ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ ಮಹಿಳಾ ಬಂಟರ ವಿಭಾಗ, ಯುವ ಬಂಟರ ವಿಭಾಗ ಹಾಗೂ ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದೊಂದಿಗೆ ಜುಲೈ 12 ರಂದು ಪುತ್ತೂರು ಎಂ ಸುಂದರರಾಮ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಲಿರುವ ‘ಪೆರ್ಮೆದ ಬಂಟೆರ್’ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭವು ಜುಲೈ 01 ರಂದು ಜರಗಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪುತ್ತೂರು ಬಂಟರ ಭವನದ ಬಂಟರ ಚಾವಡಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು. ಬಳಿಕ ಸರಳ ರೀತಿಯ ಸಭಾ ಕಾರ್ಯಕ್ರಮ ನಡೆಯಿತು.

ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಜುಲೈ 12 ರಂದು ಜರಗಲಿರುವ ಪೆರ್ಮೆದ ಬಂಟೆರ್ ಕಾರ್ಯಕ್ರಮ ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬರಲು ಎಲ್ಲರೂ ಪೂರ್ಣ ರೀತಿಯ ಸಹಕಾರವನ್ನು ನೀಡಬೇಕು. ನಮ್ಮ ಸಮಾಜದ ಬಂಟ ಸಾಧಕರನ್ನು ಗುರುತಿಸುವುದು, ಗೌರವಿಸುವುದು ನಮ್ಮ ಕರ್ತವ್ಯವಾಗಿದ್ದು, ಬಂಟರು ಜಗತ್ತಿನಲ್ಲಿಯೇ ನಾನಾ ರೀತಿಯ ಸಾಧನೆಯನ್ನು ಮಾಡಿ ಸಮಾಜಕ್ಕೆ ಹೆಮ್ಮೆಯನ್ನು ತಂದಿದ್ದಾರೆ. ಆ ನಿಟ್ಟಿನಲ್ಲಿ ಬಂಟ ಸಮಾಜದ ಹನ್ನೊಂದು ಮಂದಿ ವಿವಿಧ ಸಾಧಕರನ್ನು ಸನ್ಮಾನಿಸಲಿದ್ದೇವೆ. ಜೊತೆಗೆ ನೂತನವಾಗಿ ಆಯ್ಕೆಯಾದ ಸರಕಾರಿ ನಾಮನಿರ್ದೇಶನ ಸದಸ್ಯರು, ಸಹಕಾರಿ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರುಗಳು, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರುಗಳು, ದೇವಸ್ಥಾನದ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆಯಿಂದ ಮಧ್ಯಾಹ್ನದ ತನಕ ನಡೆಯುವ ಈ ಕಾರ್ಯಕ್ರಮದಲ್ಲಿ ಬಂಟ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ಜೈರಾಜ್ ಭಂಡಾರಿ, ಬಂಟರ ಸಂಘದ ನಿರ್ದೇಶಕರುಗಳಾದ ದಂಬೆಕ್ಕಾನ ಸದಾಶಿವ ರೈ, ಪುಲಸ್ಯ ರೈ, ಹರಿನಾಕ್ಷಿ ಜೆ ಶೆಟ್ಟಿ, ಸದಾಶಿವ ರೈ ಸೂರಂಬೈಲು, ಸ್ವರ್ಣಲತಾ ಜೆ ರೈ, ರವಿಪ್ರಸಾದ್ ಶೆಟ್ಟಿ ಬನ್ನೂರು, ಸತೀಶ್ ರೈ ಕಟ್ಟಾವು, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ತಾಲೂಕು ಮಹಿಳಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಕುಸುಮ ಪಿ ಶೆಟ್ಟಿ, ಕೋಶಾಧಿಕಾರಿ ಅರುಣಾ ಡಿ ರೈ, ತಾಲೂಕು ಯುವ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಉಮಾಪ್ರಸಾದ್ ರೈ ನಡುಬೈಲು, ಉಪನ್ಯಾಸಕ ಕಿರಣ್ ಚಂದ್ರ ರೈ, ಪುತ್ತೂರು ಬಂಟರ ಭವನದ ಕಚೇರಿ ವ್ಯವಸ್ಥಾಪಕ ರವಿಚಂದ್ರ ರೈ ಮತ್ತು ಭಾಸ್ಕರ್ ರೈರವರು ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ ವಂದಿಸಿದರು.