ಭಾಷೆ ಎಂದರೆ ಬರೀ ಮಾತಲ್ಲ. ಒಂದು ಭಾಷೆಯೊಂದಿಗೆ ಆ ಪ್ರದೇಶದ ಸಂಸ್ಕೃತಿ, ಆಚಾರ ವಿಚಾರ, ಇತಿಹಾಸ, ಪರಂಪರೆ, ಜನ ಜೀವನ ಎಲ್ಲವೂ ಬೆಸೆದುಕೊಂಡಿರುತ್ತದೆ. ಹೀಗಾಗಿ ತಿಳಿದವರು ಒಂದು ಭಾಷೆ ಸತ್ತರೆ ಅದು ಬರೀ ಭಾಷೆಯ ಅಳಿವಲ್ಲ. ಅದರ ಜೊತೆಗೆ ಒಂದು ಭವ್ಯ ಸಂಸ್ಕೃತಿ ಮತ್ತು ಪರಂಪರೆಯೂ ಸಾಯುತ್ತದೆ ಎಂದು ಹೇಳಿದ್ದಾರೆ. ಈ ಮಾತು ಈಗ ನಮ್ಮ ತುಳು ಭಾಷೆಯ ವಿಚಾರದಲ್ಲಿ ನಿಜವಾಗುತ್ತಿರುವ ಅಪಾಯ ಗೋಚರಿಸುತ್ತಿದೆ. ಇನ್ನೇನು ಒಂದು ತಿಂಗಳಲ್ಲಿ ನಾವು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಳ್ಳಲಿದ್ದೇವೆ. ಕನ್ನಡ ಭಾಷೆಯ ಬಗ್ಗೆ ಎಲ್ಲೆಡೆ ಅಭಿಮಾನ ಉಕ್ಕೇರುತ್ತದೆ. ಕನ್ನಡ ನಮ್ಮ ರಾಜ್ಯದ ಅಧಿಕೃತ ಭಾಷೆ ಹೀಗಾಗಿ ಭಾಷೆ ಬಗ್ಗೆ ಅಭಿಮಾನ ಪಟ್ಟುಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ ಇದೇ ವೇಳೆ ಕರ್ನಾಟಕದಲ್ಲಿ ಕನ್ನಡದ ಬಳಿಕ ಅತಿ ಹೆಚ್ಚು ಜನರು ಮಾತನಾಡುವ ತುಳು ಭಾಷೆಯ ಸ್ಥಾನಮಾನದ ಬಗ್ಗೆ ಅವಲೋಕಿಸಿದರೆ ಖೇದವಾಗುತ್ತಿದೆ.
ದಕ್ಷಿಣ ಭಾರತದ ಐದು ಪ್ರಮುಖ ಭಾಷೆಗಳನ್ನು ಪಂಚ ದ್ರಾವಿಡ ಭಾಷೆಗಳು ಎನ್ನುತ್ತಾರೆ. ತಮಿಳು, ಕನ್ನಡ, ಮಲಯಾಳಂ, ತೆಲುಗು ಮತ್ತು ತುಳು ಈ ಪಂಚ ದ್ರಾವಿಡ ಭಾಷೆಗಳು. ಈ ಪೈಕಿ ಮೊದಲ ನಾಲ್ಕು ಭಾಷೆಗಳು ಸಂವಿಧಾನದ 8ನೇ ಶೆಡ್ಯೂಲ್ ನಲ್ಲಿ ಅಧಿಕೃತ ಭಾಷೆಯಾಗಿ ಸ್ಥಾನ ಪಡೆದಿದೆ. ಆದರೆ ತುಳು ಈ ವಿಚಾರದಲ್ಲಿ ಬಹಳ ಹಿಂದುಳಿದಿದೆ. ಯುನೆಸ್ಕೋ ಪ್ರಕಟಿಸಿದ ‘ಅಟ್ಲಾಸ್ ಆಫ್ ದಿ ವರ್ಲ್ಡ್ಸ್ ಲ್ಯಾಂಗ್ವೇಜಸ್ ಇನ್ ಡೇಂಜರ್’ ಪ್ರಕಾರ ತುಳು ಈಗ ಅಪಾಯದಲ್ಲಿರುವ ಭಾಷೆಯಾಗಿದೆ. ಯಾಕೆ ನಮ್ಮ ಭಾಷೆಗೆ ಈ ಗತಿ ಬಂತು ಎಂಬುದರ ಬಗ್ಗೆ ಈಗಾಗಲೇ ಬಹಳಷ್ಟು ವಿಚಾರ ವಿಮರ್ಶೆಗಳು ನಡೆದಿವೆ. ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಬಹಳಷ್ಟು ಪ್ರಯತ್ನಗಳೂ ಆಗಿವೆ ಮತ್ತು ಆಗುತ್ತಿವೆ. ತುಳು ಭಾಷೆಯ ಅಭಿವೃದ್ಧಿಗಾಗಿ ಪ್ರತ್ಯೇಕ ಅಕಾಡೆಮಿಯೂ ಇದೆ. ಇಷ್ಟೆಲ್ಲಾ ಇದ್ದರೂ ಜನರಿಂದ ತುಳು ದೂರವಾಗುತ್ತಿರುವುದೇಕೆ ಎನ್ನುವುದು ಚಿಂತಿಸಬೇಕಾದ ವಿಚಾರ.
ತುಳು ಭಾಷೆ ಉಳಿಸಿಕೊಳ್ಳುವ ಈಗಿನ ಪ್ರಯತ್ನಗಳು ಕಳೆದ ಕೆಲವು ವರ್ಷಗಳಿಂದೀಚೆಗೆ ತುಳು ಭಾಷೆಯ ಮೇಲೆ ಸಾಕಷ್ಟು ಗಮನ ಹರಿಸಲಾಗುತ್ತಿದೆ ಎನ್ನುವುದು ಬಹಳ ಖುಷಿಯ ಸಂಗತಿ. ಅಕಾಡೆಮಿ, ಅಧ್ಯಯನ ಪೀಠ, ಪಠ್ಯ, ಲಿಪಿ ಶೋಧನೆ, ಸಾಹಿತ್ಯ ರಚನೆಯಂಥ ಪ್ರಯತ್ನಗಳು ಆಡಳಿತ ನೆಲೆಯಲ್ಲಿ ಆಗುತ್ತಿದ್ದರೆ ಅನೇಕಾನೇಕ ಸಂಘ ಸಂಸ್ಥೆಗಳು ತುಳು ಅಭಿಮಾನವನ್ನು ಎತ್ತಿ ಹಿಡಿಯಲು ಸ್ವತಂತ್ರ ನೆಲೆಯಲ್ಲಿ ವಿವಿಧ ರೀತಿಯ ಪ್ರಯತ್ನಗಳನ್ನು ನಡೆಸುತ್ತಿವೆ. ತುಳು ನಮ್ಮ ಮಾತೃಭಾಷೆ. ಅದನ್ನು ನಾವು ಉಳಿಸಿ ಬೆಳೆಸಬೇಕು ಎಂಬ ಜಾಗೃತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸಂತೋಷದ ಸಂಗತಿ.
ತುಳುನಾಡು ಮಾತ್ರವಲ್ಲ ತುಳುವರು ನಮ್ಮ ಹೋದಲ್ಲಿ ಕೂಡ ತಮ್ಮ ಮಾತೃಭಾಷೆಯ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಮುಂಬೈ, ಬರೋಡದಂಥ ದೂರದ ಊರುಗಳಲ್ಲಿ ಈಗ ತುಳು ಸಂಘ ಸಂಸ್ಥೆಗಳು ಇವೆ ಎನ್ನುವುದು ಅಭಿಮಾನ ಉಕ್ಕೇರಿಸುವ ಸಂಗತಿ. ಬೇರೆ ಮಣ್ಣಿನಲ್ಲಿದ್ದರೂ, ಪೂರ್ಣವಾಗಿ ಅನ್ಯ ಸಂಸ್ಕೃತಿಯಲ್ಲಿ ಬದುಕುತ್ತಿದ್ದರೂ ತುಳುವರು ತಮ್ಮ ಮೂಲ ಬೇರನ್ನು ಮರೆಯುತ್ತಿಲ್ಲ ಎಂಬ ವಿಚಾರ ತುಳು ಭಾಷೆಗೆ ಅಳಿವಿಲ್ಲ ಎಂಬುದನ್ನು ಸೂಚಿಸುತ್ತಿದೆ. ಈ ನಿಟ್ಟಿನಲ್ಲಿ ಗೋವಾದಲ್ಲಿರುವ ತುಳುವರು ಕೂಡ ತುಳುಕೂಟ ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡು ನಮ್ಮ ಭಾಷೆ ಮತ್ತು ಸಂಸ್ಕೃತಿಯ ಕಂಪು ಪಸರಿಸಲು ಮುಂದಾಗಿದ್ದೇವೆ.
ಯಾವುದೇ ಭಾಷೆಯನ್ನಾದರೂ ಉಳಿಸುವುದು ಸಾಹಿತಿಗಳ, ಸಂಘ ಸಂಸ್ಥೆಗಳ ಅಥವಾ ಸರಕಾರದ ಕೆಲಸ ಮಾತ್ರವಲ್ಲ. ಅದು ಜನರ ಭಾಷೆಯಾಗಿ ಬಳಕೆಯಾಗುತ್ತಿರಬೇಕು. ಆ ಭಾಷೆಯನ್ನು ಮಾತನಾಡುವ ಜನರಿಗೆ ತಮ್ಮ ಭಾಷೆಯ ಮೇಲೆ ಅಭಿಮಾನ ಹುಟ್ಟಬೇಕು. ಅದು ನಮ್ಮ ಮೂಲ ಸಂಸ್ಕೃತಿ ಎಂಬ ಅರಿವು ಇರಬೇಕು. ನಮ್ಮ ಮಕ್ಕಳು ಯಾವುದೇ ಭಾಷೆಯಲ್ಲಾದರೂ ಕಲಿಯಲಿ. ಆದರೆ ಮನೆಯಲ್ಲಿ ಅವರು ತುಳುವರಾಗಿಯೇ ಇರಬೇಕು. ಮಕ್ಕಳು ಇಂಗ್ಲಿಷ್ ಮೀಡಿಯಂ ಕಲಿಯುತ್ತಾರೆ ಎಂಬ ಕಾರಣಕ್ಕೆ ಹೆತ್ತವರು ಅವರ ಜೊತೆ ಇಂಗ್ಲಿಷ್ ನಲ್ಲಿ ಮಾತನಾಡಲಾರಂಭಿಸಿದರೆ ಕ್ರಮೇಣ ಆ ಮನೆಯಲ್ಲಿ ಭಾಷೆ ಸಾಯತೊಡಗುತ್ತದೆ. ಹೀಗಾಗದಂತೆ ನೋಡಿಕೊಳ್ಳಬೇಕಾದದು ನಮ್ಮ ಕಾಳಜಿಯಾಗಿರಬೇಕು ಎನ್ನುವುದಷ್ಟೇ ಆಶಯ.
ಗಣೇಶ್ ಶೆಟ್ಟಿ ಇರ್ವತ್ತೂರು
ಅಧ್ಯಕ್ಷರು, ತುಳುಕೂಟ ಗೋವಾ