ಸ್ವತಂತ್ರವಾಗಿ ಬೆಳೆದೆ
ನೇತ್ರಾವತಿ ನದಿ ದಂಡೆ ಮೇಲೆ
ಬಾಲ್ಯದ ನೆನಪುಗಳು
ಇವೆ ಇನ್ನೂ ಹಸಿರಾಗಿಯೇ

ಪ್ರತಿಧ್ವನಿಸುವ ನದಿಯ ದನಿಯು ರೋಮಾಂಚನಗೊಳಿಸುತ್ತೆ
ಇನ್ನೂ ಆಪ್ತ ಗೆಳತಿಯ
ಸುಮಧುರ ಹಾಡಿನಂತೆ
ಆ ಸೌಮ್ಯವಾದ ಹರಿವು ಹಿತವಾದ ತಂಗಾಳಿ
ಮೊಣಕಾಲುಗಳನ್ನು ಅದ್ದಿ ಆಡಿದ
ತಂಪಾದ ಸಿಹಿ ನೀರು
ಸೂರ್ಯಾಸ್ತದ ಸಮಯದಿ
ಮೋಡದ ನಡುವೆ ಬಣ್ಣದ ಜಾದು
ಮಳೆಗಾಲದಲ್ಲಿ ಕೋಪದಿಂದ
ಉಬ್ಬುವಳು
ಬಲು ಹೆಮ್ಮೆಯಿಂದ
ಹೊರಗೆ ತುಂಬಾ ಉಗ್ರ
ಆದರೆ ಒಳಗೆ ಬಹು ಶಾಂತ
ಕಲ್ಲನ್ನು ಕೊರೆಯುತ್ತಾ
ಮರಳನ್ನು ನುಣುಪಾಗಿಸುತ್ತಾ
ನಾನು ದೂರವಾದರೂ
ನೆನಪು ಮಾತ್ರ ಬಲು ನಿಕಟ
ಬಂದಿದೆ ಈಗ
ಅಕ್ರಮ ಮರಳಿನ ದಂಧೆ
ಮಾಡುತ್ತಾ ಇದ್ದಾರೆ
ನದಿಯ ಆಂತರಿಕ ಅಂಗದ ವಧೆ
ಕಳೆದು ಹೋಗಿದೆ ಸೌಮ್ಯ ಹರಿವು
ಹೆಚ್ಚಾಗಿದೆ ಹರಿವಿನ ವೇಗ
ಸವೆದಿದೆ ನದಿಯ ದಡ
ಆಳವಾಗಿದೆ ನದಿಯ ಮುಖ
ತಟ್ಟಲಿದೆ ನೇತ್ರಾವತಿಯ ಶಾಪ
ಕಾದಿದೆ ಮನುಷ್ಯನಿಗೆ ವಿನಾಶ !
ಲೇಖಕಿ : ಅಶ್ವಿತಾ ಶೆಟ್ಟಿ ಇನೋಳಿ (ಮುಂಬೈ)