ವಿದ್ಯಾಗಿರಿ: ಕಲೆ ಮತ್ತು ಕರಕುಶಲ ಉತ್ಪನ್ನಗಳು ತನ್ನ ಸೌಂದರ್ಯದಿಂದಲೇ ಎಲ್ಲರನ್ನೂ ಸೆಳೆಯವ ಶಕ್ತಿ ಹೊಂದಿದೆ ಎಂದು ಪೇವಿಕ್ರಿಲ್ ಪಿಡಿಲೈಟ್ ಇಂಡಸ್ಟ್ರಿಯ ಪ್ರದೇಶ ಮಾರಾಟ ವ್ಯವಸ್ಥಾಪಕ ಸಂಗಮೇಶ ಮಾರಿಗುಡ್ಡಿ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣಲ್ಲಿ ಫ್ಯಾಷನ್ ಡಿಸೈನಿಂಗ್ (ವಸ್ತ್ರ ವಿನ್ಯಾಸ) ವಿಭಾಗದ ವತಿಯಿಂದ ನಡೆದ ‘ಆಳ್ವಾಸ್ ಎಲೇಷಿಯಾ’ ಕಾರ್ಯಕ್ರಮದಲ್ಲಿ ಗುರುವಾರ ಅವರು ಮಾತನಾಡಿದರು. ಕಲೆ ಮತ್ತು ಕರಕುಶಲ ಉತ್ಪನ್ನಗಳು ಎಲ್ಲರನ್ನೂ ತನ್ನ ಸೌಂದರ್ಯದಿಂದಲೇ ಆಕರ್ಷಿಸುತ್ತದೆ. ನೀವು ಅಂಗಡಿಗಳಲ್ಲಿ ಬೇಕಾದ ಕಲಾಕೃತಿ ಮತ್ತು ಕರಕುಶಲ ವಸ್ತುಗಳನ್ನು
ಕೊಂಡುಕೊಳ್ಳಬಹುದು.
ಆದರೆ ನಿಮಗೆ ಬೇಕಾದ ವಸ್ತುವನ್ನು ನೀವೇ ಕಲಿತು, ತಯಾರಿಸಿದಾಗ ಅದು ಹೆಚ್ಚಿನ ಖುಷಿಯನ್ನು ಕೊಡುತ್ತದೆ ಎಂದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಎಲ್ಲರೂ, ಎಲ್ಲರಿಗೂ ಚೆನ್ನಾಗಿ ಕಾಣಬೇಕು, ಎಲ್ಲರಿಗೂ ವಿಭಿನ್ನ ಶೈಲಿಯಲ್ಲಿ ಕಾಣಬೇಕು ಎನ್ನುವ ಹುಮ್ಮಸ್ಸು ಇರುತ್ತದೆ. ಕಾಲಕ್ಕೆ ತಕ್ಕಂತೆ ನಾವು ಕಾಣಬೇಕು ಎನ್ನುವುದು ಎಲ್ಲರ ಆಸೆಯಾಗಿರುತ್ತದೆ. ಬಾಲ್ಯದಲ್ಲಿ ನಮ್ಮಲ್ಲಿದ್ದ ಕಲೆ ಹಾಗೂ ಕರಕುಶಲ ಕಲಿಕೆಯ ಉತ್ಸಾಹ ನಮ್ಮಲ್ಲಿನ ಸೃಜನಶೀಲತೆ ಕೌಶಲ್ಯವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು. ನೀವು ನಿಮ್ಮದೇ ಆದ ವಿಭಿನ್ನ ಹಾಗೂ ಅನನ್ಯ ಶೈಲಿಯಲ್ಲಿ ಜೀವನ ನಡೆಸಿ. ಬೇರೆಯವರ ನಕಲು ಮಾಡುವುದು ಬೇಡ. ನಿಮ್ಮಲ್ಲಿರುವ ಕಾಳಜಿ, ನಿಮ್ಮದೇ ಆದ ಹೊಸ ಚಿಂತನೆ ಎಲ್ಲವೂ ನಿಮನ್ನು ಸೃಜನಶೀಲತೆಯಡೆಗೆ ಮುಖಮಾಡುವಂತೆ ಮಾಡುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಬಿ.ಎಸ್ಸಿ ಫ್ಯಾಷನ್ ಡಿಸೈನಿಂಗ್ ವಿಭಾಗದ ಮುಖ್ಯಸ್ಥೆ ಸವಿತಾ ಕುಮಾರಿ, ಮಾಡೆಲ್ಸ್ಗಳಾದ ಅಮೃತಾ, ಸಾಫಿನ್ ತಾಜ್, ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಡಾ ಶಂಕರ್ ಮೂರ್ತಿ ಇದ್ದರು. ಹಫ್ಜಾ ಫಾತಿಮಾ ಸ್ವಾಗತಿಸಿದರು, ಜೆಸ್ಲಿನ್ ಡಿಸೋಜ ವಂದಿಸಿ, ಮುನೈಝಾ ಖಾನ್ ನಿರೂಪಿಸಿದರು. ಬೆಸ್ಟ್ ಕ್ರೀಯೇಟಿವ್ ವ್ಹೇರ್- ಮೇಘನಾ ಶಿವರಾಮ್, ಬೆಸ್ಟ್ ಕಲೆಕ್ಷನ್- ಕೃತಿ, ಬೆಸ್ಟ್ ಡಿಸೈನರ್- ಭುವನಾ ಕಾರಂತ್ ಪಡೆದುಕೊಂಡರು. ಬೇರೆ ಬೇರೆ ವಿಭಾಗಗಳಿಗೆ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಫ್ಯಾಶನ್ ಡಿಸೈನಿಂಗ್ ವಿಧ್ಯಾರ್ಥಿಗಳಿಗೆ ಫ್ಯಾಶನ್ ಶೋ ಕಾರ್ಯಕ್ರಮ ನಡೆಯಿತು.