ಬಂಟರ ಸಂಘ ಪಿಂಪ್ರಿ – ಚಿಂಚ್ವಾಡ್ ವತಿಯಿಂದ ಸಮಾಜ ಬಾಂಧವರ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಹಾಗೂ ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇಕಡಾ ೭೫ ಮತ್ತು ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭವು ಜೂನ್ ೧೮ ರಂದು ಸಂಘದ ಕಿರು ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ಪ್ರಧಾನ ಕಾರ್ಯದರ್ಶಿ ಅರವಿಂದ ರೈ ಉಪಸ್ಥಿತರಿದ್ದರು. ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ ಮಾತನಾಡಿ, ನಮ್ಮ ಸಂಘದ ಮೂಲಕ ಪ್ರತೀ ವರ್ಷ ಆರ್ಥಿಕವಾಗಿ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ಆರ್ಥಿಕ ನೆರವನ್ನು ನೀಡುತ್ತಾ ಬಂದಿರುತ್ತೇವೆ. ಯಾಕೆಂದರೆ ಸಮಾಜದ ಯಾವುದೇ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದೆಂಬ ಉದ್ದೇಶ ಸಂಘದ್ದಾಗಿದೆ. ಮಕ್ಕಳು ವಿದ್ಯಾವಂತರಾದರೆ ಅವರ ಕುಟುಂಬ ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಉತ್ತಮ ಸಮಾಜದ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಸಂಘದ ಈ ಕಾರ್ಯಕ್ಕೆ ಸಂಘದ ಪದಾಧಿಕಾರಿಗಳು ಹಾಗೂ ದಾನಿಗಳು ಆರ್ಥಿಕ ಸಹಕಾರವನ್ನು ನೀಡಿ ಬೆಂಬಲಿಸಿದ್ದಾರೆ. ಅವರಿಗೆಲ್ಲರಿಗೂ ಸಂಘ ಚಿರಋಣಿಯಾಗಿದೆ. ನಿಮ್ಮೆಲ್ಲರ ಸಹಕಾರ ನಿರಂತರವಾಗಿರಲಿ ಎಂದರು.
ಅತಿಥಿಗಳಾಗಿ ಉಪಸ್ಥಿತರಿದ್ದ ಅರವಿಂದ ರೈ ಮಾತನಾಡಿ ಸಂಘದ ಸಮಾಜಸೇವಾ ಕಾರ್ಯವನ್ನು ಶ್ಲಾಘಿಸಿದರು. ಈ ಸಂದರ್ಭ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ ಶೆಟ್ಟಿ, ಎರ್ಮಾಳ್ ಸೀತಾರಾಮ ಶೆಟ್ಟಿ, ಕೆ. ಪದ್ಮನಾಭ ಶೆಟ್ಟಿ, ಉಪಾಧ್ಯಕ್ಷರಾದ ಜಗದೀಶ್ ಶೆಟ್ಟಿ, ತುಳು ಸಂಘ ಪಿಂಪ್ರಿ ಚಿಂಚ್ವಾಡ್ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಬೆಳ್ಳಂಪಳ್ಳಿ, ಗೌರವ ಕೋಶಾಧಿಕಾರಿ ಸುಧಾಕರ ಶೆಟ್ಟಿ ಪೆಲತ್ತೂರು, ಸಂಘದ ಶಿಕ್ಷಣ ಮತ್ತು ಸಮಾಜಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಕೆ ಶೆಟ್ಟಿ ಮುಂಡ್ಕೂರು, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಉಜಿರೆ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಜಯಾನಂದ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಜೆ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಜಯಲಕ್ಷ್ಮಿ ಪಿ ಶೆಟ್ಟಿ, ತಾರಾ ಶೆಟ್ಟಿ, ಸುನೀತಾ ಆರ್ ಶೆಟ್ಟಿ, ದೀಪಾ ಅರವಿಂದ್ ರೈ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಮಾಜ ಬಾಂಧವರ ಹಲವಾರು ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಆರ್ಥಿಕ ನೆರವನ್ನು ನೀಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರವನ್ನು ಮಾಡಲಾಯಿತು. ಈ ಸಂದರ್ಭ ದಾನಿ ಎರ್ಮಾಳ್ ಸೀತಾರಾಮ ಶೆಟ್ಟಿಯವರನ್ನು ಸಂಘದ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು.