ಇಂಡಿಯನ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ಆಹಾರ್ ತನ್ನ ಬಹು ನಿರೀಕ್ಷೆಯ ಶೂನ್ಯ ಕಮಿಷನ್ ಆಧಾರಿತ ಫುಡ್ ಡೆಲಿವರಿ ಆ್ಯಪ್ “ವಾಯು’ ವನ್ನು ಅಂಧೇರಿ ಪೂರ್ವದ ಫೈವ್ ಸ್ಟಾರ್ ಹೊಟೇಲ್ ಲೀಲಾದಲ್ಲಿ ಬಿಡುಗಡೆಗೊಳಿಸಿತು. ಆಹಾರ್ ಮತ್ತು ಹೊಟೇಲ್ ಉದ್ಯಮದ ಇತರ ಪ್ರಮುಖ ಸಂಘಗಳ ಬೆಂಬಲದೊಂದಿಗೆ ಪುಣೆಯ ಪ್ರಮುಖ ತಂತ್ರಜ್ಞಾನ ಕಂಪೆನಿಯಾದ ಡೆಸ್ಟೆಕ್ ಹೊರೇ ಕಾದಿಂದ ನುರಿತ ಸೀರಿಯಲ್ ಟೆಕ್ ಉದ್ಯಮಿಗಳಾದ ಅನಿರುದ್ಧ ಕೋಟ್ಗಿರೆ ಮತ್ತು ಮಂದರ್ ಲಾಂಡೆ ಅವರು ವಾಯು ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದು, ನಟ, ಅನುಭವಿ ಹೊಟೇಲ್ ಉದ್ಯಮಿ ಸುನೀಲ್ ಶೆಟ್ಟಿ ಅವರನ್ನು ಆ್ಯಪ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ.
ಆಹಾರ್ ಅಧ್ಯಕ್ಷ ಸುಕೇಶ್ ಶೆಟ್ಟಿ ಮಾತಾನಾಡಿ, ಸಾಂಪ್ರದಾಯಿಕವಾಗಿ ನಮ್ಮ ಪೂರ್ವಜರು ತಮ್ಮದೇ ಆದ ರೀತಿಯಲ್ಲಿ ವ್ಯವಹಾರವನ್ನು ಮಾಡಿದರು. ತಮ್ಮ ಸಂಸ್ಥೆಗಳ ಖ್ಯಾತಿಯನ್ನು ಸಂಪೂರ್ಣ ಕಠಿನ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ನಿರ್ಮಿಸಿದರು. ಅದೇ ರೀತಿ ಕಿರಿಯ ತಲೆಮಾರುಗಳು ಸಹ ಅನೇಕ ನವೀನತೆಗಳೊಂದಿಗೆ ಸಮಂಜಸವಾದ ಬೆಲೆಯಲ್ಲಿ ರುಚಿಕರವಾದ ಆರೋಗ್ಯಕರ ಆಹಾರವನ್ನು ಒದಗಿಸುವ ಇದೇ ರೀತಿಯ ಸಂಸ್ಕೃತಿಯನ್ನು ಮುಂದುವರೆಸಿದರು.
ಕಳೆದ 70ಕ್ಕೂ ಹೆಚ್ಚಿನ ವರ್ಷಗಳಲ್ಲಿ ಪ್ರತಿಯೊಬ್ಬರೂ ತಮ್ಮ ವೇದಿಕೆಗಳು ಮತ್ತು ಖ್ಯಾತಿಯನ್ನು ನಿರ್ಮಿಸಿದ್ದಾರೆ. ಸದ್ಯ ತಂತ್ರಜ್ಞಾನ ಬಂದಿದೆ. ಇದರಲ್ಲಿ ಗ್ರಾಹಕರ ಡೇಟಾ ಮರೆಮಾಚುವಿಕೆ ಮತ್ತಿತರ ಸಮಸ್ಯೆಗಳಿದ್ದು, ಕೆಲವು ಸಂಗ್ರಾಹಕರು ಇಡೀ ವ್ಯವಸ್ಥೆಯನ್ನು ಹೈಜಾಕ್ ಮಾಡುತ್ತಿರುವುದರಿಂದ ನಾವು ತಲೆ ಕೆಡಿಸಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಲ್ಲಿ ನಮ್ಮ ಸಮಸ್ಯೆ, ಉದ್ಯಮಿಯಾಗಿ ನಾವು ಎದುರಿಸುತ್ತಿರುವ ಈ ಅಪಾಯವನ್ನು ಪ್ರಸ್ತಾಪಿಸಿದ್ದು, ಅವರು ನಿಮ್ಮ ಸ್ವಂತ ಅಪ್ಲಿಕೇಶನ್ ರಚಿಸುವಂತೆ ಸೂಚಿಸಿದ್ದರು. ತತ್ಕ್ಷಣವೇ ನಾವು ನಮ್ಮ ಪದಾಧಿಕಾರಿಗಳು ಮತ್ತು ಉಪ ಸಮಿತಿಯ ಸದಸ್ಯರು ಮತ್ತು ಉದ್ಯಮಿಗಳು ಚಿಂತನೆ ನಡೆಸಿ, ಅನಿರುದ್ಧ್ ಮಂದಾರ್ ಅವರ ಜತೆಗೂಡುವಿಕೆಯಿಂದ ಆ್ಯಪ್ ಅಸ್ತಿತ್ವಕ್ಕೆ ಬಂದಿದೆ. ಈ ಆ್ಯಪ್ ಉದ್ಯಮದಿಂದ ಉದ್ಯಮಕ್ಕಾಗಿ ಎಂದು ತೋರಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಎಲ್ಲ ಸದಸ್ಯ ಬಂಧುಗಳಿಂದ ನಮಗೆ ವ್ಯಾಪಕ ಪ್ರತಿಕ್ರಿಯೆ ದೊರೆತಿದೆ ಎಂದರು. ಈ ವೇಳೆ ಅನಿರುದ್ಧ ಕೋಟ್ಗಿರೆ ಮತ್ತು ಮಂದಾರ್ ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ಒಂದು ಸಾವಿರಕ್ಕೂ ಹೆಚ್ಚು ರೆಸ್ಟೊ ರೆಂಟ್ಗಳು ಸೇರ್ಪಡೆ
ಹೆಚ್ಚಿನ ಕಮಿಷನ್ ಶುಲ್ಕ, ಕುಶಲತೆಯ ರೇಟಿಂಗ್ ಮತ್ತು ವಿಮರ್ಶೆ ಮತ್ತು ಏಕಪಕ್ಷೀಯ ನೀತಿಗಳಂತಹ ಆನ್ಲೈನ್ ಆಹಾರ ವಿತರಣಾ ವೇದಿಕೆಗಳೊಂದಿಗೆ ಇಂದು ರೆಸ್ಟೋರೆಂಟ್ಗಳು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿವೆ. ಮತ್ತೂಂದೆಡೆ ಗ್ರಾಹಕರು ಹೆಚ್ಚಿನ ಬೆಲೆಯ ಆಹಾರ, ವಿಳಂಬ ವಿತರಣೆ, ಸ್ವತ್ಛತೆ ಮಾನದಂಡಗಳು, ಕಳಪೆ ಗುಣಮಟ್ಟದ ಆಹಾರ ಮತ್ತು ಗ್ರಾಹಕ ಬೆಂಬಲದ ಕೊರತೆಯಿಂದಾಗಿ ಹತಾಶೆಯನ್ನು ಅನುಭವಿಸುತ್ತಿದ್ದಾರೆ.
ಈ ಎಲ್ಲ ಸವಾಲುಗಳಿಗೆ ಉತ್ತರವಾಗಿ ಮುಂಬಯಿಯಲ್ಲಿ ವಾಯು ಆಪ್ ಆರಂಭವಾಗಿದ್ದು, ಇದರಿಂದ ಗ್ರಾಹಕರಿಗೆ ಮತ್ತು ರೆಸ್ಟೋರೆಂಟ್ಗಳಿಗೆ ಆಹಾರ ವಿತರಣಾ ವ್ಯವಸ್ಥೆಗೆ ಲಾಭವಾಗಲಿದೆ. ಈ ಆ್ಯಪ್ ಮೂಲಕ ಕಮಿಷನ್ ಶುಲ್ಕದಿಂದ ರೆಸ್ಟೋರೆಂಟ್ಗಳನ್ನು ಮುಕ್ತಗೊಳಿಸುವುದು, ಕಮಿಷನ್ ಶುಲ್ಕವನ್ನು ತೆಗೆದು ಹಾಕುವುದರೊಂದಿಗೆ, ರೆಸ್ಟೋರೆಂಟ್ಗಳು ತಮ್ಮ ತಮ್ಮ ಆಹಾರಗಳಿಗೆ ಹೆಚ್ಚು ಸ್ಪರ್ಧಾತ್ಮಕವಾಗಿ ಬೆಲೆಯನ್ನು ನೀಡಬಹುದು.
ಈಗಾಗಲೇ ವಾಯು ಅಪ್ಲಿಕೇಶನ್ನಲ್ಲಿ ಮುಂಬಯಿಯ ಪ್ರಮುಖ 1,000ಕ್ಕೂ ಹೆಚ್ಚು ರೆಸ್ಟೋರೆಂಟ್ ಗಳು ಸೇರ್ಪಡೆಯಾಗಿವೆ. ಆ್ಯಪ್ ಗ್ರಾಹಕ ಬೆಂಬಲ ವ್ಯವಸ್ಥೆಯೊಂದಿಗೆ ಗ್ರಾಹಕರು ನೇರವಾಗಿ ರೆಸ್ಟೋರೆಂಟ್ಗಳನ್ನು ಸಂಪರ್ಕಿಸುವ ವ್ಯವಸ್ಥೆಯನ್ನು ಹೊಂದಿದೆ. ರೆಸ್ಟೋರೆಂಟ್ ಮಾಲಕರು ಈಗ ವಾಯು ಆ್ಯಪ್ನಲ್ಲಿ ತಮ್ಮ ರೆಸ್ಟೋರೆಂಟ್ ಅನ್ನು ನೋಂದಾಯಿಸಬಹುದು. ಗ್ರಾಹಕರು ವಾಯು ಆ್ಯಪ್ ಡೌನ್ಲೋಡ್ ಮಾಡುವ ಮೂಲಕ ತಮ್ಮ ನೆಚ್ಚಿನ ಆಹಾರಕ್ಕಾಗಿ ಆರ್ಡರ್ ಮಾಡಬಹುದು.
ನಾನು ನಟನಾಗುವ ಮೊದಲು ರೆಸ್ಟೋರೆಂಟ್ ವ್ಯವಹಾರದಲ್ಲಿದ್ದೆ. ಉಡುಪಿ ರೆಸ್ಟೋರೆಂಟ್ಗಳನ್ನು ಸೇವೆ, ಬೆಲೆ ಮತ್ತು ಉನ್ನತ ಗುಣಮಟ್ಟದೊಂದಿಗೆ ನಿರ್ವಹಿಸುವ ನನ್ನ ತಂದೆಯ ಪರಂಪರೆಯಾಗಿದ್ದು ನಾನು ಮುಂದುವರಿಸಿದೆ. ಇಂದಿನ ಡಿಜಿಟಲ್ ಯುಗದಲ್ಲಿ ವಾಯು ನಂತಹ ಅಪ್ಲಿಕೇಶನ್ ಸ್ವಚ್ಛತೆಗೆ ಒತ್ತು ನೀಡಿದೆ. ಸಾಂಕ್ರಾಮಿಕ ರೋಗದ ಅನಂತರ ವೇಗವಾಗಿ ಬೆಳೆಯುತ್ತಿರುವ ರೆಸ್ಟೋರೆಂಟ್ ಉದ್ಯಮಕ್ಕೆ ವಿತರಣೆಯು ಜೀವನಾಡಿಯಾಗಿ ಮಾರ್ಪಟ್ಟಿದೆ. ಶೂನ್ಯ ಶುಲ್ಕ ವಿಧಿಸುವ ಅಪ್ಲಿಕೇಶನ್ನ ಬ್ರಾಂಡ್ ಅಂಬಾಸಿಡರ್ ಎಂದು ನಾನು ಒಪ್ಪಿಕೊಳ್ಳಲು ಅಪಾರ ಹೆಮ್ಮೆಯಿದೆ.
-ಸುನೀಲ್ ಶೆಟ್ಟಿ ,ಉದ್ಯಮಿ, ನಟ,
ಬ್ರ್ಯಾಂಡ್ ಅಂಬಾಸಿಡರ್ ವಾಯು ಆ್ಯಪ್