
ಮುಂಬಯಿಯಲ್ಲಿ ಚಿಣ್ಣರಬಿಂಬದಂತಹ ಸಂಸ್ಥೆ ಇರುವುದು ನಮ್ಮ ಮಕ್ಕಳ ಅದೃಷ್ಟ. ಎಲ್ಲಾ ಮಕ್ಕಳೂ ಚಿಣ್ಣರಬಿಂಬದ ಕನ್ನಡ ಕಲಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ಅದೇ ರೀತಿ ಬೇರೆ ಬೇರೆ ಸ್ಪರ್ಧೆ, ಕಾರ್ಯಕ್ರಮಗಳಲ್ಲಿಯೂ ಧೈರ್ಯದಿಂದ ಭಾಗವಹಿಸಬೇಕು. ಮಕ್ಕಳ ಸುಂದರ ವ್ಯಕ್ತಿತ್ವಕ್ಕೆ ಕನ್ನಡಿಯಂತೆ ಚಿಣ್ಣರಬಿಂಬ ಸಂಸ್ಥೆ ಪ್ರಕಾಶ್ ಭಂಡಾರಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಅದರ ಹಿಂದೆ ನಿಮ್ಮ ಶ್ರಮವೂ ಇರಬೇಕು. ಪ್ರತಿ ದಿನ ಅಭ್ಯಾಸ ಮಾಡಿದರೆ ಕಲಿಕೆ ಕಷ್ಟ ವಾಗುವುದಿಲ್ಲ. ನಮ್ಮಲ್ಲಿ ಎಳವೆಯಲ್ಲಿಯೇ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಪಾಲಕರು ಮಕ್ಕಳಿಗೆ ಕಷ್ಟದ ಅರಿವೂ ಆಗದಂತೆ ಸಾಕಬೇಕು ಎನ್ನುವುದು ಸರಿಯಲ್ಲ. ಅವರಿಗೆ ಅಗತ್ಯವಾಗಿ ಬೇಕಾದುದನ್ನೆಲ್ಲ ನೀಡಬೇಕೇ ಹೊರತು ಕೇಳಿದ್ದನ್ನೆಲ್ಲಾ ತಕ್ಷಣ ಸಿಗುವಂತೆ ಮಾಡಬಾರದು. ಅವರಿಗೆ ಜೀವನದಲ್ಲಿ ಕಷ್ಟ ಬಂದಾಗ ಅದನ್ನು ಎದುರಿಸುವ ರೀತಿಯನ್ನು ತಿಳಿಸುವುದು ಪಾಲಕರ ಕರ್ತವ್ಯ ಎಂದು ಮಕ್ಕಳಿಗೂ, ಪಾಲಕರಿಗೂ ಶಿಕ್ಷಣದ ಮೌಲ್ಯದೊಂದಿಗೆ ಜೀವನಪಾಠದ ಅಗತ್ಯದ ಕುರಿತು ಸರಳವಾಗಿ ತಿಳಿಸಿದರು. ಅವರು ಮಾತನ್ನು ಮುಂದುವರೆಸುತ್ತಾ, ನಮ್ಮ ಸಂಸ್ಕೃತಿ ಎಂದರೆ ಬೇರೇನೂ ಅಲ್ಲ. ನಮ್ಮ ಒಳ್ಳೆಯ ನಡೆ, ನುಡಿ, ಆಚಾರ ವಿಚಾರ, ಹಿರಿಯರಿಗೆ ಗೌರವ, ದೈವ ದೇವರ ಆರಾಧನೆ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದು, ಸ್ನೇಹಿತರ ಜೊತೆ ಪ್ರೀತಿಯಿಂದ ವ್ಯವಹರಿಸುವುದು ಇವೆಲ್ಲವೂ ಸೇರಿ ಉತ್ತಮ ಸಂಸ್ಕೃತಿ ಸಂಸ್ಕಾರ ಎನಿಸಿಕೊಳ್ಳುತ್ತದೆ. ಚಿಣ್ಣರಬಿಂಬದಲ್ಲಿ ಶಿಸ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಶಿಸ್ತಿನ ಮಹತ್ವವನ್ನು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ತಿಳಿಸಿದರು. ಅವರು ಮಾರ್ಚ್ 8 ರವಿವಾರ ಮಧ್ಯಾಹ್ನ 3.30ಕ್ಕೆ ಸರಿಯಾಗಿ ಚಿಣ್ಣರಬಿಂಬದ ಎಸ್.ಎಂ ಶೆಟ್ಟಿ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಪಾಲಕರು ಮತ್ತು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.

ಪೇಜಾವರ ಶಿಬಿರದ ಹಳೆ ವಿದ್ಯಾರ್ಥಿ ವಿಘ್ನೇಶ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣದ ಮೂಲಕ ನಮ್ಮ ಮಕ್ಕಳ ಭಜನೆಯನ್ನು ಹೊರ ರಾಜ್ಯ, ಹೊರ ದೇಶದ ಲಕ್ಷಾಂತರ ಜನರು ಮೆಚ್ಚಿ ಒಳ್ಳೆಯ ಅಭಿಪ್ರಾಯಗಳನ್ನು ಕಳಿಸಿ ಅಭಿನಂದಿಸಿರುವುದು ಸಂತೋಷ ತಂದಿದೆ. ಮುಂದೆಯೂ ಅದರ ಬೆಳವಣಿಗೆಯಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಚಿಣ್ಣರ ಬಿಂಬದ ಯೂಟ್ಯೂಬ್, ಇನ್ಸ್ಟಾಗ್ರಾಮ್ ನ ಕುರಿತು ಮಾಹಿತಿ ನೀಡಿದರು. ಭಜನೆ ಶಿಕ್ಷಕರಾದ ವಿಮಲಾ ಎಸ್ ದೇವಾಡಿಗ, ಚಂದ್ರಕಲಾ ಶೆಟ್ಟಿ, ಶಿಬಿರ ಮುಖ್ಯಸ್ಥೆ ಜ್ಯೋತಿ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ವನಿತಾ ಶೆಟ್ಟಿ, ಮಧ್ಯವಲಯ ಮುಖ್ಯಸ್ಥೆ ಸುಜಾತ ಶೆಟ್ಟಿಯವರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು, ಮಕ್ಕಳು ವಿಶೇಷ ತರಬೇತಿ ಶಿಬಿರದಲ್ಲಿ ಭಾಗವಹಿಸಿ, ಅದರ ಲಾಭವನ್ನು ಪಡೆದುಕೊಂಡರು. ಚಿಣ್ಣರಬಿಂಬದ ಕನ್ನಡ ಶಿಕ್ಷಕಿ ಅನಿತಾ ಎಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


























































































































