ಯಕ್ಷಗಾನ ಕಲಾ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶವಾಗಿ ದಶಕಗಳೇ ಕಳೆದವು. ಅದರಲ್ಲೂ ವಿದ್ಯಾರ್ಥಿನಿಯರು, ಯುವತಿಯರು ಯಕ್ಷಗಾನ ರಂಗದ ಕಡೆ ಹೆಚ್ಚೆಚ್ಚು ಆಕರ್ಷಿತರಾಗುತ್ತಿರುವುದು ಕಲೆಯ ಬೆಳವಣಿಗೆ ದೃಷ್ಟಿಯಿಂದ ಆರೋಗ್ಯಕರ ಬೆಳವಣಿಗೆ ಎನ್ನಬಹುದು. ಈ ನಿಟ್ಟಿನಲ್ಲಿ ನೋಡಿದರೆ ತನ್ನ ವಿದ್ಯಾರ್ಥಿ ದೆಸೆಯಿಂದಲೇ ಮುಖಕ್ಕೆ ಬಣ್ಣ ಹಚ್ಚಿ ರಂಗು ರಂಗಿನ ವೇಷಭೂಷಣಗಳನ್ನು ಧರಿಸಿಕೊಂಡು ರಂಗ ಮಂಟಪದಲ್ಲಿ ಆತ್ಮವಿಶ್ವಾಸದಿಂದ ತನ್ನ ಕಲಾಪ್ರದರ್ಶನ ನೀಡುತ್ತಿದ್ದ ಪೃಥ್ವಿ ಹೆಗ್ಡೆ ಸ್ನಾತಕೋತ್ತರ ಪದವೀಧರೆ.
ಪೃಥ್ವಿಯ ತಾಯಿ ಶ್ರೀಮತಿ ಪೂರ್ಣಿಮಾ ಹೆಗ್ಡೆ ಹಾಗೂ ಅವರ ಸೋದರ ಸಂಬಂಧಿಕರೆಲ್ಲಾ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಗೌರವ ಹೊಂದಿದವರಾಗಿದ್ದ ಕಾರಣ ಪೃಥ್ವಿಗೆ ಯಕ್ಷಗಾನ ರಂಗ ಪ್ರವೇಶ ನಿರಾಳವಾಯಿತು. ತನ್ನ ಬಾಲ್ಯದ ದಿನಗಳಿಂದಲೇ ಚುರುಕು ಸ್ವಭಾವದವಳಾಗಿದ್ದ ಬಾಲಕಿ, ವಿದ್ಯಾರ್ಥಿ ಜೀವನದಲ್ಲಿ ದೈನಂದಿನ ಅಭ್ಯಾಸದ ಜೊತೆಗೆ ಪಾಠೇತರ ಚಟುವಟಿಕೆಗಳಲ್ಲಿ ಮುಂದಿದ್ದು ಇತರ ವಿದ್ಯಾರ್ಥಿಗಳಿಂದ ಭಿನ್ನ ಆಕರ್ಷಣೆ ಹೊಂದಿದ್ದಳು. ಈಕೆಯ ವಿಶೇಷ ಪ್ರತಿಭೆಯನ್ನು ಗುರುತಿಸಿದ ಅಧ್ಯಾಪಕರು ಈಕೆಯ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಆಸಕ್ತಿ ತೋರಿದ ಪರಿಣಾಮ ಪೃಥ್ವಿ ಬರಹ, ಭಾಷಣ, ಛದ್ಮವೇಷ, ನೃತ್ಯ, ಭರತನಾಟ್ಯ ಹಾಗೂ ವೈವಿಧ್ಯಮಯ ನೃತ್ಯ ಪ್ರಕಾರಗಳಲ್ಲಿ ಯೋಗ್ಯ ಶಿಕ್ಷಕರಿಂದ ತರಬೇತಿ ಪಡೆಯುತ್ತಾ ಒಬ್ಬಾಕೆ ಬಹುಮುಖ ಪ್ರತಿಭೆಯ ಬಾಲ ಕಲಾವಿದೆಯಾಗಿ ಬೆಳೆಯತೊಡಗಿದಳು.
ಕಾರ್ಕಳ ಎಸ್ ವಿ ಟಿ ಶಿಕ್ಷಣ ಸಂಸ್ಥೆ ಹಾಗೂ ಕಾರ್ಕಳ ಭುವನೇಂದ್ರ ಕಾಲೇಜುಗಳಲ್ಲಿ ಶಿಕ್ಷಣ ಪಡೆದ ಈ ಪದವೀಧರೆ ಯುವತಿ ಮುಂದೆ ಸಿಕ್ಕಿಂ ವಿಶ್ವ ವಿದ್ಯಾಲಯದ ಮುಖೇನ ಸ್ನಾತಕೋತ್ತರ ಶಿಕ್ಷಣ ಮುಂದುವರಿಸುತ್ತಲೇ ಯಕ್ಷಗಾನ, ತಾಳಮದ್ದಲೆ, ಭರತನಾಟ್ಯ ಕಲಾಪ್ರಕಾರಗಳಲ್ಲಿ ಸಂಬಂಧ ಪಟ್ಟ ಯೋಗ್ಯ ಗುರುಗಳಿಂದ ತರಬೇತಿ ಪಡೆಯುತ್ತಾ ಓರ್ವ ಬಹುಮುಖ ಪ್ರತಿಭೆಯ ಕಲಾವಿದೆಯಾಗಿ ಬೆಳೆದಳು. ಹರೀಶ್ ಶೆಟ್ಟಿ ಸೂಡಾ ಹಾಗೂ ಶಿವಕುಮಾರ್ ಮೂಡುಬಿದಿರೆ ಇವರಿಂದ ತೆಂಕುತಿಟ್ಟು ಯಕ್ಷಗಾನದ ಅಂಗ ಪ್ರತ್ಯಂಗಗಳನ್ನು ಅಭ್ಯಸಿಸಿ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಗೂ ತನ್ನ ಊರಿನ ಸಂಘ ಸಂಸ್ಥೆಗಳ ವಾರ್ಷಿಕೋತ್ಸವ ಸಂದರ್ಭದಲ್ಲಿ ವೇಷ ಮಾಡತೊಡಗಿದಳು. ನವೀನ್ ಚಂದ್ರ ಹೆಗ್ಡೆ ಪೆರಿಮಾರು ಗುತ್ತು ನೀರೆ ಬೈಲೂರು ಮತ್ತು ಶ್ರೀಮತಿ ಪೂರ್ಣಿಮಾ ಹೆಗ್ಡೆ ಕಾರ್ಕಳ ಕುಂಟಾಡಿ ದಂಪತಿಯ ಮುದ್ದಿನ ಮಗಳು. ಇನ್ನೂ ಸಣ್ಣ ಪ್ರಾಯದ ಈ ಯುವತಿ ಯಕ್ಷಗಾನ ರಂಗಮಂಚ ಏರಿದರೆ ತನ್ನ ಪ್ರಾಯ ಮರೆತು ಪ್ರಬುದ್ಧ ವೃತ್ತಿ ಮೇಳದ ಕಲಾವಿದರಂತೆಯೇ ಶೃಂಗಾರ ಕರುಣ ವೀರ ರಸಗಳಲ್ಲಿ ಮಿಂಚುವುದನ್ನು ಕಂಡರೆ ಹಿರಿಯ ಕಲಾವಿದರೂ ತಲೆದೂಗುತ್ತಾರೆ. ತನ್ನ ಪ್ರಾಯಕ್ಕೆ ಮೀರಿದ ಕಲಾ ಕೌಶಲ ಪಾತ್ರ ಪ್ರಭುದ್ಧತೆಗೆಗಳಿಂದ ಪೃಥ್ವಿ ಕೀರ್ತಿ ಇಂದು ಕಲಾವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಪ್ರಸ್ತುತ ಕಾರ್ಕಳ ಮೆಸ್ಕಾಂನಲ್ಲಿ ಉದ್ಯೋಗಸ್ಥೆಯಾಗಿರುವ ಈ ಸ್ಫುರದ್ರೂಪಿ ತನ್ನ ವಿರಾಮ ವೇಳೆಯಲ್ಲಿ ಓದು ತರಬೇತಿಗಳಲ್ಲಿ ವ್ಯಸ್ಥಳಾಗಿರುತ್ತಾಳೆ. ಕೆಲವು ಆಸಕ್ತ ಮಕ್ಕಳಿಗೆ ಹಾಗೂ ಸಂಘ ಸಂಸ್ಥೆಗಳ ಕಾರ್ಯಕ್ರಮಕ್ಕೆ ಸಿದ್ಧರಾಗಬೇಕಾದ ಸದಸ್ಯರಿಗೆ ಸಕಾಲಿಕ ತರಬೇತಿ ನೀಡುತ್ತಾರೆ. ಕಾರ್ಯಕ್ರಮ ನಿರೂಪಣೆ, ಕಾವ್ಯವಾಚನ, ಭಾಷಣ, ಭರತನಾಟ್ಯ, ಅಭಿನಯ ಹೀಗೆ ಹಲವು ಕವಲುಗಳಾಗಿ ಹರಿದ ಈ ಯುವ ಪ್ರತಿಭೆಗೆ ಕೆಲವು ಚಲಚಿತ್ರಗಳಿಂದಲೂ ಬೇಡಿಕೆ ಬರುತ್ತಿದ್ದು ಈಗಾಗಲೆ ಇನ್ನು ತೆರೆಕಾಣಬೇಕಾದ ಚಿತ್ರದಲ್ಲಿ ಅಭಿನಯ ನೀಡಿದ್ದಾಳೆ. ಅಜಿತ್ ಕುಮಾರ್ ಜೈನ್, ಮಹಾವೀರ್ ಪಾಂಡಿ, ಹರೀಶ್ ಶೆಟ್ಟಿ ಸೂಡಾ ಮೊದಲಾದವರು ಈಕೆಯನ್ನು ವಿದ್ಯಾರ್ಥಿ ದೆಸೆಯಿಂದಲೇ ತಿದ್ದಿ ತೀಡಿ ಯುವ ಕಲಾವಿದೆಯಾಗಿ ಸಿದ್ಧಗೊಳಿಸಿದ ಬಳಿಕವೂ ಅನೇಕ ಸಮರ್ಥ ಕಲಾವಿದರಿಂದ ನಾಟ್ಯ, ಮಾತುಗಾರಿಕೆ ಕುರಿತ ಅನುಭವ ಸಂಪಾದಿಸಿದ ಪೃಥ್ವಿ ಇತ್ತೀಚಿನ ದಿನಗಳಲ್ಲಿ ತಾಳಮದ್ದಳೆ ಅರ್ಥಧಾರಿಯಾಗಿಯೂ ಗಮನ ಸೆಳೆಯುತ್ತಾರೆ. ಈಕೆಯ ದುಶ್ಯಾಸನ ವಧೆ, ದ್ರೌಪದಿ ಗದಾಯುದ್ಧ, ಕೌರವ ದಕ್ಷ ಯಜ್ಞ, ದಾಕ್ಷಾಯಿಣಿ ಗಿರಿಜಾ ಕಲ್ಯಾಣ, ಮನ್ಮಥ ಪಾತ್ರಗಳಿಗೆ ಪ್ರೇಕ್ಷಕರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ. ಈಕೆಯ ಸತ್ಯ ಹರಿಶ್ಚಂದ್ರ ನಾಟಕದ ಚಂದ್ರಮತಿಯ ಪಾತ್ರ ನಿರ್ವಹಣೆ ಕುರಿತಂತೆ ಪತ್ರಿಕೆಗಳು, ದೂರದರ್ಶನ ಮಾಧ್ಯಮಗಳು ಮುಕ್ತ ಕಂಠದಿಂದ ಶ್ಲಾಘಿಸಿವೆ. ಮಗನನ್ನು ಕಳೆದುಕೊಂಡ ತಾಯಿಯ ಅಳಲನ್ನು ಅಭಿವ್ಯಕ್ತಿಗೊಳಿಸಿದ ಪರಿ ಈಕೆಯ ಮನೋಜ್ಞ ಅಭಿನಯಕ್ಕೆ ಉತ್ತಮ ಉದಾಹರಣೆಯಾಗಬಲ್ಲುದು.
