ಈಗ ಎಲ್ಲಾ ಸಂಸ್ಥೆಗಳು ಆಟಿಯನ್ನು ವೈವಿಧ್ಯಮಯವಾಗಿ ಆಚರಿಸುತ್ತಿದ್ದಾರೆ. ಇದು ನಮ್ಮ ಸಂಸ್ಕೃತಿಯ ತಿರುಳನ್ನು ತಿಳಿಸುತ್ತದೆ. ಇವತ್ತು ಈ ಸಮಿತಿ ಕೃಷಿ ಸಂಸ್ಕೃತಿಗೆ ವಿಶೇಷ ಮಹತ್ವ ನೀಡಿರುವುದು ಸಂತೋಷವಾಗಿದೆ. ನಾನು ಕೂಡಾ ಕೃಷಿಯ ಎಲ್ಲಾ ಬಗೆಯ ಕೆಲಸದಲ್ಲಿ ನನ್ನನ್ನು ತೊಡಗಿಸಿಕೊಂಡವನು ಎನ್ನಲು ಆನಂದವಾಗುತ್ತದೆ. ಇಲ್ಲಿನ ಕಾರ್ಯಾಧ್ಯಕ್ಷರಾದ ಸೂರಜ್ ಶೆಟ್ಟಿ ಅವರು ಬಹಳ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣಕ್ಕೆ, ವೈದ್ಯಕೀಯ ಕ್ಷೇತ್ರಕ್ಕೆ ಅಂಧೇರಿ ಬಾಂದ್ರಾದ ಕೊಡುಗೆ ಮಹತ್ವದ್ದು. ಇಂದು ಸಮಿತಿಯ ಪದಾಧಿಕಾರಿಗಳು ವಿಶೇಷ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟದ್ದನ್ನು ನೋಡಿ, ನಿಮ್ಮ ಮಾತುಗಳನ್ನು ಕೇಳಿ ಖುಷಿಯಾಗಿದೆ. ಮಹಿಳೆಯರನ್ನು ಸಾಂಘಿಕವಾಗಿ, ಸಾಂಸ್ಕ್ರತಿಕವಾಗಿ ಒಗ್ಗೂಡಿಸಿ ಪ್ರತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಶೋಭಾ ಅಮರನಾಥ ಶೆಟ್ಟಿ ಅವರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಮಿತಿ ಅಂದಿನಿಂದ ಇಂದಿನವರೆಗೂ ಎಲ್ಲಾ ವಿಧದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಆಟಿ ತಿಂಗಳ ಆಚರಣೆ ನಮ್ಮ ಸಂಸ್ಕೃತಿ ಸಂಸ್ಕಾರದ ಉಳಿವಿನೊಂದಿಗೆ ಸಹಭೋಜನದೊಂದಿಗೆ ಭಾಂಧವ್ಯವನ್ನು ಬೆಸೆಯುವ ಕೆಲಸ ಮಾಡುತ್ತಿದೆ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ ಭೋಜ ಶೆಟ್ಟಿ ಅವರು ಅಭಿಪ್ರಾಯ ಪಟ್ಟರು. ಅವರು ಬಂಟರ ಸಂಘದ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದವರು ಜುಲೈ 27 ರಂದು ಪೊವಾಯಿಯ ವ್ಯಿಂಡ್ ಬಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಆಟಿದ ಪೊರ್ಲ ತಿರ್ಲ್ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ, ಕಲ್ಪವೃಕ್ಷದ ಹೂವನ್ನು ಅರಳಿಸಿ ಉದ್ಘಾಟಿಸಿ ಮಾತನಾಡಿದರು.

ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಸೂರಜ್ ಶೆಟ್ಟಿ ಅವರು ಮಾತನಾಡುತ್ತಾ, ನಮ್ಮ ಸಮಿತಿಯಿಂದ ಕಷ್ಟದಲ್ಲಿರುವವರ ನೋವಿಗೆ ವೈದ್ಯಕೀಯವಾಗಿ ಸ್ಪಂದಿಸಿದ್ದೇವೆ ಎನ್ನುವ ಸಮಧಾನವಿದೆ. ಅಲ್ಲದೆ ಹೆಣ್ಣು ಮಕ್ಕಳ ಮದುವೆಗೆ ಹಣಕಾಸಿನ ತೊಂದರೆಯಲ್ಲಿದ್ದ ಕುಟುಂಬಕ್ಕೆ ಪ್ರಾಯೋಜಕರ ಸಹಕಾರದಿಂದ ಎರಡು ಲಕ್ಷ ದೇಣಿಗೆ ನೀಡಿ ಕಿಂಚಿತ್ತು ಸಹಾಯ ಮಾಡುವ ಪ್ರಯತ್ನ ಮಾಡಿದ್ದೇವೆ. ನಾವು ಏನು ಮಾಡಿದ್ದೇವೆ ಅದಕ್ಕೆಲ್ಲ ಕಾರಣ ನಮ್ಮ ಸಮಿತಿಯ ಸರ್ವ ಪದಾಧಿಕಾರಿಗಳ, ಸದಸ್ಯರ ಸಹಕಾರದಿಂದ ಸಾಧ್ಯವಾಗಿದೆ. ನಮ್ಮ ಮಹಿಳಾ ವಿಭಾಗ ಕ್ರಿಯಾಶೀಲವಾಗಿದ್ದು ಶೋಭಾ ಶೆಟ್ಟಿ ಅವರ ನೇತೃತ್ವದಲ್ಲಿ ಜನಪರ ಕಾರ್ಯಗಳು ನಡೆಯುತ್ತಿವೆ. ಇಲ್ಲಿ ಪ್ರತಿಯೊಬ್ಬರೂ ತುಂಬಾ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ ಎನ್ನಲು ಅಭಿಮಾನವೆನಿಸುತ್ತಿದೆ. ನಮ್ಮ ಸಮಿತಿಯಲ್ಲಿ ಸದಾ ಸಮಾಜಸೇವೆಗಾಗಿ ತುಡಿತವಿರುತ್ತದೆ. ನಮ್ಮ ಕೈಯಲ್ಲಾಗುವ ಎಲ್ಲಾ ತರದ ಸಹಾಯ ಸಹಕಾರ ನಮ್ಮ ಜನರೊಂದಿಗೆ ಇರುತ್ತದೆ. ಇವತ್ತು ಇಲ್ಲಿ ನೆರೆದ ಸಭಿಕರನ್ನು ನೋಡಿ ತುಂಬಾ ಖುಷಿಯಾಗಿದೆ. ನಿಮ್ಮೆಲ್ಲರ ಪ್ರೀತಿಯೇ ನಮ್ಮನ್ನು ಬೆಳೆಸುತ್ತದೆ ಎಂದು ನುಡಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಅಮರನಾಥ ಶೆಟ್ಟಿ ಅವರು, ನಮ್ಮ ಪ್ರಾದೇಶಿಕ ಸಮಿತಿ ಆಟಿ ಆಚರಣೆಯನ್ನು ವಿಭಿನ್ನವಾಗಿ ಆಚರಿಸುವ ಪ್ರಯತ್ನ ಮಾಡುತ್ತಿದೆ. ನಾವು ಮಕ್ಕಳನ್ನು, ಯುವ ಜನಾಂಗವನ್ನು ಈ ಕೂಟದಲ್ಲಿ ಹೆಚ್ಚು ಹೆಚ್ಚು ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಾ ಬಂದಿದ್ದೇವೆ. ಕಳೆದ ವರ್ಷ ಮಕ್ಕಳಿಗೆ ಆಟಿದ ಗೇನ ಭಾಷಣ ಸ್ಪರ್ಧೆ ಏರ್ಪಡಿಸಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಈ ವರ್ಷ ಕೃಷಿ ಚಟುವಟಿಗೆಗಳ ಪ್ರಾತ್ಯಕ್ಷಿಕೆಗೆ ಒತ್ತು ನೀಡಿದ್ದೇವೆ. ಮುಂದೆಯೂ ಉತ್ತಮ ಕಾರ್ಯ ಮಾಡುವಲ್ಲಿ ನಮ್ಮ ಪ್ರಯತ್ನ ಇರುತ್ತದೆ ಎಂದು ನುಡಿದು ಸ್ವಾಗತಿಸಿದರು. ವೇದಿಕೆಯಲ್ಲಿ ಪ್ರಾದೇಶಿಕ ಸಮಿತಿಗಳ ಸಮನ್ವಯಕ ರವೀಂದ್ರನಾಥ ಭಂಡಾರಿ, ಬಂಟರ ಸಂಘದ ಉಪಾಧ್ಯಕ್ಷರಾದ ಮಹೇಶ್ ಶೆಟ್ಟಿ, ಗೌ. ಪ್ರ ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಗೌ. ಕೋಶಾಧಿಕಾರಿ ರಮೇಶ್ ಬಿ ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್ ಶೆಟ್ಟಿ, ಅಂಧೇರಿ ಬಾಂದ್ರಾ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ, ಕಾರ್ಯದರ್ಶಿ ವೃಕ್ಷಾ ಭಂಡಾರಿ, ಕೋಶಾಧಿಕಾರಿ ಪ್ರಮಿಳಾ ಶೆಟ್ಟಿ, ಜೊತೆ ಕಾರ್ಯದರ್ಶಿ ಪುಷ್ಪಲತಾ ಶೆಟ್ಟಿ, ಜೊತೆ ಕೋಶಾಧಿಕಾರಿ ಮಮತಾ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅದ್ವಿತ್ ಪೂಂಜಾ ಉಪಸ್ಥಿತರಿದ್ದರು.
ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಮಕ್ಕಳು ವೈವಿಧ್ಯಮಯವಾದ
ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ರಂಜಿಸಿದರು. ಸುಮಾರು ಐವತ್ತಕ್ಕಿಂತಲೂ ಹೆಚ್ಚು ಬಗೆಯ ತಿಂಡಿ ತಿನಿಸುಗಳನ್ನು ಮನೆಯಿಂದ ಮಾಡಿ ತರಲಾಗಿತ್ತು. ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗೆ ಸಂಚಾಲಕರಾದ ರವೀಂದ್ರ ಶೆಟ್ಟಿ, ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಯಶವಂತ ಶೆಟ್ಟಿ, ರಮೇಶ್ ರೈ, ಕಾರ್ಯದರ್ಶಿ ತಾರಾನಾಥ ಶೆಟ್ಟಿ, ಕೋಶಾಧಿಕಾರಿ ಮೋಹನದಾಸ ಶೆಟ್ಟಿ, ಜೊತೆ ಕಾರ್ಯದರ್ಶಿ ಅಮರನಾಥ ಶೆಟ್ಟಿ, ಜೊತೆ ಕೋಶಾಧಿಕಾರಿ ಅಭಿಷೇಕ್ ಶೆಟ್ಟಿ, ಉಪ ಸಮಿತಿಗಳ ಕಾರ್ಯಾಧ್ಯಕ್ಷರು, ಯುವ ವಿಭಾಗದ ಸದಸ್ಯರು, ಸಮಿತಿಯ ಸದಸ್ಯರು ಸಹಕರಿಸಿದರು. ಜಯಲಕ್ಷ್ಮೀ ಶೆಟ್ಟಿ ಪ್ರಾರ್ಥನೆ ಹಾಡಿದರು. ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ, ವರದಿ : ದಿನೇಶ್ ಕುಲಾಲ್