ರಾಜ್ಯದಾದ್ಯಂತ ಡ್ರಗ್ಸ್ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವ ಡ್ರಗ್ಸ್ ಮುಕ್ತ ಕರ್ನಾಟಕ ಜನಜಾಗೃತಿ ರಥ ಯಾತ್ರೆಯು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಕಾರ್ಕಳ ಇಲ್ಲಿಗೆ ಆಗಮಿಸಿದಾಗ ರೋಟರಿ ಸಂಸ್ಥೆ ಹಾಗೂ ಶಾಲಾ ವತಿಯಿಂದ ಸ್ವಾಗತಿಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಪರಿವರ್ತನಾ ಟ್ರಸ್ಟ್ ನ ಸಂಚಾಲಕ ಸುದರ್ಶನ್, ಡ್ರಗ್ಸ್ ಮಾಫಿಯಾ ಹೇಗೆ ಯುವ ಜನತೆಯನ್ನು ಆಕರ್ಷಿಸುವಂತೆ ಮಾಡಿ ಆ ಮೂಲಕ ಇಡೀ ಸಮಾಜ ವ್ಯವಸ್ಥೆಯನ್ನು ದುರ್ಬಲಗೊಳಿಸಿ ದೇಶವನ್ನೇ ಬಲಿಕೊಡುತ್ತಿರುವ ಈ ಡ್ರಗ್ಸ್ ಮಾಫಿಯಾದಿಂದ ಯುವ ಜನತೆ ದೂರವಿರುವಂತೆ ಕರೆಕೊಟ್ಟರು. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಸನ್ನ ರವರು ಮಾತನಾಡಿ, ವಿದ್ಯಾರ್ಥಿಗಳು ಈ ಒಂದು ದುಶ್ಚಟಕ್ಕೆ ಬಲಿಯಾಗದೆ ಉತ್ತಮ ಜೀವನ ನಡೆಸಿ ತಮ್ಮನ್ನು ನಂಬಿದ ತಂದೆ ತಾಯಿಗಳ ನಿರೀಕ್ಷೆಯನ್ನು ಸಾಕಾರಗೊಳಿಸುವಂತೆ ಕರೆ ನೀಡಿ ಇದನ್ನು ಮಟ್ಟ ಹಾಕುವಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು ಕೈಜೋಡಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಕಳ ಹಾಗೂ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷರುಗಳಾದ ನವೀನ್ ಚಂದ್ರ ಶೆಟ್ಟಿ ಮತ್ತು ಸುರೇಂದ್ರ ನಾಯಕ್, ಸಮುದಾಯ ಸೇವಾ ಚೇರ್ಮನ್ ವಸಂತ್ ಎಂ, ಚಿರಾಗ್ ರಾವ್, ಮುಖ್ಯ ಶಿಕ್ಷಕ ದಿವಾಕರ್, ಪ್ರಕಾಶ್ ರಾವ್, ಜಗದೀಶ್ ಹೆಗ್ಡೆ ಉಪಸ್ಥಿತರಿದ್ದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಆನಂದ್ರಾಯ ನಾಯಕ್ ಸ್ವಾಗತಿಸಿದರು. ರತ್ನಾಕರ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಹರಿಚಂದ್ರ ಬಾಯಿರಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ವಂದಿಸಿದರು.

















































































