ನಮ್ಮ ನಾಡಿನ ಕಲೆ ಸಂಸ್ಕೃತಿ ಪರಂಪರೆಯನ್ನು ಪ್ರೀತಿಸುವ ಈಕೆಯ ಮಾತೃಶ್ರೀಯವರಾದ ಶ್ರೀಮತಿ ಪೂರ್ಣಿಮಾ ಹೆಗ್ಡೆಯವರೂ ಮೇಧಾವಿ ಪ್ರತಿಭಾವಂತೆ. ಪ್ರತಿಷ್ಠಿತ ಬಂಟ ಕುಟುಂಬದ ಹಿನ್ನೆಲೆಯಿಂದ ಬಂದ ಈಕೆಗೆ ಸಹಜವಾಗಿಯೇ ಬಂದ ಪರಂಪರಾಗತ ಬಳವಳಿಯಿಂದ ಪೃಥ್ವಿ ಪ್ರತಿಭಾವಂತ ವಿದ್ಯಾರ್ಥಿಯಾಗಿ, ಕಲಾವಿದೆಯಾಗಿ ಮನೆತನದ ಕೀರ್ತಿಯನ್ನು ಬೆಳಗಿದ್ದಾರೆ ಎಂದರೆ ಅತಿಶಯೋಕ್ತಿಯಾಗದು. ಕಾರ್ಕಳ ಬಂಟರ ಸಂಘದ ಕ್ರಿಯಾಶೀಲ ಸದಸ್ಯೆಯಾಗಿ, ಸಾಂಸ್ಕೃತಿಕ ಸಂಘಟನೆಗಳ ಬಹುಬೇಡಿಕೆಯ ಕಲಾವಿದೆಯಾಗಿ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಯಾಗಿ, ಅಂತಾರಾಷ್ಟ್ರೀಯ ಯೋಗ ಸ್ಫರ್ಧೆ ವಿಜೇತೆಯಾಗಿ ಈಕೆಯ ಪಾದರಸದ ಚಟುವಟಿಕೆಗಳು ಇತರ ಹೆಣ್ಣು ಮಕ್ಕಳಿಗೆ ಮಾದರಿಯಾಗಬಹುದು. ಈಕೆಯ ತಾಯಿ ಹಾಗೂ ದೊಡ್ಡಮ್ಮ ಕುಂಟಾಡಿ ಶಾಲೆಯಲ್ಲಿ ಅಧ್ಯಾಪಿಕೆಯಾಗಿದ್ದ ಶ್ರೀಮತಿ ಸುಶೀಲಾ ಶೆಟ್ಟಿ ಅವರ ನಿರಂತರ ಪ್ರೋತ್ಸಾಹ, ಶಾಲಾ ಕಾಲೇಜುಗಳ ಅಧ್ಯಾಪಕ ಪ್ರಾಧ್ಯಾಪಕರುಗಳ ಉತ್ತೇಜನ, ಅನೇಕ ಕಲಾಗುರುಗಳ ತರಬೇತಿ ಇತ್ಯಾದಿಗಳಿಂದ ಇಂದು ಪೃಥ್ವಿ ಎಂಬ ಕಲಾಕುಸುಮದ ಮೊಗ್ಗೆ ಅರಳಿ ಪರಿಮಳ ಬೀರುತ್ತಿದೆ.
