ಕನ್ನಡ ಸಾಂಸ್ಕೃತಿಕ ಕೇಂದ್ರ ಈ ಸಂಸ್ಥೆಯು ಮುಂಬೈ ಮತ್ತು ನಗರದ ಗ್ರಾಮೀಣ ಪರಿಸರದ ಬರಹಗಾರರ ಬೆನ್ನು ತಟ್ಟಿ ಈ ಬರಹಗಾರರು ಇನ್ನಷ್ಟು ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಅವರಿಗೆ ಬಹಳ ಪ್ರೋತ್ಸಾಹ ನೀಡುತ್ತಾ ಬಂದ ಸಮಾಜಪರ ಸಾಹಿತ್ಯಪರ ಸಂಸ್ಥೆ ಆಗಿದೆ ಎಂದರೆ ಅತಿಶಯೋಕ್ತಿಯ ಮಾತಾಗದು. ಈ ವರ್ಷ ಸಂಸ್ಥೆ ನೀಡಿದ ಎಂಟು ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಇಲ್ಲಿ ಅನೇಕ ಹೊಸಬರು ಮತ್ತು ಬಹಳಷ್ಟು ಕಡೆ ಕವಿತೆಗಳನ್ನು ಸಾದರಪಡಿಸಿ ಅನುಭವ ಉಳ್ಳವರು. ಒಟ್ಟು ಈ 10 ಮಂದಿ ಕವಿಗಳು ಕೂಡಾ ತಮ್ಮ ತಮ್ಮ ಕವಿತೆಗಳನ್ನು ಬಹಳ ಸುಂದರವಾಗಿ ಪ್ರಸ್ತುತಪಡಿಸಿದ್ದಾರೆ. ಎಲ್ಲಾ ಕವಿಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಅರ್ಥಪೂರ್ಣವಾದ ಕವಿತೆಗಳನ್ನು ರಚಿಸಿ ಸಾಹಿತ್ಯಾಸಕ್ತರ ಮುಂದೆ ಸಾದರಪಡಿಸಿದ್ದಾರೆ. ಎಲ್ಲರೂ ನಿಜವಾಗಿಯೂ ಅಭಿನಂದನಾರ್ಹರು ಮಾತ್ರವಲ್ಲ ಎಲ್ಲರಿಗೂ ಸಾಹಿತ್ಯ ಕ್ಷೇತ್ರದಲ್ಲಿ ಉಜ್ವಲವಾದ ಭವಿಷ್ಯವಿದೆ ಎಂದು ನಾನು ಭಾವಿಸುತ್ತೇನೆ. ಇಂತಹ ಶಿಕ್ಷಕರ ದಿನಾಚರಣೆ ಮತ್ತು ನವರಾತ್ರಿ ಶುಭ ಸಂದರ್ಭದಲ್ಲಿ ಕವಿಗೋಷ್ಠಿಯನ್ನು ಏರ್ಪಾಡು ಮಾಡಿದ ಎರಡು ದಶಕಗಳ ಇತಿಹಾಸ ಇರುವ ಪ್ರತಿಷ್ಠಿತ ಸಂಸ್ಥೆ ಈ ಕನ್ನಡ ಸಾಂಸ್ಕೃತಿಕ ಕೇಂದ್ರಕ್ಕೆ ನಾವು ಚಿರಋಣಿಗಳು. ಈ ಕವಿಗೋಷ್ಠಿಯಿಂದ ನಮ್ಮೆಲ್ಲರ ಸ್ಪೂರ್ತಿ ಆಸಕ್ತಿ ಸಾಮಾಜಿಕ ಚಿಂತನೆ ಎರಡು ಪಟ್ಟು ಹೆಚ್ಚಾಗಿದೆ. ನಮ್ಮ ಸಾಹಿತ್ಯಾಸಕ್ತರ ಮತ್ತು ಈ ಪ್ರತಿಷ್ಠಿತ ಸಂಸ್ಥೆಯ ಸಂಬಂಧ ಇನ್ನಷ್ಟು ಗಟ್ಟಿಯಾಗಲಿ. ನೂರಾರು ಮಂದಿ ಬರಹಗಾರರ ಕವಿಗಳ ಸಾಮರ್ಥ್ಯ ಬೆಳಕಿಗೆ ಬರುವಂತಾಗಲಿ. ಗುರು