ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ (ಹಳೆ) ಆವರಣದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ರೆಡ್ಕ್ರಾಸ್ ಶತಮಾನೋತ್ಸವ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ರೆಡ್ಕ್ರಾಸ್ ದ.ಕ ಜಿಲ್ಲಾ ಘಟಕದ ಛೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅವರು ರಾಜ್ಯಪಾಲ ಹಾಗೂ ರೆಡ್ಕ್ರಾಸ್ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಥಾವರ್ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಲು ಆಗಮಿಸುವಂತೆ ಆಹ್ವಾನಿಸಿದರು.

ರೆಡ್ಕ್ರಾಸ್ ದ.ಕ ಜಿಲ್ಲಾ ಘಟಕದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದ ರಾಜ್ಯಪಾಲರು ಉದ್ಘಾಟನೆಗೆ ಆಗಮಿಸುವುದಾಗಿ ತಿಳಿಸಿದರು. ರೆಡ್ಕ್ರಾಸ್ ರಾಜ್ಯ ಘಟಕದ ಚೇರ್ಮನ್ ಬಸ್ರೂರು ರಾಜೀವ್ ಶೆಟ್ಟಿ ಈ ಸಂಧರ್ಭ ಉಪಸ್ಥಿತರಿದ್ದರು.