ಈಕೆಯ ಅಕ್ಕ ಪ್ರಜ್ಞಾ ಹೆಗ್ಡೆ ಉದ್ಯಮ ನಿಮಿತ್ತ ಲಂಡನ್ ನಲ್ಲಿದ್ದು, ಆಕೆಯೂ ಭರತನಾಟ್ಯ ತರಬೇತಿ ಪಡೆದು ಉತ್ತಮ ಕಲಾವಿದೆಯಾಗಿದ್ದಾಳೆ. ಸುಬ್ರಹ್ಮಣ್ಯ ಮುದ್ರಾಡಿ ಅವರಿಂದ ಬಡಗು ತಿಟ್ಟಿನ ಕುರಿತ ತರಬೇತಿ ಪಡೆದು ಅನೇಕ ವೈವಿಧ್ಯಮಯ ಪಾತ್ರಗಳಲ್ಲಿ ಮಿಂಚಿದ್ದಾರೆ. ಕೃಷ್ಣ, ವಿಷ್ಣು, ದ್ರೌಪದಿ ಪಾತ್ರಗಳಂತೆ ದುಶ್ಯಾಸನ ಸೇರಿದಂತೆ ಖಳನಾಯಕ ಪಾತ್ರಗಳಲ್ಲೂ ತನ್ನ ಪ್ರತಿಭೆ ಪ್ರದರ್ಶನ ಮಾಡಿದ್ದಾರೆ. ರಾಜ ವೇಷವಿರಲಿ, ವೀರರಸದ ಪಾತ್ರವಿರಲಿ, ಸ್ತ್ರೀ ಪಾತ್ರಗಳೇ ಇರಲಿ ಲೀಲಾಜಾಲವಾಗಿ ಪಾತ್ರ ನಿರ್ವಹಿಸುತ್ತಾ ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಈಕೆಯ ಮನ್ಮಥ ದಾಕ್ಷಾಯಿಣಿ ಕೌರವ ಪಾತ್ರಗಳು ಕಲಾಭಿಮಾನಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಕಡಂದಲೆ ಮೇಳದಲ್ಲಿ ಆರು ವರುಷ ಗೆಜ್ಜೆ ಕಟ್ಟಿ ವೇಷ ಮಾಡಿದ ಹಿರಿಮೆ ಈಕೆಗಿದೆ. ಕುಚೇಲ ಕೃಷ್ಣ ಎಂಬ ನೃತ್ಯ ರೂಪಕದಲ್ಲಿ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳ ಪುಣ್ಯ ಕ್ಷೇತ್ರಗಳಲ್ಲಿ ಪ್ರದರ್ಶನ ನೀಡಿದ ಧನ್ಯತಾ ಭಾವ ಈಕೆಗಿದೆ.
ಮಂಗಳೂರಿನ ಸನಾತನ ನಾಟ್ಯಾಲಯದ ಸಂಗೀತ ಗುರು ವಿದುಷಿ ಶಾರದಾಮಣಿ ಶೇಖರ್ ಅವರಿಂದ ಭರತನಾಟ್ಯ ಕಲಿತ ಈಕೆ ಆಸಕ್ತರಿಗೆ ಭರತನಾಟ್ಯ ತರಬೇತಿಯನ್ನೂ ನೀಡುತ್ತಾರೆ. ತಾಳಮದ್ದಳೆ ಪ್ರಭೃತಿ ಗುರು ಸದೃಶ ಜಬ್ಬಾರ್ ಸಮೋ ಅವರೊಂದಿಗೆ ತಾಳಮದ್ದಳೆಯಲ್ಲಿ ವೇದಿಕೆ ಹಂಚಿಕೊಂಡ ಹೆಚ್ಚುಗಾರಿಕೆ ಈ ಯುವತಿಗಿದೆ. ಶ್ರೀ ಕೃಷ್ಣ, ತುಳುನಾಡ ಸಿರಿ, ಶೂರ್ಫನಖಾ, ಮಹಿಷಾಸುರ, ಕೌರವ, ದಾಕ್ಷಾಯಿಣಿ, ದ್ರೌಪದಿ, ಮನ್ಮಥ, ದುಶ್ಯಾಸನ ಇಂಥಹ ವೈವಿಧ್ಯಮಯ ಸ್ವಭಾವಗಳ ಪಾತ್ರಗಳನ್ನು ನಿರ್ವಹಿಸುವ ಮೂಲಕ ತಾನು ಯಾವ ಪಾತ್ರವನ್ನಾದರೂ ನಿರಾಯಾಸವಾಗಿ ನಿರ್ವಹಿಸಬಲ್ಲೆಯೆಂಬ ಭರವಸೆ ಆತ್ಮ ವಿಶ್ವಾಸಗಳೊಂದಿಗೆ ಸದಾ ಅಧ್ಯಯನ ಶೀಲೆಯಾಗಿರುವ ಈಕೆಗೆ ಯಕ್ಷಗಾನ, ನಾಟಕ, ನಾಟ್ಯ ಮೊದಲಾದ ಕ್ಷೇತ್ರಗಳಲ್ಲಿ ಉಜ್ವಲ ಭವಿಷ್ಯವಿದೆ. ಆಷ್ಟಭುಜೆ ಶ್ರೀ ದೇವಿಯ ಪಾತ್ರವಂತೂ ಈಕೆ ನವರಸಾಭಿವ್ಯಕ್ತಿಯ ಸಮರ್ಥ ಕಲಾವಿದೆಯಾಗಿದ್ದಾಳೆಂಬುವುದಕ್ಕೆ ಒಂದು ಉತ್ತಮ ನಿದರ್ಶನವಾಗಿದೆ.
ಪೃಥ್ವಿಯ ಅಸಾಧಾರಣ ಪ್ರತಿಭೆಯನ್ನು ಗುರುತಿಸಿದ ಅನೇಕ ಸಂಘ ಸಂಸ್ಥೆಗಳು ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸಿವೆ. ಭವಿಷ್ಯದ ಪರಿಪೂರ್ಣ ಕಲಾವಿದೆಯೆಂದು ಪ್ರಶಂಸಿಸಿವೆ. ಈಗಾಗಲೇ ಊರಿನ ಪ್ರಮುಖ ಪತ್ರಿಕೆಗಳು, ಬಲ್ಲಿರೇನಯ್ಯ ಯಕ್ಷಗಾನ ಸಂಬಂಧಿ ಮಾಸಿಕ, ಮುಂಬಯಿಯ ಕರ್ನಾಟಕ ಮಲ್ಲದ ಬಣ್ಣದ ಲೋಕ ಅಂಕಣಗಳು ಪೃಥ್ವಿಯ ಬಹುಮುಖ ಪ್ರತಿಭೆ ಕುರಿತ ಲೇಖನಗಳನ್ನು ಪ್ರಕಟಿಸಿವೆ. ಈ ಯುವ ಪ್ರತಿಭೆಯ ಕೀರ್ತಿ ಕಲಾಜಗತ್ತು ವ್ಯಾಪಿಸಿರುವವರೆಗೂ ಹಬ್ಬಲಿ. ಈಕೆಯನ್ನು ಪಡೆದ ಮಾತಾಪಿತರ ಹಾಗೂ ಹುಟ್ಟಿದ ಊರಿನ ಹೆಸರು ಜಗದಗಲ ಬೆಳಗಲಿ ಎಂದು ಬಂಟ ಸಮಾಜದ ಸಾಧನೆಗಳ ಪ್ರಸಾರ ಕೈಂಕರ್ಯದ ಮಾಧ್ಯಮ ಸಂಸ್ಥೆ ಬಂಟ್ಸ್ ನೌ ಶುಭ ಹಾರೈಸುತ್ತದೆ.
ಯಕ್ಷಗಾನಂ ಗೆಲ್ಗೆ…
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು