ಹಬ್ಬಗಳ ಆಚರಣೆ ಕೇವಲ ಧಾರ್ಮಿಕತೆಗಳಿಗಷ್ಟೇ ಸೀಮಿತವಾಗಿರದೆ ಜೀವನದ ಸ್ವಾರಸ್ಯ ಹಾಗೂ ಪ್ರೀತಿ – ಬಾಂಧವ್ಯದ ಸಂಕೇತವೂ ಹೌದು. ಸಮೂಹ ಹಾಗೂ ಕುಟುಂಬದ ಹಿತ ಚಿಂತನೆಯು ಹಬ್ಬಗಳ ಮುಖ್ಯ ಆಶಯ. ಕುಟುಂಬ ಸಾಮರಸ್ಯದ ಪ್ರತೀಕವಾಗಿ ಬೆಳೆದು ಬಂದ ಹಬ್ಬ ರಕ್ಷಾಬಂಧನ. ಶ್ರಾವಣ ಮಾಸ ಪ್ರಾರಂಭವಾಗುತ್ತಲೇ ಹಬ್ಬಗಳು ಸಾಲು ಸಾಲಾಗಿ ಬರುತ್ತದೆ. ಶ್ರಾವಣ ಹುಣ್ಣುಮೆಯ ದಿನ ಆಚರಿಸುವ ಸೋದರ – ಸೋದರಿಯರ ಪವಿತ್ರ ಸಂಬಂಧವನ್ನು ಬೆಸೆಯುವ ಸಾಂಪ್ರದಾಯಿಕ ಹಬ್ಬ ರಕ್ಷಾಬಂಧನ ಅಥವಾ ರಾಖಿ ಹಬ್ಬ. ಪರಂಪರಾಗತವಾಗಿ ಆಚರಿಸಿಕೊಂಡು ಬರುವ ಹಬ್ಬ ಹರಿ ದಿನಗಳಲ್ಲಿ ಹಿರಿಯರು ಕೌಟುಂಬಿಕ ಬಾಂಧವ್ಯದ ಬೆಸುಗೆಗೆ ಕಂಡುಕೊಂಡ ಸಂಪ್ರದಾಯಗಳ ಆಚರಣೆಯ ಸಂಬಂಧಗಳನ್ನು ಗಟ್ಟಿಗೊಳಿಸಿವೆ. ಆತ್ಮೀಯ ಭ್ರಾತೃ ಸಂಬಂಧವನ್ನು ಭಾವ ಬಂಧದ ಮೂಲಕ ಬಂದಿಸುವ ಹಬ್ಬವೇ ರಕ್ಷಾ ಬಂಧನ. ಸಹೋದರರ ಯೋಗ ಕ್ಷೇಮ ಹಾರೈಸಿ, ತಮ್ಮ ರಕ್ಷಣೆಯ ಭಾರವನ್ನು ನೆನಪಿಸುವ ಹಬ್ಬವಿದು.
ಅಣ್ಣ – ತಂಗಿಯರ ಬಾಂಧವ್ಯದ ಅನುಪಮ ಸಂಕೇತವಾಗಿರುವ ರಕ್ಷಾ ಬಂಧನದಂದು ಸಹೋದರಿಯರು ಸಹೋದರರ ಕೈಗೆ ರಾಖಿ ಕಟ್ಟುವುದೇ ಈ ಹಬ್ಬದ ಮುಖ್ಯ ಪ್ರಕ್ರಿಯೆ. ಸಹೋದರನನ್ನು ಮಣೆಯ ಮೇಲೆ ಕೂರಿಸಿ ಬಲಗೈಗೆ ರಾಕಿ ಕಟ್ಟಿ ತಿಲಕ ಇಟ್ಟು ಅಕ್ಷತೆ ಹಾಕಿ ಶೃಂಗರಿಸಿದ ಪೂಜಾ ಹರಿವಾಣದಲ್ಲಿ ರಾಖಿ, ಕುಂಕುಮ, ಅಕ್ಷತೆ, ದೀಪ, ನಾಣ್ಯಗಳಿರಿಸಿ ಆರತಿ ಬೆಳಗಿಸಿ ಸಿಹಿ ನೀಡಿ ನಿನ್ನ ಸುಖ – ದುಃಖಗಳಲ್ಲಿ ನಿನ್ನೊಂದಿಗಿದ್ದೇನೆ. ಶ್ರೀ ದೇವರ ಅನುಗ್ರಹ ಸದಾ ನಿನಗಿರಲಿ ಎಂದು ಶುಭಹಾರೈಸುತ್ತಾರೆ. ಅಂದು ಮನೆಯಲ್ಲಿ ಹಬ್ಬ ಅಡುಗೆ ತಯಾರಿಸಿ ಸಹೋದರರಿಗೆ ಉಣ ಬಡಿಸಲಾಗುತ್ತದೆ.