ಹಿರಿಯರ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ. ಇಂತಹ ಅರ್ಥಪೂರ್ಣ ಕವಿಗೋಷ್ಠಿಯಲ್ಲಿ ಭಾಗವಹಿಸುವ ಮೂಲಕ ನಮ್ಮೆಲ್ಲರ ಸ್ಪೂರ್ತಿ ಚಿಂತನೆ ಇನ್ನಷ್ಟು ಹೆಚ್ಚಾಗಲಿ. ನಾವುಗಳು ಕಾಣುವ ಕನಸುಗಳೆಲ್ಲಾ ನನಸಾಗಲಿ ಎಂದು ಹಾರೈಸಿ ಎಲ್ಲಾ ಕವಿಗಳನ್ನು ಅಭಿನಂದಿಸುತ್ತಿದ್ದೇನೆ ಎಂದು ನಗರದ ಹಿರಿಯ ಬರಹಗಾರ್ತಿ, ಸಂಘಟಕಿ, ನಿವೃತ್ತ ಶಿಕ್ಷಕಿ ಪ್ರಮೋದಾ ಮಾಡ ಹೇಳಿದರು.

ಇತ್ತೀಚೆಗೆ ಕಲ್ಯಾಣ್ ಪೂರ್ವದ ಲೋಕ್ ಫೆಡರೇಶನ್ ಹಾಲ್ ನಲ್ಲಿ ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ ಆಯೋಜಿಸಿದ್ದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಭಾಗವಹಿಸಿದ ಎಲ್ಲಾ ಕವಿಗಳು ನಮ್ಮೆಲ್ಲರ ಪ್ರಕಾರ ವಿಜೇತರುಗಳೇ ಆಗಿದ್ದಾರೆ. ಒಂದೆರಡು ಅಂಕಗಳು ಅಥವಾ ಮೂರು ನಾಲ್ಕು ಅಂಕಗಳ ವ್ಯತ್ಯಾಸದಿಂದ ಪ್ರಥಮ ಅಥವಾ ದ್ವಿತೀಯ ಬಹುಮಾನವನ್ನು ವಿಜೇತರು ಗಿಟ್ಟಿಸಿಕೊಂಡಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿ ತಾನು ಸಂಸಾರವೆಂಬ ಶೀರ್ಷಿಕೆಯಡಿಯಲ್ಲಿ ರಚಿಸಿದ ಕವಿತೆಯನ್ನು ಬಹಳ ಸುಂದರವಾಗಿ ಪದ್ಯ ರೂಪದಲ್ಲಿ ಸಾದರ ಪಡಿಸಿದರು. ಕವಿತೆ ರಚನೆಗಾಗಿ ನೀಡಿದ ವಿಷಯಗಳಾದ ಶಿಕ್ಷಣ ವ್ಯವಸ್ಥೆ, ಅಂತರ್ಜಾಲ, ನಂಬಿಕೆ, ಸನ್ಮಾನ, ಗುರು ಶಿಷ್ಯ ಸಂಬಂಧ, ನನ್ನ ಶಾಲೆ, ಸಂಸ್ಕಾರ ಮತ್ತು ನನ್ನ ಗುರು ಇವುಗಳಲ್ಲಿ ಲತಾ ಸಂತೋಷ್ ಶೆಟ್ಟಿ ಮುದ್ದು ಮನೆ ‘ನನ್ನ ಗುರುಗಳು’, ಹರಿಣಿ ಎಂ ಶೆಟ್ಟಿ ‘ನನ್ನ ಶಾಲೆ’, ವೇದಾವತಿ ಭಟ್ ‘ನಂಬಿಕೆ’, ಸವಿತಾ ಎಂ ಸಿಂದಗಿ ‘ನನ್ನ ಶಾಲೆ’, ಪ್ರಫುಲ್ಲಾ ಶೆಟ್ಟಿ ಪಡುಕುಡೂರು ‘ಅಂತರ್ಜಾಲ’, ಸೂರಿ ಶೆಟ್ಟಿ ಮಾರ್ನಾಡು ‘ನನ್ನ ಶಾಲೆ’, ಸುಶೀಲ ಅಮೀನ್ ‘ನಂಬಿಕೆ’, ವಿಠಲ ಮಾಣೊರೆ ‘ನಂಬಿಕೆ’, ರವೀಂದ್ರ ಶೆಟ್ಟಿ ತಾಳಿಪಾಡಿ ‘ನಂಬಿಕೆ’ ಮತ್ತು ಶಾಲಿನಿ ಅಜೆಕಾರು ‘ನನ್ನ ಶಾಲೆ’ ಹೀಗೆ ಕೊಟ್ಟ ಶೀರ್ಷಿಕೆಯ ವಿಷಯಗಳನ್ನು ಆದರಿಸಿ ತಮ್ಮ ತಮ್ಮ ಸುಂದರವಾದ ಮನೋರಂಜನೆ ಭರಿತ ಸ್ವರಚಿತ ಕವಿತೆಗಳನ್ನು ಸಾದರಪಡಿಸಿ ಪ್ರೇಕ್ಷಕರ ಕರತಾಡನಗಳಿಗೆ ಪ್ರಶಂಸೆಗೆ ಕಾರಣರಾದರು.
ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ ಪ್ರಮೋದಾ ಮಾಡಾರವರನ್ನು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಕುಂಠಿನಿ ಮತ್ತು ಕಾರ್ಯದರ್ಶಿ ಪ್ರಕಾಶ್ ನಾಯ್ಕ್ ಗೌರವಿಸಿದರು. ಕವಿಗಳನ್ನು ಗೋಷ್ಠಿಯ ಅಧ್ಯಕ್ಷೆ ಪ್ರಮೋದಾ ಮಾಡ, ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಕುಂಠಿನಿ, ಕಾರ್ಯದರ್ಶಿ ಪ್ರಕಾಶ್ ನಾಯ್ಕ್, ನಿಕಟ ಪೂರ್ವ ಅಧ್ಯಕ್ಷೆ ಜ್ಯೋತಿ ಪ್ರಕಾಶ್ ಹೆಗ್ಡೆ ಕುಂಠಿನಿ, ಕೋಶಾಧಿಕಾರಿ ಧನಂಜಯ ಶೆಟ್ಟಿ, ಜೊತೆ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಲಗಾಂವ್, ಜೊತೆ ಕೋಶಾಧಿಕಾರಿ ಜಯರಾಮ್ ಹೆಗ್ಡೆ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಕುಮುದಾ ಡಿ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಆನಂದ ಬಾವಿಕಟ್ಟಿ, ಪುಷ್ಪ ನಾಯಕ್, ಜಯಶ್ರೀ ಶೆಟ್ಟಿ, ಕಸ್ತೂರಿ ಶೆಟ್ಟಿ, ಪಾರ್ವತಿ ಶೆಟ್ಟಿ, ಮಮತಾ ಅಮೀನ್ ಮೊದಲಾದವರು ಶಾಲು ಹೊದಿಸಿ ಹೂಗುಚ್ಛ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಈ ಸುಂದರ ಕವಿಗೋಷ್ಠಿಯನ್ನು ಕಾರ್ಯಕಾರಿ ಸಮಿತಿ ಸದಸ್ಯೆ ಸರೋಜಾ ಶ್ರೀಕಾಂತ್ ಅಮಾತಿ ಬಹಳ ಸುಂದರವಾಗಿ ನಿರೂಪಿಸಿದರು.