ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಜಾಡಿಮನೆ, ಪತ್ರಕರ್ತ, ವರದಿಗಾರರಾದ, ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಇವರಿಗೆ ವಿಶ್ವದರ್ಶನ ಕನ್ನಡ ದಿನಪತ್ರಿಕೆ, ಹುಬ್ಬಳ್ಳಿ ಮತ್ತು ಪ್ರಜಾ ದರ್ಶನ ಕನ್ನಡ ಮಾಧ್ಯಮ ಸಂಸ್ಥೆಯ ಕೊಡ ಮಾಡುತ್ತಿರುವ ಬೆಂಗಳೂರು ಬ್ಯೂರೋ ಚೀಫ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಪತ್ರಕರ್ತರಿಗೆ ನೀಡುವ 2022-2023 ಸಾಲಿನ “ರಾಷ್ಟ್ರೀಯ ಮಾಧ್ಯಮ ಭೂಷಣ ಪ್ರಶಸ್ತಿ- 2022” ಘೋಷಣೆಯಾಗಿದೆ. ವಿಶ್ವದರ್ಶನ ಮಾಧ್ಯಮ ಸಂಸ್ಥೆಯ ಸಂಪಾದಕರಾದ ಎಸ್ ಎಸ್ ಪಾಟೀಲ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಒಟ್ಟು 165 ಹೆಚ್ಚು ಸಾಧಕರನ್ನು ಗುರುತಿಸುವ ವಿನೂತನ ಕಾರ್ಯಕ್ರಮವು ಇದಾಗಿದೆ. ಹೀಗೆ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಕೊಡಮಾಡುವ ಪ್ರಶಸ್ತಿಗೆ ಈ ಬಾರಿ ಸಂತೋಷ್ ಶೆಟ್ಟಿ ಮೊಳಹಳ್ಳಿ ಅವರು ಆಯ್ಕೆಯಾಗಿರುವುದು ಸಂಸ್ಥೆ ಹೆಮ್ಮೆಯಿಂದ ದೃಢಪಡಿಸಿದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಧಾರವಾಡದ ರಂಗಾಯಣ ಸಭಾ ಭವನದಲ್ಲಿ ದಿನಾಂಕ 22-09-2022 ರಂದು ಗುರುವಾರ ಬೆಳಿಗ್ಗೆ 10.00 ಗಂಟೆಗೆ ಕಾರ್ಯಕ್ರಮ ಅನಾವರಣಗೊಳ್ಳಲಿದೆ. ವಿಶ್ವ ದರ್ಶನ ಮಹಾ ಸಮ್ಮೇಳನ -2022 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿರುವ ಕಾಲಜ್ಞಾನ ಬ್ರಹ್ಮ ಸದ್ಗುರು ಶರಣ ಬಸವ ಮಹಾಸ್ವಾಮಿಗಳು, ಕಾಲಜ್ಞಾನ ಮಠ ಗಜೇಂದ್ರಗಡ ಅವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ವಿವಿಧ ಮಠದ ಗಣ್ಯರು, ಸಾರ್ವಜನಿಕರು, ರಾಜ್ಯದ ಪತ್ರಿಕಾ ವರದಿಗಾರರು ಸಹಸ್ರ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ “ಪತ್ರಿಕೋದ್ಯಮ ಮತ್ತು ಸಮಾಜ” ವಿಷಯ ಕುರಿತಂತೆ ಪ್ರಶಸ್ತಿ ವಿಜೇತ ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಅವರ ಉಪನ್ಯಾಸ ನಡೆಯಲಿದೆ.
ಪತ್ರಕರ್ತ ಕೆ.ಸಂತೋಷ್ ಶೆಟ್ಟಿ ಮೊಳಹಳ್ಳಿ ಅವರ ಪತ್ರಿಕೋದ್ಯಮದ ಹಾದಿ :-
ಪತ್ರಕರ್ತ, ವರದಿಗಾರ, ಅಂಕಣಕಾರ, ನಿರೂಪಕ ,ಬರಹಗಾರ, ಕೆ.ಸಂತೋಷ ಶೆಟ್ಟಿ ಮೊಳಹಳ್ಳಿ ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಕಾಜಾಡಿ ಮನೆಯವರು. ತಂದೆ ಜಗನಾಥ ಶೆಟ್ಟಿ ಮತ್ತು ತಾಯಿ ವಸಂತಿ ಶೆಟ್ಟಿ ಅವರ ಪುತ್ರನಾಗಿ 24/01/1990 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸ.ಕಿ.ಪ್ರಾ ಕೈಲ್ಕೆರೆ ಹಾಗೂ ಸ.ಹಿ.ಪ್ರಾ.ಮೊಳಹಳ್ಳಿ ಶಾಲೆಯಲ್ಲಿ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಪದವಿ ಪೂರ್ವ ಕಾಲೇಜು ಬಿದ್ಕಲ್ಕಟ್ಟೆಯಲ್ಲಿ ಕಲಿತರು. ಕೆಲಸದ ಜೊತೆ ಜೊತೆಯಲ್ಲಿ ಹುಬ್ಬಳ್ಳಿಯ ಜ್ಞಾನಗಂಗಾ ಶಿಕ್ಷಣ ಸಂಸ್ಥೆಯಲ್ಲಿ ಪದವಿಯನ್ನು ಪೂರೈಸಿ, ಅಂದಿನ ಶಿಕ್ಷಣ ವ್ಯವಸ್ಥೆ ಕೂಡ ಕ್ಲಿಷ್ಟಕರವಾಗಿದ್ದು ಆರ್ಥಿಕ ಪರಿಸ್ಥಿತಿ ಕಷ್ಟವಾಗಿದ್ದರೂ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡರು. ಧಾರವಾಡದ ಎಸ್.ಡಿ.ಎಂ ಅಲ್ಲಿ ಪತ್ರಿಕೋದ್ಯಮವನ್ನು ಮುಗಿಸಿ, ಪತ್ರಿಕಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಮೊದಲಾಗಿ ಕುಂದಾಪುರದ “ಪ್ರಾರ್ಥನಾ” ಪಾಕ್ಷಿಕ ಪತ್ರಿಕೆಯಲ್ಲಿ ಪ್ರಧಾನ ವರದಿಗಾರರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ತದನಂತರ “ಭಾವನೆಗಳ ಚಿತ್ರಲೇಖ” ಕನ್ನಡ ಮಾಸ ಪತ್ರಿಕೆಯಲ್ಲಿ ಕುಂದಾಪುರ- ಉಡುಪಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ನಂತರ “ನಿಮ್ಮ ಅಭಿಮತ” ಪಾಕ್ಷಿಕ ಪತ್ರಿಕೆಗಳಲ್ಲಿ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸಿದರು. ಇದೇ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುವಾಗ “ಹಳ್ಳಿಗಾಡಿನ ನಕ್ಸಲ್ ಸಮಸ್ಯೆ ಬಗ್ಗೆ ಕಾನನದ ಕತ್ತಲಲ್ಲಿ ಹೆಣವಾದಳಾ ನಕ್ಸಲ್ ಪ್ರಭಾ ಎನ್ನುವ ವಿಷಯಕ್ಕೆ ನವದೆಹಲಿಯ ಮಾಧ್ಯಮ ಒಕ್ಕೂಟ ಸಂಸ್ಥೆಯಿಂದ/ಸ್ಟೇಟ್ ಜನರ್ಲಿಸ್ಟ್ ಯುನಿಯನ್ ನಿಂದ “ಉತ್ತಮ ವರದಿಗಾರಿಕೆ ಪ್ರಶಸ್ತಿ “೨೦೧೫ (ಬೆಸ್ಟ್ ರಿಪೋರ್ಟರ್ ಅವಾರ್ಡ್ )ರಲ್ಲಿ ಲಭಿಸಿತು. ೨೦೧೬ ರಲ್ಲಿ ಬುಟ್ಟಿ ನೇಕಾರರ ಸಮಸ್ಯೆ ಕುರಿತು “ಬುಟ್ಟಿ ಒಳಗಿನ ಕಮರಿದ ಬದುಕು” ಈ ವರದಿಗೆ “ಜನಸ್ನೇಹಿ ರಿಪೋರ್ಟ್ ೨೦೧೬” ಪ್ರಶಸ್ತಿ ಲಭಿಸಿತು. ರಾಣಿಬೆನ್ನೂರು ವಿದ್ಯಾವರ್ಧಕ ಸಂಘಟನೆ ಮತ್ತು ಕನ್ನಡಪರ ಸಂಘಟನೆಗಳ ಒಕ್ಕೂಟ ರಾಣಿಬೆನ್ನೂರು( ರಿ.) ಕೊಡಮಾಡಿರುವ ಪಬ್ಲಿಕ್ ರೈಟರ್ ಅವಾರ್ಡ್ ಇತ್ತೀಚೆಗೆ ಲಭಿಸಿದ್ದಲ್ಲದೆ, ಬೆಂಗಳೂರಿನ ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಸಂಸ್ಥೆ ನಡೆಸುವ “ಅತ್ಯುತ್ತಮ ಮಾಧ್ಯಮ ಪುರಸ್ಕಾರ” 2018ರಲ್ಲಿ ಲಭಿಸಿದೆ. 2019 ರಲ್ಲಿ ಕರ್ನಾಟಕ ದರ್ಶನ ಕನ್ನಡ ಮಾಧ್ಯಮ ಸಂಸ್ಥೆ ನಡೆಸಿದ “ರಾಷ್ಟ್ರೀಯ ಮಾಧ್ಯಮ ಭೂಷಣ ಪ್ರಶಸ್ತಿ 2018 ” ಲಭಿಸಿದೆ. ತದನಂತರ “ಕರಾವಳಿ ಬಂಟರ ಬಳಗ ಮಾಸ ಪತ್ರಿಕೆ”ಯಲ್ಲಿ ಉಪ ಸಂಪಾದಕರಾಗಿ, ವರದಿಗಾರರಾಗಿ, ತನಿಖಾ ವರದಿಗಾರರಾಗಿ, ಅಂಕಣಕಾರರಾಗಿ ಅನವರತ ಶ್ರಮಿಸಿದ್ದಾರೆ. ಅದೇ ರೀತಿ “ಹರ್ಷವಾಣಿ” ಕನ್ನಡ ಮಾಸ ಪತ್ರಿಕೆಯಲ್ಲಿ “ಭಾವದೀಪ್ತಿ ಎನ್ನುವ ವಿಶೇಷ ಅಂಕಣ ದೊಂದಿಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಸರಣಿ ಅಂಕಣ ಬರೆಯುತ್ತಿದ್ದಾರೆ. ಅದೇ ರೀತಿ “ಹರ್ಷವಾಣಿ”ಯಲ್ಲಿ ನಾಡಿನ ಐತಿಹಾಸಿಕ ದೇಗುಲಗಳ ಪರಿಚಯ ಯನ್ನೊಳಗೊಂಡ “ದೇಗುಲ -ದರ್ಶನ” ಎನ್ನುವ ಇನ್ನೊಂದು ಅಂಕಣವನ್ನು ಕೂಡ ನಿರಂತರವಾಗಿ ಬರೆಯುತ್ತಿದ್ದಾರೆ. ಕುಂದಾಪುರ ತಾಲ್ಲೂಕಿನ ಪ್ರಸಿದ್ಧ ವಾರಪತ್ರಿಕೆಗಳಲ್ಲಿ ಒಂದಾದ ಸುದ್ದಿಮನೆ ಕನ್ನಡ ವಾರಪತ್ರಿಕೆಯಲ್ಲಿ “ಭಾವದೀಪ್ತಿ” ಅಂಕಣ ನೂರಾರು ಕಂತುಗಳನ್ನು ಪೂರೈಸಿದ್ದು, ಜಿಲ್ಲೆಯಾದ್ಯಂತ ಮನೆಮಾತಾಗಿದೆ. ಇನ್ನು ದೃಶ್ಯ ಮಾಧ್ಯಮದಲ್ಲೂ ಇವರು ಕೈಯಾಡಿಸಿದ್ದು ಹಲವಾರು ರಾಷ್ಟ್ರೀಯ ಹಾಗೂ ಖಾಸಗಿ ವಾಹಿನಿಗಳಿಗೆ ಸುದ್ದಿ ಕೊಡುವುದರೊಂದಿಗೆ ಹಾಗೂ ಚರ್ಚೆ ಗರ್ಭಿತ ವಿಷಯಗಳಿಗೆ ದೂರವಾಣಿ ಮೂಲಕ ಅನಿಸಿಕೆಯನ್ನು ನೇರ ಪ್ರಸಾರದಲ್ಲಿ ವರದಿಯನ್ನು ಬಿಂಬಿಸುತ್ತಾರೆ. ಕೇಂದ್ರ ಕನ್ನಡ ಪಕ್ಷದ ಮಾಧ್ಯಮ ಕಾರ್ಯದರ್ಶಿಯಾಗಿ, ಯುವಕ ಮಂಡಳದ ಕಾರ್ಯದರ್ಶಿಯಾಗಿ, ಜನಪರ ಸ್ನೇಹಾ ಕರ್ನಾಟಕ ಬೆಂಗಳೂರು ಇದರ ಸಲಹೆಗಾರರಾಗಿ, ಅದಲ್ಲದೆ ನಿರಂತರವಾಗಿ ಒಂದು ದಿನಗಳ ಕಾಲ ಯಾವುದೇ ಕಾರ್ಯಕ್ರಮವಿರಲಿ ವಿಶೇಷವಾಗಿ “ನಿರೂಪಣೆ” ಮಾಡುವುದರ ಮೂಲಕ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದರೆ. ಅದಲ್ಲದೆ ಪ್ರಸ್ತುತವಾಗಿ ಬೆಂಗಳೂರಿನ ಮಯ್ಯಾಸ್ ಫುಡ್ಸ್ & ಬೆವರೆಜಸ್ ಪ್ರೈವೇಟ್ ಲಿಮಿಟೆಡ್ ಇದರ ಮಾರುಕಟ್ಟೆ ವಿಭಾಗದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ಚಿಕ್ಕಬಳ್ಳಾಪುರದ “ಆಶಾ ಧ್ವನಿ ಕನ್ನಡ ದಿನಪತ್ರಿಕೆ”ಯಲ್ಲಿ ಬೆಂಗಳೂರು ಮುಖ್ಯ ವರದಿಗಾರರಾಗಿ, ಸಲಹಾ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿ ಹೊಸಪೇಟೆಯ ವಾರಪತ್ರಿಕೆ -“ದಿ ಜರ್ನಿ ಆಫ್ ಸೊಸೈಟಿ” ಎಂಬ ಪತ್ರಿಕೆಯ ಸಹ ಸಂಪಾದಕರಾಗಿ ಈಗಾಗಲೆ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೂ ಉತ್ತರ ಕರ್ನಾಟಕದ ರಾಯಚೂರು ವಿಭಾಗದ ಮುದುಗಲ್ ಎಕ್ಸ್ ಪ್ರೆಸ್ ವಾರಪತ್ರಿಕೆ ಹಾಗೂ ಬಳ್ಳಾರಿಯ ಕಲ್ಯಾಣ ವೈಭವ ಕನ್ನಡ ದಿನಪತ್ರಿಕೆಯಲ್ಲಿ ಮುಖ್ಯ ಪ್ರಧಾನ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ಹತ್ತು ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ಸರ್ವತೋಮುಖ ಅಭಿವೃದ್ಧಿ ಹಾಗೂ ಸಾಹಿತ್ಯ ಜ್ಞಾನದೊಂದಿಗೆ ವ್ಯಾಪ್ತಿಯನ್ನು ಬೆಳಗಿಸಿಕೊಂಡಿದ್ದಾರೆ. ಅದೇ ರೀತಿ ವಿಶ್ವದರ್ಶನ ಮಾಧ್ಯಮ ಸಂಸ್ಥೆ ಕೊಡ ಮಾಡುತ್ತಿರುವ “ರಾಷ್ಟ್ರೀಯ ಮಾಧ್ಯಮ ಭೂಷಣ ಪ್ರಶಸ್ತಿ-2022ಗೆ ಸಾರ್ವಜನಿಕರು, ಊರಿನವರು, ಸಮಸ್ತ ಓದುಗ ಅಭಿಮಾನಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.