ರಾಖಿ ಕಟ್ಟಲು ತರ ತರಹದ ಹರಳು ಮಣಿ ಮುತ್ತುಗಳಿಂದ ಅಲಂಕರಿಸಿದ ರಾಖಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಆದರೂ ಧಾರ್ಮಿಕವಾಗಿ ಬಳಸುವುದು ರೇಷ್ಮೆದಾರದ ನೂಲಿಗೆ ಮಹತ್ವದ ಅರ್ಥವಿದೆ. ಅದರಲ್ಲೂ ಕೆಂಪು ಹಾಗೂ ಹಳದಿ ಬಣ್ಣದ ರಾಖಿಯನ್ನು ಹೆಚ್ಚು ಜನ ಖರೀದಿಸುತ್ತಾರೆ.
ದೇವತೆಗಳ ಮತ್ತು ರಾಕ್ಷಸರ ನಡುವೆ ಘೋರ ಯುದ್ಧ ನಡೆದು, ಬಲಿಚಕ್ರವರ್ತಿಯು ವಿಜಯ ಸಾಧಿಸುತ್ತಲಿದ್ದನು. ಆಗ ಇಂದ್ರನ ಪತ್ನಿ ಶಚೀದೇವಿಯು ವಿಷ್ಣುವಿನ ಬಳಿ ಪ್ರಾರ್ಥಿಸಿದಾಗ ವಿಷ್ಣುವು ಹತ್ತಿಯ ದಾರಗಳಿಂದ ಕೂಡಿದ ಪವಿತ್ರ ರಕ್ಷಣೆಯನ್ನು ಶಚೀದೇವಿಗೆ ನೀಡಿ ಅದನ್ನು ಇಂದ್ರನಿಗೆ ಕಟ್ಟುವಂತೆ ಹೇಳುತ್ತಾನೆ. ಶಚೀದೇವಿ ಕೆಂಪು ಬಣ್ಣದ ರಾಖಿಯನ್ನು ಇಂದ್ರನಿಗೆ ಕಟ್ಟುತ್ತಾಳೆ. ಇದರಿಂದಾಗಿ ಅವಳ ಪತಿಗೆ ಸ್ವರ್ಗ, ಯಶಸ್ಸು, ಸ್ವರ್ಗಿಯ ಸುಖೋಪಭೋಗಗಳು ಮರಳಿ ದೊರೆಯಿತು. ಇದು ರೇಷ್ಮೆ ದಾರದ ಅದ್ಬುತ ಶಕ್ತಿ ಎಂಬ ನಂಬಿಕೆ ಇಂದಿಗೂ ಆಚರಣೆಗೆ ಪ್ರೇರಣೆ.
ಬೃಹಸ್ಪತಿ ಇಂದ್ರನನ್ನು ರಕ್ಷಿಸಲು ಕೈಗೆ ರಕ್ಷಾಸೂತ್ರ ಕಟ್ಟಿದ ಕತೆಯು ಚರಿತ್ರೆಯಲ್ಲಿದೆ. ಹಾಗೆ ಬಲಿಚಕ್ರವರ್ತಿಯಿಂದ ಮೂರು ಲೋಕ ಗೆದ್ದ ವಿಷ್ಣು ಅನಂತರ ಆತನ ಅರಮನೆಯಲ್ಲಿ ಉಳಿಯುವಂತಾದಾಗ ಮಹಾಲಕ್ಷ್ಮಿ ಆತನನ್ನು ವೈಕುಂಠಕ್ಕೆ ಕರೆದೊಯ್ಯಲು ಬಲಿ ಚಕ್ರವರ್ತಿಯ ಬಳಿಗೆ ಹೋಗಿ ಆತನ ಕೈಗೆ ಹಳದಿ ಬಣ್ಣದ ರಾಖಿ ಕಟ್ಟಿದಾಗ ಮಹಾವಿಷ್ಣುವನ್ನು ವೈಕುಂಠಕ್ಕೆ ಕರೆದೊಯ್ಯುವ ಒಪ್ಪಿಗೆ ಲಕ್ಷ್ಮೀ ಗೆ ದೊರೆಯುತ್ತದೆ.
ಮಹಾಭಾರತದಲ್ಲಿ ಅಭಿಮನ್ಯುವು ಯುದ್ಧಕ್ಕೆ ಹೊರಡುವ ಮುನ್ನ ಕುಂತಿದೇವಿಯು ತನ್ನ ಪುಟ್ಟ ಮೊಮ್ಮಗನಿಗೆ ರಕ್ಷೆಯನ್ನು ಕಟ್ಟಿದಳೆಂಬ ಉಲ್ಲೇಖವಿದೆ.
ರಜಪೂತ ರಾಣಿಯರು ತಮ್ಮ ಸುತ್ತಮುತ್ತಲಿನ ರಾಜ್ಯಗಳ ರಾಜರಿಗೆ ಭ್ರಾತೃತ್ವದ ಸಂಕೇತವಾಗಿ ರಾಖಿ ಕಳುಹಿಸುವ ಸಂಪ್ರದಾಯವಿತ್ತಂತೆ. ಹಾಗೆ ರಾಣಿಯರು ತಮ್ಮ ಪತಿ ಯುದ್ಧ ಭೂಮಿಗೆ ತೆರಳುವ ಮುಂಚೆ ರಕ್ಷೆ ಕಟ್ಟುವ ಸಂಪ್ರದಾಯವೂ ಇದೆ.
ವಿವಿಧ ರಾಜ್ಯಗಳಲ್ಲಿ ರಕ್ಷಾ ಬಂಧನವನ್ನು ಬೇರೆ ಬೇರೆ ಹೆಸರಿನಲ್ಲಿ ಕರೆಯುತ್ತಾರೆ. ಒಡಿಶಾ ಹಾಗೂ ಬಂಗಾಲದಲ್ಲಿ ಜ್ಹೂಲನ್ ಪೂರ್ಣಮಾ ಎಂಬ ಹೆಸರಿನಲ್ಲಿ ಆರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಉಪಕರ್ಮ, ನೂಲು ಹುಣ್ಣುಮೆ ಎನ್ನುತ್ತಾರೆ. ಉತ್ತರಾಖಂಡದವರು ಜನ್ಯೋಪುನ್ಯು ಎನ್ನುವ ಜನಿವಾರ ಧಾರಣ ಹಬ್ಬ ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ರಕ್ಷಾಬಂಧನದ ದಿನ ನಾರಲೀ ಪೂರ್ಣಿಮಾ ಎಂದೂ ಕರೆಯುವುದಲ್ಲದೆ ಸಮುದ್ರವನ್ನು ಪೂಜೆಸುತ್ತಾರೆ. ಪಂಜಾಬ್ ಹರಿಯಾಣದಲ್ಲಿ ಸಲೋನೋ ಹಬ್ಬದ ಆಚರಣೆಯಲ್ಲಿ ಕಟ್ಟುವ ರಕ್ಷಾದಾರಕ್ಕೆ ಪೊಂಚಿಸ್ ಎನ್ನುತ್ತಾರೆ. ನೇಪಾಳಿಗಳು ಜನೈ ಪೂರ್ಣಿಮಾ ಎಂದು ಆಚರಿಸುತ್ತಾರೆ. ಭಾರತೀಯರಿಗೆ ನಮ್ಮ ನೆಲದ ವೈಶಿಷ್ಟ್ಯಪೂರ್ಣ ಆಚರಣೆಯಲ್ಲಿ ಅತಿಯಾದ ಒಲವು ಹಾಗೂ ಸಂಪ್ರದಾಯದ ಉದ್ದೇಶವಿದ್ದು ಬೇರೆ ಬೇರೆ ಹೆಸರಿನಿಂದ ಆಚರಿಸಲಾಗುತ್ತದೆ ಅಷ್ಟೇ.
