ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಮೇಳದ ಆರನೇ ವರ್ಷದ ಯಾನಾರಂಭವು ಆದಿತ್ಯವಾರ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದು, ಭಾಗವತರಿಗೆ ಜಾಗಟೆ, ಕಲಾವಿದರಿಗೆ ಗೆಜ್ಜೆ ನೀಡಿ, ಶ್ರೀ ದೇವರ ಪೂಜೆಯ ಮೂಲಕ ಆರಂಭಗೊಂಡಿತು. ಬಳಿಕ ಮೇಳದ ಸುವಸ್ತುಗಳೊಂದಿಗೆ ಚೌಕಿ ಪ್ರವೇಶಿಸಿ ಚೌಕಿ ಪೂಜೆ ಜರಗಿತು. ಇದೇ ಸಂದರ್ಭದಲ್ಲಿ ಮೇಳಕ್ಕೆ ಪರಂಪರೆಯ ನೂತನ ವೇಷಭೂಷಣಗಳನ್ನು, ಬೆಳ್ಳಿಯ ಪೂಜಾ ಪರಿಕರಗಳನ್ನು ಸಮರ್ಪಿಸಲಾಯಿತು. ಮೇಳದ ಕಲಾವಿದರಿಗೆ ಈವರೆಗೆ ಇದ್ದ ಆರೋಗ್ಯ ವಿಮೆ, ಪಿಎಫ್ ಸೌಲಭ್ಯಗಳ ಜೊತೆಗೆ ಈ ಬಾರಿ ಇಎಸ್ಐ ಸೌಲಭ್ಯವನ್ನು ಜಾರಿ ಮಾಡಲಾಯಿತು.

ಈ ಸಾಲಿನ ಮೊದಲ ಸೇವಾ ರೂಪದ ಬಯಲಾಟ ಪಾಂಡವಾಶ್ವಮೇಧ ಪ್ರಸಂಗವು ಶ್ರೀ ದೇವಳದ ಬಾಕಿಮಾರು ಗದ್ದೆಯಲ್ಲಿ ಹಾಕಲಾಗಿದ್ದ ಸಾಂಪ್ರದಾಯಿಕ ರಂಗಸ್ಥಳದಲ್ಲಿ ನಡೆಯಿತು. ಶ್ರೀ ದೇವಳದ ಆಡಳಿತ ಮೊಕ್ತೇಸರ ಎಂ ಶಶೀಂದ್ರ ಕುಮಾರ್, ಧರ್ಮದರ್ಶಿ ಡಾ. ಯಾಜಿ ಹೆಚ್ ನಿರಂಜನ ಭಟ್, ಮೇಳದ ಸಂಚಾಲಕ ಹಾಗೂ ಪ್ರಧಾನ ಭಾಗವತ ಪಟ್ಲ ಸತೀಶ್ ಶೆಟ್ಟಿ, ಪ್ರಬಂಧಕ ಮಾಧವ ಬಂಗೇರ ಕೊಳತ್ತಮಜಲು, ವಿವಿಧ ಕಲಾವಿದರು, ವಿದ್ವಾಂಸರು, ಯಕ್ಷಗಾನ ಅಭಿಮಾನಿಗಳು ಹಾಗೂ ಕ್ಷೇತ್ರದ ಭಕ್ತರು ಈ ಸಂಧರ್ಭ ಉಪಸ್ಥಿತರಿದ್ದರು.










































































































