ಕೊಡಗಿನ ಚಿತ್ರಶಿಲ್ಪ ಕಲಾವಿದ ಶ್ರೀ ಬಿ. ಕೆ. ಗಣೇಶ್ ರೈಯವರು ರಚಿಸಿರುವ ಶ್ರೀ ಕಾವೇರಿ ಮಾತೆಯ ಪುಣ್ಯಪ್ರದವಾದ ಪುರಾಣ ಚಿತ್ರ ಕಥೆ ಪುಸ್ತಕ ಕಾವೇರಿ ನದಿಯ ಉಗಮ ಸ್ಥಾನ ಪವಿತ್ರ ತೀರ್ಥ ಕ್ಷೇತ್ರ ತಲಕಾವೇರಿಯ ಸನ್ನಿಧಿಯಲ್ಲಿ 2025 ಅಕ್ಟೋಬರ್ ತುಲಾ ಮಾಸದ ೧೫ನೇ ತಾರೀಕಿನಂದು ಪೂರ್ವಾಹ್ನ ಶುಭ ಗಳಿಗೆಯಲ್ಲಿ ಸಕಲ ಪೂಜಾವಿಧಿ ವಿಧಾನಗಳೊಂದಿಗೆ ಲೋಕಾರ್ಪಣೆಯಾಯಿತು. ಮಡಿಕೇರಿ ಐಶ್ವರ್ಯ ಕ್ರಿಯೇಶನ್ಸ್ ನ ದ್ವಿತೀಯ ಪ್ರಕಟಣೆಯಾಗಿರುವ ಶ್ರೀ ಕಾವೇರಿ ಮಾತೆಯ ಪುಣ್ಯಪ್ರದವಾದ ಪುರಾಣ ಚಿತ್ರ ಕಥೆ ಪುಸ್ತಕ 1995 ರಲ್ಲಿ ಕನ್ನಡ, ಕೊಡವ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಜಲವರ್ಣ ಕಲಾಕೃತಿಯೊಂದಿಗೆ ನಿರ್ಮಾಣವಾಗಿದ್ದ ಚಿತ್ರಕಥೆ ಪುಸ್ತಕ ಇದೀಗ ದ್ವಿತೀಯ ಮುದ್ರಣ ಹಾಗೂ ಪ್ರಕಟಣೆ ನವ್ಯ ತಂತ್ರಜ್ಞಾನದೊಂದಿಗೆ ಡಿಜಿಟಲ್ ಗ್ರಾಫಿಕ್ಸ್ ನಲ್ಲಿ ಅತ್ಯಂತ ಸುಂದರವಾಗಿ ಚಿತ್ರಕಥೆ ಮೂಡಿಬಂದಿದೆ. ಈ ಬಾರಿ ಕನ್ನಡ, ಅರೆಭಾಷೆ, ಇಂಗ್ಲೀಷ್ ಮತ್ತು ತಮಿಳು ಭಾಷೆಯಲ್ಲಿ ಮುದ್ರಣವಾಗಿದೆ. ವಿವಿಧ ಭಾಷಿಗರಿಗೆ ಶ್ರೀ ಕಾವೇರಿ ಮಾತೆಯ ಪುರಾಣ ಚಿತ್ರಕಥೆ ಮಕ್ಕಳಿಂದ , ವಯೋ ವೃದ್ದರವರೆಗೂ ಅತ್ಯಂತ ಸರಳವಾಗಿ ಪುರಾಣ ಕಥೆ ತಿಳಿದುಕೊಳ್ಳುವಂತಾಗಿದೆ.

2025ರ ಮಹಾ ಶಿವರಾತ್ರಿಯಂದು ಕಾವೇರಿ ಮಾತೆಯ ಶ್ಲೋಕವನ್ನು ಆಧರಿಸಿ ಪದ್ಮಾಸಿನ ಕುಳಿತಿರುವ ಭಂಗಿಯಲ್ಲಿ ಶ್ರೀ ಕಾವೇರಿಮಾತೆಯ ವರ್ಣರಂಜಿತ ಚಿತ್ರ ಲೋಕಾರ್ಪಣೆಯಾಗಿತ್ತು. ಈವಾಗ ಶ್ರೀ ಕಾವೇರಿ ಮಾತೆಯ ಪುರಾಣ ಚಿತ್ರ ಕಥೆಯೊಂದಿಗೆ, ಶ್ರೀ ಕಾವೇರಿ ಮಾತೆಯ ನಿಂತಿರುವ ಭಂಗಿಯಲ್ಲಿ ಚಿತ್ರಪಟ ಸಹ ಲೊಕಾರ್ಪಣೆಯಾಗಿದೆ. ಶ್ರೀ ಕ್ಷೇತ್ರ ತಲಕಾವೇರಿ ಸಂಕ್ರಮಣ ಪವಿತ್ರ ತೀರ್ಥೊದ್ಭವ ದರ್ಶನಕ್ಕೆ ಬರುವ ಯಾತ್ರಾರ್ಥಿಗಳಿಗೆ ಕೊಂಡು ಕೊಳ್ಳಲು ತಲಕಾವೇರಿ, ಭಾಗಮಂಡಲ, ಮಡಿಕೇರಿಯ ವಿವಿಧ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿದೆ.
ಶ್ರೀ ಕಾವೇರಿ ಮಾತೆಯ ಪುಣ್ಯಪ್ರದವಾದ ಪುರಾಣ ಚಿತ್ರಕಥೆ ಇಂದಿನ ಮಕ್ಕಳಿಗೆ ಹಾಗೂ ಯುವ ಪೀಳಿಗೆಗೆ ಶ್ರೀ ಕಾವೇರಿ ಮಾತೆಯ ಪುರಾಣ ಕಥೆ ತಿಳಿದು ಕೊಳ್ಳುವಂತಾಗಿದೆ. ವಿಶೇಷವಾಗಿ ತಂದೆ ತಾಯಿ ಹಾಗೂ ಹಿರಿಯರು ಈ ಪುರಾಣ ಚಿತ್ರಕಥಾ ಪುಸ್ತಕವನ್ನು ಮಕ್ಕಳಿಗೆ ಉಡುಗೊರೆಯಾಗಿ ನೀಡುಂತಾಗಬೇಕು ಎಂದು ಚಿತ್ರ ಶಿಲ್ಪ ಕಲಾವಿದ, ಲೇಖಕ ಗಣೇಶ್ ರೈಯವರ ಆಶಯವಾಗಿದೆ. ಕಳೆದ ನಾಲ್ಕು ದಶಕಗಳಿಂದ ಶ್ರೀ ಕ್ಷೇತ್ರ ತಲಕಾವೇರಿಗೆ ಸಂಬಂಧಿಸಿದ ಗ್ರಿಟೀಂಗ್ಸ್ ಕಾರ್ಡ್, ಪಿಕ್ಚರ್ ಕಾರ್ಡ್, ಟೂರಿಸಂ ಬೊಶರ್, ಪ್ರಕಟವಾಗಿದೆ. ಶ್ರೀ ಕಾವೇರಿ ಮಾತೆಯ ಚಿತ್ರಪಟವನ್ನು ೧೯೮೦ರ ದಶಕದಲ್ಲಿ ವೀರ ಸೇನಾನಿ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪನವರು ಲೋಕಾರ್ಪಣೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ಬಾರಿಯ ಕಾವೇರಿ ತುಲಾ ಸಂಕ್ರಮಣಕ್ಕೆ ಆಗಮಿಸುವ ದರ್ಶನಾರ್ಥಿಗಳಿಗೆ ಶ್ರೀ ಕಾವೇರಿ ಪುರಾಣ ಚಿತ್ರ ಕಥಾ ಪುಸ್ತಕ ಓದುಗರ ಸಂಗ್ರಹದಲ್ಲಿ ವಿಶೇಷವಾಗಿ ಸೇರ್ಪಡೆಯಾಗಲಿದೆ.