ಪುಸ್ತಕಗಳನ್ನು ಓದಿ ಮೋಟಿವೇಟ್ ಆಗಬಹುದು. ಭಾಷಣಗಳನ್ನು ಕೇಳಿ ಮೋಟಿವೇಟ್ ಆಗಬಹುದು. ಗೆದ್ದವರ ಕತೆಗಳನ್ನು ಕೇಳಿಯೂ ಮೋಟಿವೇಟ್ ಆಗಬಹುದು ಅಥವಾ ನಾನೀಗ ಬರೆಯುತ್ತಿರುವಂತಹ ಬರಹಗಳನ್ನು ನೋಡಿಯೂ ಮೋಟಿವೇಟ್ ಆಗಬಹುದು. ಆದ್ರೆ ಅವೆಲ್ಲವೂ ತಾತ್ಕಾಲಿಕ. ಶಾಶ್ವತ ಯಾವುದು ಗೊತ್ತಾ? ಸೆಲ್ಫ್ ಮೋಟಿವೇಶನ್!! ಅದೊಂದು ಮಾತ್ರ ನಮ್ಮನ್ನು ಕಾಪಾಡಬಲ್ಲದು. ಸೆಲ್ಫ್ ಮೋಟಿವೇಶನ್ ಇದ್ದವನು ಹೇಗಿರ್ತಾನೆ ಅಂದರೆ, ಭೂಮಿಯ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಳ್ಳಲು ಆಕಾಶಕ್ಕೆ ಚಿಮ್ಮುವ ರಾಕೆಟ್ಟಿನಂತಿರುತ್ತಾನೆ. ಅವನೊಳಗಿನ ಉತ್ಸಾಹದ ವೇಗಕ್ಕೆ ಸಾಟಿಯೇ ಇರುವುದಿಲ್ಲ! ಗೂಗಲ್ ಮ್ಯಾಪಿನಂತಿರುತ್ತೆ ಅವನ ಸ್ಪಷ್ಟತೆ.

ಒಂದು ದಾರಿ ಮುಚ್ಚಿದರೂ ಇನ್ನೊಂದು ಹುಡುಕಿಕೊಂಡು ಹೊರಟುಬಿಡುತ್ತಾನೆ. ರೈಲಿನ ಹಳಿಯಂತಿರುತ್ತೆ ಅವನೊಳಗಿನ ಗುರಿ. ಯಾವುದೇ ಕಾರಣಕ್ಕೂ ಅವನು ಟ್ರ್ಯಾಕು ತಪ್ಪುವುದಿಲ್ಲ! ಮುಖ್ಯವಾಗಿ ರೇಸ್ ಕಾರಿನಷ್ಟು ಫಿಟ್ ಅಂಡ್ ಫೈನಾಗಿರ್ತಾನೆ ಅವನು. ಯಾವಾಗ ಆನ್ ಮಾಡಿದ್ರೂ ಸೌಂಡೇ ಸೌಂಡು! ಹಾಗಿದ್ದರೆ ಮಾತ್ರ ನಮ್ಮ ಬದುಕೆನ್ನೋದು ಯಾರೇ ಕೂಗಾಡಲಿ, ಊರೇ ಹೋರಾಡಲಿ ಅನ್ನೋ ತರ ನಡೆದು ಹೋಗುತ್ತೆ! ಇಲ್ಲವಾದ್ರೆ ಇದು ಯಾರು ಬರೆದ ಕತೆಯೋ, ನನಗಾಗಿ ಬಂದ ವ್ಯಥೆಯೋ.





































































































