ಮನೋನಿಶ್ಚಯ ಉಳ್ಳವರಿಗೆ, ಪ್ರಯತ್ನಶೀಲರಿಗೆ ದುಸ್ತರವಾದುದು ಈ ಲೋಕದಲ್ಲಿ ಯಾವುದೂ ಇಲ್ಲ. ಈ ಸಂಸಾರದಲ್ಲಿ ನಿಶ್ಚಿತವೆಂಬುದು ಯಾವುದೂ ಇಲ್ಲ. ಜೀವನ ಚಕ್ರ ಉರುಳುತ್ತಲೇ ಇರುತ್ತದೆ. ಕರ್ಮಫಲವನ್ನು ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಮಹಾಭಾರತದ ಶಾಂತಿ ಪರ್ವದಲ್ಲಿ ಭೀಷ್ಮ ಶರ ಮಂಚದಲ್ಲಿ ಮಲಗಿರುವಾಗ ಹೇಳುತ್ತಾನೆ, ಮನುಷ್ಯನಿಗೆ ಗ್ರಹಸ್ಥಾಶ್ರಮವೇ ಬೇರೆಲ್ಲಾ ಆಶ್ರಮಗಳಿಗಿಂತ ಪುಣ್ಯತಮವಾದ ಸಿದ್ಧಿಕ್ಷೇತ್ರ. ಕಾಲಚಕ್ರದ ಸುಳಿಯಲ್ಲಿ ಮಾನವನ ಸುಖ, ಅಧಿಕಾರ, ಧನ, ಕಷ್ಟ, ನಷ್ಟ, ಬಡತನ, ಸಿರಿತನ ಯಾವುದೂ ಸ್ಥಿರವಲ್ಲ. ಮನುಷ್ಯ ಸುಖ ಬಂದಾಗ ಸೊಕ್ಕಿ ಮೆರೆಯುತ್ತಾನೆ. ಕಷ್ಟ ಬಂದಾಗ ಅರಗಿನಂತೆ ಕರಗಿ ಹೋಗುತ್ತಾನೆ. ಹಗಲು, ರಾತ್ರಿಗಳಂತೆ ನಮ್ಮ ಜೀವನದಲ್ಲಿ ಬಂದು ಹೋಗತಕ್ಕ ಇವನ್ನು ನಾವು ಹಗಲು ರಾತ್ರಿ ಸಂತೊಗ್ಗಿಸಿಕೊಂಡಂತೆ ಒಗ್ಗಿಸಿಕೊಳ್ಳಲಾಗದು. ಗಾಡಿಯ ಎರಡು ಚಕ್ರಗಳಂತೆ ಮಾನವನ ಭಾಗ್ಯ – ದುರ್ಭಾಗ್ಯಗಳೆರಡೂ ಉರುಳುತ್ತಿರುತ್ತದೆ. ಈ ಉರುಳಾಟ ಯಾರೊಬ್ಬ ವ್ಯಕ್ತಿಯನ್ನೂ ಬಿಟ್ಟಿಲ್ಲ. ಆದರೆ ಮನಸಿದ್ದರೆ ಮಾರ್ಗವೂ ಇದೆ. ಮಾರ್ಗದರ್ಶಕರೂ ಇದ್ದಾರೆ. ಸೃಷ್ಟಿಕರ್ತನಾದ ದೇವರು ನಮಗೆ ಈ ಅಮೂಲ್ಯವಾದ ಮಾನವ ಬದುಕನ್ನು ಕೊಟ್ಟು ಅದರೊಟ್ಟಿಗೆ ಮಾನವನಿಗೆ ಚಿಂತನೆ, ಮಂಥನ ಮಾಡುವ ವಿವೇಕ ವಿವೇಚನಾಶಕ್ತಿಯನ್ನು ಕೊಟ್ಟಿದ್ದಾನೆ. ಅವರವರ ಬದುಕಿನ ಉನ್ನತಿ ಹಾಗೂ ಅವನತಿ ಎರಡೂ ಅವರವರ ಕೈಯಲ್ಲೇ ಕೊಟ್ಟು ಬಿಟ್ಟಿದ್ದಾನೆ.
