ಸನಕಾದಿಗಳು ಬ್ರಹ್ಮನ ಮಾನಸ ಪುತ್ರರು. ನಾರಾಯಣನು ಪ್ರಜಾವೃದ್ಧಿ ಮಾಡಿಸಲು ಬ್ರಹ್ಮನಿಗೆ ತಿಳಿಸಿದಾಗ ಬ್ರಹ್ಮದೇವನು ಮೊದಲಿಗೆ ಸೃಷ್ಟಿಸಿದ್ದು ಸನಕ, ಸನಂದನ, ಸನಾತನ, ಸನತ್ಸುಜಾತ ಎಂಬ ನಾಲ್ಕು ಜನ ಸನಕಾದಿಗಳು. ಬ್ರಹ್ಮನು ಇವರಿಗೆ ಪ್ರಜಾವೃದ್ಧಿ ಮಾಡಲು ತಿಳಿಸಿದಾಗ ಸನಕಾದಿಗಳು ನಮಗೆ ಅದರ ವಿಷಯವೇ ಬೇಡ ನಾವು ದೇವ ಸ್ಮರಣೆ ಮಾಡುತ್ತಾ ಹರಿನಾಮವೊಂದೇ ಸಾಕೆಮಗೆ ಎಂದು ಅಲ್ಲಿಂದ ಹೊರಡುತ್ತಾರೆ. ಬ್ರಹ್ಮನು ಇರಿಸು ಮುರುಸಾಗಿ ತಾನು ಸೃಷ್ಟಿಸಿದ ಮಕ್ಕಳೇ ತನ್ನ ಮಾತನ್ನ ಕೇಳಲ್ವಲ್ಲ ಎಂದು ಬೇಸರಪಟ್ಟ.
ನಂತರ ಈ ಸನಕಾದಿಗಳು ಹರಿನಾಮ ಸ್ಮರಣೆ ಮಾಡುತ್ತಾ ಎಲ್ಲಾ ಲೋಕಗಳನ್ನು ಸುತ್ತುತ್ತಿರುತ್ತಾರೆ. ಇವರು ಅರಿಷಡ್ವರ್ಗಗಳನ್ನು ತಮ್ಮ ಬಳಿಗೆ ಸುಳಿಯಲು ಅವಕಾಶ ಕೊಡದೇ ಐದು ವರ್ಷದ ಬಾಲಕರಿದ್ದಾಲೇ ದೇವರ ಸ್ಮರಣೆ ಮಾಡುತ್ತಿರುತ್ತಾರೆ. ಹೀಗೇ ಸ್ಮರಣೆ ಮಾಡುತ್ತಾ ಸಕಲ ಲೋಕಗಳನ್ನು ಸುತ್ತಿ ದೇವರನ್ನು ಕಾಣಲು ವೈಕುಂಠದ ಆರು ಬಾಗಿಲುಗಳನ್ನ ದಾಟಿ ಏಳನೇ ಬಾಗಿಲಿನ ಬಳಿ ಬಂದಾಗ ಅಲ್ಲಿ ಈ ಸನಕಾದಿಗಳನ್ನು ಒಳಗೆ ಹೋಗಲು ಬಿಡದೆ ತಡೆದವರು ಜಯ ವಿಜಯರು.
ಈ ಜಯ ವಿಜಯರು ಯಾರು? ಸಾಮಾನ್ಯವಾಗಿ ನಾವು ಯಾವುದೇ ದೇವಸ್ಥಾನಗಳಿಗೆ ಅದರಲ್ಲೂ ವಿಷ್ಣುವಿನ, ರಾಮನ, ಕೃಷ್ಣನ, ನಾರಾಯಣನ, ನರಸಿಂಹನ, ವೆಂಕಟೇಶ್ವರನ ದೇವಲಾಯಗಳಿಗೆ ಭೇಟಿಕೊಟ್ಟಾಗ ಹೊರಗೆ ಅಂದರೇ ಗರ್ಭಗುಡಿಯ ಹೊರಗೆ ಎಡ ಬಲದಲ್ಲಿ ನಾಲ್ಕು ಕೈಗಳುಳ್ಳ, ಕಿರೀಟಧಾರಿಯಾಗಿರುವ, ಗದಾಪಾಣಿಗಳನ್ನು ಹಿಡಿದಿರುವ ಎರಡು ದೇವತೆಗಳ ರೂಪದ ಕೆತ್ತನೆ ಅಥವಾ ಶಿಲೆಗಳಿರುತ್ತವೇ ಆ ಶಿಲೆಗಳೇ ನಾರಾಯಣನ ದ್ವಾರಪಾಲಕರಾದ ಜಯ ವಿಜಯರು.
ಇವರು ಸನಕಾದಿಗಳನ್ನು ತಡೆದಾಗ ಕೋಪಗೊಂಡ ಸನಕಾದಿಗಳು ತಮ್ಮ ಅಂತರಾತ್ಮನಾದ ಭಗವಂತನನ್ನು ಕಾಣಲು ಬಂದ ನಮ್ಮಂತ ಭಕ್ತರಿಗೆ ಒಳಗೆ ಹೋಗಲು ಅವಕಾಶ ಮಾಡಿಕೊಡದೆ, ನಮ್ಮನ್ನು ತಡೆಯುತ್ತಿರುವ ನೀವು ನಮಗೆ ಬುದ್ದಿಯಿಲ್ಲದ ಮಾನವರಂತೆ ವರ್ತಿಸಿದ್ದಿರಿ. ಹಾಗಾಗಿ ನೀವು ಮುಂದೆ ಮನುಷ್ಯರಾಗಿ ಜನಿಸಿ ಎಂದು ಶಾಪ ನೀಡುತ್ತಾರೆ.
