ಪುಣೆ ಬಂಟರ ಸಂಘದ ಮಹಾಸಭೆಯು ಇತ್ತೀಚಿಗೆ ಮಾ 21 ರಂದು ಬಂಟರ ಭವನದಲ್ಲಿ ನಡೆದಿದ್ದು ಸಂಘದ ಮುಂದಿನ ಅವಧಿಗೆ ಹೊಸ ಕಾರ್ಯಕಾರಿ ಸಮಿತಿಗಾಗಿ 25 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು . ಏಪ್ರಿಲ್ 1 ರಂದು ಈ ಬಗ್ಗೆ ವಿಶೇಷ ಸಭೆಯೊಂದನ್ನು ಬಂಟರ ಭವನದಲ್ಲಿ ಆಯೋಜಿಸಲಾಗಿತ್ತು . ಕಳೆದೆರಡು ವರ್ಷಗಳ ಕಾಲ ಕೊರೋನಾ ಮಹಾಮಾರಿಯಿಂದಾಗಿ ಸಂಘದ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಸಂಘದ ಹೆಚ್ಚಿನ ಕೆಲಸ ಕಾರ್ಯಗಳು ನಡೆದಿರಲಿಲ್ಲ . ಅದಕ್ಕಾಗಿ ಮುಂದಿನ ಅವಧಿಗೆ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಅವರನ್ನು ಸದಸ್ಯರು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು . ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿಯವರನ್ನು ಪುನರಾಯ್ಕೆ ಗೊಳಿಸಲಾಯಿತು .ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ಉದಯ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು . ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಗಣೇಶ್ ಪೂಂಜಾ ಪುನರಾಯ್ಕೆಗೊಂಡರೆ ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷರನ್ನಾಗಿ ಶೇಖರ್ ಸಿ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು .
ಈ ಸಂದರ್ಭ ಸಂತೋಷ್ ಶೆಟ್ಟಿಯವರು ಮಾತನಾಡಿ ಕಳೆದ ನಾಲ್ಕು ವರ್ಷಗಳಲ್ಲಿ ಎರಡು ವರ್ಷಗಳು ಕೋರೋನಾ ಮಹಾಮಾರಿಯಿಂದಾಗಿ ಸಂಘದ ಕಾರ್ಯಚಟುವಟಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ಮಾಡಲು ಸಾಧ್ಯವಾಗಿಲ್ಲ . ಆದರೂ ನನ್ನ ಅವಧಿ ಪೂರ್ಣಗೊಂಡು ಜವಾಬ್ದಾರಿಯಿಂದ ವಿರಮಿಸುವ ನಿರ್ಧಾರವನ್ನು ಹೊಂದಿದ್ದೆ . ಪ್ರತಿಯೊಬ್ಬರಿಗೂ ಸಂಘದ ನೇತೃತ್ವ ವಹಿಸುವ ಅವಕಾಶ ಸಿಗಬೇಕೆಂದು ನನ್ನ ಅಭಿಪ್ರಾಯವಾಗಿದೆ . ಆದರೆ ಸಂಘದ ಮಹಾಸಭೆಯಲ್ಲಿ ಸೇರಿದ್ದ ಸದಸ್ಯರ ಹಾಗೂ ಕಾರ್ಯಕಾರಿ ಸಮಿತಿಯ ಒತ್ತಾಯಕ್ಕೆ ಮಣಿದು ಎಲ್ಲರೂ ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸವನ್ನು ಗೌರವಿಸಿ ಈ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ನನಗೆ ಅನಿವಾರ್ಯವಾಯಿತು . ಯಾವುದೇ ಪ್ರತಿಷ್ಠೆಗಾಗಿ ಹಂಬಲಿಸದೆ ಈ ಜವಾಬ್ದಾರಿ ಬಂಟ ಸಮಾಜದ ಸೇವೆಗಾಗಿ ಎಂದು ಪರಿಗಣಿಸಿ ಸಂಘದ ಹಾಗೂ ಭವನದ ಬಾಕಿ ಉಳಿದ ಕೆಲಸಕಾರ್ಯಗಳನ್ನು ಪೂರ್ತಿಗೊಳಿಸುವ ಕರ್ತವ್ಯ ನನ್ನ ಮೇಲಿದೆ . ಭವನದ ಕೆಲವೊಂದು ರಿಪೇರಿ ಕೆಲಸಗಳು ,ಮಹಾನಗರಪಾಲಿಕೆಯ ಪರವಾನಿಗಿ ಕೆಲಸಗಳು ,ದತ್ತಿ ಇಲಾಖೆಯ ನೋಂದಣಿ ಸಂಬಂಧಿತ ಕಾರ್ಯಗಳು ,ಸಂಘದ ಉದ್ದೇಶಿತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಯೋಜನೆಗಳು ನನ್ನ ಮುಂದಿವೆ . ಭವನದ ದಾನಿಗಳ ನೆರವಿನಿಂದ ,ಸಂಘದ ಪದಾಧಿಕಾರಿಗಳ ,ಮಾಜಿ ಅಧ್ಯಕ್ಷರ ,ಮಹಿಳಾ ವಿಭಾಗ ,ಯುವ ವಿಭಾಗ ,ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿಗಳ ಹಾಗೂ ಸಮಾಜಬಾಂಧವರೆಲ್ಲರ ಸಹಾಕಾರದಿಂದ ಇದುವರೆಗೆ ಸಂಘದ ನಿರೀಕ್ಷಿತ ಕಾರ್ಯಗಳೆಲ್ಲ ಸುಸೂತ್ರವಾಗಿ ನಡೆದಿವೆ . ಅವರಿಗೆಲ್ಲರಿಗೂ ಹೃದಯಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ . ನಮ್ಮ ಮಾರ್ಗದರ್ಶಕ ಐಕಳ ಹರೀಶ್ ಶೆಟ್ಟಿಯವರ ಮಾತು ಸದಾ ನನ್ನ ನೆನಪಿಗೆ ಬರುತ್ತಿದೆ . ನಾವು ಸಮಾಜಕ್ಕೆ ನಮ್ಮನ್ನು ಅರ್ಪಿಸಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಸರೆಯಾಗಿ ನಿಲ್ಲಬೇಕಾದುದು ನಮ್ಮ ಕರ್ತವ್ಯವಾಗಬೇಕು . ಯಾರು ಸಂಘದ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸುತ್ತಾನೋ ತನ್ನ ಸ್ಥಾನಕ್ಕೆ ಚ್ಯುತಿ ಬರದಂತೆ ನ್ಯಾಯವೊದಗಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಸದಾ ನಂಬಿದವನು ನಾನು . ಮುಂದೆಯೂ ಸಮಾಜಬಾಂಧವರೆಲ್ಲರ ಪ್ರೀತಿ ವಿಶ್ವಾಸ ಇರಲಿ ಎಂದರು .
ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಮಾತನಾಡಿ ಪುಣೆ ಬಂಟರ ಸಂಘಕ್ಕೆ ಸಂತೋಷ್ ಶೆಟ್ಟಿಯವರಂತಹ ನಾಯಕತ್ವ ದೊರಕಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ .. ಅವರ ದೂರದೃಷ್ಟಿಯ ಕಾರ್ಯವೈಖರಿ ,ಕರ್ತವ್ಯ ಬದ್ಧತೆ ,ಸಾಮಾಜಿಕ ಕಳಕಳಿ ಮಾದರಿಯಾಗಿದ್ದು ಅವರಿಗೆ ಸರಿಸಾಟಿ ಬೇರೊಬ್ಬರಿಲ್ಲ . ಸಂಘದ ಹಾಗೂ ಭವನದ ಕೆಲಸಕಾರ್ಯಗಳು ಕೊರೋನಾ ಮಹಾಮಾರಿಯಿಂದಾಗಿ ಬಾಕಿ ಉಳಿದಿದ್ದು ಅದನ್ನು ಪೂರ್ಣಗೊಳಿಸಲಿ ಎಂಬ ಆಶಯ ನಮ್ಮದಾಗಿದ್ದು ಅವರಿಗೆ ಪೂರ್ಣ ಸಹಕಾರವನ್ನು ನೀಡುತ್ತೇವೆ ಎಂದರು . ಸಂಘದ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ ಶೆಟ್ಟಿ ಪುತ್ತೂರು ಮಾತನಾಡಿ ಸಂತೋಷ್ ಶೆಟ್ಟಿಯವರು ಯಾರೊಂದಿಗೂ ಭೇದವಿರಿಸದೆ ಎಲ್ಲರೊಂದಿಗೂ ಪ್ರೀತಿ ವಿಶ್ವಾಸದೊಂದಿಗೆ ಬೆರೆತು ಸಂಘವನ್ನು ಮುನ್ನಡೆಸುವ ಸ್ವಭಾವ ಅವರದ್ದಾಗಿದೆ .ನಾವೆಲ್ಲರೂ ಅವರಿಗೆ ಪೂರ್ಣ ರೀತಿಯಲ್ಲಿ ಸಹಕಾರ ನೀಡಿ ಸಂಘವನ್ನು ಬಲಪಡಿಸೋಣ ಎಂದರು . ಸುಧೀರ್ ಶೆಟ್ಟಿ ,ರಾಕೇಶ್ ಶೆಟ್ಟಿ ಬೆಳ್ಳಾರೆ ಇವರುಗಳು ಸಂಘದ ಕಾರ್ಯಕ್ಕೆ ಸಂತೋಷ್ ಶೆಟ್ಟಿಯವರ ನೇತೃತ್ವಕ್ಕೆ ಪೂರ್ಣ ಬೆಂಬಲ ನೀಡುತ್ತೇವೆ ಎಂದರು . ಆಯ್ಕೆಗೊಂಡ ಎಲ್ಲಾ ಕಾರ್ಯಾಧ್ಯಕ್ಷರನ್ನು ಸಂತೋಷ್ ಶೆಟ್ಟಿಯವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು . ಸಭೆಯಲ್ಲಿ ಸಮಿತಿ ಸದಸ್ಯರು ,ಮಹಿಳಾ ವಿಭಾಗ, ಯುವ ವಿಭಾಗ ,ಪ್ರಾದೇಶಿಕ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.