ಮಹಾಭಾರತ ಕಾಲದ ಜನಪ್ರಿಯ ಕತೆಯೊಂದು ಹೀಗಿದೆ, ಶಿಶುಪಾಲನ ವಧೆಯಾದ ಸಮಯದಲ್ಲಿ ಶ್ರೀ ಕೃಷ್ಣನ ಬೆರಳಿನಿಂದ ರಕ್ತ ಒಸರುತ್ತಿತ್ತು. ಇದನ್ನು ನೋಡಿ ಭಯಭೀತಳಾದ ದ್ರೌಪದಿ ಅತ್ತಿತ್ತ ನೋಡದೆ ತನ್ನ ಬೆಲೆಬಾಳುವ ರೇಷ್ಮೆ ಸೀರೆಯ ಸೆರಗಿನ ತುದಿಯನ್ನೇ ಕತ್ತರಿಸಿ ಶ್ರೀ ಕೃಷ್ಣನ ಬೆರಳಿಗೆ ಕಟ್ಟಿ ರಕ್ತ ಹರಿಯುವುದನ್ನು ನಿಲ್ಲಿಸುತ್ತಾಳೆ. ಇದರಿಂದ ಸಂತುಷ್ಠನಾದ ಕೃಷ್ಣ ಆಕೆ ಕರೆದಾಗ ಬಂದು ಸಲಹುವೆ ಎಂದವ ದ್ರೌಪದಿಯ ವಸ್ತ್ರಾಪಹರಣದ ಸಮಯದಲ್ಲಿ ಶ್ರೀ ಕೃಷ್ಣ ಅಕ್ಷಯಾಂಬರವಿತ್ತು ಆಕೆಯ ಮಾನ ಕಾಪಾಡುತ್ತಾನೆ. ರಕ್ಷಾಬಂಧನದಲ್ಲಿ ಅನೇಕ ಪೌರಾಣಿಕ ಹಿನ್ನೆಲೆಯ ಕಥೆಗಳಿವೆ .ಒಮ್ಮೆ ಗಣಪತಿಯ ಸಹೋದರಿ ಆತನ ಕೈಗೆ ರಾಖಿಕಟ್ಟಿದಾಗ ಗಣಪತಿಯ ಶುಭ ಹಾಗೂ ಲಾಭ ಎಂಬ ಇಬ್ಬರು ಮಕ್ಕಳು ತಮಗೂ ರಕ್ಷಾಬಂಧನ ಆಚರಿಸಲು ಸಹೋದರಿಯರು ಬೇಕು ಎಂದು ಹಠ ಹಿಡಿಯುತ್ತಾರೆ. ಆಗ ನಾರದರು ಒಂದು ಉಪಾಯ ಹೂಡಿ ವೃದ್ಧಿ ಹಾಗೂ ಸಿದ್ದಿಯರ ದೇಹದ ದಿವ್ಯ ಜೋತಿಯ ಮೂಲಕ ಸಂತೋಷಿಮಾ ಎಂಬ ದೇವತೆಯನ್ನು ಗಣಪತಿ ಪಡೆಯವಂತೆ ಮಾಡುತ್ತಾನೆ.
ಇಂದಿಗೂ ರಾಖಿ ಅಥವಾ ರಕ್ಷಾ ಬಂಧನಕ್ಕೆ ಜನರು ಹೆಚ್ಚಿನ ಮಹತ್ವ ನೀಡುತ್ತಿದ್ದು, ಹಬ್ಬವೆಂದರೆ ಬರೆ ಸಿಹಿ ತಿಂಡಿ ಹಬ್ಬದ ಅಡುಗೆ, ಪೂಜೆಗಳು ಮಾತ್ರವಲ್ಲ ಸಂಬಂಧಗಳಿಗೂ ಮಹತ್ವ ನೀಡುತ್ತಾ, ಕೇವಲ ವಿಜೃಂಭಣೆಯಿಂದ ಆಚರಿಸಿಕೊಳ್ಳವುದಕ್ಕಿಂತಲೂ ಸಂಪ್ರದಾಯದ ಬದ್ದವಾಗಿ ಆಚರಿಸಿಕೊಳ್ಳುತ್ತಿರುವುದು ಸಂತಸದ ವಿಚಾರ. ಆದರೆ ಅವಿಭಕ್ತ ಕುಟುಂಬಗಳು ಮರೆಯಾಗಿ, ವಿಭಕ್ತ ಕುಟುಂಬಗಳು ಹೆಚ್ಚಾಗಿ ಕೆಲ ಹಬ್ಬಗಳು ಮಹತ್ವ ಕಳೆದುಕೊಳ್ಳುತ್ತಿವೆ. ಹಬ್ಬ ಆಚರಣೆಗೆ ಮಾತ್ರ ಸೀಮಿತವಲ್ಲ ಇದು ಪೌರಾಣಿಕ ಹಿನ್ನೆಲೆ, ತತ್ವಗಳ ಕಲೆ, ಹಾಗೂ ಐತಿಹಾಸಿಕ ವಿಚಾರ ವಿಷಯಾಧಾರಿತವಾಗಿರುತ್ತದೆ. ಇಂದು ರಕ್ಷಾಬಂಧನ ಎಲ್ಲರೂ ಸಂಪ್ರದಾಯದಂತೆ ಆಚರಿಸಿಕೊಳ್ಳಲಿ ಎಂದೂ ಶುಭ ಹಾರೈಸೊಣ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ.