ರಸ್ತೆ ಸುರಕ್ಷತೆ ಎಂಬುದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದ್ದು, ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳಿಗೆ ಕಡಿವಾಣ ಹಾಕುವುದು ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಬಲುದೊಡ್ಡ ಸವಾಲಾಗಿದೆ. ಈ ಸಂಬಂಧ ಜಾಗತಿಕ ರಸ್ತೆ ಸುರಕ್ಷತೆಗಾಗಿನ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯಾಗಿರುವ ಜೀನ್ ಟಾಡ್ ಅವರೂ ಆತಂಕ ವ್ಯಕ್ತಪಡಿಸಿದ್ದು, ಪ್ರತಿನಿತ್ಯ ವಿಶ್ವಾದ್ಯಂತ ಸಂಭವಿಸುತ್ತಿರುವ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾಗತಿಕ ಸಮುದಾಯ ಕೈಗೊಳ್ಳುತ್ತಿರುವ ಕ್ರಮಗಳು ಪರ್ಯಾಪ್ತವಾಗಿಲ್ಲ ಎಂದು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ, ಪ್ರತೀ ವರ್ಷ ವಿಶ್ವಾದ್ಯಂತ 13 ಲಕ್ಷ ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಮಧ್ಯಮ ಮತ್ತು ಕಡಿಮೆ ಆದಾಯದ ದೇಶಗಳಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುವ ಪ್ರತೀ ಹತ್ತು ಮಂದಿಯಲ್ಲಿ 9 ಮಂದಿಯ ಜೀವವನ್ನು ಉಳಿಸಬಹುದಾಗಿದೆ. ಅಷ್ಟು ಮಾತ್ರವಲ್ಲದೆ, ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಪೈಕಿ ಮಕ್ಕಳು ಮತ್ತು 5-29 ವರ್ಷದೊಳಗಿನವರ ಸಂಖ್ಯೆಯೇ ಅಧಿಕ ಎಂಬುದು ಅತ್ಯಂತ ದುರದೃಷ್ಟಕರ ಸಂಗತಿ.
ಇದೇ ವೇಳೆ ಭಾರತದಲ್ಲಿ ಪ್ರತೀ ವರ್ಷ 50 ಲಕ್ಷಕ್ಕೂ ಅಧಿಕ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, 2 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಪ್ರತೀ ಗಂಟೆಗೆ 46 ಗಂಭೀರ ಪ್ರಮಾಣದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಪ್ರತೀ ವರ್ಷ ದೇಶದ ರಸ್ತೆಗಳಲ್ಲಿ ಸರಿಸುಮಾರು 1.5 ಲಕ್ಷ ಜನರು ಮೃತಪಡುತ್ತಿದ್ದಾರೆ. ಅಂದರೆ ಪ್ರತಿದಿನ ಅಂದಾಜು 1,130 ಅಪಘಾತಗಳು ಸಂಭವಿಸುತ್ತಿದ್ದು, 422 ಮಂದಿ ಸಾವಿಗೀಡಾಗುತ್ತಿದ್ದಾರೆ ಅಥವಾ ಪ್ರತೀ ತಾಸಿಗೆ 47 ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, 18 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ರಸ್ತೆ ಅಪಘಾತಗಳು ಸಾಮಾಜಿಕ, ಆರ್ಥಿಕವಾಗಿ ದೇಶದ ಒಟ್ಟಾರೆ ಪ್ರಗತಿಯ ಮೇಲೆ ಭಾರೀ ಪ್ರಭಾವ ಬೀರುತ್ತಿದೆ. ರಸ್ತೆ ಅಪಘಾತಗಳ ನಿಯಂತ್ರಣಕ್ಕಾಗಿ ವಿಶ್ವದ ಹಲವಾರು ದೇಶಗಳು ರಸ್ತೆಗಳ ಸುಧಾರಣೆ, ಸಂಚಾರ ನಿಯಮಗಳನ್ನು ಕಾಲಕಾಲಕ್ಕೆ ಮರುರೂಪಿಸುತ್ತಾ ಬಂದಿವೆ. ಇನ್ನು ಸಂಚಾರ ನಿಯಮಾವಳಿಗಳನ್ನು ಉಲ್ಲಂ ಸುವವರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಇವ್ಯಾವೂ ರಸ್ತೆ ಅಪಘಾತಗಳನ್ನು ಹತೋಟಿಗೆ ತರುವಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಂಡಿಲ್ಲ.
ರಸ್ತೆ ಅಪಘಾತಗಳಲ್ಲಿ ಬಹುಪಾಲು ಚಾಲಕರ ನಿರ್ಲಕ್ಷ್ಯದಿಂದಾಗಿಯೇ ಸಂಭವಿಸುತ್ತಿವೆ. ಕಡಿಮೆ ಆದಾಯದ ದೇಶಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲ ದೇಶಗಳಲ್ಲಿ ಕಳೆದ 2-3 ದಶಕಗಳಿಗೆ ಹೋಲಿಸಿದರೆ ರಸ್ತೆಗಳ ಸ್ಥಿತಿಗತಿಯಲ್ಲಿ ತೀವ್ರತೆರನಾದ ಸುಧಾರಣೆಗಳನ್ನು ಕಂಡಿದೆ. ಇದೇ ರೀತಿ ವಾಹನಗಳ ಸಂಖ್ಯೆಯಲ್ಲೂ ಭಾರೀ ಏರಿಕೆ ಕಂಡಿರುವುದರಿಂದ ಹೆಚ್ಚಿನ ರಸ್ತೆಗಳು ವಾಹನ ದಟ್ಟಣೆಯನ್ನು ಹೊಂದಿವೆ. ಇದು ಕೂಡ ಅಪಘಾತಗಳಿಗೆ ಕಾರಣವಾಗುತ್ತಿದೆ.
ವಾಹನ ಚಾಲಕರು ಮತ್ತು ಪಾದಚಾರಿಗಳು ಒಂದಿಷ್ಟು ಜಾಗೃತರಾಗಿ ರಸ್ತೆ ನಿಯಮಾವಳಿಗಳನ್ನು ಸಮರ್ಪಕವಾಗಿ ಪರಿಪಾಲಿಸಿದಲ್ಲಿ ಮಾತ್ರವೇ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಇದಕ್ಕಾಗಿ ಸರ್ಕಾರ ಎಷ್ಟೇ ನಿಯಮಗಳನ್ನು ಜಾರಿಗೊಳಿಸಿದರೂ, ಕಾನೂನು ಕ್ರಮ ಕೈಗೊಂಡರೂ ಜನರಲ್ಲಿ ಈ ಬಗೆಗೆ ಜಾಗೃತಿ ಮೂಡದೇ ಹೋದಲ್ಲಿ ಅವೆಲ್ಲವೂ ನೀರ ಮೇಲಿಟ್ಟ ಹೋಮದಂತಾಗುತ್ತದೆ. ಜನರ ಸಹಕಾರವಿಲ್ಲದೇ ಹೋದರೆ ರಸ್ತೆ ಸುರಕ್ಷತೆ ಎಂಬುದು ಕೇವಲ ಬಾಯಿ ಮಾತಿಗೆ ಸೀಮಿತವಾಗಲಿದೆ. ರಸ್ತೆ ಸುರಕ್ಷತೆ ವಿಚಾರದಲ್ಲಿ ಸರ್ಕಾರ ಮತ್ತು ಜನತೆ ಪರಸ್ಪರ ಕೈಜೋಡಿಸಲೇ ಬೇಕಾಗಿದೆ.