ಎಲ್ಲರಿಗೂ ಶರನ್ನವರಾತ್ರಿ ಹಬ್ಬದ ಹಾರ್ದಿಕವಾದ ಶುಭಾಶಯಗಳು. ಈಗಾಗಲೇ ನಾವೆಲ್ಲರೂ ಭಕ್ತಿ ಶ್ರಧ್ದೆಯಿಂದ ಆಚರಿಸುವ ಮಹಾನ್ ಹಬ್ಬ ನವರಾತ್ರಿ ಫ್ರಾರಂಭವಾಗಿದೆ. ನಿರಂತರ ಹತ್ತು ದಿನಗಳ ಕಾಲ ಆಚರಿಸುವ ಧೀರ್ಘವಾದ ಈ ದಸರಾ ಹಬ್ಬವು ದೇಶದೆಲ್ಲೆಡೆ ವಿಶೇಷ ಕಳೆ ಕಟ್ಟಿದೆ. ಹಬ್ಬವೆಂಬುದು ಕೇವಲ ಭಗವಧಾರಾಧನೆಗೆ ಮಾತ್ರ ಸೀಮಿತವಾಗಿರದೆ, ಅದು ಹಲವಾರು ವೈಚಾರಿಕ, ವೈಜ್ಞಾನಿಕ, ಧಾರ್ಮಿಕ ನಂಬಿಕೆಗಳನ್ನು ಒಳಗೊಂಡಿದೆ ಎಂಬುದು ಸತ್ಯ. ಕಾಣದ ಭಗವಂತನ ಕಲ್ಪನೆಯೊಂದಿಗೆ ಸನಾತನವಾದ ಮೂಲ ನಂಬಿಕೆಯೊಂದಿಗೆ ಕಾಣುವ ವ್ಯಕ್ತಿಗಳ ಅಂದರೆ ಮನುಷ್ಯ ಮನುಷ್ಯನ ಸಂಬಂಧಗಳ ಕೊಂಡಿಯನ್ನು ಬೆಸೆಯುತ್ತವೆ ಈ ಹಬ್ಬಗಳು. ಇದು ಮುಖ್ಯವಾಗಿ ಆಗಬೇಕಾದುದು ಕೂಡಾ. ನಮ್ಮ ಇಂದಿನ ಮಕ್ಕಳಿಗೆ ಅನಿಸಬಹುದು ಏನು ಕರ್ಮ ದಿನವೂ ಹಬ್ಬ ಎಂದು!. ಅದಕ್ಕೆ ಕಾರಣ ನಾವೇ. ನಮ್ಮ ದಿನನಿತ್ಯದ ಬದುಕಲ್ಲಿ ಬರುವ ಹಬ್ಬ ಹುಣ್ಣಿಮೆಗಳು ಏನದರ ಅರ್ಥ? ಆ ಧರ್ಮದ ಮರ್ಮ ನಮಗೆ ಅಗತ್ಯವೇ ಇಲ್ಲ ಎಂಬಂತಾಗಿದೆ!. ಯಾಕೆ ಹೀಗೆ ಎಂದು ಕೇಳಿದರೆ, ಈಗಿನ ಹೆಚ್ಚಿನ ಎಲ್ಲರ ಮನೆಯಲ್ಲಿನ ಮಕ್ಕಳಿಗೆ ನಾವು ಕಳುಹಿಸುವ ಶಾಲೆ. ಅಲ್ಲಿ ಕಲಿಸುವ ಆ ಪಾಠ ಅದೇ ಅನಿವಾರ್ಯ ಮತ್ತೆ ಅಗತ್ಯ ಎಂಬಂತಾಗಿದೆ. ಇದರಲ್ಲಿ ಬದುಕಿಗೆ ಬೇಕಾದ್ದು ಏನಿಲ್ಲದಿದ್ದರೂ ಏನೋ ಆಕಳಿಸುತ್ತಲೇ ಕಲಿತು ಗಿಣಿ ಪಾಠ, ಬಾಯಿಪಾಠ ಮಾಡಿ ಪರೀಕ್ಷೆಯಲ್ಲಿ ನೂರಕ್ಕೆ ನೂರೋ ತೊಂಬತ್ತೊಂಬತ್ತೋ ಬಂದು ಪೇಪರ್ ನಲ್ಲಿ, ಪ್ಲೆಕ್ಸ್ ಗಳಲ್ಲಿ ರಾರಾಜಿಸಿ ಸಂಘ ಸಂಸ್ಥೆಗಳ ಸನ್ಮಾನ ಸ್ವೀಕರಿಸುವವತ್ತ ಮಾತ್ರ ನಮ್ಮ ಆಸಕ್ತಿ ಮುಂದುವರಿದಿದೆ. ಬದುಕಿಗೆ ಬೇಕಾದ ಪಾಠ ಹೇಳುವ ಈ ಹಬ್ಬಗಳ ಹಿನ್ನೆಲೆ, ಅದರ ಆಧ್ಯಾತ್ಮಿಕ ಪರಂಪರೆಯುಳ್ಳ ಕಥೆಗಳ ಅರ್ಥ ಇದರ ಕುರಿತು ತಿಳಿದು ಏನಾಗಬೇಕು ಎಂಬ ತಾತ್ಸಾರ ಪ್ರವೃತ್ತಿ ಬೆಳೆದಿರುವುದು ಮಾತ್ರ ಬೇಸರದ ಸಂಗತಿ. ಇದಕ್ಕೆ ಅಪವಾದವೆಂಬಂತೆ ಏನೋ ಕೆಲವು ಕಡೆ ಕೆಲ ಮಕ್ಕಳು ಈ ಬಗ್ಗೆ ಆಸಕ್ತಿ ವಹಿಸುವುದು ಸ್ವಲ್ಪ ಸಮಾಧಾನದ ಸಂಗತಿ ಅಷ್ಟೇ.
ನವರಾತ್ರಿ ಯ ಈ ಪರ್ವಕಾಲದಲ್ಲಿ ತಿಳಿಯಲೇ ಬೇಕಾದ ಕೆಲ ವಿಚಾರಗಳು ಹೀಗಿವೆ. ಶ್ರೀ ಭಾಗವತ ಮಹಾತ್ಮೆಯಲ್ಲಿ ಪ್ರಹ್ಲಾದರಾಯರು ಭಕ್ತಿಯ ಸ್ವರೂಪವನ್ನು ಒಂಬತ್ತು ರೀತಿಯಿಂದ ವಿಂಗಡಿಸಿ ಹೇಳಿದ್ದಾರೆ. 1.ಶ್ರವಣಂ, 2.ಕೀರ್ತನಂ, 3.ವಿಷ್ಣೋಸ್ಮರಣಂ, 4.ಪಾದ ಸೇವನಂ, 5.ಅರ್ಚನಂ, 6.ವಂದನಂ, 7.ದಾಸ್ಯಂ, 8.ಸಖ್ಯಂ, 9.ಆತ್ಮ ನಿವೇದನಂ.
ಈ ಒಂಬತ್ತು ಭಕ್ತಿಗಳಲ್ಲಿ ಒಂದೂಂದೆ ಭಕ್ತಿಯಿಂದ ಯಾರು ಯಾರು ಸನ್ಮಾರ್ಗಿಗಳಾಗಿ ಭಗವತ್ ಭಕ್ತಿಯ ಮೂಲಕ ಸದ್ಗತಿ ಹೊಂದಿದರು, ಚಿರಂಜೀವಿಗಳಾದರು ಎನ್ನುವುದು ಉದ್ಭೋದಕವು. ನವ ಭಕ್ತಿಯನ್ನು ಆಚರಿಸುವವರಿಗೆ ಆಗುವ ಒಂದು ಶ್ಲೋಕ ಸಂಗ್ರಾಹ್ಯವಾಗಿದೆ. “ಶ್ರೀ ವಿಷ್ಣೊಃ ಶ್ರವಣೋ ಪರೀಕ್ಷಿದಭವತಃ ವೈಯಾಸಿಕಿಃ ಕೀರ್ತನೆ ಪ್ರಹ್ಲಾದಃ ಸ್ಮರಣೆ ಸೇವನವಿದೌ ಲಕ್ಷ್ಮಿಃ ಪೃಥುಃ ಪೂಜನೇ ಅಕ್ರೂರ ಸಾತ್ವ್ತಭಿವಾದನೇ ಚ ಹನುಮಾನ್ ದಾಸ್ಯೇ ಚ ಸಖ್ಯೇರ್ನಜುನಃ ಸರ್ವ ಸ್ವಾತ್ನಿವೇದನೇ ಬಲಿರಭೂತ್ ಕೈವಲ್ಯ ಮೇಷಾಂಪದಮ್” ಎಂಬುದಾಗಿ. ಇದರರ್ಥ, ಶ್ರವಣದಿಂದ ಪರೀಕ್ಷಿತ ಮಹಾರಾಜ, ವೈಯಾಸಿಕಿ ಎಂಬಾತ ಕೀರ್ತನೆಯಿಂದ, ಪ್ರಹ್ಲಾದ ಸ್ಮರಣೆಯಿಂದ, ಲಕ್ಷ್ಮೀ ದೇವಿ ಸೇವನೆಯಿಂದ, ಪ್ರಥು ಮಹಾರಾಜ ಪೂಜೆಯಿಂದ, ಅಕ್ರೂರ ಅಭಿವಾದನೆ ಅಥವಾ ವಂದನೆಯಿಂದ, ಹನುಮಂತ ದಾಸ್ಯದಿಂದ, ಅರ್ಜುನನು ಸಖ್ಯದಿಂದ, ಬಲಿ ಚಕ್ರವರ್ತಿ ಆತ್ಮ ನಿವೇದನೆ ಅಥವಾ ಸರ್ವ ಸಮರ್ಪಣೆಯಿಂದ ಕೈವಲ್ಯ ಪದವಿಯನ್ನು ಅಥವಾ ಮೋಕ್ಷ ಪದವನ್ನು ಪ್ರಾಪ್ತಿಸಿಕೊಂಡವರು ಎಂಬುದಾಗಿದೆ. ಇವರು ಮಾತ್ರವಲ್ಲದೆ ಇಂತಹ ಅದೆಷ್ಟೋ ಭಕ್ತಾಗ್ರೇಸರರು ಈ ಒಂಬತ್ತು ವಿಧದ ಭಕ್ತಿಯ ಮಾರ್ಗದ ಮುಖಾಂತರ ಭಗವಂತನ ಅನುಗ್ರಹಕ್ಕೆ ಪಾತ್ರರಾದವರಿದ್ದಾರೆ. ಹಾಗಾಗಿ ಈ ಒಂಬತ್ತು ಎನ್ನುವುದು ವಿಶೇಷ ಸಂಖ್ಯೆ. ಒಂಬತ್ತಕ್ಕೆ ಸಂಖ್ಯಾಶಾಸ್ತ್ರದಲ್ಲೂ ವಿಶೇಷ ಮಹತ್ವವಿದೆ. ಮೂರರ ಗುಣಲಬ್ಧವಾದ ಒಂಬತ್ತು ದೇವೀ ಆರಾಧನೆಯಲ್ಲೂ ಪ್ರಮುಖವಾದುದು.‘ನವ’ ಎನ್ನುವುದಕ್ಕೆ ಎರಡು ಅರ್ಥಗಳಿವೆ. ಒಂದು ಹೊಸತು ಹಾಗೂ ಇನ್ನೊಂದು ಒಂಬತ್ತು. ಒಂಬತ್ತು ಸಂಖ್ಯೆಯಲ್ಲಿ ಒಂದು ವಿಶೇಷವಿದೆ. ಒಂಬತ್ತರ ಗುಣಾಕಾರದಲ್ಲಿ ಗುಣಲಬ್ಧವನ್ನು ಪರಸ್ಪರ ಕೂಡಿಸಿದರೆ ಒಂಬತ್ತೇ ಬರುವುದು. ಉದಾಹರಣೆಗೆ- 9×1= 9, 9×2= 18(1+8=9), 9×3=27(7+2=9). ಹೀಗೆ ನಮಗೆ ಕೊನೆಗೆ ಸಿಗುವುದು ಮತ್ತೆ ಒಂಬತ್ತೇ. ಹಾಗಾಗಿ ಒಂಬತ್ತನ್ನು ಪೂರ್ಣಸಂಖ್ಯೆ ಎಂದು ಕರೆಯುತ್ತಾರೆ.
