ಹಸಿರು ಸಿರಿಯ ನಿಸರ್ಗ ಸೌಂದರ್ಯಕ್ಕೆ ಹೆಸರು ಪಡೆದ ಪ್ರಾಕೃತಿಕ ಆಕರ್ಷಣೆಗಳಿಂದ ಜನಮನ ಸೂರೆಗೊಳ್ಳುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪುಟ್ಟ ಹಳ್ಳಿಯಲ್ಲಿ ದಿನಾಂಕ 6..2..1975 ರಂದು ಹಳ್ನಾಡು ಕೆಳಮನೆ ನಾರಾಯಣ್ ಶೆಟ್ಟಿ ಹಾಗೂ ಕನಕ ನಾರಾಯಣ ಶೆಟ್ಟಿ ದಂಪತಿಗಳಿಗೆ ಮುದ್ದು ಮಗನಾಗಿ ಜನಿಸಿದ ಮಂಜುನಾಥ್ ಶೆಟ್ಟರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತನ್ನ ಹುಟ್ಟೂರಲ್ಲೇ ಪೂರೈಸಿ, ಭವಿಷ್ಯ ಜೀವನಕ್ಕೊಂದು ಭದ್ರ ನೆಲೆಯ ಹುಡುಕಾಟದಲ್ಲಿ 1994 ರಲ್ಲಿ ಮಾಯಾನಗರಿ ಮುಂಬಯಿಗೆ ಬಂದು ಅಂಧೇರಿಯ ಟಿ.ಸಿ.ಎಸ್ ಕ್ಯಾಂಟೀನ್ ನಲ್ಲಿ ದುಡಿಯುತ್ತಲೇ ತಮ್ಮ ಶಿಕ್ಷಣವನ್ನೂ ಮುಂದುವರಿಸಿದರು.
ಮುಂಬಯಿ ನಗರದ ಪ್ರತಿಷ್ಠಿತ ಸಿದ್ಧಾರ್ಥ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮುಗಿಸಿದ ಶ್ರೀಯುತರು ಫಾಸ್ಟ್ ಟ್ರ್ಯಾಕ್ ವರ್ಲ್ಡ್ ವೈಡ್ ಪ್ರೈವೇಟ್ ಲಿಮಿಟೆಡ್ ಎಂಬ ತನ್ನದೇ ಆದ ಉದ್ಯಮ ಸಂಸ್ಥೆಯನ್ನು ಸ್ಥಾಪಿಸಿದರು. ಪ್ರತಿಷ್ಠಿತ ಡಿ.ಟಿ.ಡಿ.ಸಿ ಕೊರಿಯರ್ ಸಂಸ್ಥೆಯ ಮೂಲಕ ಮುಂಬಯಿಯ ಹಲವಾರು ಕಡೆ ತಮ್ಮ ಸಂಸ್ಥೆಯ ಶಾಖೆಗಳನ್ನು ತೆರೆಯುವ ಮೂಲಕ ತನ್ನ ವ್ಯವಹಾರ ಕ್ಷೇತ್ರವನ್ನು ವಿಸ್ತರಿಸಿದರು. ಉದ್ಯಮದಲ್ಲಿ ಯಶಸ್ಸು ಸಂಪಾದಿಸಿ ಆರ್ಥಿಕವಾಗಿ ಸ್ಥಿರತೆಯನ್ನು ಹೊಂದಿದ ಬಳಿಕ ತಮ್ಮ ಆಸಕ್ತಿ ಸಮಾಜ ಸೇವೆಯ ಕಡೆ ತಿರುಗಿದಾಗ ಮುಂಬಯಿ ಬಂಟರ ಸಂಘದ ವಸಾಯಿ ಡಹಾಣೂ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಸ್ಥಾನ ತಾನಾಗಿ ಒಲಿದು ಬಂತು. ಬಳಿಕ ತುಳು ಕೂಟ ಫೌಂಡೇಶನ್ ನಲಸೋಪಾರ ಇದರ ಉಪಾಧ್ಯಕ್ಷ ಪದವೂ ದೊರೆಯಿತು. ಶೆಟ್ಟರು ತಾನು ಸಂಪಾದಿಸಿ ಒಂದಷ್ಟು ಭಾಗವನ್ನು ಸಮಾಜದ ಒಳಿತಿಗಾಗಿ ವಿನಿಯೋಗಿಸುತ್ತಾ ಓರ್ವ ಕೊಡುಗೈ ದಾನಿ ಎಂಬ ಜನಾದರವನ್ನೂ ಪಡೆದಿದ್ದಾರೆ.
ಯಕ್ಷಗಾನ ಕಲೆ ಕುರಿತಂತೆ ಅತೀವ ಒಲವು ಸೆಳೆತ ಹೊಂದಿರುವ ಮಂಜುನಾಥ್ ಶೆಟ್ಟರು ಜೀವದಾನಿ ಯಕ್ಷಗಾನ ಕಲಾ ವೇದಿಕೆಯ ಮೂಲಕ ಆಸಕ್ತ ಪುಟಾಣಿಗಳಿಗೆ ಮಕ್ಕಳಿಗೆ ಯಕ್ಷಗಾನ ತರಬೇತಿ ದೊರೆಯುವ ಅವಕಾಶ ಕಲ್ಪಿಸಿ ಕಲಾ ಪೋಷಕರೆಂಬ ಜನಮನ್ನಣೆಗೂ ಪಾತ್ರರಾಗಿದ್ದಾರೆ. ತನ್ನ ಅಧಿಕಾರಾವಧಿಯಲ್ಲಿ ಎರಡು ವಾರ್ಷಿಕೋತ್ಸವಗಳನ್ನು ಅದ್ದೂರಿಯಾಗಿ ಆಚರಿಸಿ ಅದರ ಸಂಭ್ರಮವನ್ನು ಕಂಡವರು. ತನ್ನ ಮನಸ್ಸನ್ನು ಅರಿತು ನಡೆಯುವ ಹಾಗೂ ತನ್ನ ಜನಪರ ಚಟುವಟಿಕೆಗಳನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿರುವ ಶ್ರೀಮತಿ ಜಯಂತಿ ಶೆಟ್ಟಿ ಅವರೊಂದಿಗೆ ಸಂತೃಪ್ತ ಸಂಸಾರ ನಡೆಸಿಕೊಂಡು ಬಂದಿರುವ ಕೊಡ್ಲಾಡಿ ಅವರಿಗೆ ಸಾನ್ವಿ ಎಂಬ ಮಗಳು ಹಾಗೂ ಈಶಾನ್ ಎಂಬ ಮಗ ಹೀಗೆ ಸಂಸಾರದ ಎರಡು ಕಣ್ಣುಗಳಂತಿರುವ ಮುದ್ದು ಮಕ್ಕಳಿದ್ದಾರೆ.
ಇದೀಗ ಮಂಜುನಾಥ್ ಶೆಟ್ಟಿಯವರ ಸಮಾಜಪರ ಕಾಳಜಿಯನ್ನು ಗಮನಿಸಿದ ಸ್ಥಾನೀಯ ಸಮಿತಿ ಹಾಗೂ ಕೇಂದ್ರ ಸಮಿತಿಯ ಸಂಪೂರ್ಣ ಸಮ್ಮತಿಯೊಂದಿಗೆ ವಸಾಯಿ ಡಹಾಣೂ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನಕ್ಕ ಅವಿರೋಧವಾಗಿ ಆಯ್ಕೆಯಾದ ಶ್ರೀ ಮಂಜುನಾಥ್ ಶೆಟ್ಟಿ ಕೊಡ್ಲಾಡಿ ಅವರಿಗೆ ಹಾರ್ದಿಕ ಅಭಿನಂದನೆಗಳು, ಶುಭಾಶಯಗಳು. ಭವಿಷ್ಯದಲ್ಲಿ ಅವರಿಗೆ ಇನ್ನಷ್ಟು ಸ್ಥಾನಮಾನಗಳು ಲಭ್ಯವಾಗಲಿ. ಆರೋಗ್ಯ, ಸೌಭಾಗ್ಯ ಸ್ಥಿರವಾಗಿರಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.
ಶುಭಂ ಭದ್ರಂ…
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು