ಅನಾದಿ ಕಾಲದಿಂದಲೂ ನಾಯಿ ಮನುಷ್ಯನ ಸಂಗಾತಿ ಎಂದು ಹೇಳಲಾಗುತ್ತದೆ. ನಮ್ಮ ಪ್ರಾಚೀನ ಸಾಹಿತ್ಯದಲ್ಲಿ, ಅಲ್ಲಲ್ಲಿ ನಾಯಿಯ ಪ್ರಸ್ತಾಪವಿದೆ. ಕಾಲಭೈರವನ ಸುತ್ತ ನಾಯಿಗಳಿರುವ ಚಿತ್ರ ನೋಡಿದ್ದೇವೆ. ದತ್ತಾತ್ರೇಯನ ಸುತ್ತಲೂ ನಾಲ್ಕು ನಾಯಿಗಳಿರುತ್ತವೆ. ಮಹಾಭಾರತದಲ್ಲಿ ಯುಧಿಷ್ಠಿರನನ್ನು ಹಿಂಬಾಲಿಸಿ ಸ್ವರ್ಗದ ಬಾಗಿಲಿನವರೆಗೂ ಬರುವ ನಾಯಿಯ ಬಗ್ಗೆ ನಾವು ಓದಿದ್ದೇವೆ. ಆದರೆ, ಅದಕ್ಕೂ ಮುಂಚೆ, ವೇದಸಾಹಿತ್ಯದಲ್ಲೂ ನಾಯಿಯೊಂದು ಮುಖ್ಯ ಪಾತ್ರಧಾರಿಯಾಗಿದ್ದ ಕಥೆ ಇದು. ಸರಮೆ, ದೇವಲೋಕದಲ್ಲಿ ವಾಸವಿದ್ದ ಹೆಣ್ಣು ನಾಯಿ. ಆದುದರಿಂದಲೇ ನಾಯಿ ಜಾತಿಗೆ ‘ಸಾರಮೇಯ’ ಎಂಬ ಹೆಸರು ಬಂದಿರುವುದು. ಋಗ್ವೇದವು ಸರಮೆಯನ್ನು ಸುಪಾದ, ಸುಭಗಾ ಎಂದೂ ಕರೆದಿದೆ.
ಋಗ್ವೇದದ ಒಂದು, ಮೂರು, ನಾಲ್ಕು ಮತ್ತು ಐದನೇ ಮಂಡಲಗಳಲ್ಲಿ ಸರಮೆಯ ಉಲ್ಲೇಖವಿದೆ. ಒಮ್ಮೆ ಅಸುರರ ಒಂದು ಗುಂಪು ಅಂಗೀರಸ ಋಷಿಗೆ ಸೇರಿದ ಹಸುಗಳನ್ನು ಆಶ್ರಮದಿಂದ ಅಪಹರಿಸಿ ಕೊಂಡು ಹೋಗಿ, ಗುಹೆಯಲ್ಲಿ ಬಚ್ಚಿಡುತ್ತಾರೆ. ಅಂಗೀರಸರು ಇಂದ್ರನ ಬಳಿ ಬಂದು ಗೋವುಗಳನ್ನು ಹುಡುಕಿಕೊಡುವಂತೆ ಕೇಳಿಕೊಳ್ಳುತ್ತಾರೆ. ಆಗ, ಆ ಹಸುಗಳನ್ನು ಹುಡುಕಲು ಇಂದ್ರನಿಗೆ ಸಹಾಯ ಮಾಡುವುದು ಈ ಸರಮೆ ಎಂಬ ಶ್ವಾನ.
ವಾಲ ಎಂಬ ಶಿಲಾವೃತ ಗುಹೆಯಲ್ಲಿ ಬಚ್ಚಿಡಲಾಗಿದ್ದ ಹಸುಗಳನ್ನು ಹುಡುಕುವುದಕ್ಕೆ ಮುಂಚೆ, ಸರಮೆ ಇಂದ್ರನಲ್ಲಿ ಒಂದು ಕರಾರು ಹಾಕಿರುತ್ತಾಳೆ. “ನಾನು ಹಸುಗಳನ್ನು ಪತ್ತೆ ಹಚ್ಚಿ ಕೊಡುತ್ತೇನೆ. ಆದರೆ, ಅವುಗಳ ಹಾಲನ್ನು ನನ್ನ ಮರಿಗಳಿಗೂ ಭೂಮಿಯ ಮನುಷ್ಯರಿಗೂ ಕೊಡಬೇಕು” ಅನ್ನುತ್ತಾಳೆ. ಇಂದ್ರ ಅದಕ್ಕೆ ಒಪ್ಪುತ್ತಾನೆ. ಅಂದಿನಿಂದ ಹಸುವಿನ ಹಾಲನ್ನು ಮನುಷ್ಯರು ಕುಡಿಯಲು ಶುರು ಮಾಡಿದ್ದು ಅನ್ನುತ್ತವೆ ತೈತ್ತಿರೀಯ ಬ್ರಾಹ್ಮಣ ಮತ್ತು ಆಪಸ್ತಂಭ ಸೂತ್ರಗಳು. ಅಷ್ಟೇ ಅಲ್ಲ, ಹಾಲಿನಿಂದ ಮಜ್ಜಿಗೆ, ಮೊಸರು, ಬೆಣ್ಣೆ, ತುಪ್ಪಗಳ ಆವಿಷ್ಕಾರವನ್ನೂ, ತುಪ್ಪವನ್ನು ಹೋಮಕ್ಕೆ ಬಳಸುವುದನ್ನೂ ತಿಳಿಸಿಕೊಟ್ಟವಳು ಸರಮೆಯೇ ಎಂಬ ಹೇಳಿಕೆಯೂ ವೇದಗಳಲ್ಲಿ ಬರುತ್ತದೆ. ಅಂದಿನಿಂದ ಸರಮೆ ಮತ್ತು ಸಾರಮೇಯಗಳು ಮನುಷ್ಯರ ಗೆಳೆಯರಾದರು ಎನ್ನುವುದೊಂದು ಕಥೆ.
ಸರಮೆ ಹಸುಗಳನ್ನು ಪತ್ತೆ ಹಚ್ಚಿದಾಗ ಅಸುರರು ಅವಳಿಗೆ ಆಮಿಷವೊಡ್ಡುತ್ತಾರೆ. ಇಂದ್ರನಿಗೆ ಹೇಳಬೇಡ, ನಿನಗೆ ನಮ್ಮ ಕೊಳ್ಳೆಯಲ್ಲಿ ಪಾಲು ಕೊಡುತ್ತೇವೆ ಅನ್ನುತ್ತಾರೆ. ಸರಮೆ ಯಾವ ಲೋಭಕ್ಕೂ ಒಳಗಾಗದೆ ಇಂದ್ರನಿಗೆ ನಿಷ್ಠಳಾಗಿ ಉಳಿದು ಗೋವುಗಳ ಇರವಿನ ಕುರಿತು ಇಂದ್ರನಿಗೆ ಮಾಹಿತಿ ಕೊಡುತ್ತಾಳೆ. ಈ ಕಾರಣಕ್ಕೆ ‘ನಾಯಿಯ ನಿಷ್ಠೆ’ ವಿಶೇಷವಾಗಿ ಗುರುತಿಸಲ್ಪಡುತ್ತದೆ ಅನ್ನುವುದು ಐತಿಹ್ಯ.
ಇಂದಿನ ಕಾಲದಲ್ಲಿಯೂ ಬಾಂಬ್, ಮಾದಕ ವಸ್ತುಗಳು, ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದ ಶವಗಳ ಪತ್ತೆಗಾಗಿ ನಾಯಿಗಳನ್ನು ಉಪಯೋಗಿಸುತ್ತಾರೆ. ಬಹುಷಃ ಈ ತಂತ್ರಜ್ಙಾನ ಭಾರತೀಯರಿಗೆ ವೇದಕಾಲದಲ್ಲೇ ತಿಳಿದಿತ್ತು ಅಂತ ಊಹಿಸಬಹುದು. ವೇದ ಕಥನಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, “ಯಾವ ಪ್ರಾಣಿಯೂ ಹೆಚ್ಚಲ್ಲ, ಯಾವುದೂ ಕಡಿಮೆಯಲ್ಲ; ದೇವರ ಸೃಷ್ಠಿಯಲ್ಲಿ ಯಾವುದೇ ಪ್ರಾಣಿಗಳು ನಿಷ್ಪ್ರಯೋಜಕವಲ್ಲ. ಬೇರೆ ಧರ್ಮಗಳು ಕೆಲವು ಪ್ರಾಣಿಗಳನ್ನು ನಿಕೃಷ್ಟ ಅಂತ ಭಾವಿಸಿದರೆ, ನಮ್ಮ ಸನಾತನ ಧರ್ಮದಲ್ಲಿ ಎಲ್ಲಾ ಪ್ರಾಣಿಗಳಲ್ಲಿ ನಾವು ದೇವರನ್ನು ಕಾಣುತ್ತೇವೆ. ಹಂದಿ, ಹಾವು, ಆಮೆ, ಗಿಡುಗ, ಮಂಗ, ಆನೆ ಎಲ್ಲವೂ ನಮಗೆ ಪೂಜನೀಯ.