ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮಹತ್ವದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಅಂಬಿ ನಿಂಗೆ ವಯಸ್ಸಾಯ್ತೋ’ ಖ್ಯಾತಿಯ ಗುರುದತ್ ಗಾಣಿಗ ನಿರ್ದೇಶನದ ಈ ಚಿತ್ರದ ರಾಜ್ ಬಿ ಶೆಟ್ಟಿ ಪಾತ್ರದ ಫಸ್ಟ್ ಲುಕ್ ಇದೀಗ ಬಿಡುಗಡೆಯಾಗಿದೆ. ಅದ್ದೂರಿಯಾಗಿ ಗಮನ ಸೆಳೆಯುವಂತೆ ಫಸ್ಟ್ ಲುಕ್ ಟೀಸರ್ ಕೂಡ ಮೂಡಿಬಂದಿದೆ. ರಾಜ್ ಬಿ ಶೆಟ್ಟಿ ನಟನೆ, ನಿರ್ಮಾಣದ ‘ಸು ಫ್ರಂ ಸೋ’ ಭಾರಿ ಜನಪ್ರಿಯತೆ ಪಡೆದ ಬೆನ್ನಲ್ಲಿಯೇ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಇಲ್ಲಿಯವರೆಗೂ ಚಿತ್ರತಂಡ ರಾಜ್ ಬಿ ಶೆಟ್ಟಿ ನಟಿಸುತ್ತಿರುವ ಸಂಗತಿಯನ್ನು ಗುಟ್ಟಾಗಿ ಇಟ್ಟಿತ್ತು. ಈ ಚಿತ್ರದ ಫಸ್ಟ್ ಲುಕ್ ಹೊರತಾಗಿ ಬೇರೆ ಯಾವುದೇ ಮಾಹಿತಿಯನ್ನು ಚಿತ್ರತಂಡ ನೀಡಿಲ್ಲ. ಮಾವೀರ ಎಂಬ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕತೆಯನ್ನು ಒಳಗೊಂಡಿರುವ ಸಿನಿಮಾವಾಗಿದ್ದು, ಪ್ರಜ್ವಲ್ ದೇವರಾಜ್ ವಿಶಿಷ್ಟ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಎಕ್ಕ’ ಚಿತ್ರದಲ್ಲಿ ಜನಪ್ರಿಯತೆ ಗಳಿಸಿದ್ದ ಸಂಪದಾ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ವಿಕೆ ಫಿಲ್ಮ್ ಅಸೋಸಿಯೇಷನ್ ಜೊತೆಗೆ ಗಾಣಿಗ ಫಿಲ್ಮ್ಸ್ ನಿರ್ಮಿಸುತ್ತಿರುವ ಈ ಚಿತ್ರ ಹಳ್ಳಿ ಹಿನ್ನೆಯಲ್ಲಿ ಮೂಡಿ ಬರುತ್ತಿದೆ. ಮಿತ್ರಾ ಮತ್ತು ರಮೇಶ್ ಇಂದಿರಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಕುರಿತು ಗುರುದತ್ ಗಾಣಿಗ, ‘ಕರಾವಳಿ ಭಾಗದ ಕತೆಗೆ ಕರಾವಳಿಯ ಪ್ರಮುಖ ನಟರೊಬ್ಬರು ಜೊತೆಯಾಗಿರುವುದು ಈ ಚಿತ್ರಕ್ಕೆ ಪೂರ್ಣತೆ ತಂದಿದೆ. ರಾಜ್ ಬಿ ಶೆಟ್ಟರು ಈ ಚಿತ್ರದ ಕಥೆಯಿಂದಲೇ ಈ ಸಿನಿಮಾ ಒಪ್ಪಿಕೊಂಡಿದ್ದಾರೆ. ಅವರ ಪಾತ್ರ ಪ್ರೇಕ್ಷಕರಿಗೆ ಅಚ್ಚರಿ ಒದಗಿಸಲಿದೆ’ ಎನ್ನುತ್ತಾರೆ.