ಆತಿಥ್ಯ ಕ್ಷೇತ್ರದಲ್ಲಿ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೆಸರಾಗಿರುವ ಎಂ.ಆರ್.ಜಿ.ಗ್ರೂಪ್ ಮತ್ತು ಮ್ಯಾರಿಯೆಟ್ ಹೊಟೇಲ್ಸ್ ಗಳು ನವ ಮುಂಬಯಿಯಲ್ಲಿ ಜಂಟಿಯಾಗಿ ಆತಿಥ್ಯೋದ್ಯಮಕ್ಕೆ ಶುಭಾರಂಭ ಮಾಡಿವೆ. ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 26 ಕಿ.ಮೀ. ದೂರದಲ್ಲಿರುವ ನವಿ ಮುಂಬಯಿ ಮ್ಯಾರಿಯೆಟ್ ಹೊಟೇಲ್ ವ್ಯಾಪಾರೋದ್ಯಮಿ ಪ್ರವಾಸಿಗರು ಮತ್ತು ರಜೆ ಸಮಯ ಕಳೆಯುವ ಪ್ರವಾಸಿಗರಿಗೆ ಅನುಕೂಲಕರ ತಾಣವಾಗಿದೆ. ದೇಶೀಯ ಮತ್ತು ಅಂತರಾಷ್ಟ್ರೀಯ ಅತಿಥಿಗಳಿಗೂ ಇದು ಅಡೆ ತಡೆ ರಹಿತ ಪ್ರಯಾಣಕ್ಕೆ ಅನುಕೂಲಕರವಾದಂತಹ ಸ್ಥಳದಲ್ಲಿದೆ. ಮಹಾರಾಷ್ಟ್ರದ ಕಡಲ ಕಿನಾರೆ ಇಲ್ಲಿ ಅತ್ಯಂತ ರಮಣೀಯವಾಗಿ ಅನಾವರಣಗೊಂಡಿದೆ. ಈ ಹೊಟೇಲು ಅತ್ಯಾಧುನಿಕ ಸವಲತ್ತುಗಳನ್ನು ಒಳಗೊಂಡಿದೆ.
“ಎಂ.ಆರ್.ಜಿ.ಗ್ರೂಪಿನ ಹೊಸ ಸಾಧನೆ ಇದು. ನಾವು ಆತಿಥ್ಯೋದ್ಯಮದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆ ಎಂಬುದಕ್ಕೆ ಇದೊಂದು ನಿದರ್ಶನ. ಎಂ.ಆರ್.ಜಿ. ಗ್ರೂಪಿನ ದೇಶೀಯ ತಜ್ಞತೆ ಮತ್ತು ಮ್ಯಾರಿಯೆಟ್ ನ ಜಾಗತಿಕ ಪ್ರತಿಷ್ಠೆ ಜೊತೆಗೂಡಿ ಅತಿಥಿಗಳ ಪ್ರಯಾಣವನ್ನು ಮರುಕಲ್ಪಿಸುವ ಯತ್ನ ಇದು” ಎಂದು ಎಂ.ಆರ್.ಜಿ. ಗ್ರೂಪಿನ ಛೇರ್ಮನ್ ಕೆ.ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
“ಸಕಲೇಶಪುರದಲ್ಲಿ ಜೆಡಬ್ಲ್ಯೂ ಮ್ಯಾರಿಯಟ್ ಸ್ಪಾ ಮತ್ತು ರೆಸಾರ್ಟ್, ಚಿಕ್ಕಮಗಳೂರಿನಲ್ಲಿ ಮ್ಯಾರಿಯಟ್ ಸ್ಪಾ ಮತ್ತು ರೆಸಾರ್ಟ್ ಚಿಕ್ಕಮಗಳೂರು, ವೆಸ್ಟಿನ್ ಬೆಂಗಳೂರು ಮತ್ತು ಮ್ಯಾರಿಯಟ್ ಮಂಗಳೂರು ಸಹಿತ ಪ್ರಗತಿಯಲ್ಲಿರುವ ಹಲವಾರು ಯೋಜನೆಗಳ ಮೂಲಕ ಮ್ಯಾರಿಯೆಟ್ ಹೊಟೇಲ್ ಗಳ ಜೊತೆ ನಮ್ಮ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ನಾವು ಮುಂದಡಿ ಇಡುತ್ತಿದ್ದೇವೆ” ಎನ್ನುತ್ತಾರೆ ಎಂ.ಆರ್.ಜಿ. ಗ್ರೂಪಿನ ಆಡಳಿತ ನಿರ್ದೇಶಕ ಗೌರವ್ ಶೆಟ್ಟಿ. 1993 ರಲ್ಲಿ ಪ್ರಕಾಶ್ ಶೆಟ್ಟಿ ಅವರು ಸ್ಥಾಪಿಸಿದ ಎಂ.ಆರ್.ಜಿ. ಗ್ರೂಪ್ ಭಾರತದ ರಿಯಲ್ ಎಸ್ಟೇಟ್ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಪ್ರಮುಖ ಶಕ್ತಿಯಾಗಿ ಬೆಳೆದಿದೆ. ಅದು ಗೋಲ್ಡ್ ಫಿಂಚ್ ಹೊಟೇಲ್ ಮತ್ತು ರೆಸಾರ್ಟ್ ಗಳನ್ನು ಹೊಂದಿದೆ. 2030 ರ ವೇಳೆಗೆ ಎಂ.ಆರ್.ಜಿ. ಹಾಸ್ಪಿಟಾಲಿಟಿ ಶೀರ್ಷಿಕೆ ಅಡಿ 20 ಹೊಟೇಲ್ ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.