ಮೂಡುಬಿದಿರೆ: ‘ಹಾನಿ ಮಾಡದ, ವೈಜ್ಞಾನಿಕವಾದ ವೈಯಕ್ತಿಕ ನಂಬಿಕೆಗಳು ತಪ್ಪಲ್ಲ. ಆದರೆ, ಮೂಢನಂಬಿಕೆ ದೇಶಕ್ಕೆ ಅಪಾಯಕಾರಿ’ ಎಂದು ಭಾರತೀಯ ವಿಚಾರವಾದಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನರೇಂದ್ರ ನಾಯಕ್ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ಸ್ ಕ್ಲಬ್ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ‘ವೈಜ್ಞಾನಿಕ ಮನೋಧರ್ಮದ ಅಭಿವೃದ್ಧಿ ಹಾಗೂ ಸಂವಿಧಾನದ 51(ಎಎಚ್ವಿಧಿ) ವಿಚಾರ ಸಂಕಿರಣದಲ್ಲಿ ಅವರು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.
ಜಗತ್ತಿನಲ್ಲಿ ಎಲ್ಲವೂ ಪ್ರಕೃತಿ ನಿಯಮ ಅನುಸಾರ ನಡೆಯುತ್ತವೆ. ಆದರೆ, ಅದನ್ನು ಮೀರಿದ ‘ಪವಾಡ’ ಮಾಡುವವರ ಕುರಿತು ಸಾಕಷ್ಟು ಪ್ರಶ್ನೆಗಳಿವೆ’ ಎಂದರು. ‘ಪ್ರತಿ ವ್ಯಕ್ತಿಯ ನಂಬಿಕೆ ಪ್ರಕಾರ ಅವರ ದೇವರ ವ್ಯಾಖ್ಯಾನವೂ ವಿಭಿನ್ನ. ಹೀಗಾಗಿ, ದೇವರನ್ನು ವಿವಿಧ ಧರ್ಮ, ಪ್ರದೇಶ, ನಂಬಿಕೆಯ ಜನರು ವಿಭಿನ್ನವಾಗಿ ಚಿತ್ರಿಸುತ್ತಾರೆ. ಅದೇ ರೀತಿಯಲ್ಲಿ ಸಂಸ್ಕೃತಿಯೂ ಕಾಲ, ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ’ ಎಂದ ಅವರು, ‘ನೀವು ಯಾವುದನ್ನು
ಒಪ್ಪಿಕೊಳ್ಳಬೇಕಾದರೂ, ಪೂರಕ ಸಾಕ್ಷ್ಯವನ್ನು ಪರಿಶೀಲಿಸಿಕೊಳ್ಳಿ’ ಎಂದರು. ‘ನಮ್ಮ ದೇಶದಲ್ಲಿ ಅತ್ಯಂತ ಬುದ್ಧಿವಂತರು ಇದ್ದಾರೆ. ಆದರೆ, ವೈಜ್ಞಾನಿಕ ಮನೋಧರ್ಮದ ಕೊರತೆಯಿಂದ ಸಾಧನೆ ಮಾಡಲು ಸಾಧ್ಯವಾಗಿಲ್ಲ. ನಾವು ವೈಜ್ಞಾನಿಕ ವ್ಯಕ್ತಿತ್ವಗಳನ್ನು ನಾಯಕರನ್ನಾಗಿ ರೂಪಿಸಿಲ್ಲ’ ಎಂದ ಅವರು, ‘ವಿದ್ಯುತ್ ಪೇಟೆಂಟ್ ಮೂಲಕ ದೇಶಕ್ಕೆ ಕೋಟ್ಯಂತರ ರೂಪಾಯಿ ಉಳಿಕೆ ಮಾಡಿದ ಬಂಟ್ವಾಳ ಜಯಂತ ಬಾಳಿಗಾ, ಹಲವಾರು ರೋಗ, ಅಪೌಷ್ಟಿಕತೆಗೆ ಔಷಧಿ ಕಂಡು ಹಿಡಿಯುವ ಮೂಲಕ ದೇಶಕ್ಕೆ ಕೊಡುಗೆ ನೀಡಿದ ಡಾ.ಯಲ್ಲಪ್ರಗಢ ಸುಬ್ಬಾರೊ ನಮಗೆ ಗೊತ್ತಿಲ್ಲ.
ಅಂತಹ ವೈಚಾರಿಕ ವ್ಯಕ್ತಿಗಳು ನಮ್ಮ ನಾಯಕರಾಗಬೇಕಿತ್ತು’ ಎಂದರು. ನಾನು ಪ್ರಾಧ್ಯಾಪಕಾಗಿದ್ದೆನು. ಆದರೆ, ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ 12 ವರ್ಷದ ಬಾಲಕಿಯೊಬ್ಬಳನ್ನು ಭಾನಾಮತಿ ಮಾಟಕ್ಕಾಗಿ ಸುಲಿದು ಕೊಲೆ ಮಾಡಿದ ಘಟನೆಯು ನನ್ನ ಬದುಕನ್ನು ಬದಲಿಸಿತು. ದೇಶದಲ್ಲಿ ಇಷ್ಟೊಂದು ಮೌಢ್ಯ ತುಂಬಿರುವಾಗ, ಅದರ
ವಿರುದ್ಧ ಹೋರಾಟ ಮಾಡಲೇಬೇಕು. ನನ್ನ ದೇಶದ ರಕ್ಷಣೆಗೆ ಕೊಡುಗೆ ನೀಡಲೇಬೇಕು ಎಂದು ಉದ್ಯೋಗದಿಂದ ಹೊರಬಂದು ಸಂಪೂರ್ಣವಾಗಿ ವೈಚಾರಿಕ- ವೈಜ್ಞಾನಿಕ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದರು.