ಈ ಜಗಳದ ಸದ್ದು ಕೇಳಿ ಸಾಕ್ಷಾತ್ ನಾರಾಯಣನೇ ಅಲ್ಲಿಗೆ ಬಂದಾಗ ಹರಿಯ ಪಾದಕೇರಗಿ, ಸಾಷ್ಟಾಂಗ ನಮಸ್ಕಾರ ಮಾಡಿ, ದುಃಖ ಪಡುತ್ತಾರೆ. ಭಗವಂತ ಏಕೆಂದು ಕೇಳಿದಾಗ ಹರಿಯ ಬಳಿಗೆ ಬಂದು, ಹರಿಯ ದ್ವಾರಪಾಲಕರಿಗೆ ಶಾಪಕೊಡುವಷ್ಟು ಕೋಪ ಮಾಡಿಕೊಂಡ ನಾವು ಭಕ್ತರಲ್ಲ ನಮ್ಮನ್ನು ಮನ್ನಿಸಬೇಕೆಂದು ಕೇಳುತ್ತಾರೆ. ಹರಿಯು ಅವರನ್ನು ಮನ್ನಸಿ, ಎಲ್ಲವೂ ನನ್ನಿಚ್ಚೆಯಂತೆಯೇ ನಡೆದಿದೆ ಎಂದು ಅವರನ್ನು ಅಲ್ಲಿಂದ ಕಳುಹಿಸುತ್ತಾನೆ. ಆಗ ಜಯ ವಿಜಯರು ತಮ್ಮ ತಪ್ಪನ್ನು ಮನ್ನಿಸುವಂತೆ ಕೇಳಿದಾಗ ಹರಿಯು ನಸುನಕ್ಕು ನಿಮಗೆ ಈ ಶಾಪ ಹಿಂದೆಯೇ ನೀವು ಲಕ್ಷ್ಮಿಯನ್ನು ತಡೆದಾಗಲೇ ಆಗಬೇಕಿತ್ತು. ಆದರೇ ಅದು ಇಂದು ಆಗಿದೆ. ಮನ್ನಿಸಬೇಕೆಂದು ಮರಳಿ ಮರಳಿ ಕೇಳಿದಾಗ ಹರಿಯು ಮಾನವರಾಗಿ ಏಳು ಜನ್ಮ ಪಡೆದು ನನ್ನ ಭಕ್ತಾರಗಿರುತ್ತೀರೋ ಅಥವಾ ದೈತ್ಯರಾಗಿ ಮೂರು ಜನ್ಮ ಪಡೆದು ನನ್ನಿಂದ ಹತರಾಗುತ್ತಿರೋ ಎಂದಾಗ ಜಯ ವಿಜಯರು ಏಳು ಜನ್ಮ ನಿನ್ನಿಂದ ದೂರಾಗಿ ಇರಲಾರೆವು ಮೂರೇ ಜನ್ಮ ಸಾಕು ಎಂದು ಹೇಳುತ್ತಾರೆ.
ಮುಂದೆ ಇವರೇ ಹಿರಣ್ಯಾಕ್ಷ ಹಿರಣ್ಯಕಶ್ಯಪರಾಗಿ ಜನಸಿ ವರಾಹ ರೂಪದಿಂದ ಹಿರಣ್ಯಾಕ್ಷನು ಹತನಾದರೆಡ ಹಿರಣ್ಯಕಶಪನು ನಾರಸಿಂಹನ ಅವಾತರದಿಂದ ಹತನಾಗುತ್ತಾನೆ. ತ್ರೇತಾಯುಗದಲ್ಲಿ ರಾವಣ ಕುಂಭಕರ್ಣರಾಗಿ ಶ್ರೀರಾಮನಿಂದ ಸಾಯುತ್ತಾರೆ. ದ್ವಾಪರಯುಗದಲ್ಲಿ ಶಿಶುಪಾಲ ದಂತವಕ್ರರಾಗಿ ಶ್ರೀ ಕೃಷ್ಣನಿಂದ ಹತರಾಗುತ್ತಾರೆ.
ಒಂದು ವೇಳೆ ಆ ಸನಕಾದಿಗಳು ಅಂದು ಶಾಪ ಕೊಡದೇ ಹೋಗಿದ್ದರೆ ರಾಮಾಯಣ, ಮಹಾಭಾರತ, ಭಾಗವತದಂಥ ಮಹಾನ್ ಕಥೆಗಳು ಮತ್ತು ಶ್ರೀರಾಮ, ಶ್ರೀಕೃಷ್ಣ, ನರಸಿಂಹ, ವರಾಹರಂಥ ಅವತಾರಗಳು ನಮಗೆ ಕೇಳಲು, ನೋಡಲು ಸಾಧ್ಯವಾಗುತ್ತಿರಲಿಲ್ಲ.