ಡಾ. ಎಂ. ಮೋಹನ್ ಅಳ್ವ ನಮ್ಮ ಕಾಲಮಾನದ ಒಬ್ಬ ಮಹಾನ್ ಸಾಂಸ್ಕೃತಿಕ ರಾಯಭಾರಿ ಎಂಬುದು ವಿದ್ವತ್ ವಲಯದಿಂದ ಜನ ಸಾಮಾನ್ಯನವರೆಗೆ ಎಲ್ಲರೂ ಒಪ್ಪುವ ಮಾತು. ಮೋಹನ ಆಳ್ವರು ಮೂಲತಃ ಆಯುರ್ವೇದ ವೈದ್ಯರು. ಮೂಡುಬಿದಿರೆಯಲ್ಲಿ ಪುಟ್ಟ ಕ್ಲಿನಿಕ್ ತೆರೆದು ರೋಗಿಗಳಿಗೆ ಮದ್ದು ನೀಡಲಾರಂಭಿಸಿದ್ದ ಅವರು ವೃತ್ತಿಯ ಜತೆಗೆ ಪ್ರವೃತ್ತಿಯನ್ನೆಲ್ಲಾ ನಿರಂತರ ವಿಸ್ತರಿಸಿಕೊಂಡು ಸಾಹಿತ್ಯ, ಕಲೆ, ಸಂಸ್ಕೃತಿ ಹೀಗೆ ಸಾಮಾಜಿಕ, ಸಾಂಸ್ಕೃತಿಕ ಚಿಕಿತ್ಸಕರಾಗಿ ಬೆಳೆದಿದ್ದಾರೆ. ಅವರ ಸಾಹಿತ್ಯ ಪ್ರೇಮ, ಸಾಂಸ್ಕೃತಿಕ ಸಂಘಟನೆ, ಶಿಸ್ತು, ಸೌಂದರ್ಯ ಪ್ರಜ್ಞೆ, ಸಮಯ ಪ್ರಜ್ಞೆ ಹೀಗೆ ಸೃಜನಶೀಲತೆಯ ವಿಸ್ತಾರ ಬಹು ದೊಡ್ಡದು. ವಿರಾಸತ್, ನುಡಿಸಿರಿಗಳ ಮೂಲಕ ಒಂದೆಡೆ ಸಾಹಿತ್ಯ – ಸಂಸ್ಕೃತಿ ಹಾಗೂ ಇನ್ನೊಂದೆಡೆ ಶಿಕ್ಷಣ, ಆರೋಗ್ಯ, ಕ್ರೀಡೆ ಹೀಗೆ ಬಹುಮುಖೀ ಸಾಧಕರಾಗಿದ್ದಾರೆ. ಮೋಹನ ಆಳ್ವರು 1952ರ ಮೇ 31 ರಂದು ಜನಿಸಿದರು. ತಂದೆ ಮಿಜಾರುಗುತ್ತು ಆನಂದ ಆಳ್ವ. ತಾಯಿ ಸುಂದರಿ ಆಳ್ವ.
ಮೋಹನ ಆಳ್ವರು ಹುಟ್ಟು ಕೃಷಿಕರು. ಅವರು ವೈದ್ಯರಾಗಲು ಮನಸ್ಸು ಮಾಡಿದ್ದು ಕೊಂಚ ವಿಳಂಬವಾಗಿಯೇ. ಅಯುರ್ವೇದ ವೈದ್ಯರಾಗಿ ಉಡುಪಿ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನಿಂದ 1981ರಲ್ಲಿ ರ್ಯಾಂಕ್ ಪಡೆದ ಸಾಧನೆ ಅವರದ್ದು. ಮೋಹನ ಆಳ್ವರದ್ದು ಸದಾ ಕಲಿಕೆಯ ಹಂಬಲ. ಅಂತರರಾಷ್ಟ್ರೀಯ ಖ್ಯಾತಿಯ ಭರತ ನಾಟ್ಯಾಚಾರ್ಯ ಮಾಸ್ಟರ್ ವಿಠಲ್ ಅವರಿಂದ ಭರತನಾಟ್ಯ ಕಲಿತರು. ಉಡುಪಿಯಲ್ಲಿರುವಾಗ ಸಂಧ್ಯಾ ಪೈ ಅವರಿಂದ ಇಕೆಬಾನ ಕಲಿತರು. ಬೋನ್ಸಾಯ್ ಅನ್ನೂ ಪರಿಚಯಿಸಿಕೊಂಡರು, ರಂಗೋಲಿಯನ್ನೂ ಕೈ ವಶಮಾಡಿಕೊಂಡರು. ಬಿ. ಆರ್. ನಾಗೇಶ್, ಉದ್ಯಾವರ ಮಾಧವ ಆಚಾರ್ಯರೇ ಮೊದಲಾದವರಿಂದ ನಾಟಕರಂಗದಲ್ಲೂ ಮಿಂಚಿದರು. ವಿದ್ಯಾರ್ಥಿಯಾಗಿರುವಾಗಲೇ ಸಾಲ ಮಾಡಿ ಲಾರಿಯನ್ನು ಬಾಡಿಗೆಗೆ ಓಡಿಸುವ ವ್ಯವಹಾರವನ್ನೂ ನಡೆಸಿದರು. ಕಲೆ, ಕ್ರೀಡೆ, ಹೀಗೆ ಎಲ್ಲವನ್ನೂ ಕರಗತ ಮಾಡಿಕೊಳ್ಳುತ್ತಲೇ ಮುನ್ನಡೆದರು.
ಆಯುರ್ವೇದ ಪದವಿಯ ಅಂತಿಮ ವರ್ಷದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಆಳ್ವರು ಪಡೆದ ಪ್ರಶಸ್ತಿಗಳು ಅನೇಕ. ಇಂಗ್ಲೆಂಡಿನ ಅಕ್ಸ್ ಫರ್ಡ್ ವಿವಿ ಇವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ “ಬೆಸ್ಟ್ ಟ್ಯಾಲೆಂಟೆಡ್ ಯೂತ್ (1980)” ಎಂದು ಸಾರಿತು. ಹುಟ್ಟೂರು ಮತ್ತು ಸಮೀಪದ ದೊಡ್ಡ ಊರು ಮೂಡುಬಿದಿರೆಯ ಬಗ್ಗೆ ಮೋಹನ ಆಳ್ವರಿಗೆ ಮೋಹ. ಹಾಗಾಗಿ ಮೂಡುಬಿದಿರೆಯಲ್ಲಿ ಪುಟ್ಟ ಕ್ಲಿನಿಕ್ ಆರಂಭಿಸಿದ ಮೋಹನ ಆಳ್ವರು ಮಿಜಾರಿನಲ್ಲಿ ಆಯುರ್ವೇದ ಔಷಧಿ ತಯಾರಿಕಾ ಘಟಕ ‘ಆಳ್ವಾ ಫಾರ್ಮಸಿ’ ಆರಂಭಿಸಿದರು. ಮೂಡುಬಿದಿರೆಯಲ್ಲಿ ಹೇಳಿಕೊಳ್ಳುವ ಆಸ್ಪತ್ರೆಯಾಗಲೀ ವಿವಿಧ ವಿಷಯಗಳಲ್ಲಿ ತಜ್ಞರಾದ ವೈದ್ಯರಾಗಲೀ ಇರದ ಮೂವತ್ತೈದು ವರ್ಷಗಳಿಗೂ ಹಿಂದಿನ ಆ ಕಾಲದಲ್ಲಿ ಆಳ್ವರು ’ಆಳ್ವಾಸ್ ಹೆಲ್ತ್ ಸೆಂಟರ್’ ಆರಂಭಿಸಿದರು. ಆಳ್ವಾ ಫಾರ್ಮಸಿಯ ಅನೇಕ ಉತ್ಪನ್ನಗಳು ಭಾರತದಾದ್ಯಂತ ಮಾತ್ರವಲ್ಲದೇ ಜಪಾನ್, ಸ್ವಿಟ್ಸರ್ ಲ್ಯಾಂಡ್, ಲಂಡನ್, ಮಧ್ಯಪ್ರಾಚ್ಯ ದೇಶಗಳಿಗೂ ರಫ್ತಾಗುತ್ತಿದೆ. ಡಾ. ಮೋಹನ ಆಳ್ವ ಅವರು ಮೂರೂವರೆ ದಶಕಗಳ ಹಿಂದೆಯೇ ಮೂಡುಬಿದಿರೆಯಲ್ಲಿ ‘ರಂಗ ಸಂಗಮ’ವನ್ನು ಹುಟ್ಟು ಹಾಕಿ ವಿಶ್ವ ವಿಖ್ಯಾತ ಕಲಾವಿದರ ತಂಡಗಳ ಕಾರ್ಯಕ್ರಮ ವೀಕ್ಷಣೆಗೆ ಸಾಧ್ಯ ಮಾಡಿಕೊಟ್ಟರು. ‘ಏಕಲವ್ಯ ಕ್ರೀಡಾ ಸಂಸ್ಥೆ’ ಆರಂಭಿಸಿ, ಒಂದಷ್ಟು ಮಕ್ಕಳನ್ನು ದತ್ತು ತೆಗೆದುಕೊಂಡು ಉಚಿತ ಶಿಕ್ಷಣ, ವಸತಿ, ತರಬೇತಿ, ಅಹಾರ ಮತ್ತಿನ್ನೊಂದು ಎಲ್ಲ ಕೊಡಿಸಲು ಮುಂದಾದರು.
ಮೋಹನ್ ಆಳ್ವ ಅವರು ವಿದ್ಯಾರ್ಥಿವಲಯದೊಳಗೆ ದೇಶೀಯ ಸಾಂಸ್ಕೃತಿಕ ವೈಭವವನ್ನು ಉಣಬಡಿಸುವ ಸ್ಪಿಕ್ ಮೆಕೆ ವಿರಾಸತ್ ಅನ್ನು ಮೊದಲು ಮಹಾವೀರ ಕಾಲೇಜಿನ ಆಶ್ರಯದಲ್ಲಿ ನಡೆಸತೊಡಗಿದರು. ಕಾಲ ಸರಿದಂತೆ ಸಾರ್ವಜನಿಕರ ಪ್ರವೇಶ ಹೆಚ್ಚಾದ ಕಾರಣ “ಅಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ” ನಾಂದಿ ಹಾಡಿ ಕಲಾಭಿಮಾನಿಗಳಿಗೆ ಉನ್ನತ ಸಾಂಸ್ಕೃತಿಕ ಕಲಾಪಗಳನ್ನು ಕಾಣುವ ಅವಕಾಶ ಕಲ್ಪಿಸಿದರು. 1995 ರಿಂದ ಪ್ರಾರಂಭವಾದ ಅಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಮೂಲಕ ಕೇವಲ 28 ವಿದ್ಯಾರ್ಥಿಗಳೊಂದಿಗೆ ಎರಡು ಕೋರ್ಸ್ ಗಳಲ್ಲಿ ಆರಂಭ ಕಂಡ ಆಳ್ವಾಸ್ ಕಾಲೇಜು ಈಗ ತನ್ನ ಆವರಣದಲ್ಲಿ 20,000 ಕ್ಕೂ ಮಿಕ್ಕಿದ ವಿದ್ಯಾರ್ಥಿಗಳ ಸಂಗಮವಾಗಿದೆ. ಹೈಸ್ಕೂಲಿನಿಂದ ಪಿಯುಸಿ ಹಾಗೂ ಪದವಿ ಶಿಕ್ಷಣಗಳಾದ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಶಿಕ್ಷಣ, ವೈದ್ಯಕೀಯ ವಿಜ್ಞಾನ ಸಂಸ್ಥೆಗಳಾದ ಆಯುರ್ವೇದ, ಹೋಮಿಯೋಪತಿ, ನ್ಯಾಚುರೋಪತಿ ಮತ್ತು ಯೋಗ ಪದವಿ, ಆಯುರ್ವೇದ ಮತ್ತು ಪ್ಯಾರಾ ಮೆಡಿಕಲ್ ಶಿಕ್ಷಣದಡಿಯಲ್ಲಿ ನರ್ಸಿಂಗ್, ಫಿಸಿಯೋಥೆರಪಿ ಮತ್ತು ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಆಳ್ವ ಇನ್ಸ್ಟಿಟ್ಯೂಟ್ ಎಂಬ ಪೂರ್ಣ ಪ್ರಮಾಣದ ಇಂಜಿನಿಯರಿಂಗ್ ಕಾಲೇಜು ಹೀಗೆ ಅದು ನಿರಂತರ ಬೆಳೆದಿದೆ.
ಎಲ್ಲ ರೀತಿಯ ಕ್ರೀಡೆಗಳು ಮತ್ತು ಕಲೆಗಳ ಪೋಷಣೆ, ಶಿಕ್ಷಣ ಮತ್ತು ಕಲಿಕೆ ಆಳ್ವಾಸ್ ಸಂಸ್ಥೆಗಳ ಚಾಮರದಡಿಯಲ್ಲಿ ನಡೆಯುತ್ತಿದೆ. ದೇಶ ಪ್ರಸಿದ್ಧರಾದ ಆಶೀಂಬಂಧು ಭಟ್ಟಾಚಾರ್ಯ, ನಿರುಪಮಾ ರಾಜೇಂದ್ರ, ಬೀಜಾಯಿನಿ ಸತ್ಪತಿ, ಚೀನೀ ಬಸು ಮೆಹತಾ, ಚಂದ್ರಶೇಖರ ನಾವಡ, ದೀಪಕ್ ಕುಮಾರ್ ಪುತ್ತೂರು, ದಿವ್ಯಸೇನ ಚೆನ್ನೈ, ಮಂಟಪ ಪ್ರಭಾಕರ ಉಪಾಧ್ಯ , ಜೀವನ್ ರಾಂ ಸುಳ್ಯ , ಸುಜಾತಾ ಮೊದಲಾದವರು ಇಲ್ಲಿ ಗುರುಗಳಾಗಿ ಯುವ ಕಲಾವಿದರನ್ನು ತಯಾರು ಮಾಡಿದ್ದಾರೆ. ಯಕ್ಷಗಾನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ನಿಟ್ಟಿನಲ್ಲಿ ‘ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರವನ್ನು’ ಸ್ಥಾಪಿಸಲಾಗಿದೆ.
ಮಂಗಳೂರಿನಲ್ಲಿ 66ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಶಿಷ್ಟ ವೇದಿಕೆ ಶೃಂಗಾರದಲ್ಲಿ ಕರಾವಳಿಯ ಛಾಪು ಒತ್ತಿದ ಆಳ್ವರು ಮುಂದೆ 2003ರಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಭುತ ರೀತಿಯಲ್ಲಿ ನಡೆಸಿದರು. ಮುಂದೆ ಆಳ್ವಾಸ್ ಬ್ಯಾನರಿನಲ್ಲಿಯೇ “ನುಡಿಸಿರಿ- ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ” ನಡೆಸಲು ಮುಂದಾದರು. ಇದು ಶಿಸ್ತಿಗೆ, ಸಂಘಟನಾ ಚತುರತೆಗೆ, ಚೆಲುವಿಗೆ, ಸುವ್ಯವಸ್ಥೆಗೆ ಇನ್ನೊಂದು ಹೆಸರಾಗಿ ಮಾದರಿ ಕನ್ನಡ ನುಡಿ ಸಮ್ಮೇಳನವಾಗಿ ನಡೆಯುತ್ತಿದೆ. ಆಳ್ವರು ವೃದ್ಧಾಶ್ರಮ, ಮದ್ಯವ್ಯಸನ ವರ್ಜನ ಕೇಂದ್ರ ತೆರೆದಿದ್ದಾರೆ. ಸದ್ದಿಲ್ಲದೆ ಅದೆಷ್ಟೋ ಎಚ್ಐವಿ ಪೀಡಿತರಿಗೆ ತಮ್ಮದೇ ಸೂತ್ರದಲ್ಲಿ ಆಳ್ವರು ಚಿಕಿತ್ಸೆ ನೀಡುತ್ತಲೇ ಇದ್ದಾರೆ. ಆಳ್ವರು ಸ್ವಂತ ಆಸಕ್ತಿಯಿಂದ ದೇಶದ ಜಾನಪದ ವಸ್ತುಗಳನ್ನು ಕಲೆಹಾಕಿದ್ದಾರೆ. ಮೂಡುಬಿದಿರೆಯಿಂದ ಮಿಜಾರುವರೆಗಿನ ಹಾದಿಯುದ್ದಕ್ಕೂ ಬಹಳ ಕಷ್ಟ ಕಾಲದಲ್ಲೂ ನೆಟ್ಟ ಗಿಡಗಳು ಮರವಾಗಿ ಬೆಳೆವಂತೆ ಮಾಡಿದ್ದಾರೆ. ಮೂಡುಬಿದಿರೆಯಲ್ಲಿ “ಮೋಹಿನಿ ಅಪ್ಪಾಜಿ ನಾಯಕ್ ವಿಶೇಷ ಮಕ್ಕಳ ಶಾಲೆ”ಯನ್ನು ನಡೆಸಿಕೊಂಡು ಬರಲಾಗುತ್ತಿದೆ.
ರಾಜೀವ್ ಗಾಂಧಿ ಆರೋಗ್ಯ ವಿವಿಯ ಸೆನೆಟ್ ಸದಸ್ಯರಾಗಿ, ಸಿಂಡಿಕೇಟ್ ಸದಸ್ಯರಾಗಿ ರಾಜ್ಯಪಾಲರಿಂದ ನೇಮಕರಾದ ಆಳ್ವರು ನವದೆಹಲಿಯ ಸೆಂಟ್ರಲ್ ಕೌನ್ಸಿಲ್ ಫಾರ್ ಇಂಡಿಯನ್ ಮೆಡಿಸಿನ್ ಸದಸ್ಯರಾಗಿ ನಿಯುಕ್ತರಾದವರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ, ಬೆಳಗಾವಿ ಕನ್ನಡ ಶ್ರೀ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಬಂಟ ವಿಭೂಷಣ ಮುಂತಾದ ಅನೇಕ ಗೌರವಗಳು ಮೋಹನ್ ಆಳ್ವ ಅವರಿಗೆ ಸಂದಿವೆ. ಈ ಮಹಾನ್ ಉತ್ಸಾಹಿ ಸಾಧಕರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು. ಈ ಶುಭ ದಿನದಂದು ಮಹಾನ್ ಸಾಧಕನಿಗೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆ 2024 ರ ಸಾಲಿನ ಬಂಟ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.