ಶ್ರೀ ರಾಮಚಂದ್ರನ ಜನನವೂ ನವಮಿಯ ದಿನವೇ ಅದದ್ದು. ಶ್ರೀ ದೇವಿಯೂ ಎಷ್ಟೇ ಅವತಾರಗಳನ್ನು ತಾಳಿದರೂ ಕೊನೆಗೆ ಆದಿಶಕ್ತಿಯಾಗಿಯೇ ಉಳಿಯುವಳು. ಜ್ಯೋತಿಷ್ಯದ ಪ್ರಕಾರ ಸಂಖ್ಯಾಶಾಸ್ತ್ರದಲ್ಲಿ ಒಂಬತ್ತರ ಅಧಿಪತಿ ಕುಜಗ್ರಹ. ಈ ಗ್ರಹವನ್ನು ಪಾಪಗ್ರಹ ಅಥವಾ ಶಕ್ತಿಗ್ರಹ ಎಂದು ಕರೆಯಲಾಗಿದೆ. ಮನುಷ್ಯನ ಸಾಹಸ, ಧೈರ್ಯ ಮತ್ತು ಶಕ್ತಿಯನ್ನು ಈ ಗ್ರಹದ ಮೂಲಕವೇ ತಿಳಿಯಬಹುದು. ಆಂಗ್ಲ ಜ್ಯೋತಿಷ್ಯದ ಪ್ರಕಾರ ಕುಜನನ್ನು ‘ಯುದ್ಧದ ದೇವತೆ’ ಎಂತಲೂ ಕರೆಯುವರು.
ಅದೇ ರೀತಿ ಸಂಖ್ಯೆ 3ರ ಮಹತ್ವ:- ನವರಾತ್ರಿಯಲ್ಲಿ ದೇವಿಯನ್ನು ಮೂರು ರೂಪಗಳಲ್ಲಿ ಆಚರಿಸುತ್ತಾರೆ. ಅವು ಯಾವುವು ಎಂದರೆ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾ ಸರಸ್ವತಿ. ನವರಾತ್ರಿಯಲ್ಲಿ ಮೊದಲ ಮೂರು ದಿನಗಳು ಮಹಾ ಕಾಳಿಯನ್ನು ಆರಾಧಿಸಿದರೆ, ದ್ವಿತೀಯ ಮೂರು ದಿನಗಳಲ್ಲಿ ಮಹಾಲಕ್ಷ್ಮಿಯನ್ನು ನಂತರ 3 ದಿನಗಳಲ್ಲಿ ಮಹಾ ಸರಸ್ವತಿಯನ್ನು ಆರಾಧಿಸುವುದು ರೂಢಿಯಲ್ಲಿದೆ. ಮಹಾಕಾಳಿಯನ್ನು ಋಗ್ವೇದ ಸ್ವರೂಪಗಳಾಗಿ, ಮಹಾಲಕ್ಷ್ಮಿಯನ್ನು ಯಜುರ್ವೇದ ಸ್ವರೂಪಗಳಾಗಿ ಮತ್ತು ಮಹಾಸರಸ್ವತಿಯನ್ನು ಸಾಮವೇದ ಸ್ವರೂಪಳಾಗಿ ಪೂಜಿಸುವ ಸಂಪ್ರದಾಯವಿದೆ.
ಸಂಪತ್ತಿಗೆ ಮಹಾಲಕ್ಷ್ಮಿ, ತೇಜಸ್ಸು ಮತ್ತು ಶಕ್ತಿಗೆ ಮಹಾಕಾಳಿ ಮತ್ತು ಜ್ಞಾನವನ್ನೂ ನೀಡುವವಳು ಮಹಾ ಸರಸ್ವತಿ. ಹೀಗೆ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನೀ, ಕಾಲರಾತ್ರಿ, ಮಹಾಗೌರೀ ಮತ್ತು ಸಿಧ್ದಿದಾತ್ರಿ ಎಂಬ ಒಂಬತ್ತು ರೂಪಗಳಿಂದ ಆದಿಶಕ್ತಿಯ ಆರಾಧನೆಯು ವಿಶ್ವದಾದ್ಯಂತ ನಡೆಯುತ್ತದೆ. ಒಂದು ರೀತಿಯಲ್ಲಿ ಇದು ಪ್ರಕೃತಿಯ ಅಂದರೆ “ಸ್ತ್ರೀ” ಶಕ್ತಿಯ ಆರಾಧನೆ ಎಂದರೂ ತಪ್ಪಾಗದು.
3 ತತ್ವಗಳು: ಈ ಜಗತ್ತು ನಿಂತಿರುವುದೇ ಸೃಷ್ಟಿ, ಸ್ಥಿತಿ ಮತ್ತು ಲಯ ಎಂಬ ಮೂರು ತತ್ವಗಳ ಮೇಲೆಯೇ. ಈ ಕ್ರಮವನ್ನೂ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಪಾಲಿಸುತ್ತಾರೆ. ಆದರೆ ಈ ಮೂರು ಶಕ್ತಿಗಳ ಹಿಂದೆ ಇರುವುದೇ ಮಹಾತಾಯಿ ಜಗದಂಬೆ. ಈಕೆಯನ್ನು ಸಾವಿರಾರು ವರ್ಷಗಳಿಂದ ಆರಾಧಿಸಿಕೊಂಡು ಬರಲಾಗುತ್ತಿದೆ. ವರ್ಣಮಾಲೆಯಲ್ಲಿ ದೇವಿ (3 ಮಾತ್ರೆಯ ಸ್ವರೂಪದೇವಿ) : ದೇವಿಯು ಸ್ವಾಹಾ, ಸ್ವಧಾ ಮತ್ತು ವಷಟ್ ಎಂಬ ಮಂತ್ರಗಳ ಸ್ವರೂಪಳು. ಅ, ಉ, ಮ ಎಂಬ ಮೂರು ಮಾತ್ರೆಗಳ ಸ್ವರೂಪಳೂ. ಹಾಗಾಗಿ ಅವಳು “ಓಂಕಾರ” ಸ್ವರೂಪಳು. ವರ್ಣಮಾಲೆಯಲ್ಲಿರುವ ಶಕ್ತಿಯೂ ಅವಳದೇ. ಇವಳೇ ಮಹಾವಿದ್ಯೆಯೂ ಮತ್ತು ಮಹಾ ಮೋಹಕಳೂ ಆಗಿದ್ದಾಳೆ. ಮೂಲ ನಕ್ಷತ್ರ: 27 ನಕ್ಷತ್ರಗಳನ್ನು ಒಂಬತ್ತರ ಮೂರು ಗುಂಪುಗಳಾಗಿ ವಿಂಗಡಿಸಿರುವರು. ಅಶ್ವಿನಿಯಿಂದ ಆಶ್ಲೇಷ ನಕ್ಷತ್ರದ ತನಕ ಒಂದು ಗುಂಪು. ಮಖ ನಕ್ಷತ್ರದಿಂದ ಜೇಷ್ಠ ನಕ್ಷತ್ರದ ತನಕ ಇನ್ನೊಂದು ಗುಂಪು. ಮೂಲ ನಕ್ಷತ್ರದಿಂದ ರೇವತಿ ನಕ್ಷತ್ರದ ತನಕ ಮತ್ತೊಂದು ಗುಂಪು. ಮೂಲ ನಕ್ಷತ್ರ ಮೊದಲನೇ ನಕ್ಷತ್ರವಾಗಿದ್ದರಿಂದ ಅದಕ್ಕೆ ಋಷಿಗಳು ಮೂಲ ನಕ್ಷತ್ರ ಎಂದು ಕರೆದರು. ನವರಾತ್ರಿಯ 7ನೇ ದಿನ ಬರುವ ಮೂಲ ನಕ್ಷತ್ರದಂದು ಸರಸ್ವತೀ ದೇವಿಯನ್ನು ವಿಶೇಷವಾಗಿ ಪೂಜಿಸುವರು. ಸರಸ್ವತಿ ಎಂದರೆ, ‘ಹರಿಯುವವಳು’ ಎಂಬ ಅರ್ಥವೂ ಇದೆ. ಮಕ್ಕಳಿಗೆ ವಿದ್ಯಾರಂಭ ಮಾಡಲು ನವರಾತ್ರಿಯ 7ನೇ ದಿನ ಅತಿ ಶ್ರೇಷ್ಠ. ಏಕೆಂದರೆ ಆಕೆ ವಿದ್ಯಾದೇವಿ ಆಗಿರುವಳು. ಸಾಕ್ಷಾತ್ ಸರಸ್ವತಿಗೂ ಮೂಲ ನಕ್ಷತ್ರವೇ ಆಗಿರುವುದರಿಂದ ಈ ನಕ್ಷತ್ರದಿಂದ ದೋಷ ಬರುವುದು ಎಂದು ಹೇಳುವುದು ಸಮಂಜಸವಲ್ಲ. ಈ ನಕ್ಷತ್ರದಲ್ಲಿ ವಿವಾಹ, ಉಪನಯನ, ಗೃಹಪ್ರವೇಶ ಮುಂತಾದ ವಿಶೇಷ ಶುಭ ಕಾರ್ಯಗಳನ್ನು ಮಾಡಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿದೆ. ಆದ್ದರಿಂದ ಮೂಲ ನಕ್ಷತ್ರ ಶುಭ ನಕ್ಷತ್ರವೇ ಆಗಿದೆ. ರಾಹು ಕಾಲ: ರಾಹುಕಾಲದ ಸಮಯದಲ್ಲಿ ದುರ್ಗೆಯನ್ನು (ದೇವಿ) ಪೂಜಿಸುವುದರಿಂದ ರಾಹುದೋಷ ನಿವಾರಣೆ ಆಗುವುದು. ಏಕೆಂದರೆ ರಾಹುಗ್ರಹಕ್ಕೆ ದುರ್ಗೆಯೇ ಅಧಿಪತಿ. ರಾಹುಕಾಲದ ಸಮಯದಲ್ಲಿ ಲಿಂಬೆ ಹಣ್ಣಿನ ದೀಪವನ್ನು ದೇವಿಗೆ ಬೆಳಗುವುದರಿಂದ ನಮ್ಮ ಗ್ರಹಚಾರಗಳು ನಿವಾರಣೆಯಗುವುವು ಎಂಬ ನಂಬಿಕೆಯೂ ಇದೆ. ದುರ್ಗೆಯು ನಿಂಬಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡುವಾಗ ಏನಾದರೂ ವರ ಕೇಳು ಎಂದಳಂತೆ. ಅವನ ಅಪೇಕ್ಷೆಯಂತೆ ದೇವಿಗೆ ಯಾರು ನಿಂಬೆಹಣ್ಣಿನಿಂದ ದೀಪ ಹಾಗೂ ಹಾರವನ್ನು ಅರ್ಪಿಸುತ್ತಾರೋ ಅವರ ಕಷ್ಟಗಳನ್ನ ಪರಿಹಾರ ವಾಗುತ್ತದೆ ಎಂಬ ನಂಬಿಕೆ ಇದೆ.