‘ಕೇವಲ ಐಐಟಿ, ಪಿಎಚ್ಡಿ, ಎಂಬಿಬಿಎಸ್, ಎಂಟೆಕ್ ಎಂಬಿತ್ಯಾದಿ ಬಿರುದು ಹೊಂದಿದರೆ ಸಾಲದು, ವೈಜ್ಞಾನಿಕ ಮನೋಧರ್ಮ ಅವಶ್ಯ. ಒಳ್ಳೆಯ ಮನಸ್ಸನ್ನು ಹೊಂದಿದ್ದರೆ, ಯಾವುದೇ ಧರ್ಮವೂ ಇಲ್ಲದೆಯೇ ಉತ್ತಮ ನಾಗರಿಕನಾಗಿರಲು ಸಾಧ್ಯ’ ಎಂದರು. ‘ಶೂನ್ಯದಿಂದ ಸೃಷ್ಟಿ ಅಸಾಧ್ಯ. ಹೀಗಾಗಿ, ಭಸ್ಮ ನೀಡುವುದು, ಸರ ನೀಡುವುದು, ಸ್ಪರ್ಶದ ಮೂಲಕ ಗುಣಪಡಿಸುವುದು, ಬಿಸಿ ಎಣ್ಣೆಯಿಂದ ಪೂರಿ ತೆಗೆಯುವುದು, ಅವೈಜ್ಞಾನಿಕವಾಗಿ ಸಮಸ್ಯೆ ಬಗೆಹರಿಸುವುದನ್ನು ನಂಬಬೇಡಿ.
ನೀವು ಪ್ರಾರ್ಥನೆಗಾಗಿ ದೇವಾಲಯ, ಚರ್ಚ್, ಮಸೀದಿಗಳಿಗೆ ಹೋದರೂ, ಆರೋಗ್ಯಕ್ಕಾಗಿ ಆಸ್ಪತ್ರೆ, ಇತರ ಪರಿಹಾರಗಳಿಗಾಗಿ ಸಂಬಂಧಿತ ವೈಜ್ಞಾನಿಕ ಕೇಂದ್ರಗಳಿಗೆ ಹೋಗಿ’ ಎಂದರು. ‘ಧಾರ್ಮಿಕ ಮೌಢ್ಯಗಳ ಮೂಲಕ ದೇಶದಲ್ಲಿ ಅತಿಹೆಚ್ಚು ಲಿಂಗತಾರತಮ್ಯ, ಆರ್ಥಿಕ ಶೋಷಣೆ, ಸಾಮಾಜಿಕ ತುಳಿತ, ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಮೌಢ್ಯವು ಯಾವುದೇ ಪ್ರದೇಶ, ಧರ್ಮಕ್ಕೆ ಸೀಮಿತವಲ್ಲ’ ಎಂದು ಉದಾಹರಣೆಗಳ ಸಹಿತ ವಿವರಿಸಿದರು.
‘ಮೂಲ ನಂಬಿಕೆಯಲ್ಲಿ ಅಪಾಯ ಇರಲಿಲ್ಲ. ಆದರೆ, ಅದನ್ನು ಲಾಭಕ್ಕಾಗಿ ಮೂಢನಂಬಿಕೆ ಮಾಡಿಕೊಂಡು ಅಪಾಯ ಸೃಷ್ಟಿಸುತ್ತಿದ್ದಾರೆ. ಎಡ-ಬಲ, ಆ ಧರ್ಮ -ಈ ಧರ್ಮ, ಆ ದೇಶ -ಈ ದೇಶ ಎಂಬಿತ್ಯಾದಿ ಗೊಂದಲಗಳಿಗಿಂತ ಮಾನವ ಸಿದ್ಧಾಂತವೇ ಶ್ರೇಷ್ಠ’ ಎಂದು ವಿದ್ಯಾರ್ಥಿಗಳ ಪ್ರಶ್ನೆಗೆ ಅವರು ಉತ್ತರಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ‘ಈಗಿನ ಜನತೆ ‘ರೀಲ್ಸ್’ ಮಾರು ಹೋಗುತ್ತಿದ್ದಾರೆ. ಆದರೆ, ಬದುಕಿಗೆ ‘ರಿಯಲ್’ (ವಾಸ್ತವ) ಬೇಕಾಗಿದೆ’ ಎಂದರು. ‘ನಂಬಿಕೆ ವೈಯಕ್ತಿಕ. ಆದರೆ ದೇವರ ಹೆಸರಲ್ಲಿ ಮೌಢ್ಯ ಬಿತ್ತುವುದು ತಪ್ಪು. ಯಾವುದೇ ವಿಚಾರಗಳಿರಲಿ ಪ್ರಜಾಸತ್ತಾತ್ಮಕವಾಗಿ ವಿಮರ್ಶಿಸಬೇಕು. ಯುವಜನತೆ ಪ್ರಶ್ನಿಸಬೇಕು. ಯೋಚನಾ ಕ್ರಮದಲ್ಲಿ ಪ್ರಶ್ನೆಗಳು ಇರಬೇಕು’’ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ವಿಚಾರವಾದಿ ಶ್ಯಾಮ್ ಸುಂದರ್ ಹಾಗೂ ಮಯೂರ್ ಇದ್ದರು. ಆಳ್ವಾಸ್ ಧ್ವನಿ ತಂಡವು ಪ್ರಾರ್ಥನೆ ಹಾಡಿತು. ವಿದ್ಯಾರ್ಥಿ ಅವಿನಾಶ್ ಕಟೀಲ್ ಕಾರ್ಯಕ್ರಮ ನಿರೂಪಿಸಿದರು.