ತನ್ನ ಪ್ರಭಲ ಇಚ್ಚಾಶಕ್ತಿ ಯಿಂದ ಏನನ್ನಾದರೂ ಸಾಧಿಸಬಹುದೆಂಬ ಮಾತಿಗೆ ಉದಾಹರಣೆಯಾದವರು ಬೇಕರಿ ಕ್ಷೇತ್ರದಲ್ಲಿ ದಾಖಲೆ ಯಶಸ್ಸು ಸಾಧಿಸಿದ ಅಪರೂಪದ ವ್ಯಕ್ತಿ ಶಮಿತ್ ಶೆಟ್ಟಿ ಕೆಮ್ತೂರು. ಬಾಲ್ಯದಲ್ಲಿಯೇ ತನ್ನ ತಂದೆಯನ್ನು ಕಳೆದುಕೊಂಡ ಶಮಿತ್ ಅವರು ಪ್ರತಿಕೂಲ ಪರಿಸ್ಥಿತಿಗಳನ್ನು ತನ್ನ ಬಲವನ್ನಾಗಿ ಪರಿವರ್ತಿಸಿಕೊಂಡು ತನ್ನ ಅದೃಷ್ಟವನ್ನು ತಾನೇ ಬರೆದು ಬಡತನದಲ್ಲಿ ಬಾಲ್ಯಕಳೆದರೂ ಇಂದು ಓರ್ವ ಯಶಸ್ವಿ ಉದ್ಯಮಿಯಾಗಿ ಗುರುತಿಸಿ ಕೊಂಡಿದ್ದಾರೆ. ತನ್ನ ಬೆನ್ನಲ್ಲಿ ಹುಟ್ಟಿಕೊಂಡ ಮೂವರು ಸಹೋದರಿಯರ ಭವಿಷ್ಯ ರೂಪಿಸಬೇಕಾದ ಹೊಣೆ ಬಾಲಕ ಶಮಿತ್ ಅವರ ಹೆಗಲೇರಿತ್ತು. ಆದರೆ ಎದೆಗುಂದದೆ ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಲೇ ಬೆಂಕಿಯಲ್ಲಿ ಅರಳಿದ ಹೂವಿನಂತೆ ತನ್ನ ವ್ಯಕ್ತಿತ್ವವನ್ನು ತಾನೇ ರೂಪಿಸಿಕೊಂಡು ಮೂವರು ಸಹೋದರಿಯರ ವಿವಾಹವನ್ನೂ ಪೂರೈಸಿ ಧನ್ಯತಾ ಭಾವವನ್ನು ಹೊಂದಿದ ಅಪ್ರತಿಮ ಸಾಧಕರಿವರು.ಮೂಡುಬೆಳ್ಳೆ ಸಮೀಪದ ಎಡ್ಮೇರು ಮೂಲದ ಶಮಿತ್ ಶೆಟ್ಟಿ ಅವರು ಬಿ ಕಾಂ ಪದವಿಧರು. ಎಡ್ಮೇರು ಅಪ್ಪು ಶೆಟ್ಟಿ ಹಾಗೂ ಕೆಮ್ತೂರು ದೇವಕಿ ಶೆಟ್ಟಿ ದಂಪತಿಗೆ ಪುತ್ರರಾಗಿ ಜನಿಸಿದ ಶಮಿತ್ ಶೆಟ್ಟಿ ಅವರು ಮಂಗಳೂರಿನ ಹೃದಯಭಾಗದಲ್ಲಿ ಬೇಕರಿ ಉದ್ಯಮವನ್ನು ಆರಂಭಿಸಿ ತನ್ನ ಅಸಾಧಾರಣ ಸಂಕಲ್ಪ ಶಕ್ತಿ, ಸತತ ಪರಿಶ್ರಮ ಮೂಲಕ ಅದನ್ನು ಬೆಳೆಸಿ ಇಂದು ಒಂದು ಬೃಹತ್ ಕೈಗಾರಿಕೋದ್ಯಮದ ಸಾಲಿಗೆ ಸೇರ್ಪಡೆಗೊಳಿಸುವುದರ ಜೊತೆಗೆ ಅದೆಷ್ಟೋ ಮಂದಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ. ತನ್ನ ಪದವಿ ಶಿಕ್ಷಣ ಮುಗಿಸಿದ ಬಳಿಕ ಮುಂಬಯಿ ಸೇರಿಕೊಂಡು ಉದ್ಯೋಗ ಮಾಡಿ ಸಂಘರ್ಷದ ಬದುಕಿಗೆ ಮೈಯ್ಯೊಡ್ಡಿ ಬೆಳೆದರು. ಹತ್ತು ವರ್ಷಗಳ ಕಾಲ ಮುಂಬಯಿಯಲ್ಲಿ ದುಡಿದರೂ ತಾನು ಇಚ್ಛಿಸಿದ ಬದುಕು ದೊರೆಯದ ಅತೃಪ್ತಿ ಭಾವದಿಂದ ಬೆಹರಿನ್ ಗೆ ಹೋದವರು ಅಲ್ಲಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿ ಮತ್ತೆ ಭಾರತಕ್ಕೆ ಮರಳಿದರು. ಏಳು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸ್ಥಾಪಿಸಿದ ಬೇಕರಿ ಉದ್ಯಮ ಮುಂದೆ ಹಂತ ಹಂತವಾಗಿ ಪ್ರಗತಿಯನ್ನು ಕಂಡ ಪರಿಣಾಮ ಉದ್ಯಮವನ್ನು ವಿಸ್ತರಿಸುವ ಉದ್ದೇಶದಿಂದ ಹೆಚ್ಚು ಬಂಡವಾಳ ಹೂಡಬೇಕಾದ ಸಂದರ್ಭ ಒದಗಿದಾಗ ಪಾಲುದಾರಿಕೆಯಲ್ಲಿ ವ್ಯಾಪಾರ ವ್ಯವಹಾರವನ್ನು ವಿಸ್ತರಿಸಿ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆಯನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದರು.
ಪ್ರಸ್ತುತ ಉಡುಪಿ ಅಜ್ಜರ ಕಾಡು ಇಲ್ಲಿ ವಾಸ್ತವ್ಯ ಹೊಂದಿದ ಶಮಿತ್ ಶೆಟ್ಟಿ ಮಡದಿ ರಶ್ಮಿ ಶೆಟ್ಟಿ ಹಾಗೂ ಮಗಳು ರಿಯಾ ಶೆಟ್ಟಿ ಅವರೊಂದಿಗೆ ನೆಮ್ಮದಿಯ ಜೀವನ ಹೊಂದಿದ್ದಾರೆ. ತನ್ನ ಕಷ್ಟದ ದಿನಗಳಲ್ಲಿ ಕೈ ಹಿಡಿದು ಆಶೀರ್ವದಿಸಿದ ಮಾವ ಕೆಮ್ತೂರು ಅಶೋಕ್ ಶೆಟ್ಟಿಯವರ ಸಹಕಾರವನ್ನು ಸದಾ ಸ್ಮರಿಸುತ್ತಾರೆ. ಭಾವ ಸುಕೇಶ್ ಶೆಟ್ಟಿ ಹಾಗೂ ದೀಪಕ್ ಶೆಟ್ಟಿ, ಚೇತನ್ ಶೆಟ್ಟಿಯವರು ಶಮಿತ್ ಶೆಟ್ಟಿ ಉದ್ಯಮದ ಅಭಿವೃದ್ಧಿಯ ಚುಕ್ಕಾಣಿ ಹಿಡಿದ ಮಿತ್ರರು. ಉಡುಪಿ ಪರಿಸರದಲ್ಲಿ ವ್ಯಾಪಿಸಿಕೊಂಡ ಸೆವೆನ್ತ್ ಹೆವೆನ್ ಬೇಕರಿ ಎಂಡ್ ಕೆಫೆ ಎಂಬ ಬೃಹತ್ ಉದ್ಯಮದ ಜೊತೆಗೂ ಸೇರಿಕೊಂಡು ಅದರ ಅಂಗವೆಂಬಂತೆ ಗುರುತಿಸಿಕೊಂಡು ಓರ್ವ ಯಶಸ್ವಿ ಪಾಲುದಾರರಾಗಿ ಕಾರ್ಯ ನಿರ್ವಹಣೆ ಮಾಡುತ್ತಾರೆ. ಕೇಕ್ ಶಾಪ್ ಮೂಲಕ ಆರಂಭಗೊಂಡ ಬೇಕರಿ ಉದ್ಯಮ ಇಂದು ಜನರ ವಿವಿಧ ಸಾಂದರ್ಭಿಕ ಆಚರಣೆಗಳಿಗೆ ಅವಶ್ಯಕವಾದ ವಿವಿಧ ಉತ್ಪನ್ನಗಳು ಉಪಲಬ್ಧ ಇವೆ. ಸೆವೆನ್ತ್ ಹೆವೆನ್ ಬೇಕರಿ ಉದ್ಯಮ ಇಂದು ಶಿವಮೊಗ್ಗ, ದಾವಣಗೆರೆ, ಭದ್ರಾವತಿ, ಬಿ ಸಿ ರೋಡ್, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹೊಸಪೇಟೆ, ಪಾಂಡೇಶ್ವರ, ಪಡೀಲ್, ಕೊಡಿಯಾಲ್ ಬೈಲ್, ಉಡುಪಿ, ಮಣಿಪಾಲ, ಕುಂದಾಪುರ, ಭಟ್ಕಳ, ತೊಕ್ಕೊಟ್ಟು, ಸುರತ್ಕಲ್, ಹುಬ್ಬಳ್ಳಿ, ಹಾಸನ, ಧಾರವಾಡ, ಬೆಂಗಳೂರು ಮೊದಲಾದ ಪ್ರದೇಶಗಳಲ್ಲಿ ವಿಸ್ತೃತ ಹಬ್ ಗಳನ್ನು ಹೊಂದಿದೆ. ತನ್ನ ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸದಾ ಚಿಂತನೆ ನಡೆಸುವ ಇವರು ಗ್ರಾಹಕರ ರುಚಿ ಉತ್ಪನ್ನಗಳ ಪರಿಶುದ್ಧತೆ ಕಾಪಾಡುವಲ್ಲಿ ಹಾಗೂ ಸೀಸನಲ್ ಉತ್ಪನ್ನಗಳ ತಯಾರಿ ಕುರಿತು ಕಾಳಜಿ ವಹಿಸುತ್ತಾರೆ.
ಲೈವ್ ಕಿಚನ್ ಹಾಗೂ ಲೈವ್ ಕೇಕ್ ಗಳಿಗೆ ಸೆವೆನ್ತ್ ಹೆವೆನ್ ಪ್ರಸಿದ್ದಿಯಾಗಿದ್ದು, ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸೇವೆ, ಸಭೆ ಸಮಾರಂಭಗಳಲ್ಲಿ ಅವಶ್ಯಕತೆಗೆ ತಕ್ಕಷ್ಟು ಪ್ರಮಾಣದಲ್ಲಿ ಸಮಯಕ್ಕೆ ಸರಿಯಾಗಿ ತಲುಪಿಸುವ ಸೇವಾ ತತ್ಪರತೆಗಳಿಂದ ಇಂದು ಸೆವೆನ್ತ್ ಹೆವೆನ್ ಬೇಕರಿ ಹಬ್ ಗಳು ರಾಜ್ಯಾದ್ಯಂತ ಹಾಗೂ ದೇಶದಾದ್ಯಂತ ಮನೆ ಮಾತಾಗಿದೆ. 