ಹಸಿವಿಗೆ ಅನ್ನದ ಹೊರತು ಚಿನ್ನ ತಿನ್ನಲು ಸಾಧ್ಯವೇ? ಹೌದಲ್ವಾ? ಉದರ ಹಸಿವಿಗೆ ಆ ಕ್ಷಣ ಅನ್ನ ನೀಡಿ ಸಹಕರಿಸುವವನೇ ಪರಮಾತ್ಮನಿಗೆ ಸಮ. ಹಸಿದವನ ಕರೆದು ಒಂದು ತುತ್ತು ಅನ್ನ ನೀಡಿ ಸಹಕರಿಸಿದರೆ ಕೋಟಿ ಪುಣ್ಯವಂತೆ. ಉಂಡವನ ಮೊಗದ ತೃಪ್ತಿ, ಬಡಿಸಿದವನ ಮುಖದಲ್ಲಿ ಸಂತೃಪ್ತಿಯ ಭಾವ. ನಾವು ಎಷ್ಟೋ ಸಾರ್ವಜನಿಕ ಸಮಾರಂಭಗಳು, ಮನೆಯ ಕಾರ್ಯಕ್ರಮಗಳಲ್ಲಿ ನೋಡುತ್ತೇವೆ. ಹಾಕಿಸಿಕೊಂಡು, ಅರ್ಧಂಬರ್ಧ ತಿಂದು ಉಣುವ ಎಲೆಯಲ್ಲೋ, ತಟ್ಟೆಯಲ್ಲೋ ಬಿಟ್ಟು ಏಳುತ್ತೇವೆ. ತಿನ್ನುವ ಆಹಾರವನ್ನು ಪೋಲು ಮಾಡಬಾರದು. ಲೋಕದಲ್ಲಿ ಹಸಿವಿನಿಂದಾಗಿ ಸಾಯುವವರೂ ಇದ್ದಾರೆ.

ಮಕ್ಕಳಿಗೆ ರೈತನ ಬೆವರಿನ ಬೆಲೆಯನ್ನು ಬಾಲ್ಯದಿಂದಲೇ ಕಲಿಸಬೇಕು. ಅಕ್ಕಿ ಹೇಗೆ ಆಗುತ್ತದೆಂಬ ಅರಿವು ಮಕ್ಕಳಿಗಿರಲಿ. ‘ಅಕ್ಕಿ ಅಂಗಡಿಯಲ್ಲಿ ಬೆಳೆಯುತ್ತದೆ ಎನ್ನುವ ದಿನ ದೂರವಿಲ್ಲ. ಕೃಷಿ ಕೆಲಸ ಕಾರ್ಯಗಳು, ಅನ್ನದಾತರ ಪರಿಶ್ರಮದ, ಅವರ ಬೇನೆ ಬೇಸರಿಕೆ ಎಲ್ಲದರ ಮಾಹಿತಿ ಮಕ್ಕಳಿಗೆ ತಿಳಿದಿರಬೇಕು. ಒಂದು ಅಗುಳು ಅನ್ನವನ್ನು ಸಹ ಬಿಸಾಡಬಾರದೆಂಬ ಅರಿವಿರಲಿ. ನಾವು ಸಹ ಉಣ್ಣುವ ಆಹಾರವನ್ನು ಹಾಳು ಮಾಡಬಾರದು. ಕೊರೋನಾ ಕಾಲದಲ್ಲಿ ಆಹಾರದ ಅಗತ್ಯ ಎಲ್ಲರಿಗೂ ಗೊತ್ತಾಗಿದೆ ಅಲ್ಲವೇ? ಹಾಳು ಮಾಡದೆ, ಸಂರಕ್ಷಣೆ ಮಾಡಬೇಕು. ಮಾಹಿತಿ ಕಾರ್ಯಕ್ರಮ, ಉತ್ತಮ ಕಾರ್ಯ ನಿರ್ವಹಣೆ, ಒಳ್ಳೆಯ ಆಹಾರ ತಯಾರಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಬಹುದು. ‘ಆಹಾರ ನೀತಿ ಸಂಹಿತೆ’ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು. ನಾಳೆಗಾಗಿ ಸ್ವಲ್ಪ ಕೂಡಿಡೋಣ, ಹಸಿವು ಮುಕ್ತ ಸಮಾಜದ ಕನಸನ್ನು ನನಸಾಗಿಸೋಣ. ಹೊಟ್ಟೆ ತುಂಬಿದವನ ಒತ್ತಾಯಿಸದೆ, ಹೊಟ್ಟೆ ಹಸಿವಿದ್ದವಗೆ ಬಡಿಸೋಣ.