆ ತಮ್ಮ ಅಮೂಲ್ಯ ಕೊಡುಗೆಗಳನ್ನು ನೀಡಿದರು. ತಮ್ಮ ಮುಂದಾಳತ್ವದಲ್ಲಿ ಕುವೈಟ್ ಕ್ರಿಕೆಟ್ ತಂಡ ಅಂತರರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ವಿಜಯ ದುಂದುಭಿ ಮೊಳಗಿಸುವುದರಲ್ಲಿ ಮಹತ್ತರ ಪಾತ್ರವಹಿಸಿದರು. ಕ್ರಿಕೆಟ್ ಎಂಬುದು ಇವರ ದ್ವಿತೀಯ ಸಂಗಾತಿಯಾಯಿತು.
ಅಗಾಧವಾಗಿ ಪ್ರೀತಿಸುವ ಪತ್ನಿ ಮತ್ತು ಸಂಸಾರ ಒಂದೆಡೆ, ತಾವು ಬಹುಮಾನ್ಯವಾಗಿ ಆರಾಧಿಸುವ ಕ್ರಿಕೆಟ್ ಇನ್ನೊಂದುಡೆ – ಆದರೂ ಇವರ ಮನಸ್ಸು ಮೂರನೇ ಪ್ರೀತಿಗಾಗಿ ಹಾತೊರೆಯುತ್ತಿತ್ತು. ಹೌದು, ಸಮಾಜಸೇವೆ ಎಂಬ ಸಂಗಾತಿ. ಬಾಲ್ಯದಿಂದಲೇ ಮೈಗೂಡಿಸಿಕೊಂಡು ಬಂದ ಸಂಸ್ಕೃತಿ, ಹಿರಿಯರ ಪ್ರಭಾವ ಇವರಲ್ಲಿ ನಾಡು–ನುಡಿ ಪ್ರೀತಿಯನ್ನು ಅತ್ಯಂತ ಗಟ್ಟಿಗೊಳಿಸಿತು. ಕುವೈಟ್ನಲ್ಲಿ ತುಳುಭಾಷೆ ಮತ್ತು ಸಂಸ್ಕೃತಿಗೆ ಮಾನ್ಯತೆ ನೀಡಲು ಹೊರಟ ತುಳುನಾಡು ಕುವೈಟ್ ಇದರ ದಂಡನಾಯಕರಾದರು. ತುಳುನಾಡು ಕುವೈಟ್ ಇದರ ಪ್ರಥಮ ಅಧ್ಯಕ್ಷ ಎಂಬ ಹಿರಿಮೆ ಇವರದು. ಈ ಮೂಲಕ ತುಳುನಾಡಿಗೆ ಭದ್ರ ಬುನಾದಿಯಾಯಿತು. ಕುವೈಟ್ನಲ್ಲಿ ತುಳುನಾಡು ಮಾದರಿ ಸಂಘ ಎಂಬ ಗೌರವವನ್ನು ತರುವಲ್ಲಿ ಪ್ರಧಾನ ಪಾತ್ರವಹಿಸಿದರು. ತುಳುನಾಡಿನ ಲಿಖಿತ ಸಂವಿಧಾನದ ಶಿಲ್ಪಿ, ಕಟ್ಟನ್ನು ರಾಯಭಾರಿ ಕಚೇರಿಯಲ್ಲಿ ನೋಂದಾಯಿಸಿದ ರುವಾರಿ, ಬಡಜನರ ಸೇವೆಗೆ ಕಟ್ಟದ ಮೂಲಕ ಕ್ಷೇಮನಿಧಿ ಎಂಬ ಹೊಸ ಯೋಜನೆಯನ್ನು ಆರಂಭಿಸಿದ ಹೆಗ್ಗಳಿಕೆ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸಮಾಜಮುಖಿ ಕಾರ್ಯಗಳನ್ನು ಕೈಗೆತ್ತಿಕೊಂಡು ಕಟ್ಟಕ್ಕೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾನ್ಯತೆ ನೀಡಿದರು. ತಮ್ಮ ಅಧಿಕಾರಾವಧಿ ಮುಕ್ತಾಯಗೊಂಡ ನಂತರವೂ ನಿಸ್ವಾರ್ಥ ಸೇವೆಯನ್ನು ಮುಂದುವರಿಸುತ್ತಾ ಮುಖ್ಯ ಸಲಹೆಗಾರ ಹಾಗೂ ಸಂಚಾಲಕ ಹುದ್ದೆಗಳನ್ನು ಅಲಂಕರಿಸಿ ತಮ್ಮ ಅನುಭವ ಮತ್ತು ಕೌಶಲ್ಯದಿಂದ ವಿಚಾರಧಾರೆಗಳನ್ನು ಹರಿಸುತ್ತಾ, ಕಿರಿಯರಿಗೆ ಸಕಾಲ ಮಾರ್ಗದರ್ಶಕರಾಗಿ ಕಟ್ಟದ ಯಶಸ್ಸಿಗೆ ಹಗಲಿರುಳು ಶ್ರಮಿಸಿದರು. ಸರಿ–ತಪ್ಪುಗಳನ್ನು ನ್ಯಾಯಯುತವಾಗಿ ತೂಗಿ, ಚಾತುರ್ಯದಿಂದ ಸಮಂಜಸವಾದ ಫಲಿತಾಂಶಕ್ಕೆ ತರುವುದು ಇವರ ನಿಪುಣತೆ – ನಿಜಕ್ಕೂ ಪ್ರಶಂಸನೀಯ.
