ಅವರು ಸ್ಟಂಟ್ ಮಾಡುವಾಗ ಹಲವು ಮೂಳೆಗಳು ಮುರಿದಿದ್ದವು. ಆದ್ರೂ ಮುರಿದ ಕಾಲಿನ ಮೂಳೆಗಳಿಗಿಂತಲೂ ಮುರಿದ ಹೃದಯದ (Broken Heart) ಕಾರಣಕ್ಕಾಗಿ ಫೈಟರ್ ಶೆಟ್ಟಿ ಕುಸಿದು ಬಿದ್ದರು. ಸತತ ಎಂಟು ಬಾರಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗುದ್ದಾಡಿ ಗೆದ್ದ ಶೆಟ್ಟಿ ಜೀವನದ ಹೋರಾಟದಲ್ಲಿ ಫೈಟ್ ಮಾಡದೇ ಕುಡಿದು, ಕುಡಿದೇ ಸೋಲೊಪ್ಪಿಕೊಂಡರು! ಇದು ಬೋಳು ತಲೆಯ ವಿಶಿಷ್ಟ ಖಳನಾಯಕ ಫೈಟರ್ ಶೆಟ್ಟಿಯವರ ಕೊನೆಗಾಲವನ್ನು ನೆನೆಪಿಸಿಕೊಂಡು ಅವರ ಆತ್ಮೀಯರು ಹೇಳುವ ದುಃಖದ ಮಾತುಗಳು.
ಮುದ್ದಣ್ಣ ಬಾಬು ಶೆಟ್ಟಿ ಬಡತನದ ಬೇಗೆಯೊಂದಿಗೆ ಎಲ್ಲರಂತೆ ಉಡುಪಿ ಬಿಟ್ಟು ಅಂದಿನ ಬೊಂಬಾಯಿಗೆ ಕಾಲಿಟ್ಟಾಗ ಅವರಿಗೆ ಆಟವಾಡುವ ವಯಸ್ಸು. ಅಂದರೆ ಬರಿಯ ಒಂಬತ್ತು ವರ್ಷ. ಟಾಟಾ ಕ್ಯಾಂಟೀನ್ ನಲ್ಲಿ ಒರೆಸುವ, ತೊಳೆಯುವ, ಸಪ್ಲೈ ಕೆಲಸ ಮಾಡುವಾಗಲೆಲ್ಲಾ ಈ ಬಾಲಕನ ಮನಸಲ್ಲಿ ಇದ್ದುದ್ದೇ ಬೇರೆ ಕಡೆ. ವಯಸ್ಸು ಬೆಳೆಯುತ್ತಿದ್ದಂತೆ ದಷ್ಟಪುಷ್ಟವಾಗಿ ಬೆಳೆದ ಮುದ್ದಣ್ಣನನ್ನು ಮೊದಲು ಗುರುತಿಸಿದವರು ಮುಂಬೈಯ ಖ್ಯಾತ ಬಾಕ್ಸಿಂಗ್ ತರಬೇತುದಾರ ಕೆ ಎನ್ ಮೆಂಡನ್. ತನ್ನ ಗರಡಿಯಲ್ಲಿ ಪಳಗಿಸಿ ಬೆಳಗಿಸಿದ ಶಿಷ್ಯ ಗುರುವಿಗೆ ನಿರಾಸೆ ಮಾಡದೆ ಸತತ ಎಂಟು ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಗೆದ್ದು ಗುರುವಿನ ಕೀರ್ತಿ ಬೆಳಗಿದರು. ಚಿಕ್ಕಂದಿನಲ್ಲೇ ಸಿನಿಮಾ ರಂಗದ ಆಕರ್ಷಣೆಗೆ ಒಳಗಾದ ಮುದ್ದಣ್ಣ ಅಝೀಮ್ ಬಾಯ್ ಅವರಲ್ಲಿ ಸೇರಿಕೊಂಡು ಕುದುರೆ ಸವಾರಿ, ಕತ್ತಿ ವರಸೆಗಳಲ್ಲಿ ಪ್ರವೀಣರಾದರು. ಸಿನಿಮಾಗಳಲ್ಲಿ ಫೈಟರ್ ಆಗಿ ಸೇರಿಕೊಂಡ ಮುದ್ದಣ್ಣ ಮುಂದಕ್ಕೆ ತನ್ನ ಶೆಟ್ಟಿ ನಾಮ ಬಲದಿಂದ ”ಫೈಟರ್ ಶೆಟ್ಟಿ” ಎಂದೇ ಸಾಹಸ ನಿರ್ದೇಶನ, ಖಳ ನಟನಾಗಿ ಉತ್ತುಂಗಕ್ಕೆ ಏರಿದವರು. ಇಂದಿಗೂ ಹಿಂದಿ ಚಿತ್ರರಂಗದಲ್ಲಿ ”ಶೆಟ್ಟಿ” ಸರ್ ನೇಮ್ ತನ್ನದೇ ನೆಲೆ ಕಂಡು ಕೊಂಡಿದ್ದರೂ ಯಾವುದೇ ಬೆಂಬಲವಿಲ್ಲದ ಎಪ್ಪತ್ತರ ದಶಕದಲ್ಲಿ ಶೆಟ್ಟಿ ಹೆಸರಿನ ”ಹವಾ” ಆರಂಭಿಸಿದ ಕೀರ್ತಿ ಮುದ್ದಣ್ಣ ಅವರಿಗೇ ಸಲ್ಲಬೇಕು.ಸುಮಾರು ಏಳುನೂರು ಸಿನಿಮಾಗಳಲ್ಲಿ ತನ್ನ ಹುರಿ ಮೈ ಮುರಿದ ಮುದ್ದಣ್ಣ ಶೆಟ್ಟಿ ತನ್ನ ಹೆಚ್ಚಿನ ಪಾತ್ರಗಳಿಗೆ ”ಶೆಟ್ಟಿ” ಹೆಸರನ್ನೇ ಉಳಿಸಿಕೊಂಡು ತುಳುನಾಡಿನ ಹೆಸರಿಗೊಂದು ಖದರ್ ತಂದು ಕೊಟ್ಟವರು. ಸಿಂಹದ ಮರಿ ಸೈನ್ಯ, ಕಿಲಾಡಿ ಕಿಟ್ಟು ಮತ್ತು ರಾಜ್ ಅಭಿನಯದ ಆಪರೇಷನ್ ಡೈಮೊಂಡ್ ರಾಕೆಟ್ ಹೀಗೆ ಕೆಲವಾರು ಕನ್ನಡದ ಮತ್ತು ತುಳುವಿನ ಐತಿಹಾಸಿಕ ಸಿನೆಮಾ ಕೋಟಿ ಚೆನ್ನಯ್ಯದಲ್ಲಿ ಚಂದುಗಿಡಿಯಾಗಿ ಅಭಿನಯಿಸಿ ಕರ್ನಾಟಕ ಮತ್ತು ತುಳುನಾಡಿನಲ್ಲೂ ಮನೆ ಮಾತಾದವರು.
ಕೂದಲಿಲ್ಲದ ಬೋಳು ತಲೆಯವರನ್ನು ”ಫೈಟರ್ ಶೆಟ್ಟಿ” ಎಂದು ಕರೆಯುವಷ್ಟರ ಮಟ್ಟಿಗೆ ಇವರು ಬ್ರಾಂಡ್ ಸೃಷ್ಟಿಸಿದವರು. ಶೋಲೆಯ ಗಬ್ಬರ್ ಸಿಂಗನ ನಂತರದಲ್ಲಿ ಊಟ ಮಾಡದ ಮಕ್ಕಳನ್ನು ಫೈಟರ್ ಶೆಟ್ಟಿಯವರಿಗೆ ಕೊಡುವ ಭಯ ಹುಟ್ಟಿಸಿ ಊಟ ಮಾಡಿಸುತ್ತಿದ್ದ ತಾಯಂದಿರೂ ಇದ್ದರಂತೆ. ತೆರೆಯ ಮೇಲೆ ಖಳನಾಗಿ, ಖೂಳನಾಗಿ ಭಯಂಕರವಾಗಿ ಕಾಣುವ ಫೈಟರ್ ಶೆಟ್ಟಿ ಹೃದಯಾಂತರದಲ್ಲಿ ಅತ್ಯಂತ ದಯಾಳು ಅನ್ನುವವರ ಸಂಖ್ಯೆ ಬಹಳಷ್ಟಿದೆ. ತನಗೆ ಸಂಪಾದನೆಯಾಗಿ ಸಿಗುತ್ತಿದ್ದ ದುಡ್ಡಿನ ಕಂತೆಯಲ್ಲಿ ಮೊದಲ ನೋಟನ್ನು ಯಾರಿಗಾದರೂ ಬಡವರಿಗೆ ಕೊಟ್ಟು ನಂತರ ತಾನು ಸ್ವೀಕರಿಸುತ್ತಿದ್ದರಂತೆ. ”ಕಷ್ಟ ನಾನು ಬಾಲ್ಯದಿಂದ ಕಂಡವನು, ತಗೋ ಏನಾದರೂ ತಿಂದುಂಡು ಖುಷಿ ಪಡಿ!” ಎನ್ನುತ್ತಿದ್ದರಂತೆ.ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಫೈಟರ್ ಶೆಟ್ಟಿಯವರು ಮಕ್ಕಳು ತನ್ನ ಆಜಾನುಬಾಹು ಧಾರ್ಡ್ಯತೆಯ ದೇಹದ ಕಾರಣಕ್ಕೆ ಬಳಿ ಬರಲು ಹೆದರುವುದು ಕಂಡಾಗ ದುಃಖಿಸುತ್ತಾ, ”ಏನು ಮಾಡುವುದು ಮಕ್ಕಳೇ ಪಾಪಿ ಹೊಟ್ಟೆಯ ಕಾರಣಕ್ಕೆ ನಾನು ಖಳ ಪಾತ್ರ ಮಾಡುತ್ತೇನೆ, ನಾನು ಹಾಗೇನೂ ಇಲ್ಲ!” ಎಂದು ಮಕ್ಕಳಂತೆ ಸಮಜಾಯಿಸಿ ಕೊಡುತ್ತಿದ್ದರಂತೆ. ಅಪ್ಪ ನಾಯಕರಿಂದ ಮೂಗು ರಕ್ತ ಸುರಿಯುವಂತೆ ಹೊಡೆಸಿಕೊಳ್ಳುತ್ತಿದ್ದುದನ್ನು ನೋಡಿ ಬೇಜಾರು ಪಟ್ಟುಕೊಳ್ಳುತ್ತಿದ್ದ ಮಕ್ಕಳಿಗೆ ‘ತೆರೆಯಲ್ಲಿ ನಾನು ಪೆಟ್ಟು ತಿನ್ನುವುದರಿಂದ ನೀವು ತಟ್ಟೆಯಲ್ಲಿ ಅನ್ನ ತಿನ್ನುತ್ತಿದ್ದೀರಿ’ ಎಂದು ನಗುತ್ತಿದ್ದರಂತೆ!.
ವಿನೋದಿನಿ ಮತ್ತು ರತ್ನ ಇಬ್ಬರನ್ನು ಮದುವೆಯಾಗಿ ೫ ಮಕ್ಕಳನ್ನು ಪಡೆದ ಫೈಟರ್ ಶೆಟ್ಟಿ ಅವರ ಕೊನೆಗಾಲದಲ್ಲಿ ಚಿತ್ರರಂಗದ ಯಾರ ನೆರವೂ ದೊರಕದೆ ಕಥಕ್ ನೃತ್ಯಗಾತಿ ವಿನೋದಿನಿ ಇವರನ್ನು ನೋಡಿಕೊಳ್ಳುವಲ್ಲಿ ಬಹಳಷ್ಟು ಕಷ್ಟ ಪಡಬೇಕಾಯ್ತು. ನಟಿಯಾಗಿದ್ದ ರತ್ನ ಸಣ್ಣ ಪುಟ್ಟ ಪಾತ್ರಗಳಲ್ಲಿ ದುಡಿದು ಜೀವನ ಸಾಗಿಸಬೇಕಾಯ್ತು. ಇಬ್ಬರು ಹೆಂಡಿರ ಮುದ್ದಿನ ಗಂಡನಾಗಲು ಹೊರಟ ಮುದ್ದಣ್ಣನಿಗೆ ಎರಡೂ ಸಂಸಾರಗಳನ್ನು ಸರಿತೂಗಿಸುವುದು ಸಾಧ್ಯವಾಗಲಿಲ್ಲ ಎನ್ನುವುದು ಅವರ ಹತ್ತಿರದವರ ಮಾತು. ಹಾಗಾಗಿ ಮುದ್ದಣ್ಣನ ರಕ್ತ ಹಂಚಿಕೊಂಡ ಎರಡು ಸಂಸಾರಗಳು ವಿರುದ್ಧ ದಿಕ್ಕಿನಲ್ಲಿ ಸಾಗಿದವು. ವಿನೋದಿನಿಯ ಮಡಿಲ ಮೊಗ್ಗುಗಳಾದ ಹೃದಯ್ ಶೆಟ್ಟಿ ಮತ್ತು ಉದಯ ಶೆಟ್ಟಿ ಚಿತ್ರರಂಗದಲ್ಲಿ ನಿರ್ದೇಶಕ ನಿರ್ಮಾಪಕರಾಗಿ ಕೆಲಸ ಮಾಡಿದರೂ ಅಷ್ಟು ಯಶಸ್ವಿಯಾಗಲಿಲ್ಲ. ರತ್ನ ಅವರ ಮಗ ರೋಹಿತ್ ಶೆಟ್ಟಿ ಮಾತ್ರ ಇಂದು ಹಿಂದಿ ಚಿತ್ರ ರಂಗದ ಮೇರು ನಿರ್ದೇಶಕನಾಗಿ ಹೆಸರು ಮಾಡಿದ್ದು ತಂದೆಯ ಆತ್ಮಕ್ಕೆ ಒಂದಿಷ್ಟು ತೃಪ್ತಿ ನೀಡಿರಬಹುದು.ಇಂತಹ ಹೃದಯವಂತ ಖಳನಿಗೆ ಹೃದಯವಂತಿಕೆಯೇ ಮುಳುವಾಯ್ತು ಅನ್ನುವುದು ಮಾತ್ರ ವಿಪರ್ಯಾಸ. ತನ್ನ ತಂಡದ ಕಲಾವಿದ ಮನ್ಸೂರ್ Bombay 405 Miles ಚಿತ್ರದ ಸೆಟ್ಟಿನಲ್ಲಿ ಬೆಂಕಿಯ ಸಾಹಸ ಮಾಡುವಾಗ ಅಕಸ್ಮಾತ್ ಪೆಟ್ಟಾಗಿ ಸತ್ತಾಗ ಆ ಸಾವಿಗೆ ”ತಾನೇ ಹೊಣೆಗಾರ” ಎಂದು ಭಾವಿಸಿ ಡಿಪ್ರೆಶನ್ ಗೆ ಒಳಗಾಗಿ ಕುಡಿತದ ದಾಸರಾದರು. ಅವತ್ತು 23 ಜನವರಿ 1982. ವಿಪರೀತ ಕುಡಿತದಿಂದ ಲಿವರ್ ಹಾಳು ಮಾಡಿಕೊಂಡ ಮುದ್ದಣ್ಣ ಶೆಟ್ಟಿ ಅಂದು ಕುಸಿದವರು ಮೇಲೇಳಲಿಲ್ಲ. ‘ಸಾಯಬಾರದ ವಯಸ್ಸು’ ಎಂದು ಹೇಳಿಕೊಳ್ಳುವಂತಹ ಐವತ್ತೊಂದರ ವಯಸ್ಸಲ್ಲಿ 5 ಅಡಿ 8 ಇಂಚಿನ ಅಜಾನುಬಾಹು ಸುಮಾರು 80 ಕೇಜಿ ತೂಗುತ್ತಿದ್ದ ಫೈಟರ್ ಶೆಟ್ಟಿಯವರು ಸಲೀಸಾಗಿ ಯಮನಿಗೆ ಶರಣಾಗದಿದ್ದರೆ ಈ ವರ್ಷದ ಮೊದಲಿಗೆ ಅವರಿಗೆ 91 ತುಂಬುತ್ತಿತ್ತು (1 ಜನವರಿ 1931).
”ಸಾಧಕರಿಗೆ ಆಯುಷ್ಯ ಕಮ್ಮಿ” ಎನ್ನುವಂತೆ ಬದುಕಿದ ತುಳುನಾಡಿನ ಮತ್ತೊಬ್ಬ ”ಮುದ್ದಣ್ಣ”ನ ಪುಣ್ಯ ಸ್ಮರಣೆಗೆ ಅವರ ಅಸ್ತಂಗತದ ದಿನದಂದು (23-1-1982) ಒಂದಿಷ್ಟು ಸಮಯ ಮೀಸಲಿಡೋಣ. ನೆನಪಿಸುವ ಮನಸ್ಸುಗಳ ನಡುವೆಯಾದರೂ ಈ ಸಾಧಕನ ಆತ್ಮ ಕಿಂಚಿತ್ತೂ ಹೊತ್ತು ನಲಿಯಲಿ ಎನ್ನುವುದು ಅಂತರಾಳದ ಆಶಯ.
ಸಂಗ್ರಹ ಲೇಖನ