ಭಗವದ್ಗೀತೆಯಲ್ಲಿ ಒಂದು ಕಡೆ ಶ್ರೀ ಕೃಷ್ಣ ಹೇಳುತ್ತಾನೆ. “ತಪ್ಪು ಮಾಡುವುದು ಮಾನವ ಸ್ವಭಾವ. ಕ್ಷಮಿಸುವುದು ದೈವತ್ವವು” ಎಂದು, ಹಾಗೇ ನಾವೆಲ್ಲರೂ ಭಗವಂತನೆದುರಿಗೆ ಒಂದು ದೃಷ್ಟಿಯಲ್ಲಿ ತಪ್ಪಿತಸ್ಥರೇ. ಕಾರಣ, ಅಜ್ಞಾನದಲ್ಲಿರುವಾಗ ಮಾಡಬಾರದನ್ನೆಲ್ಲಾ ಮಾಡಿರುವೆವು. ಅದಕ್ಕಾಗಿ ಸುಮ್ಮನೆ ಕೂತು ಚಿಂತಿಸಬೇಕಾಗಿಲ್ಲ. ತಪ್ಪು ಮಾಡಿದಕ್ಕೆ ಪ್ರಾಯಶ್ಚಿತವೂ ಇದೆ. ಈ ಕಷ್ಟದ ದಿನಗಳಲ್ಲಿ ಮನವೆತ್ತ ಅಂದರೆ ಶಿವನತ್ತ ಎಂಬಂತೆ ನಮ್ಮಲ್ಲಿ ಅಜ್ಞಾನ ನೀಗಿಕೊಂಡಾಗ ನಮ್ಮಲ್ಲಿ ಎಲ್ಲಕ್ಕಿಂತ ಮೊದಲು ಅರಿವು ಮೂಡುತ್ತದೆ. ಹೃದಯದ ಅಂಧಕಾರ ನೀಗುತ್ತದೆ. ಮನಸ್ಸು ನಡೆ, ನುಡಿ, ಪರಿಶುದ್ಧವಾಗುತ್ತದೆ. ವ್ಯಕ್ತಿತ್ವ ವಿಕಸನವಾಗುತ್ತದೆ. ದುರಂಹಕಾರ, ದುರಾಭಿಮಾನ ನೀಗಿಕೊಂಡು ಜ್ಞಾನಿಯಾಗುತ್ತಾನೆ. ಆಗ ಎಲ್ಲರೂ ಹಿತ ಸಾಧನೆಯ ಗುರಿ ಹೊಂದುತ್ತಾರೆ. “ಲೋಕ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳ ಭವಂತು” ಎಂಬ ಗುರಿಯೊಂದಿಗೆ ಜೀವಿತವಿಡೀ ಶ್ರಮಿಸಿ ತನ್ನ ಹುಟ್ಟು ಬದುಕು ಸಾರ್ಥಕಗೊಳಿಸುತ್ತಾನೆ. ಈ ಪ್ರಪಂಚದಲ್ಲಿ ಯಾರೂ ಕೆಟ್ಟವರಿಲ್ಲ. ಆದರೆ ನಮ್ಮ ಮನದ ಭಾವನೆಯು ಕೆಟ್ಟದನ್ನು ಸೃಷ್ಟಿಸುತ್ತದೆ. ಆದ್ದರಿಂದ ಬಾಳು ವ್ಯರ್ಥವೆನ್ನದಿರಿ. ಬಾಳು ಗೋಳೆನ್ನದಿರಿ. ಶಾಂತಿ, ಸುಖ, ನೆಮ್ಮದಿ ಹೊರಗಿನಿಂದ ಸಿಗುವ ವಸ್ತುವಲ್ಲ. ಅದು ನಮ್ಮೊಳಗೇ ಇದೆ. ದೇವರು ಕೆಲವರನ್ನು ಪರೀಕ್ಷಿಸಿ ಕೊಡುತ್ತಾನೆ. ಕೆಲವರಿಗೆ ಕೊಟ್ಟು ಪರೀಕ್ಷಿಸುತ್ತಾನೆ. ಎಷ್ಟೋ ಜನರು ದೇವರು ನಮ್ಮ ಕೈ ಬಿಟ್ಟನೇ ಎಂದು ಗೋಳಾಡುವರು. ನಾವು ಗಟ್ಟಿಯಾಗಿ ಹಿಡಿದುಕೊಂಡರೆ ಅವನು ಬಿಡುವುದಾದರೂ ಹೇಗೆ? ನಮ್ಮ ಜನಕ್ಕೆ ದೇವರು ಮುನಿದಿರುವುದು ತಿಳಿಯುತ್ತದೆ. ದೇವರು ಒಲಿದಿರುವುದು ತಿಳಿಯುವುದಿಲ್ಲ. ಅಂತೂ ಭಕ್ತನಿಗೇನು ಬೇಕು ಎಂಬುದನ್ನು ಭಗವಂತನಿಗಿಂತ ಚೆನ್ನಾಗಿ ಬಲ್ಲವರಿಲ್ಲ. ನಮ್ಮ ಚಿಂತನೆಗಳು ಪವಿತ್ರವಾಗದೆ ಶಾಂತಿ, ಸಹನೆ, ನೆಮ್ಮದಿ, ದೊರಕದು. ಶಾಂತಿ, ಸಹನೆ, ಅನುಕಂಪಗಳಿರುವವರು ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಬಲ್ಲರು. ಮನ್ಮಥನು ದೇಹವನ್ನು ನೀಗಿಕೊಂಡನು. ಹರಿಶ್ಚಂದ್ರನು ಚಾಂಡಾಲನ ಸೇವಕನಾದನು. ಬ್ರಹ್ಮನು ತನ್ನ ಒಂದು ತಲೆಯನ್ನೇ ಕಳಕೊಂಡನು. ಶುಕ್ರಚಾರ್ಯರ ಒಂದು ಕಣ್ಣು ಕುರುಡಾಯಿತು. ನಳ ಚಕ್ರವರ್ತಿ ಕುದುರೆ ಲಾಯದಲ್ಲಿ ಸೇವಕನಾದನು. ಶ್ರೀ ರಾಮಚಂದ್ರನು ತನ್ನ ಪತ್ನಿಯನ್ನೇ ಕಳಕೊಂಡನು. ಹೀಗೆ ಕೆಲವು ಪುರಾಣ ಘಟನೆಗಳು ವಿಧಿಯನ್ನು ಮೀರಲಾಗದ ಮಹಾಪುರುಷರ ಉದಾಹರಣೆಯನ್ನು ನಮಗೆ ಕೊಡುತ್ತದೆ. ವಿಧಿಯನ್ನು ಮೀರಲಾಗದ ನಾವು ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ಎನ್ನುತ್ತಾ ಎಲ್ಲಾ ಶಕ್ತಿಗಳನ್ನೂ ಮೆಟ್ಟಿ ನಿಲ್ಲಬೇಕು. ಆ ಮಹಾ ಶಕ್ತಿಯನ್ನು ನಾವು ವಿಧಿ ಎಂದು ಹೇಳದೇ ಬೇರೆ ವಿಧಿ ಇಲ್ಲ.
ಅತ್ರಾಡಿ ಭೋಜರಾಜ್ ಎಲ್. ಹೆಗ್ಡೆ