3D ಕೇಕ್, ಕಪ್ ಕೇಕ್, ಮೆಕರೋನ್ಸ್, ಡೋನಟ್ಸ್, ಟಾರ್ಟ್ಸ್, ಬ್ರೌನಿಸ್, ಚೀಸ್ ಕೇಕ್ಸ್ ಹಾಗೂ ಇನ್ನಿತರ ಸಂಪೂರ್ಣ ಶಾಖಾಹಾರಿ ವೈವಿಧ್ಯಮಯ ಉತ್ಪನ್ನಗಳು ಟೀಮ್ ವರ್ಕ್ ಮುಖಾಂತರ ಗ್ರಾಹಕರ ಮನೆಗೆ ತಲುಪುವ ಬೇಕ್ ಡ್ ಖಾದ್ಯ ಪದಾರ್ಥಗಳು ತನ್ನದೇ ಆದ ಬ್ರಾಂಡ್ ಗುರುತು ಹೊಂದಿದ್ದು, ಬೇಕರಿ ಉದ್ಯಮದಲ್ಲೇ ಸ್ಟಾಂಡರ್ಡ್ ಬೇಕರಿ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ದಿನೇ ದಿನೇ ಗ್ರಾಹಕರ ಬೇಡಿಕೆಯೂ ಹೆಚ್ಚುತ್ತಲೇ ಇರುವುದು ಸೆವೆನ್ತ್ ಹೆವೆನ್ ಬೇಕರಿ ಎಂಡ್ ಕೆಫೆ ವೈಶಿಷ್ಟ್ಯ. ಇಲ್ಲಿನ ಕೇಕ್ ಗಳಿಗೆ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಇದ್ದು ಉತ್ತಮ ಶುಚಿ ರುಚಿ ಹಾಗೂ ಉತ್ತಮ ಗುಣಮಟ್ಟಕ್ಕೆ ಗ್ರಾಹಕರ ಪ್ರಶಂಸೆ ದೊರೆತಿದೆ. ತನ್ನ ಸತತ ಪರಿಶ್ರಮ, ಪ್ರಬಲ ಇಚ್ಛಾಶಕ್ತಿ ಹಾಗೂ ಜೀವನ ಲಕ್ಷ್ಯ ಸೇರುವಲ್ಲಿನ ಏಕಾಗ್ರತೆ ಇಂದು ಶಮಿತ್ ಅವರನ್ನು ಬಂಟ ಸಮುದಾಯದ ಓರ್ವ ಪ್ರತಿಷ್ಠಿತ ಉದ್ಯಮಿ ಎಂಬಂತೆ ಜನ ಕೊಂಡಾಡುತ್ತದೆ. ತನ್ನ ತಂದೆಯ ಹೆಸರಿನಲ್ಲಿ ಎಡ್ಮೇರು ಶ್ರೀ ಧೂಮಾವತಿ ದೈವಸ್ಥಾನಕ್ಕೆ ಗೋಪುರವನ್ನು ಕಟ್ಟಿ ಸೇವಾ ಕೈಂಕರ್ಯ ಮೆರೆದಿದ್ದಾರೆ. ಸೆವೆನ್ತ್ ಹೆವೆನ್ ನ ಕರ್ನಾಟಕ ರಾಜ್ಯದ ಮಾಸ್ಟರ್ ಫ್ರಾಂಚೈಸಿ ಕೂಡಾ ಶಮಿತ್ ಶೆಟ್ಟಿಯವರಲ್ಲಿದ್ದು, ಶ್ರೀಯುತರ ಉದ್ಯಮ ಇನ್ನಷ್ಟು ಪ್ರಗತಿ ಕಾಣಲಿ. ಅವರಿಗೆ ಅವರ ಕುಟುಂಬ ಪರಿವಾರಕ್ಕೆ ಹಾಗೂ ಸರ್ವ ಸಿಬ್ಬಂದಿ ವರ್ಗಕ್ಕೆ ಉತ್ತರೋತ್ತರ ಶ್ರೇಯವಾಗಲೆಂದು ಬಂಟ್ಸ್ ನೌ ಶುಭ ಹಾರೈಸುತ್ತದೆ.
ಲೇಖಕರು : ಅರುಣ್ ಶೆಟ್ಟಿ ಎರ್ಮಾಳ್
