ಹೋಟೆಲ್ ಉದ್ಯಮದಲ್ಲಿ ದಕ್ಷಿಣ ಭಾರತದಾದ್ಯಂತ ಹೆಸರು ಮಾಡಿರುವ ಗೋಲ್ಡ್ ಫಿಂಚ್ ಗ್ರೂಪ್ ಆಫ್ ಹೋಟೆಲ್ಸ್ ಇದೀಗ ಮುಂಬಯಿಯಲ್ಲಿ ಪಂಚತಾರಾ ಹೋಟೆಲ್ ಆರಂಭಿಸಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮುಂಬಯಿ ಹೊರವಲಯದ ವಾಶಿಯಲ್ಲಿ ಈ ನೂತನ ಹೋಟೆಲ್ ಆರಂಭಗೊಂಡಿದೆ. ಮುಂಬಯಿ ನಗರಕ್ಕೆ ಪ್ರತಿಸ್ಪರ್ಧೆ ನೀಡುವುದರ ಜೊತೆ ಜೊತೆಗೆ ಯೋಜನಾಬದ್ಧ ನಗರವಾಗಿ ರೂಪುಗೊಳ್ಳುತ್ತಿರುವ ವಾಶಿಯಲ್ಲಿ ಆರಂಭಗೊಂಡಿರುವ ಈ ಪಂಚತಾರಾ ಹೋಟೆಲ್ ನ ನಿರ್ವಹಣೆಯನ್ನು ವಿಶ್ವದಾದ್ಯಂತ ಸರಣಿ ಹೋಟೆಲ್ ಗಳನ್ನು ನಡೆಸುತ್ತಿರುವ “ಜೆ ಡಬ್ಲ್ಯೂ ಮ್ಯಾರಿಯೆಟ್ ಗ್ರೂಪ್” ಮಾಡಲಿದೆ.
ಅತ್ಯುತ್ತಮ ದರ್ಜೆಯ ವಿನ್ಯಾಸ, ಒಳಾಂಗಣಗಳನ್ನು ಹೊಂದಿರುವ ಈ ಹೋಟೆಲ್ ನಲ್ಲಿ, ಪ್ರೈವೇಟ್ ಬಾರ್ ಮತ್ತು ಪ್ಯಾಂಟ್ರಿ ಹೊಂದಿರುವ ಮ್ಯಾರಿಯೆಟ್ ಪೆಂಟ್ ಹೌಸ್ ಸೂಟ್, 8 ಮ್ಯಾರಿಯೆಟ್ ಎಕ್ಸಿಕ್ಯೂಟಿವ್ ರೂಮ್, 45 ಮ್ಯಾರಿಯೆಟ್ ಕ್ಲಬ್ ರೂಮ್, 98 ಪ್ರೀಮಿಯಂ ರೂಂ ಸಹಿತ ಒಟ್ಟು 152 ರೂಂಗಳಿವೆ. ಸ್ಥಳೀಯ ಹಾಗೂ ದೇಶ ವಿದೇಶಗಳ ಖಾದ್ಯಗಳ ಮೂರು ರೆಸ್ಟೋರೆಂಟ್ ಗಳಿವೆ. ಮೂರು ಬ್ಯಾಂಕ್ವೆಟ್ ಹಾಲ್ ಗಳನ್ನು ಹೋಟೆಲ್ ಒಳಗೊಂಡಿದೆ. ಜಿಮ್, ಫಿಟ್ನೆಸ್ ಸೆಂಟರ್, ಕಾನ್ಫರೆನ್ಸ್ ಹಾಲ್, ಬಿಜಿನೆಸ್ ಲಾನ್ ಸೌಲಭ್ಯಗಳು ಇಲ್ಲಿವೆ. ಸ್ವಚ್ಛ ಹಾಗೂ ಆರೋಗ್ಯ, ಪರಿಸರ ಗಾಳಿಯನ್ನು ಫಿಲ್ಟರ್ ಮಾಡಲು ಮತ್ತು ಶುದ್ದೀಕರಿಸಲು ಹೋಟೆಲ್ ನಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಗ್ರಾಹಕರ ವಾಸ್ತವ್ಯವು ಆರೋಗ್ಯದಾಯಕ, ಅನುಕೂಲಕರ ಹಾಗೂ ಆಹ್ಲಾದಕರವಾಗಿ ಇರಬೇಕು ಎಂಬ ಉದ್ದೇಶವನ್ನಿರಿಸಿಕೊಂಡು ರೂಮುಗಳನ್ನು ವಿನ್ಯಾಸಗೊಳಿಸಲಾಗಿದೆ. ಆಧುನಿಕ ವಾಸ್ತು ಶೈಲಿಯೊಳಗೊಂಡಿರುವ ಈ ನೂತನ ಹೋಟೆಲ್ ಪರಿಸರದಲ್ಲಿಯೇ ಬ್ಯಾಂಕಿಂಗ್, ಟೆಕ್ನಾಲಾಜಿ, ಐಟಿ, ಉನ್ನತ ಸರಕಾರಿ ಕಚೇರಿಗಳಿವೆ.
ಉದ್ಯಮದಲ್ಲಿ ಒಂದೇ ಒಂದು ಗೆಲುವು ದೊರೆತರೆ ‘ನಾನುಂಟು ಮೂರು ಲೋಕ ಉಂಟು’ ಎಂದು ಬೀಗಿದವರನ್ನು ನಾವೆಲ್ಲಾ ನೋಡಿದ್ದೇವೆ. ನೋಡುತ್ತಲೂ ಇದ್ದೇವೆ. ಗೆಲುವಿನ ಸಂಭ್ರಮ ಮುಗಿಯುವುದರೊಳಗಾಗಿ ಸೋತು ಪಾತಾಳ ತುಲುಪಿದವರ ಉದಾಹರಣೆಗಳು ಸಾಕಷ್ಟಿದೆ. ಸೋಲುಗಳಿಗೆ ಸಾವಿರ ನೆಪ ಸಿಕ್ಕಬಹುದು. ಆದರೆ ಗೆಲುವಿಗಿರುವುದು ಒಂದೇ ಮಾರ್ಗ ಎಂಬ ತತ್ವದಲ್ಲಿ ನಂಬಿಕೆ ಇರಿಸಿಕೊಂಡು ಶ್ರದ್ಧೆ, ತಾಕತ್ತು ಮತ್ತು ನಿಯತ್ತಿನಿಂದ ದುಡಿದು ಯಶಸ್ಸು ಕಂಡ ಉದ್ಯಮಿಗಳ ಪೈಕಿ ಬಂಜಾರ ಪ್ರಕಾಶ್ ಶೆಟ್ಟಿ ಅವರ ಹೆಸರು ಮೊದಲ ಸಾಲಿನಲ್ಲಿದೆ. ಅವರಿಂದು ಎಂಆರ್ ಜಿ ಗ್ರೂಪ್ ನ ಸ್ಥಾಪಕ ಅಧ್ಯಕ್ಷರು. ದಕ್ಷಿಣ ಭಾರತದ ಅತ್ಯಂತ ಗೋಲ್ಡ್ ಫಿಂಚ್ ಹೆಸರಿನಲ್ಲಿ ಸರಣಿ ಹೋಟೆಲ್ ಗಳನ್ನು ನಡೆಸುತ್ತಿದ್ದಾರೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ.
ಲಕ್ಕು ಇನ್ ಪ್ಲುಯೆನ್ಸ್, ಗಾಡ್ ಫಾದರ್, ವಾಸ್ತು ಅಂತ ಏನೇ ಯಾರೇ ಮಾತನಾಡಿಕೊಂಡರೂ ಅಂತಿಮವಾಗಿ ನಮ್ಮನ್ನು ಗೆಲುವಿನತ್ತ ಕೈಹಿಡಿದು ನಡೆಸುವುದು ಪ್ರಾಮಾಣಿಕ ದುಡಿಮೆ ಎಂಬುದು ಅವರಿಗೆ ಗೊತ್ತಾಗಿ ನಾಲ್ಕು ದಶಕಗಳೇ ಕಳೆದಿದೆ. ಪ್ರಕಾಶ್ ಶೆಟ್ಟಿ ಬಡತನದ ಹೊಸ್ತಿಲನ್ನು ದಾಟಿ ಬಂದು ಶ್ರೀಮಂತಿಕೆಯ ಬಾಗಿಲಲ್ಲಿ ನಿಂತವರು. ಹಾಗಾಗಿ ಅವರಿಗೆ ಇನ್ನೊಬ್ಬರ ಕಷ್ಟ ಚೆನ್ನಾಗಿಯೇ ಅರ್ಥವಾಗುತ್ತದೆ. ಕಷ್ಟಪಟ್ಟ ಮನುಷ್ಯ ಹೆಚ್ಚು ಕರುಣಿಯಾಗಿರುತ್ತಾನೆ ಮತ್ತು ಇನ್ನೊಬ್ಬರ ಕಷ್ಟಕ್ಕೆ ನೇರವಾಗುತ್ತಾನೆ ಎಂಬ ಮಾತು ಪ್ರಕಾಶ್ ಶೆಟ್ಟಿ ಅವರಿಗೆ ಚೆನ್ನಾಗಿಯೇ ಅನ್ವಯಿಸುತ್ತದೆ. ಕೇವಲ ದುಡ್ಡಿದ್ದರೆ ಮಾತ್ರ ಶ್ರೀಮಂತಿಕೆ ಬರುವುದಿಲ್ಲ. ಸರಳತೆ ಮತ್ತು ಪರೋಪಕಾರಿ ಗುಣದಲ್ಲೂ ಒಂದು ಶ್ರೀಮಂತಿಕೆ ಇದೇ ಎಂಬುದನ್ನವರು ತೋರಿಸಿಕೊಟ್ಟಿದ್ದಾರೆ. ಸಾಮಾನ್ಯವಾಗಿ ಎಲ್ಲರ ಕೈಗೂ ಹಣ ಬಂದಾಗ ಆಲೋಚಿಸುವ ದಾಟಿಯೇ ಬೇರೆ. ಕೈಯಲ್ಲಿ ಹಣ ಬಂದಾಗ ಆಲೋಚಿಸುವ ದಾಟಿಯೇ ಬೇರೆ. ಕೈಯಲ್ಲಿ ದುಡ್ಡಿರುವಾಗ ಲೈಫ್ ಎಂಜಾಯ್ ಮಾಡದಿದ್ದರೆ ದುಡಿದು ಏನು ಉಪಯೋಗ ಎಂಬ ಮಾತುಗಳನ್ನು ಆಡುತ್ತಿರುತ್ತೇವೆ ಮತ್ತು ಕೇಳುತ್ತಿರುತ್ತೇವೆ. ದುಡ್ಡು ಮಾಡಿದ ಮೇಲೆ ಸುಖ ಪಡದಿದ್ದರೆ ಹೇಗೆ ಎಂಬ ಥಿಯರಿ ಸರ್ವೇ ಸಾಧಾರಣವಾಗಿ ಎಲ್ಲರಲ್ಲೂ ಇರುತ್ತದೆ. ಆದರೆ ಪ್ರಕಾಶ್ ಶೆಟ್ಟಿ ಆಲೋಚನೆಯೇ ಬೇರೆ. ಇನ್ನಷ್ಟು ಜನಕ್ಕೆ ಹೇಗೆ, ಎಲ್ಲಿ, ಯಾವ ರೀತಿಯಲ್ಲಿ ನೆರವಾಗಬಹುದು ಎಂಬುದನ್ನು ಅವರು ಪ್ರತಿ ದಿನವೂ ಆಲೋಚಿಸುತ್ತಿರುತ್ತಾರೆ ಮತ್ತು ಅದನ್ನು ಕಾರ್ಯರೂಪಕ್ಕೆ ತರುತ್ತಾರೆ. ಪ್ರಕಾಶ್ ಶೆಟ್ಟಿಯವರ ಮಾತು, ನಗು, ನಡಿಗೆ, ಚಿಂತನೆ, ಉಡುಪು, ಅನಿಸಿಕೆ ಮತ್ತು ಜನರನ್ನು ಆಕರ್ಷಿಸುತ್ತದೆ. ಕಳೆದ 40 ವರ್ಷಗಳಿಂದ ಪ್ರಕಾಶ್ ಶೆಟ್ಟಿ ಗೆಲುವಿಗಾಗಿ ದುಡಿಯುತ್ತಲೇ ಇದ್ದಾರೆ. ಸತತ ಗೆಲುವು ಕಂಡ ಬಳಿಕವು ಹೊಸ ಗೆಲುವು, ಹೊಸ ಸಾಧನೆ, ಹೊಸ ಗೆಳೆತನಕ್ಕೆ ಕೈ ಚಾಚುತ್ತಿದ್ದಾರೆ. ಉದ್ಯಮ ವಲಯದಲ್ಲಿನ ಸಾಧನೆ, ಅದರ ಜೊತೆಜೊತೆಗೆ ಸಮಾಜಮುಖಿ ಚಿಂತನೆ, ಸಾಮಾಜಿಕ ಬದ್ಧತೆ ಜನಪರ ಕಾರ್ಯದಲ್ಲೂ ಸಕ್ರಿಯರಾಗಿದ್ದಾರೆ. ಹಾಗಾಗಿ ಅವರ ಹಿಂದೆ ಯಶಸ್ಸು ಕೀರ್ತಿ ಬಂದಿದೆ ಇವತ್ತಿಗೂ ಅದು ಅವರೊಂದಿಗೆ ಉಳಿದುಕೊಂಡಿದೆ.