ಪಂಚಾಂಗದ ಪ್ರಕಾರ ಆರು ಋತುಗಳು. ಎರಡು ತಿಂಗಳಿಗೆ ಒಂದು ಋತು. ಇದರಲ್ಲಿ ವಸಂತ ಕಾಲ ಮತ್ತು ಶರತ್ಕಾಲದಲ್ಲಿ ದೇವಿಯನ್ನು ಪೂಜಿಸುವರು. ಏಕೆಂದರೆ ಈ ಕಾಲದಲ್ಲಿ ರೋಗರುಜಿನಗಳು ಹೆಚ್ಚು. ಈ ಎರಡು ಋತುಗಳನ್ನು ‘ಯಮದಂಷ್ಟ್ರಾ’ ಎಂದು ಕರೆಯುತ್ತಾರೆ. ವಸಂತ ಕಾಲ ಎಂದರೆ ಚೈತ್ರ ಮಾಸ, ಶರತ್ಕಾಲ ಎಂದರೆ ಆಶ್ವೀಜ ಮಾಸ. ದುರ್ಗಾ ಸಪ್ತಶತಿ: ಹೆಸರೇ ಹೇಳುವಂತೆ ಇದರಲ್ಲಿ 700 ಶ್ಲೋಕಗಳಿವೆ. ಇದು ಋುಗ್ವೇದದಷ್ಟೇ ಪುರಾತನವಾದದ್ದು. ದೇವೀ ಪಾರಾಯಣಕ್ಕೆ ಹಾಗೂ ಚಂಡಿಕಾಯಾಗಕ್ಕೆ ಈ ಮಂತ್ರವನ್ನೇ ಬಳಸಲಾಗುತ್ತದೆ. ಇದರಲ್ಲೂ ನೀವು ಸಂಖ್ಯೆಯನ್ನು ಕಾಣಬಹುದು. ಇದರಲ್ಲಿ ಮೂರು ಚರಿತ್ರೆಗಳಿವೆ. ಪ್ರಥಮ ಚರಿತ್ರೆಯಲ್ಲಿ ಮಹಾಕಾಳಿಗೆ ಸಂಬಂಧಿಸಿದ ಶ್ಲೋಕ, ಎರಡನೇ ಚರಿತ್ರೆಯಲ್ಲಿ ಮಹಾಲಕ್ಷ್ಮಿಗೆ ಸಂಬಂಧಿಸಿದ ಶ್ಲೋಕಗಳು, ಮೂರನೇ ಚರಿತ್ರೆಯಲ್ಲಿ ಮಹಾಸರಸ್ವತಿಗೆ ಸಂಬಂಧಪಟ್ಟ ಶ್ಲೋಕಗಳು ಇವೆ. ಒಟ್ಟು 13 ಅಧ್ಯಾಯಗಳು ಇದರಲ್ಲಿವೆ. ಹೀಗೆ ಇನ್ನೂ ಅದೆಷ್ಟೋ ವಿಚಾರಗಳನ್ನು ಈ ನವರಾತ್ರಿಯ ಪರ್ವ ಕಾಲದಲ್ಲಿ ನಾವು ತಿಳಿದು ಆಚರಿಸಬೇಕಾದ ಅವಶ್ಯಕತೆ ಇದೆ.
ಭವತಾರಿಣಿಯಾದ ಮಹಾದೇವಿಯು ಜಗದ ಜಂಜಡಗಳನ್ನೆಲ್ಲಾ ದೂರ ಮಾಡಲಿ. ನಮ್ಮ ಮನದ ಅತಿ ಆಸೆ ದುರಾಸೆಗಳೆಂಬ ದುಷ್ಟ ರಾಕ್ಷಸರನ್ನು ವಧಿಸಿ, ಭಕ್ತಿ ಜ್ಞಾನ ವೈರಾಗ್ಯಗಳನ್ನು ಅನುಗ್ರಹಿಸಲಿ ಎಂಬ ಆಶಯದೊಂದಿಗೆ ಈ ನವರಾತ್ರಿಯು ನಮ್ಮೆಲ್ಲರಿಗೆ ಅರ್ಥಾತ್ ಸಕಲ ಲೋಕಕ್ಕೆ ಸನ್ಮಂಗಲವನ್ನುಂಟು ಮಾಡಲೆಂದು ಪ್ರಾರ್ಥಿಸುತ್ತೇನೆ.
-ಶರತ್ ಶೆಟ್ಟಿ ಪಡು