ಕರ್ನಾಟಕದ ಏಕೀಕರಣ ಸುದೀರ್ಘ ಕಾಲದ ಹೋರಾಟದ ಫಲವಾಗಿದ್ದು, ಈ ಹೋರಾಟವನ್ನು ಅರಿತುಕೊಳ್ಳುವುದರಿಂದ ಕನ್ನಡದ ಇತಿಹಾಸ ಪ್ರಜ್ಞೆ ಮತ್ತು ರಾಜ್ಯೋತ್ಸವದ ಮಹತ್ವ ಅರಿಯಲು ಸಾಧ್ಯ ಎಂದು ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಹೇಳಿದರು. ಅವರು ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರದಂದು ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತವಲ್ಲ. ಅದು ನಮ್ಮ ಗುರುತು, ಆತ್ಮಗೌರವ ಮತ್ತು ಒಗ್ಗಟ್ಟಿನ ಸಂಕೇತ. ಇಲ್ಲಿನ ಜನರ ಸಂಸ್ಕೃತಿ, ಭಾಷೆ, ಕಲೆ ಮತ್ತು ಧರ್ಮಗಳ ವೈವಿಧ್ಯತೆಯಿಂದಾಗಿ, ಕರ್ನಾಟಕವನ್ನು ಬಹುಸಂಸ್ಕೃತಿಯ ಆಡುಂಬೊಲವನ್ನಾಗಿಸಿದೆ. ನಮ್ಮ ನಾಡಗೀತೆಯಲ್ಲಿ ಕವಿ ಕುವೆಂಪು ಅವರು ಕರ್ನಾಟಕವನ್ನು ಭಾರತದ ಮಗಳಾಗಿ ಚಿತ್ರಿಸಿದ್ದಾರೆ. ಭಾರತದ ಅಖಂಡತೆಗೆ ಕರ್ನಾಟಕ ಪೂರಕವಾಗಿದೆ. ಭಾಷೆ ಉಳಿಯಬೇಕಾದದ್ದು ಹೃದಯದಲ್ಲಿ. ನಮ್ಮ ಭಾಷೆಯ ಮೇಲೆ ಅಭಿಮಾನ ಇರಬೇಕು, ಆದರೆ ಅಂಧಾಭಿಮಾನ ಇರಕೂಡದು. ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರು ಕೊಂಕಣಿ ಮಾತೃಭಾಷೆಯವರಾದರೂ ಕನ್ನಡದಲ್ಲಿ ಅನೇಕ ಅಮೂಲ್ಯ ಕೃತಿಗಳನ್ನು ರಚಿಸಿ, ತುಳು ಸಂಶೋಧನೆಗೂ ಮಹತ್ವದ ಕೊಡುಗೆ ನೀಡಿದ್ದಾರೆ. ಫರ್ಡಿನಾಂಡ್ ಕಿಟ್ಟೆಲ್, ಮೂಲತಃ ಜರ್ಮನಿಯವರಾದರೂ, ಭಾರತಕ್ಕೆ ಬಂದ ನಂತರ ಕನ್ನಡದ ಸೊಗಸು ಮತ್ತು ಸಾಹಿತ್ಯದ ಸಮೃದ್ಧಿಯಿಂದ ಆಕರ್ಷಿತರಾಗಿ, ತಮ್ಮ ಜೀವನದ ಬಹುಪಾಲು ಕಾಲವನ್ನು ಕನ್ನಡದ ಅಧ್ಯಯನಕ್ಕೆ ಮೀಸಲಿಟ್ಟರು. ಅವರ ಅಮೂಲ್ಯ ಕೊಡುಗೆ ಕಿಟ್ಟೆಲ್ ನಿಘಂಟು ಇಂದಿಗೂ ಕನ್ನಡ ಪಂಡಿತರು ಮತ್ತು ವಿದ್ಯಾರ್ಥಿಗಳಿಗೆ ಅಮೂಲ್ಯ ಸಂಪತ್ತಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟವು ರಾಜಕೀಯ ಸ್ವಾತಂತ್ರ್ಯವನ್ನಿತ್ತರೆ, ಕರ್ನಾಟಕ ಏಕೀಕರಣದ ಹೋರಾಟವು ಭಾಷಾ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯ ತಂದಿತು. ಕರ್ನಾಟಕ ಏಕೀಕರಣ ಹೋರಾಟ ಕನ್ನಡಿಗರನ್ನು ಒಗ್ಗೂಡಿಸಿತು ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕದ ಪ್ರತಿಯೊಂದು ಜಿಲ್ಲೆ ಹಾಗೂ ಹೆಚ್ಚಿನ ರಾಜ್ಯಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಇತರ ಕಾಲೇಜುಗಳಲ್ಲಿ ೮೫% ವಿದ್ಯಾರ್ಥಿಗಳು ಸ್ಥಳೀಯರಿದ್ದರೆ, ಕೇವಲ ೧೫% ಮಂದಿ ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ಬಂದಿರುತ್ತಾರೆ. ಆದರೆ ಆಳ್ವಾಸ್ನಲ್ಲಿ ೮೫% ಹೊರಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ. ಇಂತಹ ವೈವಿಧ್ಯಮಯ ಸಹಬಾಳ್ವೆಯೇ ಆಳ್ವಾಸ್ನ ವೈಶಿಷ್ಟ್ಯ. ಆಳ್ವಾಸ್ನ ಕನ್ನಡದ ಪ್ರೀತಿ ಮಾತಿಗೆ ಮಾತ್ರ ಸೀಮಿತವಲ್ಲ. ಕೃತ್ಯದಲ್ಲಿ ರಾರಜಿಸುತ್ತದೆ. ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಒಂದಾಗಿ ಕಲಿಯುವ ಈ ನೆಲದಲ್ಲಿ ಭಾಷೆ ಒಗ್ಗೂಡಿಸಲಿ, ಮನಸ್ಸು ಬೆಳಗಲಿ ಎಂದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ಫೆರ್ನಾಂಡೀಸ್, ಪಾಲಕರಾದ ಮಾಧವ, ಕನ್ನಡ ಸಂಘದ ಸಂಚಾಲಕರಾದ ಪ್ರೊ. ಗಣೇಶ್ ಎಮ್ ಆರ್, ಡಾ. ಗುರುಶಾಂತ್ ಬಿ ವಗ್ಗರ್ ಇದ್ದರು. ಪ್ರನೂಷಾ ಕಾರ್ಯಕ್ರಮ ನಿರೂಪಿಸಿದರು.





































































































