“ಅಭಿಮತ” ವಾಹಿನಿಯ ಮುಖ್ಯಸ್ಥೆಯಾಗಿರುವ ಡಾ| ಮಮತಾ ಪಿ.ಶೆಟ್ಟಿಯವರಿಗೆ 2025 ರ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೌರವವು ಮಾಧ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ದೊರೆತಿದೆ. ತಮ್ಮ ವೃತ್ತಿ ಜೀವನದ ಪ್ರಯಾಣವನ್ನು ಸುದ್ದಿ ವಾಚಕಿಯಾಗಿ, ಕಾರ್ಯಕ್ರಮ ನಿರೂಪಕಿಯಾಗಿ ಆರಂಭಿಸಿದ ಅವರು ಬಳಿಕ ಕಾರ್ಯಕ್ರಮ ನಿರ್ಮಾಪಕರಾಗಿ ಈಗ ಸ್ವಂತ ವಾಹಿನಿ “ಅಭಿಮತ” ದ ಮುಖ್ಯಸ್ಥೆಯಾಗಿ ಮುನ್ನಡೆಸುತ್ತಿದ್ದಾರೆ. ನಿರಂತರ ಕಲಿಕೆಯಿಂದ ಆಧುನಿಕ ಇಲೆಕ್ಟ್ರಾನಿಕ್ ಮಾಧ್ಯಮದ ತಾಂತ್ರಿಕ ಸಂಗತಿಗಳು ಮತ್ತು ಅವುಗಳ ನಿರ್ವಹಣೆಯನ್ನು ಕೈವಶ ಮಾಡಿಕೊಂಡಿರುವ ಅವರು ಸದಾ ಅನ್ವೇಷಣೆ, ನಾವಿನ್ಯತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ತಮ್ಮ ಸಂಸ್ಥೆಯಲ್ಲಿ ಮಹಿಳೆಯರಿಗೆ ಆದ್ಯತೆಯಲ್ಲಿ ಉದ್ಯೋಗ ನೀಡಿದ್ದಾರೆ. ತುಳು ಸಂಸ್ಕೃತಿಯ, ಪರಂಪರೆಯ ಕುರಿತಾದ ಆಳವಾದ ಜ್ಞಾನ, ಕೆಲವು ನಂಬಿಕೆಗಳ ಕುರಿತಾಗಿ ಅವರು ನವೀನ ರೀತಿಯಲ್ಲಿ ಯೋಚಿಸುವಂತೆ ಮಾಡಿದೆ.

ಮಂಚಿ ಸಾಲೆತ್ತೂರಿನಂತಹ ಗ್ರಾಮೀಣ ಪ್ರದೇಶದಿಂದ ಬಂದ ಡಾ| ಮಮತಾ ಪಿ ಶೆಟ್ಟಿಯವರು ವಿದ್ಯಾರ್ಥಿ ಜೀವನದಲ್ಲಿ ಕ್ರೀಡಾಳುವಾಗಿದ್ದವರು. ಕಾಲೇಜು ಚಾಂಪಿಯನ್, ರಾಜ್ಯ ಮಟ್ಟದಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದವರು. ಸ್ಕೌಟ್ಸ್ ಗೈಡ್ಸ್ ಕ್ಷೇತ್ರದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಗೌರವ ಪಡೆದವರು. ಅವರ ಹಿರಿಯ ಪುತ್ರ ಇಂಜಿನಿಯರಿಂಗ್ ವಿದ್ಯಾರ್ಥಿ. ಅವರು ಕೂಡಾ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.





































































































