ನಿಶ್ಚಯದ ವೇದಿಕೆಗೆ ಗಂಡು ಮತ್ತು ಹೆಣ್ಣನ್ನು ಕರೆತರುವುದು ಅವರವರ ಹಿರಿಯ ಮುತ್ತೈದೆ ಹೆಂಗಳೆಯರು. ಗಂಡಿನ ಬಲಭಾಗದಲ್ಲಿ ಹೆಣ್ಣನ್ನು ಕೂರಿಸುವುದು.
ನಿಶ್ಚಿತಾರ್ಥಕ್ಕೆ ನಿಲ್ಲುವ ದಿಕ್ಕುಗಳು :
ಬಂಟ ಗುರಿಕ್ಕಾರ – ಉತ್ತರಾಭಿಮುಖವಾಗಿ
ವಧುವಿನ ಹಿರಿಯರು – ಪೂರ್ವಾಭಿಮುಖವಾಗಿ
ವರನ ಹಿರಿಯರು – ಪಶ್ಚಿಮಾಭಿಮುಖವಾಗಿ
ಎಲ್ಲಾ ಹಿರಿಯರನ್ನು ವೇದಿಕೆಗೆ ಆಹ್ವಾನಿಸುವುದು. ಮಾತಾ ಪಿತೃಗಳಿಂದ ದೀಪ ಬೆಳಗಿಸುವುದು. ದೀಪ ಬೆಳಗಿಸುವಾಗ ಪೂರ್ವದಿಂದ ಆರಂಭಿಸಿ ಪ್ರದಕ್ಷಿಣಾಕಾರವಾಗಿ ಉರಿಸಬೇಕು.
ಗಣಪತಿ ಸ್ತುತಿ : ಸುತ್ಯೆ ಇಡುವುದು
ಪ್ರಾರ್ಥನೆ : ಗುರುಪೀಠಕ್ಕೆ, ಕುಲದೇವರಿಗೆ, ಕುಲದೈವಕ್ಕೆ
ಗುರು ಕಾರ್ನವರಿಗೆ : ಸೀಮೆ ದೇವರಿಗೆ, ಗ್ರಾಮ ದೇವರಿಗೆ. ಗಂಡು ಹೆಣ್ಣಿನ ತಂದೆ ತಾಯಂದಿರ ಕುಟುಂಬದ ನಾಗಶಕ್ತಿಗಳು, ದೈವ ದೈವತಾ ಶಕ್ತಿಗಳು, ದೇವ ದೇವತಾ ಶಕ್ತಿಗಳು ಹಾಗೂ ಸ್ಥಳ ಸಾನಿಧ್ಯಕ್ಕೆ ಕ್ಷಮಾಪಣೆ ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮ ಆರಂಭಿಸಬೇಕು.
ಗಂಡು ಹೆಣ್ಣಿನ ಪರಿಚಯವನ್ನು ಸಭೆಯ ಮುಂದಿಡುವುದು. ಎರಡು ಹರಿವಾಣಗಳಲ್ಲಿ 5+5 ವೀಳ್ಯದೆಲೆ, 1+1 ಅಡಿಕೆ, 1+1ಕುಂಕುಮದ ಕರಡಿಗೆ, 1+1 ಮಲ್ಲಿಗೆ ಚೆಂಡು ಇವುಗಳನ್ನು ಇಟ್ಟು ಟಿಪಾಯಿ ಮೇಲಿಡತಕ್ಕದ್ದು. ತಾಂಬೂಲದ ಒಂದು ಹರಿವಾಣವನ್ನು ಹೆಣ್ಣಿನ ಹಿರಿಯರ ಕೈಯಲ್ಲಿ ಇಟ್ಟು, ಅದರ ಮೇಲೆ ಗಂಡಿನ ಹಿರಿಯರು ಕೈಗಳನ್ನಿಟ್ಟು ಗಂಡಿನ ಹಿರಿಯರು ಈ ಮಾತುಗಳನ್ನು ಹೇಳಬೇಕು.
ನಮ್ಮ ಆತ್ಮೀಯ ಬಂಧುಗಳೇ,
………….. ಇಂತಹವರ ಪುತ್ರಿ ( ತಂದೆ ತಾಯಿಯ ಹೆಸರು )
………….. ಇಂತಹವರ ಮೊಮ್ಮಗಳು ( ಅಜ್ಜನ ಹೆಸರು )
…………..ಇಂತಹವರ ಸೊಸೆ (ಸೋದರಮಾವನ ಹೆಸರು )
ಚಿ! ಸೌ!…………. ( ಹೆಣ್ಣಿನ ಹೆಸರು ) ಯನ್ನು
…………… ಇಂತಹವರ ಪುತ್ರ (ತಂದೆ ತಾಯಿಯ ಹೆಸರು )
…………… ಇಂತಹವರ ಮೊಮ್ಮಗ ( ಅಜ್ಜನ ಹೆಸರು )
………….. ಇಂತಹವರ ಅಳಿಯ ( ಸೋದರ ಮಾವನ ಹೆಸರು )
ಚಿ!………….. (ಗಂಡಿನ ಹೆಸರು ) ಇವನಿಗೆ
ಗೌರವಾದರಗಳಿಂದ ಪ್ರೀತಿಪೂರ್ವಕ ಆಶೀರ್ವಾದ ಮಾಡಿ, ಧಾರೆಯೇರಿಸಿ ಮದುವೆ ಮಾಡಿಕೊಳ್ಳುವುದಕ್ಕೆ ತಾವುಗಳು ತಯಾರಿದ್ದಾರೆ ನಾವುಗಳು ಗಂಡಿನ ಜವಾಬ್ದಾರಿಯುತ ಹಿರಿಯರಾಗಿ ಅದೇ ರೀತಿಯ ಗೌರವಾದರಗಳಿಂದ ಪ್ರೀತಿಪೂರ್ವಕ ಆಶೀರ್ವಾದ ಮಾಡಿ ಧಾರೆಯೇರಿಸಿ ಮದುವೆ ಮಾಡಿ ಸ್ವೀಕಾರ ಮಾಡಿಕೊಳ್ಳಲು ತಯಾರಿದ್ದೇವೆ ಎನ್ನುವ ಮಾತನ್ನು ಪಂಚಭೂತಗಳ ಸಾಕ್ಷಿಯಾಗಿ, ನಾವು ನಂಬಿಕೊಂಡು ಬಂದಿರುವಂತಹ ದೈವದೇವರುಗಳ ಸಾಕ್ಷಿಯಾಗಿ ಕೊಡುತ್ತಿದ್ದೇವೆ. ಈ ಮಾತಿಗೆ ನಾವು ಬದ್ಧರು – ಬದ್ಧರು – ಬದ್ಧರು.
ಆ ಹರಿವಾಣವನ್ನು ಹೆಣ್ಣಿನ ಕಡೆಯವರು ಇಟ್ಟುಕೊಳ್ಳುವುದು. ಈಗ ಮತ್ತೊಂದು ಹರಿವಾಣವನ್ನು ಹೆಣ್ಣಿನ ಕಡೆಯವರು ಇಟ್ಟುಕೊಳ್ಳುವುದು. ಈಗ ಮತ್ತೊಂದು ಹರಿವಾಣವನ್ನು ಗಂಡಿನ ಹಿರಿಯರ ಕೈಯಲ್ಲಿಟ್ಟು ಅದರ ಮೇಲೆ ಹೆಣ್ಣಿನ ಹಿರಿಯರು ಕೈಯಿಟ್ಟು ಈ ಮಾತುಗಳನ್ನು ಹೇಳಬೇಕು.
ಆತ್ಮೀಯ ಬಂಧುಗಳೇ,
ನಿಮ್ಮಗಳ ಕೋರಿಕೆಯಂತೆ
……….. ಇಂತಹವರ ಪುತ್ರ ( ತಂದೆ ತಾಯಿಯ ಹೆಸರು )
……….. ಇಂತಹವರ ಮೊಮ್ಮಗ ( ಅಜ್ಜನ ಹೆಸರು )
………… ಇಂತಹವರ ಅಳಿಯ (ಸೋದರಮಾವನ ಹೆಸರು )
ಚಿ!………… ( ಹೆಸರು ) ಎಂಬ ವರನಿಗೆ
………….. ಇಂತಹವರ ಪುತ್ರಿ (ತಂದೆ ತಾಯಿಯ ಹೆಸರು )
…………. ಇಂತಹವರ ಮೊಮ್ಮಗಳು (ಅಜ್ಜನ ಹೆಸರು )
…………. ಇಂತಹವರ ಸೊಸೆ (ಸೋದರಮಾವನ ಹೆಸರು )
ಚಿ! ಸೌ!………….. ( ಹೆಸರು )ಎಂಬ ವಧುವನ್ನು ಗೌರವಾದರಗಳಿಂದ ಪ್ರೀತಿಪೂರ್ವಕ ಆಶೀರ್ವಾದ ಮಾಡಿ, ಧಾರೆಯೇರಿಸಿ ಮದುವೆ ಮಾಡಿ ಕೊಡಲು ಹೆಣ್ಣಿನ ಜಾವಬ್ದಾರಿಯುತ ಹಿರಿಯರಾಗಿ ನಾವು ತಯಾರಿದ್ದೇವೆ ಅನ್ನುವಂತಹ ಮಾತುಗಳನ್ನು ಪಂಚಭೂತಗಳ ಸಾಕ್ಷಿಯಾಗಿ ನಾವು ನಂಬಿಕೊಂಡು ಬಂದಿರತಕ್ಕಂತಹ ದೈವದೇವರುಗಳ ಸಾಕ್ಷಿಯಾಗಿ ಕೊಡುತ್ತಿದ್ದೇವೆ. ಈ ಮಾತಿಗೆ ನಾವುಗಳೆಲ್ಲರೂ ಬದ್ಧರು – ಬದ್ಧರು – ಬದ್ಧರು.
ಗಂಡಿನ ಹಿರಿಯರು ಹಾಗೂ ಹೆಣ್ಣಿನ ಹಿರಿಯರು ಹರಿವಾಣದಲ್ಲಿರುವ ಕುಂಕುಮ ಕರಡಿಗೆಯಿಂದ ಗಂಡು – ಹೆಣ್ಣಿನ ಕುಂಕುಮ ಹಣೆಗಿಟ್ಟು ಆಶೀರ್ವದಿಸಬೇಕು. ಗಂಡು – ಹೆಣ್ಣು ಎಲ್ಲಾ ಹಿರಿಯರ ಆಶೀರ್ವಾದ ಪಡೆಯುವುದು. ಹರಿವಾಣದಲ್ಲಿರುವ ಸಾಹಿತ್ಯಗಳು ಅವರವರ ಮನೆಯ ದೇವರ ಪೀಠಕ್ಕೆ ಹೋಗತಕ್ಕದು. ಮದುವೆಯ ಮಾರನೆಯ ದಿನ ದೇವರ ಪೀಠದಿಂದ ಅದನ್ನು ತೆಗೆದು ವಿಸರ್ಜಿಸುವುದು.
ನಿಶ್ಚಯದ ಸಾಹಿತ್ಯ :
1. ಕಾಲುದೀಪ – 1
2. ಏಕಾರತಿ – 1
3. ಎಳ್ಳೆಣ್ಣೆ – 100ಮಿಲಿ
4. ಬತ್ತಿಕಟ್ಟು – 1
5. ಬ್ಲೇಡು ಅಥವಾ ಕತ್ತರಿ – 1
6. ಬೆಂಕಿಪೆಟ್ಟಿಗೆ – 1
7. ತೆಂಗಿನಕಾಯಿ – 1
8. ಬೆಳ್ತಿಗೆ – 1 ಕೆ. ಜಿ.
9. ವೀಳ್ಯದೆಲೆ – 1 ಸೂಡಿ
10. ಅಡಿಕೆ – 3
11. ಕುಂಕುಮ ಕರಡಿಗೆ – 2
12. ಮಲ್ಲಿಗೆ ಚೆಂಡು – 3
13. ಹರಿವಾಣ – 3
14. ಟೀಪಾಯಿ – 1
15. ಹಿರಿಯರಿಗೆಲ್ಲಾ ಮುಂಡಾಸು
ಲೇಖಕರು – ದಂಬೆಕ್ಕಾನ ಸದಾಶಿವ ರೈ