ಕುವೈಟ್ನಲ್ಲಿರುವ ಕನ್ನಡಿಗರ ಒಕ್ಕೂಟದ ಮತ್ತೊಂದು ದೊಡ್ಡ ಸಂಸ್ಥೆಯಾದ ಕುವೈಟ್ ಕನ್ನಡ ಕಟ್ಟದ ಅಧ್ಯಕ್ಷ ಪೀಠವನ್ನು ಅಲಂಕರಿಸಿ ಕುವೈಟ್ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ತಮ್ಮ ದಾಖಲೆಯನ್ನು ಮೂಡಿಸಿದರು. ಪ್ರಪ್ರಥಮ ಬಾರಿಗೆ ಕುವೈಟ್ನಲ್ಲಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ–೨೦೦೭ ಅನ್ನು ಯಶಸ್ವಿಯಾಗಿ ನಡೆಸಿ ಮರಳುಗಾಡಿನಲ್ಲಿ ಕನ್ನಡದ ಕಹಳೆಯನ್ನು ಮೊಳಗಿಸಿದರು. ವಿಶ್ವದ ಎಲ್ಲೆಡೆಯ ಕನ್ನಡಿಗರಿಂದ ಬಹು ಪ್ರಶಂಸೆಗೆ ಪಾತ್ರರಾದರು. ಇವರು ಸಮಾಜಕ್ಕೆ ನೀಡಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ ಕಲ್ಲಿರಾಷ್ಟ್ರ ಕತಾರ್ನಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ‘ವಿಶ್ವಮಾನವ’ ಬಿರುದನ್ನು ನೀಡಿ ಇವರನ್ನು ಸನ್ಮಾನಿಸಲಾಯಿತು. ಗುಜರಾತಿನ ವಾರ್ಪಾಡಿಯಲ್ಲಿ ನಡೆದ ಮುಂದಿನ ವಿಶ್ವ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇದೇ ಹಾದಿಯಲ್ಲಿ ಸಾಗುತ್ತಾ ಕುವೈಟ್ನಲ್ಲಿರುವ ಮತ್ತೊಂದು ಸಂಸ್ಥೆಯಾದ ಬಂಟರ ಸಂಘದ ಅಧ್ಯಕ್ಷರಾಗಿ ಸಂಘಕ್ಕೆ ದಾರಿದೀಪವಾದರು. ಹೀಗೆ ಕುವೈಟ್ನಲ್ಲಿರುವ ಕರ್ನಾಟಕದ ಪ್ರಮುಖ ಸಂಸ್ಥೆಗಳ ಅಧ್ಯಕ್ಷರಾದ ಪ್ರಥಮ ತುಳುವ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು.
ಕಡಲತಾಟ ದಾಟಿ ಬಂದು ಕರ್ಮಭೂಮಿಯಲ್ಲಿ ತಮ್ಮ ಸಾಧನೆಗಳನ್ನು ನಿರಂತರವಾಗಿ ನಿರ್ವಹಿಸುವುದರ ಜೊತೆಗೆ ಜನ್ಮಭೂಮಿಗೂ ಅಪಾರ ಕೊಡುಗೆ ನೀಡುತ್ತಿದ್ದರು. ತಮ್ಮ ಶಬ್ದಕೋಶದಲ್ಲಿ ‘ಇಲ್ಲ’ವೆಂಬ ಪದವನ್ನೇ ಅಳಿಸಿ ಹಾಕಿರುವ ಇವರು ಪ್ರತಿಯೊಬ್ಬರ ಕಷ್ಟ–ಕಾರ್ಪಣ್ಯಕ್ಕೆ ಮಿಡಿಯುವ ಕೋಮಲ ಹೃದಯವನ್ನು ಹೊಂದಿದ್ದಾರೆ. ತಮ್ಮ ಗುತ್ತುಮನೆಯ ಗುರಿಕಾರನಾಗಿ ಅಲ್ಲಿನ ನಿಯಮಿತ ಧಾರ್ಮಿಕ ಕಾರ್ಯಗಳನ್ನು ಸಂಘಟಿಸಿ ನೆರವೇರಿಸುವುದರ ಜೊತೆಗೆ ತಮ್ಮ ಗ್ರಾಮ ಏರಿಂಜೆಯ ದೇವಾಲಯದ ಗೌರವ ಮೆಕೆಸರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವೃತ್ತಿ ಜೀವನದ 38 ವರ್ಷಗಳ ಸಾರ್ಥಕ ಬದುಕು. ಜೊತೆಗೆ ಯಶಸ್ಸಿನ ಶಿಖರವೇರಿದ ಪ್ರವೃತ್ತಿ. ಇವರ ಜೀವನ ಶೈಲಿಯೇ ಯುವಜನಾಂಗಕ್ಕೆ ಸ್ಪೂರ್ತಿ ಹಾಗೂ ಅತ್ಯುತ್ತಮ ಕೈದೀವಟಿಕೆ. ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿರುವ ಹಿರಿಯರ ವಿರಾಮದ ಬದುಕು ಆಹ್ಲಾದಕರ ಹಾಗೂ ಆರೋಗ್ಯಕರವಾಗಿರಲೆಂಬ ಹೃದಯಪೂರ್ವಕ ಶುಭಾಶಯ. ಇವರ ಬದುಕಿನ ದ್ವಿತೀಯ ಅಧ್ಯಾಯ ಹೊಸ ದಿಗಂತ ತಲುಪಲೆಂಬ ಆಶಯ. ದೇವರು ಇವರಿಗೆ ಆಯುರಾರೋಗ್ಯ ಭಾಗ್ಯ, ಸುಖ–ಶಾಂತಿ ಮತ್ತು ನೆಮ್ಮದಿಯನ್ನು ಸದಾ ಕರುಣಿಸಲಿ.
ಬರಹ : ಯದುನಾಥ್ ಆಳ್ವ ಅದ್ಯಪಾಡಿ

















































































































